ಸೋಮವಾರ, ಮಾರ್ಚ್ 1, 2021
25 °C

ಶ್ರೆಯಾ ಹೆಜ್ಜೆ ಗೆಜ್ಜೆ

– ಅಮಿತ್‌ ಎಂ.ಎಸ್‌. Updated:

ಅಕ್ಷರ ಗಾತ್ರ : | |

ಶ್ರೆಯಾ ಹೆಜ್ಜೆ ಗೆಜ್ಜೆ

ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆಯನ್ನು ತಮ್ಮ ಬದುಕಿನ ನೀತಿಯನ್ನಾಗಿ ಅಳವಡಿಸಿಕೊಂಡಿರುವಂತೆ ಕಂಡರು ನಟಿ ಶ್ರೇಯಾ ಅಂಚನ್‌. ಮಾತು ಕಡಿಮೆಯಾದರೂ ಕೃತಿಯ ಮೂಲಕವೇ ಉತ್ತರಿಸುವ ತುಡಿತ ಅವರದು. ಪುಟ್ಟ ಕುತೂಹಲ, ಜಾಸ್ತಿ ಭಯ ಇಟ್ಟುಕೊಂಡೇ ಕ್ಯಾಮೆರಾ ಎದುರಿಸಿದ ಅವರು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಯಂತೆ ಚಡಪಡಿಸುತ್ತಿದ್ದಾರೆ. ನಿಜ. ಅವರ ಮೊದಲ ಸಿನಿಪರೀಕ್ಷೆಯ ಫಲಿತಾಂಶ ಇಂದು (ಮಾ. 21) ಹೊರಬೀಳುತ್ತಿದೆ.ಶುಕ್ರವಾರ ತೆರೆಕಂಡಿರುವ ‘ಚತುರ್ಭುಜ’ ಚಿತ್ರದ ಮೂಲಕ ಬೆಳ್ಳಿತೆರೆಯ ಪಯಣದ ಪ್ರಥಮ ಹೆಜ್ಜೆ ಇರಿಸಿರುವ ಶ್ರೇಯಾ, ಪ್ರೇಕ್ಷಕರ ಅಭಿಪ್ರಾಯಗಳಿಗೆ ಎದುರು ನೋಡುತ್ತಿದ್ದಾರೆ. ತಮ್ಮ ಮುಂದಿನ ನಡೆ ಜನರ ಪ್ರತಿಕ್ರಿಯೆ ಮೇಲೆ ಅವಲಂಬಿತ ಎನ್ನುತ್ತಾರೆ ಅವರು. ಮಂಗಳೂರಿನವರಾದ ಮೂಗುತಿ ಸುಂದರಿ ಶ್ರೇಯಾ ಮೊದಲನೇ ವರ್ಷದ ಬಿ.ಕಾಂ ವಿದ್ಯಾರ್ಥಿನಿ. ಬಾಲ್ಯದಲ್ಲಿ ಕೆಲಕಾಲ ಭರತನಾಟ್ಯ ಕಲಿತ ಅವರು ಈಗ ಮಂಗಳೂರಿನ ‘ಸೆಕ್ಷನ್ ಏಯ್ಟ್‌’ ಎಂಬ ನೃತ್ಯತಂಡದಲ್ಲಿ ನೃತ್ಯಪಟು. ನಿರಂತರ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಿರುವ ಅವರಿಗೆ ಚೆನ್ನೈನಲ್ಲಿ ಟೀವಿ ರಿಯಾಲಿಟಿ ಶೋ ಒಂದರಲ್ಲಿ ನರ್ತಿಸಿದ ಅನುಭವವೂ ಇದೆ. ನೃತ್ಯದ ಆಸಕ್ತಿಯೇ ಅವರಿಗೆ ಚಿತ್ರರಂಗದ ಮೇಲೆ ಒಲವು ಮೂಡಲು ಕಾರಣ.ಚಿತ್ರತಂಡ ನಡೆಸಿದ ಆಡಿಷನ್‌ನಲ್ಲಿ ಆಯ್ಕೆಯಾದರೂ ಶ್ರೇಯಾ ಅವರಲ್ಲಿ ಅಳುಕಿತ್ತು. ಏಕೆಂದರೆ ಅದುವರೆಗೂ ಅವರು ಕ್ಯಾಮೆರಾ ಎದುರಿಸಿದವರಲ್ಲ. ಶಾಲಾದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದು ಬಿಟ್ಟರೆ ಅಭಿನಯದ ಯಾವ ಹಿನ್ನೆಲೆಯೂ ಅವರಿಗಿರಲಿಲ್ಲ. ಅವರಲ್ಲಿದ್ದ ಭಯವನ್ನು ನಿಧಾನವಾಗಿ ನಿವಾರಿಸಿದ್ದು ಚಿತ್ರದ ನಿರ್ದೇಶಕ ಕೃಷ್ಣಲೇಖ ಮತ್ತು ನಾಯಕನಟ ಆರ್ವ. ಹೀಗಾಗಿ ಮೊದಲ ಅನುಭವ ಹಿತವೂ ಎನಿಸಿದೆ. ‘ಚಿತ್ರೀಕರಣದ ವೇಳೆ ತಪ್ಪುಗಳನ್ನು ಮಾಡುತ್ತಿದ್ದರೂ ಕೋಪಿಸಿಕೊಳ್ಳದೆ ತಿಳಿಹೇಳಿ ತಿದ್ದುತ್ತಿದ್ದರು. ಆರಂಭದಲ್ಲಿ ಒಂದು ತಿಂಗಳು ತರಬೇತಿಗೆಂದೇ ಮೀಸಲಿದ್ದರೂ ಕ್ಯಾಮೆರಾ ಮುಂದೆ ನಿಂತಾಗ ತಪ್ಪುಗಳು ಮರುಕಳಿಸುತ್ತಿದ್ದವು. ಇದಾವುದಕ್ಕೂ ಅವರು ಬೇಸತ್ತುಕೊಳ್ಳದೆ ಸಹಕರಿಸುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು. ‘ಚತುರ್ಭುಜ’ದಲ್ಲಿ ಶ್ರೇಯಾ ಅವರದು ಕಾಲೇಜು ವಿದ್ಯಾರ್ಥಿನಿಯ ಪಾತ್ರ. ಕಾಲೇಜು ಪಕ್ಕದ ಟೀ ಅಡ್ಡಾದಲ್ಲಿ ಕುಳಿತು ಅಲ್ಲಿಗೆ ಬರುವ ನಾಯಕನನ್ನು ರೇಗಿಸಿ ಮಜಾ ತೆಗೆದುಕೊಳ್ಳುವ ನಾಯಕಿ ಮುಂದೆ ಆತನ ಪ್ರೇಮದಲ್ಲಿ ಬೀಳುತ್ತಾಳೆ.ಮಾಮೂಲಿ ಪ್ರೇಮಕಥೆ ಎಂಬಂತೆ ಕಂಡರೂ ಅಂತ್ಯದಲ್ಲಿ ಊಹಿಸಿಕೊಳ್ಳಲಾಗದ ತಿರುವು ಚಿತ್ರದಲ್ಲಿದೆ. ಹೊಸ ಬಗೆಯ ಪ್ರಯತ್ನ ಕ್ಲೈಮ್ಯಾಕ್ಸ್‌ನಲ್ಲಿದೆ ಎನ್ನುತ್ತಾರೆ ಶ್ರೇಯಾ.

ಅಭಿನಯದ ಹಿನ್ನೆಲೆ ಇಲ್ಲದಿದ್ದರಿಂದ ಆರಂಭದಲ್ಲಿ ಅವರಿಗೆ ಸಿನಿಮಾ ಕಷ್ಟ ಎನಿಸಿದ್ದಿದೆ. ಪಿಯುಸಿ ಮುಗಿಸಿ ರಜೆ ಕಾಲ ಕಳೆಯುತ್ತಿದ್ದಾಗ ಬಂದ ಅವಕಾಶವನ್ನು ಒಪ್ಪಿಕೊಳ್ಳಲು ಕಥೆಯೂ ಮುಖ್ಯ ಕಾರಣ. ‘ಚತುರ್ಭುಜ’ ಬಿಡುಗಡೆಗೆ ಮುನ್ನವೇ ಅವರಿಗೆ ಕೆಲವು ಸಿನಿಮಾಗಳಲ್ಲಿ ಅವಕಾಶಗಳು ಬಂದಿವೆ. ಆದರೆ ಮೊದಲ ಚಿತ್ರ ಬಿಡುಗಡೆಯಾಗಿ, ತಮ್ಮ ಅಭಿನಯದ ಬಗ್ಗೆ ಪ್ರತಿಕ್ರಿಯೆ ಸಿಗುವವರೆಗೂ ಬೇರೆ ಸಿನಿಮಾದಲ್ಲಿ ನಟಿಸುವುದು ಬೇಡ ಎನ್ನುವ ನಿರ್ಧಾರ ಅವರದು. ಹೀಗೆ ಕಾಯುತ್ತಿದ್ದ ಗಳಿಗೆ ಈಗ ಬಂದಿದೆ. ಪ್ರೇಕ್ಷಕ ಏನು ಹೇಳುತ್ತಾನೋ ಎಂಬ ಕಾತರ ಅವರಲ್ಲಿದೆ. ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಳ್ಳಬೇಕೆಂಬ ಆತುರ ಅವರಲ್ಲಿಲ್ಲ. ಒಳ್ಳೆ ಕಥೆಗೆ ಅವರ ಆದ್ಯತೆ. ಸಿನಿಮಾ ಆಸಕ್ತಿ ಇದ್ದರೂ ಓದಿಗೆ ಅಡ್ಡಿಯಾಗಬಾರದೆಂಬ ನಿಲುವಿಗೆ ಅವರು ಬದ್ಧ. ಹೀಗಾಗಿ ರಜೆಯ ಅವಧಿಯಲ್ಲಿ ಮಾತ್ರ ನಟಿಸುವುದೆಂಬ ನಿಯಮ ಹಾಕಿಕೊಂಡಿದ್ದಾರೆ. ಎಂ.ಕಾಂ. ಪದವಿ ಗುರಿ ಅವರ ಮುಂದಿದೆ.ಮೊದಲ ಚಿತ್ರದ ಚಿತ್ರೀಕರಣ ಮುಗಿಯುವ ವೇಳೆಗೆ ನಟಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಅವರಲ್ಲಿ ಮೂಡಿದೆ. ಚಿತ್ರತಂಡದ ಜೊತೆಗೆ ಕುಟುಂಬ ಹಾಗೂ ಸ್ನೇಹಿತರ ಪ್ರೋತ್ಸಾಹವೂ ಇದಕ್ಕೆ ಕಾರಣ ಎಂದು ಅವರು ನೆನೆಯುತ್ತಾರೆ. ಗ್ಲಾಮರ್‌ ಬಯಸುವ ಪಾತ್ರಗಳಿಗೆ ಸೈ ಎಂದರೂ ಅತಿಯಾದ ಗ್ಲಾಮರ್‌ಗೆ ಅವರು ಒಲ್ಲೆ ಎನ್ನುತ್ತಾರೆ. ಕಲಿಯಲು ಇನ್ನೂ ಸಾಕಷ್ಟಿದೆ. ಮುಂದಿನ ಸಿನಿಮಾಗಳಲ್ಲಿ ಅಭಿನಯದಲ್ಲಿ ಪಕ್ವವಾಗಬಲ್ಲೆ ಎನ್ನುವ ಶ್ರೇಯಾ, ಯಾವುದಕ್ಕೂ ಮೊದಲು ಫಲಿತಾಂಶ ಬರಲಿ ಎನ್ನುತ್ತಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.