ಮಂಗಳವಾರ, ಜೂನ್ 22, 2021
27 °C

ಶ್ರವಣಬೆಳಗೊಳ ಶ್ರೀಗೆ ಹುಟ್ಟೂರ ಭಕ್ತಿಯ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ (ಉಡುಪಿ ಜಿಲ್ಲೆ): ಜನ್ಮಭೂಮಿ ವರಂಗ ಅತಿಶಯ ಕ್ಷೇತ್ರಕ್ಕೆ 35 ವರ್ಷಗಳ ಬಳಿಕ ಆಗಮಿಸಿದ ಕರ್ಮಯೋಗಿ ಶ್ರವಣಬೆಳಗೊಳ ಮಠದ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅವರನ್ನು ತಾಲ್ಲೂಕಿನ ಭಕ್ತಸಮೂಹ ಭಕ್ತಿಭಾವದಿಂದ ಗೌರವಿಸಿ ನಮನ ಸಲ್ಲಿಸಿತು.ವರಂಗದಲ್ಲಿ ಭಾನುವಾರ ಗತವೈಭವ ನೆನಪಿಸುವ ಹಬ್ಬದ ಕಳೆ ಮನೆ ಮಾಡಿತ್ತು. ಬೆಳಿಗ್ಗೆ 8 ಗಂಟೆಗೆ ಕಾರ್ಕಳದಿಂದ 100ಕ್ಕೂ ಹೆಚ್ಚು ವಾಹನಗಳ ಮೆರವಣಿಗೆಯಲ್ಲಿ ಸ್ವಾಮೀಜಿ ಅವರನ್ನು ಕರೆತರಲಾಯಿತು.ಬಾಲ್ಯದಲ್ಲಿ ಗ್ರಾಮದಲ್ಲಿ ಸುತ್ತಾಡಿದ ಸ್ಥಳಗಳನ್ನ ಕಂಡು ಆನಂದತುಂದಿಲರಾದ ಸ್ವಾಮೀಜಿ ಹಿರಿಯರ ಜತೆ ಹಳೆಯ ನೆನಪುಗಳನ್ನು ಹಂಚಿಕೊಂಡರು. ಕೆರೆ ಬಸದಿ, ಮಠಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಹುಟ್ಟೂರಿನ ಭಕ್ತರಿಗೆ ತಮ್ಮ ಖರ್ಚಿನಿಂದಲೇ ಪ್ರಸಾದದ ವ್ಯವಸ್ಥೆ ಮಾಡಿಸಿದ್ದರು. ಅತ್ಯಂತ ಆತ್ಮೀಯತೆಯಿಂದ ಎಲ್ಲರೊಂದಿಗೆ ಬೆರೆತು ಕಾಲ ಕಳೆದರು. ಬಾಲ್ಯದ ಬಹಳಷ್ಟು ನೆನಪುಗಳನ್ನು ಹಂಚಿಕೊಂಡರು.ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡ ಧಾರ್ಮಿಕ ಸಭೆ ಮಧ್ಯಾಹ್ನ 3 ಗಂಟೆವರೆಗೂ ನಡೆಯಿತು. ಭಕ್ತ ಸಮುದಾಯ ಶಾಂತವಾಗಿ ಕುಳಿತು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಶಿಷ್ಯ ವರಂಗ- ಹೊಂಬುಜ ಮಠದ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿ ಮತ್ತು ವರಂಗದ ನೆಲ, ಜನರನ್ನು ಕೊಂಡಾಡಿದ ಸ್ವಾಮೀಜಿ, ಭಕ್ತ ಸಮುದಾಯದೊಂದಿಗೆ 3 ದಿನ ಕಳೆಯುವ ಇಂಗಿತ ವ್ಯಕ್ತಪಡಿಸಿದರು. ಶಾಸಕ ಗೋಪಾಲ ಭಂಡಾರಿ, ಎಂ.ಎನ್.ರಾಜೇಂದ್ರ ಕುಮಾರ್, ಯುವ ರಾಜೇಂದ್ರ ಮತ್ತಿತರರು ಶ್ರಿಗಳ ಜತೆ ಬಾಲ್ಯದ ನೆನಪು ಹಂಚಿಕೊಂಡರು.ಹುಟ್ಟೂರಿನ ಭಕ್ತರ 12 ವರ್ಷಗಳ ಪ್ರಾರ್ಥನೆಯನ್ನು ಮನ್ನಿಸಿ 35 ವರ್ಷಗಳ ಬಳಿಕ ಆಗಮಿಸಿದ ಸ್ವಾಮೀಜಿ, ವರಂಗದ ಗತವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ದೇವೇಂದ್ರ ಕೀರ್ತಿ ಮಹಾಸ್ವಾಮಿ ಜತೆ ಚರ್ಚಿಸಿದರು.ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ವರಂಗ ಮಠಕ್ಕೆ ಭೇಟಿ ನೀಡಿ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.