ಸಂಕ್ರಾಂತಿ: ಪುಣ್ಯಸ್ನಾನಕ್ಕೆ ನೀರಿನ ‘ಬರ’

ಬಾದಾಮಿ: ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಶುಕ್ರವಾರ ಇಲ್ಲಿನ ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಭಕ್ತರು ಎಳ್ಳು ಮತ್ತು ಅರಿಶಿಣ ಹಚ್ಚಿಕೊಂಡು ಪುಣ್ಯಸ್ನಾನ ಮಾಡಿದರು. ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಸಾಮೂಹಿಕವಾಗಿ ಭೋಜನ ಸವಿದರು.
ಮಲಪ್ರಭಾ ನದಿಯು ಬತ್ತಿದ್ದು, ಭಕ್ತರು ಮಹಾಕೂಟದಲ್ಲಿ ಸ್ನಾನ ಮಾಡಿದರು. ಮಹಾಕೂಟದಲ್ಲಿ ಕಾಶಿ ಹೊಂಡ ಮತ್ತು ವಿಷ್ಣು ಪುಷ್ಕರಣಿ ನೀರಿನಿಂದ ಭರ್ತಿಯಾಗಿದ್ದರಿಂದ ಭಕ್ತರ ದಂಡು ಮಹಾಕೂಟಕ್ಕೆ ಬಂದಿತ್ತು. ಶಿವಯೋಗಮಂದಿರ, ಪಟ್ಟದಕಲ್ಲು ಮತ್ತು ಚೊಳಚಗುಡ್ಡದ ಸಮೀಪದಲ್ಲಿ ಹರಿಯುತ್ತಿರುವ ಮಲಪ್ರಭಾ ನದಿ ಬತ್ತಿರುವುದರಿಂದ ಭಕ್ತರು ನಿರಾಸೆ ಅನುಭವಿಸಿದರು. ಕೆಲವರು ಅಲ್ಲಲ್ಲಿ ನಿಂತ ನೀರಿನಲ್ಲಿಯೇ ಸ್ನಾನ ಮಾಡಿದರು.
ಬನಶಂಕರಿಯ ಹರಿದ್ರಾತೀರ್ಥ ಹೊಂಡದಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿದರೂ ಅಲ್ಲಿ ಸಂಕ್ರಮಣದ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದರು. ಪಟ್ಟದಕಲ್ಲಿನಲ್ಲಿ ವಿರೂಪಾಕ್ಷ ದೇವಾಲಯ, ಶಿವಯೋಗಮಂದಿರದಲ್ಲಿ ಲಿಂ. ಹಾನಗಲ್ ಕುಮಾರ ಶ್ರೀ ಮತ್ತು ಲಿಂ. ಸದಾಶಿವ ಶ್ರೀಗಳ ಕರ್ತೃ ಗದ್ದುಗೆಗೆ ತೆರಳಿ ದರ್ಶನ ಪಡೆದರು.
‘ರಸ್ತೆಗಳು ಕಿರಿದಾಗಿದ್ದರಿಂದ ಮಹಾಕೂಟದಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿ ಸಂಚಾರಕ್ಕೆ ತೊಂದರೆಯಾಯಿತು. ಬನಶಂಕರಿ, ಶಿವಯೋಗಮಂದಿರ, ಮಹಾಕೂಟ ಮೂಲಕ ಪಟ್ಟದಕಲ್ಲಿಗೆ ಸಾರಿಗೆ ಸಂಪರ್ಕ ಕಲ್ಪಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ’ ಎಂದು ರಾಮದುರ್ಗದ ಯುವಕರಾದ ಸತೀಶ ಮತ್ತು ಹನುಮಂತಗೌಡ ಹೇಳಿದರು.
ಕೂಡಲಸಂಗಮದಲ್ಲಿ ಜನ ಸಂಗಮ: ಬಸವಧರ್ಮ ಪೀಠದ ಶರಣ ಮೇಳ, ಲಿಂಗಾಯತ ಪಂಚಮಸಾಲಿ ಪೀಠದ 6ನೇ ಬಸವ ಕೃಷಿ ಸಂಕ್ರಾತಿ ಸಮಾರಂಭ ಹಾಗೂ ಮಕರ ಸಂಕ್ರಾಂತಿ ಒಂದೇ ದಿನ ವಾದ್ದರಿಂದ ಶುಕ್ರವಾರ ಕೂಡಲಸಂಗಮ ದಲ್ಲಿ ಜನಜಂಗುಳಿ ಕಂಡುಬಂದಿತು.
ಕೃಷ್ಣಾ ನದಿ ದಂಡೆಯಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿರ್ಮಿಸಿದ ತಾತ್ಕಾಲಿಕ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಿ ಸಂಕ್ರಾಂತಿ ಆಚರಿಸಿದರು. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಗೋವಾ, ಕೇರಳ ರಾಜ್ಯಗಳಿಂದ ಅಪಾರ ಭಕ್ತರು ಗುರುವಾರ ರಾತ್ರಿಯೇ ಕೂಡಲಸಂಗಮಕ್ಕೆ ಬಂದಿಳಿದಿದ್ದರು. ಶುಕ್ರವಾರ ಕೃಷ್ಣಾ ನದಿ ದಡದಲ್ಲಿ ಸ್ನಾನ ಮಾಡಿ, ಸಂಗಮನಾಥ ಹಾಗೂ ಬಸವಣ್ಣನವರ ಐಕ್ಯ ಮಂಟಪದ ದರ್ಶನ ಪಡೆದು ಕೆಲ ಕಾಲ ಧ್ಯಾನಸ್ಥರಾಗಿದ್ದರು. ಲಿಂಗಪೂಜೆಯ ನಂತರ, ಭೋಜನ ಸವಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಭಕ್ತರ ಸಂಖ್ಯೆ ಕಡಿಮೆಯಿತ್ತು. ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಿತ್ತು. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ವಾಹನ ನಿಲುಗಡೆಗೆ ಉಚಿತ ವ್ಯವಸ್ಥೆ ಮಾಡಿದ್ದರಿಂದ ಸಂಚಾರ ದಟ್ಟಣೆ ತಪ್ಪಿತು.
ಕೆರೂರ ವರದಿ: ಮಕರ ಸಂಕ್ರಾಂತಿಯಂದು ಪುಣ್ಯ ಸ್ನಾನಕ್ಕೆಂದು ದೂರ ದಿಂದ ಗೋವನಕೊಪ್ಪಕ್ಕೆ ಬಂದಿದ್ದ ಭಕ್ತರು ಮಲಪ್ರಭಾ ನದಿಯ ಒಡಲು ನೀರಿಲ್ಲದೇ ಬಣಗುಡುವುದನ್ನು ಕಂಡು ನಿರಾಸೆ ಅನುಭವಿಸಿದರು. ಕೆಲವರು ಇದ್ದ ನೀರಿನಲ್ಲೇ ಸ್ನಾನ ಮಾಡಿ, ದೇವರಿಗೆ ನಮಿಸಿದರು. ನಂತರ ತಾವು ತಂದಿದ್ದ ಭೋಜನ ಸವಿದು ವಾಪಸಾದರು. ಈ ಹಿಂದೆ ಎರಡು ದಿನಗಳ ಮುನ್ನವೇ ನವಿಲುತೀರ್ಥ ಜಲಾಶಯದಿಂದ ನದಿಗೆ ನೀರು ಬಿಡಲಾಗುತ್ತಿತ್ತು. ಈ ಬಾರಿ ಬರದಿಂದ ನೀರು ಬಿಟ್ಟಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.