ಮಂಗಳವಾರ, ಜೂನ್ 15, 2021
27 °C

ಶ್ರೀನಿವಾಸ್ ಕೊಲೆ ಪ್ರಕರಣ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಬಿಜೆಪಿ ಸದಸ್ಯೆ ಆರ್‌.­ಮಂಜುಳಾ­ದೇವಿ ಅವರ ಪತಿ ಶ್ರೀನಿವಾಸ್‌ ಕೊಲೆ ಪ್ರಕರಣದ ಐದು ಮಂದಿ ಆರೋಪಿಗಳನ್ನು ಬಂಧಿಸಿ­ರುವ ನಗರ ಪೊಲೀಸರು, ಕೊಲೆಯ ಹಿಂದಿನ ನಿರ್ದಿಷ್ಟ ಉದ್ದೇಶವನ್ನು ಮಾತ್ರ ಬಹಿರಂಗಪಡಿಸಿಲ್ಲ.ಮುನಿಯಪ್ಪ ಲೇಔಟ್‌ನ ಪ್ರತಾಪ್ (33), ಹರೀಶ್‌ (26), ಮೋಹನ ಅಲಿಯಾಸ್ ಗಾಜಲು (25), ದೇವ­ಸಂದ್ರದ ನವೀನ್‌ಕುಮಾರ್‌ ಅಲಿಯಾಸ್ ಅಪ್ಪು (25) ಮತ್ತು ನದೀಮ್‌ ಅಲಿಯಾಸ್ ಸಾಸ (22) ಬಂಧಿತರು.‘ಆರೋಪಿಗಳು ಹಳೇ ವೈಷಮ್ಯ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ಕೊಲೆ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧಿಸಿದ ನಂತರ­ವಷ್ಟೆ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ರಾಘವೇಂದ್ರ ಔರಾದಕರ್ ತಿಳಿಸಿದರು.ಸ್ಥಳೀಯ ಕಾಂಗ್ರೆಸ್‌ ಶಾಸಕರ ಆಪ್ತನೊಬ್ಬ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿರುವ ಬಗ್ಗೆ ತನಿಖಾಧಿಕಾ­ರಿ­ಗಳು ಶಂಕಿಸಿದ್ದಾರೆ. ಆದರೆ, ಕೊಲೆ ಹಿಂದಿನ ಉದ್ದೇಶ­­ಬಹಿರಂಗಪಡಿಸಲು ಔರಾದಕರ್‌ ನಿರಾ­ಕರಿಸಿದ್ದಾರೆ. ‘ಇನ್ನು ಆರೋಪಿಗಳ ವಿಚಾರಣೆ ಬಾಕಿ ಇದ್ದು, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.‘ಪ್ರಕರಣದ ಬಗ್ಗೆ ಕೆಲ ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಪಡಿಸದಂತೆ ಮೇಲಧಿಕಾರಿಗಳ ಆದೇಶವಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದರಿಂದ, ಪೊಲೀಸರು ಕೆಲವರ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ಈ ಕಾರಣದಿಂದಾಗಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಮೂಲಗಳು ತಿಳಿಸಿವೆ.‘ಬಂಧಿತರೆಲ್ಲ 2013ರಲ್ಲಿ ಶ್ರೀನಿವಾಸ್‌ ಅವರ ಕೊಲೆಗೆ ಯತ್ನಿಸಿದ್ದ ದುಷ್ಕರ್ಮಿಗಳ ತಂಡದಲ್ಲಿದ್ದವರು. ಈ ತಂಡದ ಮಧುಸೂದನ್, ಅರುಣ್‌  ಮತ್ತು ಮೋಹನ್‌ ಸಹ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಶೀಘ್ರವೇ ಅವರನ್ನೂ ಬಂಧಿಸಲಾ­ಗುವುದು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಆರೋಪಿ ಪ್ರತಾಪ್‌, 2008ರಲ್ಲಿ ಹೊಸಕೋಟೆಯ ವೆಂಕಟರಾಮ್ ಎಂಬುವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಅಲ್ಲದೇ, 2012ರಲ್ಲಿ ಶ್ರೀನಿವಾಸ್ ಅವರ ಆಪ್ತ ಕೃಷ್ಣ ಎಂಬುವರ ಕೊಲೆಗೆ ಯತ್ನಿಸಿದ್ದ ಆತ, ನಂತರ 2013ರ ಏಪ್ರಿಲ್‌ನಲ್ಲಿ ವಿಶ್ವನಾಥ್‌ ಎಂಬುವರ ಕೊಲೆಗೂ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿ ಹರೀಶ ಕೊಲೆ ಯತ್ನ, ಹಲ್ಲೆ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಕೆ.ಆರ್‌.ಪುರ ಠಾಣೆಯ ರೌಡಿಗಳ ಪಟ್ಟಿಯಲ್ಲಿರುವ ನವೀನ್‌ ವಿರುದ್ಧ ಎರಡು ಕೊಲೆ ಯತ್ನ ಪ್ರಕರಣ, ಎರಡು ಹಲ್ಲೆ, ಎರಡು ಸರ ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.