ಬುಧವಾರ, ಜನವರಿ 29, 2020
24 °C

ಶೋಭಾಯಾತ್ರೆಯಲ್ಲಿ ಕಲ್ಲು ತೂರಾಟ, ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರು: ಚಿಕ್ಕಮಗಳೂರಿನ ಬಾಬಾ­ಬುಡನ್‌ ದತ್ತಪೀಠದಲ್ಲಿ ನಡೆಯುವ ದತ್ತಮಾಲಾ ಅಭಿಯಾನಕ್ಕೂ ಮುನ್ನ ವಿವಿಧೆ­ಡೆಗಳಿಂದ ಆಗಮಿಸಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪಟ್ಟಣ­ದಲ್ಲಿ ಸೋಮವಾರ ಶೋಭಾಯಾತ್ರೆ ನಡೆಸುವ ಸಂದರ್ಭದಲ್ಲಿ ಮತ್ತೊಂದು ಕೋಮಿನ ಜನರ ನಡುವೆ ಪರಸ್ಪರ ಕಲ್ಲು ತೂರಾಟ ನಡೆದು, ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು.

ಉದ್ವಿಗ್ನ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.ಮಡಿಕೇರಿ, ಸೋಮವಾರಪೇಟೆ, ಸಕಲೇಶಪುರ ಸೇರಿದಂತೆ ವಿವಿಧೆಡೆಗಳಿಂದ 30ಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿದ್ದ ಸಾವಿರಕ್ಕೂ ಹೆಚ್ಚು ಹಿಂದೂ ಸಂಘ­ಟನೆಗಳ ಕಾರ್ಯಕರ್ತರು ಬೆಳಿಗ್ಗೆ 11ಗಂಟೆ ಸಮಯದಲ್ಲಿ ಚಿಕ್ಕಮಗ­ಳೂರಿಗೆ ತೆರಳುವ ಮುನ್ನ ಪಟ್ಟಣದಲ್ಲಿ ಶೋಭಾಯಾತ್ರೆ ನಡೆಸಿದರು.ಪಟ್ಟಣದ ಮೀನು ಮಾರುಕಟ್ಟೆ ಬಳಿ ಕಲ್ಲು ತೂರಾಟ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು. ಈ ಸಂದರ್ಭದಲ್ಲಿ ಪೊಲೀಸರು ದತ್ತ­ಮಾಲಾಧಾರಿಗಳು ಹಾಗೂ ಮತ್ತೊಂದು ಕೋಮಿನ ಯುವಕರನ್ನು ಸಮಾ­ಧಾನಗೊಳಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ಸ್ಥಳಕ್ಕೆ ಬಂದ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಎಲ್‌. ಗಣೇಶ್‌ ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಇದಕ್ಕೂ ಮುನ್ನ ಬೆಳಿಗ್ಗೆ 9.30ರ ಸಮಯದಲ್ಲಿ ಅರೇಹಳ್ಳಿಯಲ್ಲಿ ನಡೆದ ಶೋಭಾಯಾತ್ರೆ ಸಂದರ್ಭದಲ್ಲೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅರೇಹಳ್ಳಿ ಮತ್ತು ಬೇಲೂರಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶೋಭಾಯಾತ್ರೆ ನಡೆಸುವ ಸಂದರ್ಭ­ದಲ್ಲಿ ಮತ್ತೊಂದು ಕೋಮಿನ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾ­ಡಿದ್ದೇ ಈ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.ಘಟನೆಯ ಬಳಿಕ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್‌ ಮುಖ್ಯಾಧಿಕಾರಿ ರಶ್ಮಿ, ಪಟ್ಟಣದ ವಿವಿಧ ಭಾಗಗಳಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಕೈಗೊಂಡರು. ಚಿಕ್ಕಮಗಳೂರಿಗೆ ತೆರಳಿದ್ದ ಬಜರಂಗದಳ ಹಾಗೂ ಹಿಂದೂ ಸಂಘಟನೆಯ ಕಾರ್ಯ­ಕರ್ತರ ವಾಹನಗಳು ಬೇಲೂರು ಮತ್ತು ಅರೇಹಳ್ಳಿ ಮಾರ್ಗ­ವಾಗಿ ಸಂಚರಿಸಲು ಅವಕಾಶ ನೀಡದೆ, ಹಾಸನ ಹಾಗೂ ಮೂಡಿಗೆರೆ ಮೂಲಕ ತೆರಳುವಂತೆ ನೋಡಿಕೊಂಡರು.ಮುನ್ನೆ­ಚ್ಚರಿಕೆ ಕ್ರಮವಾಗಿ ಬೇಲೂರು ಹಾಗೂ ಅರೇಹಳ್ಳಿ ಪಟ್ಟಣದಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಕೈಗೊಳ್ಳ­ಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)