ಭಾನುವಾರ, ಏಪ್ರಿಲ್ 18, 2021
31 °C

ಶೇ 40ರಷ್ಟು ಮಂದಿಯಿಂದ ವಿವರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ರ ಜನವರಿ ತಿಂಗಳವರೆಗೆ ಕೇವಲ ಶೇ 40ರಷ್ಟು ಐಎಎಸ್ ಮತ್ತು ಇತರ ಕೇಂದ್ರೀಯ ಸೇವೆಗಳ ಅಧಿಕಾರಿಗಳು ತಮ್ಮ ಸ್ಥಿರಾಸ್ತಿಯ ವಿವರಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಲ್ಲಿಸಿದ್ದಾರೆ.ಅಧಿಕಾರಿಗಳ ಸ್ಥಿರಾಸ್ತಿಯ ವಿವರವನ್ನು ಸಾರ್ವಜನಿಕಗೊಳಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಏಪ್ರಿಲ್ 20ರೊಳಗೆ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ರಾಜ್ಯದ ಎಲ್ಲ ಕೇಂದ್ರೀಯ ಸೇವೆಯ ಅಧಿಕಾರಿಗಳು ಇನ್ನೊಂದು ವಾರದಲ್ಲಿ ತಮ್ಮ ಸ್ಥಿರಾಸ್ತಿ ವಿವರವನ್ನು ಸಲ್ಲಿಸುವಂತೆ ಮಾಡುವ ಜವಾಬ್ದಾರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಗಲೇರಿದೆ.ವಿವರ ಸಲ್ಲಿಸಲು ವಿಫಲವಾದ ಅಧಿಕಾರಿಗಳ ಮುಂಬಡ್ತಿಗೆ ತಡೆ ಸೇರಿದಂತೆ ಅನೇಕ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಭ್ರಷ್ಟಾಚಾರದ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.‘ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಎರಡು ವಾರಗಳಲ್ಲಿ ಸ್ಥಿರಾಸ್ತಿಯ ವಿವರ ಸಲ್ಲಿಸುವಂತೆ ಸಾಮಾನ್ಯವಾಗಿ ಪ್ರತಿ ಜನವರಿಯ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸುತ್ತದೆ. ಆದರೆ ಹೆಚ್ಚಿನ ಅಧಿಕಾರಿಗಳು ತಮಗೆ ಸಾಧ್ಯವಾದಾಗ ಈ ವಿವರ ಸಲ್ಲಿಸುತ್ತಾರೆ. ಅಧಿಕಾರಿಗಳು ಸ್ಥಿರಾಸ್ತಿ ವಿವರ ಸಲ್ಲಿಸುವುದಕ್ಕೂ ಮುನ್ನ ಇಲಾಖೆ ಅನೇಕ ಬಾರಿ ಅಧಿಸೂಚನೆಯನ್ನು ಹೊರಡಿಸಬೇಕಾಗುತ್ತದೆ. ಅಧಿಸೂಚನೆ ಪ್ರಕಟವಾಗಿ ಮೂರು ತಿಂಗಳು ಕಳೆದಿದ್ದರೂ ಅನೇಕ ಅಧಿಕಾರಿಗಳು ತಮ್ಮ ಸ್ಥಿರಾಸ್ತಿ ವಿವರ ಸಲ್ಲಿಸಿಲ್ಲ’ ಎಂದು ಮೂಲಗಳು ಹೇಳುತ್ತವೆ.

 

ಅಖಿಲ ಭಾರತ ಸೇವಾ ನಡಾವಳಿ ನಿಯಮದ ಪ್ರಕಾರ ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ತಮ್ಮ ಸ್ಥಿರಾಸ್ತಿಯ ವಿವರ ಸಲ್ಲಿಸುವುದು ಕಡ್ಡಾಯ. ಆದರೆ ರಾಜ್ಯದಲ್ಲಿ ಅವರ ಸ್ಥಿರಾಸ್ತಿ ವಿವರಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ಪ್ರಕರಣ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಾದ ಸಂದರ್ಭದಲ್ಲಿ ಮಾತ್ರ ಸರ್ಕಾರ ಅವರ ಆಸ್ತಿ ವಿವರಗಳನ್ನು ಪರಿಶೀಲಿಸುತ್ತದೆ. ಕೇಂದ್ರದ ನಿರ್ದೇಶನದ ಮೇರೆಗೆ ಇಲಾಖೆ ಮತ್ತೊಂದು ಅಧಿಸೂಚನೆಯನ್ನು ಹೊರಡಿಸಿ ಸ್ಥಿರಾಸ್ತಿ ವಿವರಗಳನ್ನು 15 ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ. ರಾಜ್ಯದಲ್ಲಿ ಪ್ರಸ್ತುತ 218 ಐಎಎಸ್, 139 ಐಪಿಎಸ್ ಮತ್ತು 155 ಐಎಫ್‌ಎಸ್ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.

 

ಮಾಹಿತಿಯು ದುರುಪಯೋಗಕ್ಕೆ ಒಳಗಾಗಬಹುದು ಎಂದು ರಾಜ್ಯದ ಐಎಎಸ್ ಅಧಿಕಾರಿಗಳ ಗುಂಪೊಂದು ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕಗೊಳಿಸುವುದನ್ನು ಈ ಹಿಂದೆ ವಿರೋಧಿಸಿತ್ತು.ಮೂಲಗಳ ಪ್ರಕಾರ, ಕೇಂದ್ರ ಸರ್ಕಾರದ ಸೂಚನೆಯಂತೆ ಅಧಿಕಾರಿಗಳ ಆಸ್ತಿ ವಿವರಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ‘ಆಸ್ತಿ ವಿವರಗಳನ್ನು ಪ್ರಕಟಿಸಲು ಅನುಮತಿ ನೀಡಬೇಕು ಎಂದು ನಾವು ಕೇಂದ್ರವನ್ನು ಕೋರಿದ್ದೇವೆ. ಕೇಂದ್ರ ಒಪ್ಪಿಗೆ ನೀಡಿದರೆ ಎಲ್ಲ ಮಾಹಿತಿಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಆಸ್ತಿ ವಿವರಗಳನ್ನು ಸಾರ್ವಜನಿಕಗೊಳಿಸುವ ಕುರಿತು ಇನ್ನೂ ಮಾತುಕತೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

 

ಈ ಅಧಿಸೂಚನೆ ಹೊರಡಿಸುವ ಮುನ್ನ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದಿತ್ತು. ಮೇ 31ರ ವೇಳೆಗೆ ಸ್ಥಿರಾಸ್ತಿಯ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು ಎಂದು ಮೂಲಗಳು ತಿಳಿಸಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.