ಗುರುವಾರ , ಮೇ 6, 2021
22 °C
ನಿರ್ಮಲ ಗ್ರಾಮ: ಅನುಷ್ಠಾನದ ಕೊಳಕುಗಳು

ಶೌಚಾಲಯಗಳು ಕಾಣೆಯಾಗಿವೆ!

-ಶ್ಯಾಮ್ ಎನ್ ಕಶ್ಯಪ್ Updated:

ಅಕ್ಷರ ಗಾತ್ರ : | |

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯೂನಿಸೆಫ್ ವರದಿಯೊಂದರಂತೆ, 2012ರಲ್ಲಿ ಭಾರತದ ಗ್ರಾಮೀಣ ಭಾಗ­ಗಳಲ್ಲಿ ನಾಲ್ಕರಲ್ಲಿ ಒಂದು ಕುಟುಂಬಕ್ಕೆ ಮಾತ್ರ ಉತ್ತಮ ಶೌಚಾಲಯಗಳ ಲಭ್ಯತೆ ಇದೆ.  ಬಯಲು ಮಲವಿಸರ್ಜನೆಯು ಕೇವಲ ಶುಚಿತ್ವಕ್ಕೆ ಸಂಬಂಧಿಸಿದ ವಿಷಯವಷ್ಟೇ ಅಲ್ಲ.ಇದು ಅನಾರೋಗ್ಯ, ಬಡತನ, ಮಹಿಳಾ ಸಬಲೀಕರಣ ಮತ್ತು ಮಾನವಾಭಿವೃದ್ಧಿಯ  ಹಿನ್ನಡೆಯ ದ್ಯೋತಕವೂ ಹೌದು.  ದೇಶದ ಪ್ರತಿಯೊಂದು ಹಳ್ಳಿಯನ್ನು ಬಯಲು ಮಲ ವಿಸರ್ಜನೆಯಿಂದ  ಮುಕ್ತಗೊಳಿಸುವುದು  ಗ್ರಾಮೀಣಾಭಿವೃದ್ಧಿಯ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ನಿರ್ಮಲ ಭಾರತ ಅಭಿಯಾನವನ್ನು ಪ್ರತಿಯೊಂದು ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಈ ಯೋಜನೆಯ ಅನುಷ್ಠಾನದ ಜವಾಬ್ದಾರಿಯು ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ಮೇಲಿದೆ.ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುವ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ­ಗಳು  ನಿರ್ಮಲ ಭಾರತ ಅಭಿಯಾನವ­ನ್ನೊಳ­ಗೊಂಡಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆ-­ಗಳ ಕ್ರಿಯಾಯೋಜನೆಗಳ ತಯಾರಿಕೆ, ಫಲಾನುಭವಿಗಳ ಆಯ್ಕೆ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ನಿರ್ಮಲ ಭಾರತ ಅಭಿಯಾನದಡಿಯಲ್ಲಿ  ವೈಯುಕ್ತಿಕ,  ಮತ್ತು ಸಮುದಾಯ ಶೌಚಾಲಯಗಳನ್ನು ನಿರ್ಮಿಸುವುದು, ಶಾಲೆ ಮತ್ತು ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ, ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಸುರಕ್ಷಿತವಾಗಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಗ್ರಾಮಪಂಚಾಯಿತಿಗಳ (ಗ್ರಾ.ಪಂ.) ಮುಖಾಂತರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳನ್ನು ಅನುಷ್ಠಾನಗೊಳಿಸಲು ಗ್ರಾ.ಪಂ.ಗಳಿಗೆ ಆರ್ಥಿಕ ನೆರವು ನೀಡುವುದಲ್ಲದೇ ತಜ್ಞರ ಸಲಹೆ, ನೆರವು ಮತ್ತು ಸಹಯೋಗವನ್ನು ಒದಗಿಸಲಾಗುತ್ತದೆ.ಪ್ರಸಕ್ತ ಸಾಲಿನಲ್ಲಿ ನಿರ್ಮಲ ಭಾರತ ಅಭಿಯಾನ ಮತ್ತು ಉದ್ಯೋಗ ಖಾತರಿ ಯೋಜನೆಗಳ ಮೂಲಕ ಕುಟುಂಬವೊಂದಕ್ಕೆ ಸುಮಾರು ಒಂಬತ್ತು ಸಾವಿರ ರೂಪಾಯಿಗಳ ಧನ ಸಹಾಯ ಒದಗಿಸಿ ಬಡತನ ರೇಖೆಯ ಕೆಳಗಿರುವ ಕುಟುಂಬಗಳು ಶೌಚಾಲಯ­ವನ್ನು ಕಟ್ಟಿಕೊಳ್ಳುವಂತೆ ಪ್ರೇರೇಪಿಸುವುದು, ಗ್ರಾಮ­ದಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವುದು  ಗ್ರಾ.ಪಂ.ಗಳ ಪ್ರಮುಖ ಚಟುವಟಿಕೆಗಳು. ಹಳ್ಳಿಗಳಲ್ಲಿ ಬಯಲು ಮಲವಿಸರ್ಜನೆ ಮುಕ್ತಗೊಳಿಸಲು ಉತ್ತೇಜಿಸುವುದಕ್ಕಾಗಿ ಅರ್ಹ ಗ್ರಾ.ಪಂ.ಗಳಿಗೆ ‘ನಿರ್ಮಲ ಗ್ರಾಮ ಪುರಸ್ಕಾರ’ ಎಂಬ ಬಿರುದು ಮತ್ತು ನಗದು ಪುರಸ್ಕಾರಗಳನ್ನೂ ಕೂಡ ನೀಡಲಾಗುತ್ತಿದೆ.2011ರ ಅಂಕಿ–ಅಂಶಗಳ ಪ್ರಕಾರ ರಾಜ್ಯದಲ್ಲಿರುವ ಸುಮಾರು 5630 ಗ್ರಾ.ಪಂ.ಗಳಲ್ಲಿ 1069 (ಶೇ 19) ಗ್ರಾ.ಪಂ.ಗಳನ್ನು ಬಯಲು ಮಲವಿಸರ್ಜನೆ ಮುಕ್ತ ಎಂದು ಘೋಷಿಸಲಾಗಿದೆ. ಈ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಬಯಲು ಮಲವಿಸರ್ಜನೆಯನ್ನು ಬಹಿಷ್ಕರಿಸಿ ಪ್ರತಿಯೊಂದು ಮನೆಗೂ ಶೌಚಾಲಯವನ್ನು ಒದಗಿಸಲಾಗಿದೆ ಎಂದು ಗ್ರಾ.ಪಂ.ಗಳು ಘೋಷಿಸಿದ ಮೇಲೆ, ಸರ್ಕಾರದಿಂದ ರಚಿತವಾದ ತಂಡವೊಂದು ಇದನ್ನು ಪರಿಶೀಲಿಸಿ ದೃಢೀಕರಿಸಿದ ನಂತರ ಈ ಗ್ರಾ.ಪಂ.ಗಳಿಗೆ ಪುರ­ಸ್ಕಾರವನ್ನು ನೀಡಲಾಗಿದೆ.ಇಷ್ಟೇ ಅಲ್ಲದೇ, ನಿರ್ಮಲ ಭಾರತ ಅಭಿ­ಯಾನದ ವೆಬ್-ಸೈಟಿನ ಪ್ರಕಾರ ರಾಜ್ಯದ ಎಲ್ಲಾ ಗ್ರಾ.ಪಂ.ಗಳನ್ನು ಸೇರಿಸಿ ಇಲ್ಲಿಯವರೆಗೆ 49,41,613 ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು  ಶೇ 84.17 ರಷ್ಟು ಗುರಿಸಾಧನೆಯಾಗಿದೆ. ಇದರಿಂದ ಕರ್ನಾಟಕ ರಾಜ್ಯವು ನಿರ್ಮಲ ಭಾರತ ಅಭಿಯಾನ ಮತ್ತು ಸಂಪೂರ್ಣಸ್ವಚ್ಛತಾ ಆಂದೋಲನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ ಎನ್ನಬಹುದು.

ಆದರೆ 2011ರಲ್ಲಿ ನಡೆದ ಜನಗಣತಿ ಅಂಕಿ–ಅಂಶ ಇದಕ್ಕೆ ಸಂಪೂರ್ಣ­ವಾದ ವ್ಯತಿರಿಕ್ತ ಚಿತ್ರಣ ಕೊಡುತ್ತದೆ.ಅದರ ಪ್ರಕಾರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಕೇವಲ 22,34,534  (ಶೇ 28.41)  ಮನೆಗಳಲ್ಲಿ ಮಾತ್ರ  ಶೌಚಾಲಯದ ವ್ಯವಸ್ಥೆ ಇದೆ. ನಗರ ಪ್ರದೇಶದಲ್ಲಿ ಶೇ 85ರಷ್ಟು ಮನೆಗಳಲ್ಲಿ ವೈಯಕ್ತಿಕ ಶೌಚಾಲಯ­ಗಳಿವೆಯಂದು ಜನಗಣತಿಯ ಅಂಕಿ ಅಂಶಗಳು ಹೇಳುತ್ತವೆ. ನಗರ–ಗ್ರಾಮೀಣ ಭಾಗದ ವ್ಯತ್ಯಾಸಗಳಲ್ಲದೇ, ಗ್ರಾಮೀಣ ಭಾಗಗಳಲ್ಲಿ ವಿವಿಧ ಸಾಮಾಜಿಕ ವರ್ಗಗಳು ಮತ್ತು ಪ್ರಾದೇಶಿಕ ವಲಯಗಳಲ್ಲಿ ತೀವ್ರ ಅಸಮಾನತೆ­ ಇರುವುದನ್ನು ಕಾಣಬಹುದಾಗಿದೆ. ಇದರ ವಿಶ್ಲೇಷಣೆ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.(ಕೋಷ್ಠಕ ನೋಡಿ) ನಿರ್ಮಲ ಭಾರತ ಅಭಿಯಾನದಲ್ಲಿ 2011ರಿಂದೀಚೆಗೆ (ಜನಗಣತಿಯಾದ ನಂತರ) ಸುಮಾರು 7 ಲಕ್ಷ ಶೌಚಾಲಯಗಳು ನಿರ್ಮಾಣವಾಗಿವೆ ಎಂದು ಊಹಿಸಿದರೂ, ರಾಜ್ಯದಲ್ಲಿ ಸುಮಾರು 20 ಲಕ್ಷ ಶೌಚಾಲಯಗಳು ಕಾಣೆಯಾಗಿವೆ ಅಥವಾ ಕೇವಲ ಹೆಸರಿಗೆ ಮಾತ್ರ ಇವೆ ಎಂದು ಹೇಳಬಹುದು. ಶೌಚಾಲಯವೊಂದಕ್ಕೆ ಸರಾಸರಿ ರೂ 1000ರಂತೆ ಲೆಕ್ಕ ಹಾಕಿದರೂ, ಕಟ್ಟದೇ ಇರುವ ಶೌಚಾಲಯಗಳಿಗೆ ಒಟ್ಟು ಸುಮಾರು ರೂ 200 ಕೋಟಿ ಖರ್ಚಾಗಿದೆ ಎನ್ನಬಹುದು!ಈ ಗಂಭೀರ ವಿಷಯವನ್ನು ಸ್ವಲ್ಪ ಆಳವಾಗಿ ನೋಡಿದರೆ, ಹಲವು ಕ್ಲಿಷ್ಟ ಸಮಸ್ಯೆಗಳು ಮತ್ತು ವಿಕೇಂದ್ರೀಕರಣದ ಸವಾಲುಗಳು ನಮ್ಮ ಮುಂದೆ ಎದುರಾಗುತ್ತವೆ. ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದ 107 ಗ್ರಾ.ಪಂ.ಗಳ ಮೌಲ್ಯಮಾಪನವೊಂದರಲ್ಲಿ ನಾವು ಕಂಡಂತಹ ಅನುಭವಗಳ ಆಧಾರದ ಮೇಲೆ, ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಕೆಲವು ಗ್ರಾಮಗಳಲ್ಲಿ ಜನರು ತಾವಾಗಿಯೇ ಶೌಚಾಲಯಗಳನ್ನು ಕಟ್ಟಿಕೊಂಡು ಸರ್ಕಾರದ ನೆರವಿಗೆ ಕಾಯದೇ, ತಮ್ಮ ಗ್ರಾಮಗಳನ್ನು ನಿರ್ಮಲ ಗ್ರಾಮಗಳನ್ನಾಗಿಸಿದ್ದಾರೆ.ಶೌಚಾಲಯದ ಬಳಕೆಗೆ ಮಹಿಳೆಯರು ಮತ್ತು ಮಕ್ಕಳ ಜಾಥಾ, ಗ್ರಾಮಸ್ಥರೇ ಸೇರಿ ಬೀದಿ ನಾಟಕವನ್ನಾಡುವುದು, ಹೀಗೆ ವಿಭಿನ್ನ ಪ್ರಯತ್ನಗಳನ್ನು ಮಾಡಿದ ಗ್ರಾ.ಪಂ.ಗಳೂ ಇವೆ. ಆದರೆ, ಕೆಲವು ಪ್ರದೇಶಗಳಲ್ಲಿ ಇಂದಿಗೂ ಶೌಚಾಲಯಗಳನ್ನೇ ತಿರಸ್ಕರಿಸುವ ಜನರೂ ಇದ್ದಾರೆ, ಶೌಚಾಲಯಗಳನ್ನು ನಿರ್ಮಿಸಲು ಜಾಗವೇ ಇಲ್ಲದಂತಹ ಇಕ್ಟಟ್ಟಾದ ಹಳ್ಳಿಗಳಿವೆ, ಶೌಚಾಲಯ ಕಟ್ಟಿದರೂ ಸಮರ್ಪಕ ನೀರಿನ ವ್ಯವಸ್ಥೆಯಿರದ ಹಳ್ಳಿಗಳಿವೆ.ಇಂತಹ ಸಂದರ್ಭದಲ್ಲಿಯೂ, ಕೇವಲ ಶೌಚಾಲಯ ನಿರ್ಮಾಣದ ಗುರಿಸಾಧನೆಗೆ ಮಹತ್ವವನ್ನು ನೀಡಿ, ಅರಿವು ಮೂಡಿಸುವಿಕೆ, ಇತರೆ ಇಲಾಖೆಗಳ ಸಹಭಾಗಿತ್ವ ಮುಂತಾದ ವಿಷಯಗಳನ್ನು ಕಡೆಗಣಿಸಿದಾಗ ತಳಹಂತದ ಅಧಿಕಾರಿಗಳಿಗೆ ಶೌಚಾಲಯಗಳನ್ನು ಕಟ್ಟಿಕೊಳ್ಳುವಂತಹ ಅರ್ಹ ಫಲಾನುಭವಿಗಳನ್ನು ಹುಡುಕುವುದೇ ತಲೆನೋವಾಗುತ್ತದೆ. ಅವರು ಗುರಿಯನ್ನು ತಲುಪಲು ವಿವಿಧ ಮಾರ್ಗಗಳನ್ನು ಹುಡುಕಿದ್ದಾರೆ. ಕೆಲವರು ಕೇವಲ ನೆಪ ಮಾತ್ರಕ್ಕೆ ಶೌಚಾಲಯವನ್ನು ಕಟ್ಟಿಸಿ ‘ಗುರಿ ಸಾಧಿಸಿದ್ದಾರೆ’.ನಿರ್ಮಲಗ್ರಾಮ ಪುರಸ್ಕಾರ ದೊರೆತ ಹಲವು ಗ್ರಾ.ಪಂ.ಗಳಲ್ಲಿ ಈಗಲೂ ಬಯಲು ಮಲವಿಸರ್ಜನೆ ಸಾಮಾನ್ಯವಾಗಿತ್ತು. ಇದಕ್ಕೆ ಹಿಂದಿನ ಪಂಚಾಯಿತಿ ಸದಸ್ಯರು/ಕಾರ್ಯದರ್ಶಿಗಳ ಅವ್ಯವಹಾರ, ಅದಕ್ಷತೆಯೇ ಸಾಮಾನ್ಯ ಕಾರಣವಾಗಿತ್ತು. ಹಲವೆಡೆ, ಈಗಿನ ಸದಸ್ಯರಿಗೆ, ತಮ್ಮ ಪಂಚಾಯಿತಿಗೆ ಪುರಸ್ಕಾರ ಸಿಕ್ಕ ವಿಚಾರವೇ ತಿಳಿದಿರಲಿಲ್ಲ! ಅನರ್ಹ ಫಲಾನುಭವಿಗಳ ಆಯ್ಕೆ, ಅನರ್ಹ ಗ್ರಾ.ಪಂ.ಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ, ಸರ್ಕಾರದ ಹಣದ ದುಂದು ವೆಚ್ಚ ಇವ್ಯಾವುದಕ್ಕೂ ಸ್ಪಷ್ಟ ಹೊಣೆಗಾರರೇ ಇಲ್ಲದಿರುವುದೂ ಈ ಗಂಭೀರ ಸಮಸ್ಯೆಗೆ ಒಂದು ಕಾರಣವಾಗಿದೆ.  ಸರ್ಕಾರದ ವಿವಿಧ ಯೋಜನೆಗಳ ಮೂಲಕ ಮನೆ, ಶೌಚಾಲಯ, ಬಾವಿ, ಸಾಲ ಹೀಗೆ ಹತ್ತು ಹಲವು ಸವಲತ್ತುಗಳನ್ನು ಪಡೆಯುತ್ತಿರುವವರನ್ನು ಕಂಡಿರುವ ಕೆಲವು ಗ್ರಾಮಸ್ಥರು, ಪಂಚಾಯಿತಿ ಸದಸ್ಯರು, ಹೀಗೆ ನೀಡುವುದೇ ಸರ್ಕಾರದ ಕರ್ತವ್ಯ ಎಂದು ನಂಬಿರುವುದು ಸಾಮಾನ್ಯವಾಗಿ ಕಂಡುಬಂದಿತು. ಸರ್ಕಾರ ಕೊಡುತ್ತಿರುವ ಸವಲತ್ತುಗಳ ನಿಜವಾದ ಉದ್ದೇಶಗಳೇನು ಎಂದು ಅರಿಯುವ ಗೋಜಿಗೂ ಹೋಗದೆ, ಸಣ್ಣ ಆರ್ಥಿಕ ಲಾಭಕ್ಕೆ ರಾಜಿಯಾಗಿ, ಸರ್ಕಾರದ ಯೋಜನೆಗಳ ಮೇಲೆ ಶಾಶ್ವತವಾಗಿ ಅವಲಂಬಿತರಾಗಿರುವರ ಸಂಖ್ಯೆಯೂ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಶುಚಿತ್ವದ ಬಗ್ಗೆ ಅರಿವು ಮೂಡಿಸಿ ಜನರಲ್ಲಿ ಬದಲಾವಣೆಯನ್ನು ತರುವುದು ಬಹುತೇಕ ಗ್ರಾ.ಪಂ.ಗಳಲ್ಲಿ ಪ್ರಾಯೋಗಿಕ ಆದ್ಯತೆಯಾಗಿರಲಿಲ್ಲ. ಕ್ಷಣಿಕ ಆರ್ಥಿಕ ಸಹಾಯ, ಆದಷ್ಟು ಸವಲತ್ತುಗಳನ್ನು ಆದಷ್ಟು ಜನರಿಗೆ ಆದಷ್ಟು ಬೇಗ ಹಂಚುವುದು, ಆರ್ಥಿಕ/ಭೌತಿಕ ಗುರಿ ತಲುಪುವುದೇ ತಳಹಂತದ ಅಧಿಕಾರಿಗಳ ಮತ್ತು ರಾಜಕೀಯ ಗುರಿಗಳಾದಂತಿದ್ದವು. ಕೆಲವೆಡೆ ಬಯಲು ಮಲವಿಸರ್ಜನೆಯನ್ನು ತಡೆಯಲು ವಿಚಿತ್ರವಾದ ಮಾರ್ಗಗಳನ್ನು ಹುಡುಕಿಕೊಂಡ ಗ್ರಾ.ಪಂ.ಗಳೂ ಇವೆ.ಬಯಲು ಮಲವಿಸರ್ಜನೆ ಅತೀ ಹೆಚ್ಚಿದ್ದ ಗ್ರಾ.ಪಂ. ಒಂದರಲ್ಲಿ ಮುಂಜಾನೆ ಹೊಲಗಳಲ್ಲಿ ಕಾದಿದ್ದು ಬಹಿರ್ದೆಸೆಗೆ ಬಂದವರನ್ನು ತಡೆಯಲು ಜೋರಾಗಿ ಸಿಳ್ಳೆ ಹಾಕುವುದು, ಟಾರ್ಚ್ ಬಿಡುವುದು ಮತ್ತು ಬಯಲು ಮಲವಿಸರ್ಜನೆಗೆ ಹೋಗುವವರಿಗೆ ದಂಡ ಹಾಕುವ ಕ್ರಮಗಳನ್ನು ಜಾರಿಗೆ ತಂದರೆ, ಕೆಲವೆಡೆ ಶೌಚಾಲಯದಲ್ಲಿ ಬೀಗ ಹಾಕಿ ಕೂರಿಸುವುದು ಮತ್ತಿತರ ಬಲವಂತದ ವಿಧಾನಗಳನ್ನು ಅಳವಡಿಸಿಕೊಂಡ ಉದಾಹರಣೆಗಳೂ ಇವೆ. ಈ ಪ್ರಕ್ರಿಯೆಗಳಿಂದ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಗ್ರಾಮೀಣ ಜನತೆಗೆ ಅರಿವು ಹೇಗೆ ಮೂಡುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.ಒಟ್ಟಿನಲ್ಲಿ ಹೇಳುವುದಾದರೆ, ನಿರ್ಮಲ ಭಾರತ ಅಭಿಯಾನದ ಅಂಕಿ ಅಂಶಗಳು ಮತ್ತು ಜನಗಣತಿಯ ಅಂಕಿ–ಅಂಶಗಳಲ್ಲಿರುವ ವ್ಯತ್ಯಾಸಗಳು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಾಣುವ ‘ಅಭಿವೃದ್ಧಿ ವೆಚ್ಚಗಳು’ ಮತ್ತು ಅಭಿವೃದ್ಧಿ ಫಲಿತಾಂಶ (outcome)ಗಳ ನಡುವಿರುವ ಅಗಾಧ ಅಂತರವನ್ನು ಎತ್ತಿ ತೋರುಸುತ್ತದೆ. ಇದನ್ನು ‘last mile problem’ ಎಂದು ನಾವು ಹೇಳಬಹುದಾದರೂ, ಸಮಸ್ಯೆಯ ಬೇರುಗಳು ಹಲವು ಹಂತದಲ್ಲಿರುವುದನ್ನು ಕಾಣಬಹುದು.ವಿಪರ್ಯಾಸವೆಂದರೆ, ನಮ್ಮ ಇಂದಿನ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಈ ಅಗಾಧ ಅಂತರಕ್ಕೆ ಕಾರಣೀಕರ್ತರು ಇವರೇ ಎಂದು ಬೆಟ್ಟು ಮಾಡಿ ತೋರಿಸುವುದು ಮತ್ತು ಹೊಣೆಗಾರರನ್ನಾಗಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಅಷ್ಟೇ ಅಲ್ಲದೇ, ಪ್ರತಿಯೊಬ್ಬ ಪಾತ್ರಧಾರಿಯ ಸಂಕುಚಿತ ದೃಷ್ಟಿಕೋನದಲ್ಲಿ ನೋಡುವುದಾದರೆ, ಆಯಾ ಸಂದರ್ಭದಲ್ಲಿ ಅವರ ಯೋಚನೆಗಳು ಪ್ರಾಯೋಗಿಕವಾಗಿಯೇ ಇರುವುದನ್ನು ಕಾಣಬಹುದು.ವಿಕೇಂದ್ರೀಕೃತ ವ್ಯವಸ್ಥೆಯು ಸುಧಾರಿಸಬೇಕಾದರೆ ಪ್ರತಿಯೊಂದು ಹಂತದಲ್ಲಿಯೂ ಇರಬೇಕಾದ ಸಾಮಾಜಿಕ ಬಧ್ದತೆ ಮತ್ತು ಕಾಳಜಿಯ ಕೊರೆತೆಯನ್ನು ಈ ಉದಾಹರಣೆ ತೋರಿಸುತ್ತದೆ. ಈ ದುಬಾರಿ ಪ್ರಯೋಗದಿಂದ ‘ಕೇವಲ ಶೌಚಾಲಯ ನಿರ್ಮಾಣದಿಂದ ಬಯಲು ಮಲವಿಸರ್ಜನೆಯ ನಿರ್ಮೂಲನೆ ಆಗಲಾರದು’ ಎಂಬ ಒಂದು ಅಂಶವಂತೂ ಸಾಬೀತಾಗಿದೆ.

(ಲೇಖಕರು ಗ್ರಾಸ್‌ರೂಟ್ಸ್ ರೀಸರ್ಚ್ ಅಂಡ್ ಅಡ್ವೊಕೆಸಿ ಮೂವ್‌ಮೆಂಟ್‌ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರು.)

ಹೊಸನೀರು ಬಂದಾಗ...

ಕಾರ್ಯದರ್ಶಿಯೊಬ್ಬರ ಅನುಭವ: 2008–09ರಲ್ಲಿ ನಮ್ಮ ಮೇಲಧಿ­ಕಾರಿ­ಗಳು ಶೌಚಾಲಯ ನಿರ್ಮಾಣಕ್ಕೆ ಬಹಳ ಪ್ರೋತ್ಸಾಹ ನೀಡುತ್ತಿದ್ದರು. ನಾವು ರಾತ್ರಿ ಹಗಲೆನ್ನದೇ ಓಡಾಡಿ ಜನರನ್ನು ಹಿಡಿದು ತಂದು, ಕೊನೆಗೆ ತೆಂಗಿನ ಗರಿಯಲ್ಲಾದರೂ ಶೌಚಾಲಯ ಕಟ್ಟಿ ಎಂದು ಒತ್ತಾಯಿಸಿ ಪ್ರಗತಿ ತೋರಿಸಿದ್ದೆವು. ಒಂದೆರೆಡು ವರ್ಷ “ಶೌಚಾಲಯ, ಶೌಚಾಲಯ” ಎಂದು ಎಲ್ಲರೂ ಓಡಾಡಿದರು. ಅದರ ಬಗ್ಗೆ ಜನ ಯೋಚಿಸುವಷ್ಟರಲ್ಲೇ ಅದನ್ನು ಬಿಟ್ಟು, ಮುಂದೆ  “ಉದ್ಯೋಗ ಖಾತರಿ” ಎಂದು ಅದಕ್ಕೆ ಮಾತ್ರ ಮಹತ್ವ ನೀಡಿದರು. ಹೀಗೆ ಹೊಸ ಯೋಜನೆ ಬಂದೊಡನೆ ಹಳ್ಳಿಯ ಜನರೂ ಕೂಡ ತಮ್ಮ ಆದ್ಯತೆಗಳನ್ನು ಬದಲಾಯಿಸಿಕೊಳ್ಳಲು ಹೇಗೆ ಸಾಧ್ಯ?

ನಷ್ಟದ ಪ್ರಶ್ನೆ!

ಶಿವಮೊಗ್ಗ ಜಿಲ್ಲೆಯ ಗ್ರಾ.ಪಂ. ಒಂದಕ್ಕೆ ನಿರ್ಮಲಗ್ರಾಮ ಪುರಸ್ಕಾರ ದೊರೆತರೂ ಇನ್ನೂ ಶೌಚಾಲಯಗಳು ಬೇಕು ಎನ್ನುವ ಗ್ರಾ.ಪಂ. ಕಾರ್ಯದರ್ಶಿ ಮತ್ತು ಪಂಚಾಯಿತಿ ಸದಸ್ಯರ ವಾದ ಹೀಗಿದೆ:  “ಶೌಚಾಲಯಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಗಂಡು ಮಕ್ಕಳು ಬೆಳೆದಂತೆ ಮನೆಗಳು ಒಡೆದು ಹೊಸ ಮನೆಗಳಾಗುತ್ತವೆ. ಅಪ್ಪನಿಗೆ ಶೌಚಾಲಯಕ್ಕೆ ದುಡ್ಡು ಕೊಟ್ಟಮೇಲೆ ಮಕ್ಕಳಿಗೂ ಕೊಡಬೇಕಲ್ಲವೇ? ಅದೂ ಅಲ್ಲದೆ, ಹಿಂದೆ ಶೌಚಾಲಯಕ್ಕೆ ದುಡ್ಡು ಕೊಟ್ಟಾಗ ಕೇವಲ ರೂ 800 ಕೊಟ್ಟಿದ್ದೆವು. ಈಗ ಸುಮಾರು ರೂ 9,000 ಆಗಿದೆ. ಆಗ ಕಟ್ಟಿಕೊಂಡವರಿಗೆ ಈಗ ನಷ್ಟವಲ್ಲವೇ?”

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.