ಶುಕ್ರವಾರ, ಜೂನ್ 18, 2021
24 °C

ಶ್ರದ್ಧಾಭಕ್ತಿಯ ಬ್ಯಾಟರಾಯಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಸಾವಿರಾರು ಭಕ್ತರ ಸಮ್ಮುಖದಲ್ಲಿ ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಸಾಂಗೋಪವಾಗಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ಪಟ್ಟಣದಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.



ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬೈರಗಾನಹಳ್ಳಿಯ ಕಲಾತಂಡದ ಪುಟಾಣಿಗಳ ಪಂಡರಿ ಭಜನೆ ಹಾಗೂ ನೃತ್ಯ ಭಾವ ಪರವಶಗೊಳಿಸಿತು. ಮಕ್ಕಳ ಬಣ್ಣದ ವೇಷಗಳು, ಕೈಲಿ ಹಿಡಿದ ಪುಟ್ಟ ಬಾವುಟ, ಮುಖಕ್ಕೆ ಹಚ್ಚಿರುವ ಬಣ್ಣದ  ಕುಣಿತ ಎಲ್ಲರ ಮೆಚ್ಚುಗೆಗೆ ಪಾತ್ರ ವಾಯಿತು.



ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ,  ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು.  ವಿವಿಧ ಗ್ರಾಮಗಳಿಂದ  ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು.



ಚಿಕ್ಕದಾಸರಹಳ್ಳಿ, ಮಳಮಾಚನಹಳ್ಳಿ, ದೊಡ್ಡದಾಸರಹಳ್ಳಿ, ಮುಗಿಲಡಪಿ, ಜಪ್ತಿಹೊಸಹಳ್ಳಿ, ನಾರಾಯಣದಾಸರಹಳ್ಳಿ, ಬೋದಗೂರು ಮೊದಲಾದ ಗ್ರಾಮಸ್ಥರು ಪಾನಕ ವಿತರಿಸಿದರು.

ವಿಜಯನಗರ ಕಾಲದ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡದ ಮೇಲಿರುವುದರಿಂದ ಕಂಗೊಳಿಸುತ್ತಿತ್ತು.



`ಶಿಲ್ಪಕಲಾ ದೃಷ್ಟಿಯಿಂದ ಅತ್ಯಂತ ಆಕರ್ಷಕ ಕಲಾನೈಪುಣ್ಯತೆ ಹೊಂದಿದೆ. ಬ್ಯಾಟರಾಯನ ಉತ್ಸವಮೂರ್ತಿ ಜತೆಗೆ ಶ್ರೀದೇವಿ ಭೂದೇವಿ ಅವರ ಸುಂದರ ಶಿಲ್ಪಗಳಿವೆ~ ಎಂದು ಟ್ರಸ್ಟ್ ಅಧ್ಯಕ್ಷ ಬ್ಯಾಟರಾಯಶೆಟ್ಟಿ ತಿಳಿಸಿದರು.

ರಥೋತ್ಸವಕ್ಕೆ ಶಾಸಕ ವಿ.ಮುನಿಯಪ್ಪ ಹಾಗೂ ತಹಶೀಲ್ದಾರ್ ಭೀಮಾನಾಯಕ್  ಚಾಲನೆ ನೀಡಿದರು.



ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್, ಹಿರಿಯ ವಕೀಲ ಡಿ.ಅಶ್ವತ್ಥ ನಾರಾಯಣ್, ಸುಬ್ರಮಣಿ, ಮುನಿಕೃಷ್ಣಪ್ಪ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.