ಶುಕ್ರವಾರ, ಆಗಸ್ಟ್ 6, 2021
21 °C

ಶೌಚಾಲಯ ನಿರ್ಮಾಣ ಅಭಿವೃದ್ಧಿ ಸೂಚಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ರತಿಯೊಬ್ಬ ಬಡವರ ಮನೆಯಲ್ಲೂ ಶೌಚಾಲಯ ನಿರ್ಮಿಸಿದಾಗ ಮಾತ್ರ ಸರ್ಕಾರದ ಪ್ರಯತ್ನ ಸಾರ್ಥಕವಾಗುತ್ತದೆ ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.ಸ್ಫೂರ್ತಿ ಸಂಸ್ಥೆಯ ದಶಮಾನೋತ್ಸವದ ನೆನಪಿಗಾಗಿ ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೂಲಸೌಕರ್ಯ ಕಲ್ಪಿಸುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ಅನ್ನ, ಸೂರು, ಶುದ್ಧ ನೀರು ಒದಗಿಸುವ ಜತೆಗೆ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿದರೆ ಜನರ ಜೀವನಮಟ್ಟ ಸ್ವಲ್ಪವಾದರೂ ಮೇಲೇರುತ್ತದೆ. ಅದರ ಜತೆಗೆ ಜನರು ಸ್ವಚ್ಛತೆಗೆ ಗಮನ ನೀಡಬೇಕು. ನಮ್ಮ  ಸರ್ಕಾರವೂ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಮೂಲಸೌಕರ್ಯ ಕಲ್ಪಿಸಿದೆ. ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಳ್ಳಲು ` 6.5 ಸಾವಿರ ನೀಡುತ್ತಿದ್ದು, ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಸರ್ಕಾರ ಹತ್ತು ಹಲವು ಯೋಜನೆ ಜಾರಿಗೆ ತರುತ್ತದೆ. ಆದರೆ, ಅವು ಸಮರ್ಪಕವಾಗಿ ಜನರಿಗೆ ತಲುಪುವಲ್ಲಿ ವಿಫಲವಾಗುತ್ತಿವೆ. ಸ್ಫೂರ್ತಿ ಸಂಸ್ಥೆಯಂತಹ ಸ್ವಯಂ ಸೇವಾ ಸಂಸ್ಥೆಗಳು ಅಂತಹ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯ ಕೊಡಿಸುವಲ್ಲಿ ಶ್ರಮಿಸುತ್ತಿವೆ ಎಂದು ಶ್ಲಾಘಿಸಿದರು.ಮಾಯಕೊಂಡ ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ಎಲ್ಲ ಗ್ರಾಮದ ಜನರೂ ಗೋ ಸಂರಕ್ಷಣೆಗೆ ಮುಂದಾಗಬೇಕು. ಗೋವಿನ ಉತ್ಪನ್ನಗಳ ಮೂಲಕ ಆರ್ಥಿಕ ಸಬಲತೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್, ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಕಾರ್ಯದರ್ಶಿ ರಾಜಶೇಖರ್ ನಾಯ್ಕ, ವಿಮುಕ್ತಿ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ವಿಶ್ವಸಾಗರ್, ಜೈವಿಕ ಇಂಧನ ಮಂಡಳಿ ಕಾರ್ಯಕಾರಿ ಅಧ್ಯಕ್ಷ ವೈ.ಬಿ. ರಾಮಕೃಷ್ಣ, ಸ್ಫೂರ್ತಿ ಸಂಘದ ಅಧ್ಯಕ್ಷ ಡಿ. ಶಂಕರಪ್ಪ, ಕಾರ್ಯದರ್ಶಿ ಕೆ.ಬಿ. ರೂಪಾನಾಯ್ಕ, ನಿರೂಪಣಾ ನಿರ್ದೇಶಕಿ ರೇಣುಕಾ, ಸಾಕೀಬಾಯಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.