ಸೋಮವಾರ, ಮೇ 10, 2021
21 °C

ಸಂಗಕ್ಕಾರ ಶತಕ; ಲಂಕಾಕ್ಕೆ ಚೊಚ್ಚಲ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಕುಮಾರ ಸಂಗಕ್ಕಾರ (ಅಜೇಯ 134) ಅವರ ಅಮೋಘ ಶತಕದ ನೆರವಿನಿಂದ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಆಘಾತ ನೀಡಿದ್ದಾರೆ.ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ `ಎ' ಗುಂಪಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು. ಆ ಕಠಿಣ ಸವಾಲನ್ನು ಲಂಕಾ ತಂಡ 47.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು. ಈ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ ಸಿಂಹಳೀಯ ಬಳಗ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.`ಇದು ನನ್ನ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದು. ಎಲ್ಲಕ್ಕಿಂತ ಮುಖ್ಯವಾಗಿ ತಂಡ ಗೆಲುವು ಸಾಧಿಸಿದೆ. ಇದು ನನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ' ಎಂದು `ಪಂದ್ಯ ಶ್ರೇಷ್ಠ' ಗೌರವಕ್ಕೆ ಪಾತ್ರರಾದ ಸಂಗಕ್ಕಾರ ನುಡಿದರು.`ಈ ಗೆಲುವಿನಲ್ಲಿ ಮಾಹೇಲ ಜಯವರ್ಧನೆ ಹಾಗೂ ನುವಾನ್ ಕುಲಶೇಖರ ಅವರ ಪಾಲೂ ಇದೆ. ಕುಲಶೇಖರ ಬಿರುಸಿನ ಪ್ರದರ್ಶನ ನೀಡುವ ಮೂಲಕ ನನ್ನ ಮೇಲಿನ ಒತ್ತಡ ಕಡಿಮೆ ಮಾಡಿದರು' ಎಂದು ಅವರು ತಿಳಿಸಿದರು.ಸಂಗಕ್ಕಾರ ಹಾಗೂ ಕುಲಶೇಖರ ಜೊತೆಗೂಡಿದಾಗ ಲಂಕಾದ ಗೆಲುವಿಗಾಗಿ 106 ರನ್ ಬೇಕಿತ್ತು. 15 ಓವರ್‌ಗಳು ಬಾಕಿ ಇದ್ದವು. ಆದರೆ ಇವರಿಬ್ಬರು ಆಕ್ರಮಣಕಾರಿ ಆಟದ ಮೂಲಕ ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ಗೆಲುವು ತಂದುಕೊಟ್ಟರು.  135 ಎಸೆತಗಳನ್ನು ಎದುರಿಸಿದ ಸಂಗಕ್ಕಾರ 12 ಬೌಂಡರಿ ಬಾರಿಸಿದರು. ಕುಲಶೇಖರ ಕೇವಲ 38 ಎಸೆತಗಳಿಂದ 58 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್ ಹಾಗೂ ಐದು ಬೌಂಡರಿಗಳಿದ್ದವು.ಕಠಿಣವಾದ ಸೆಮಿ ಫೈನಲ್ ಹಾದಿ: `ಎ' ಗುಂಪಿನಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿದೆ. ಹಾಗಾಗಿ ಈ ಗುಂಪಿನಿಂದ ನಾಲ್ಕರ ಘಟ್ಟ ಪ್ರವೇಶಿಸುವ ಎರಡು ತಂಡಗಳು ಯಾವುವು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.  ಈ ಗುಂಪಿನಲ್ಲಿ ಮುಕ್ತ ಅವಕಾಶವಿದೆ. ಈ ತಂಡಗಳಿಗೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ಸದ್ಯ ಮೂರು ಪಾಯಿಂಟ್ ಹೊಂದಿರುವ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ. ತಲಾ ಎರಡು ಪಾಯಿಂಟ್ ಹೊಂದಿರುವ ಇಂಗ್ಲೆಂಡ್ ಹಾಗೂ ಲಂಕಾ ನಂತರದ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಒಂದು ಪಾಯಿಂಟ್‌ನೊಂದಿಗೆ ಕೊನೆಯ ಸ್ಥಾನದಲ್ಲಿದೆ.ಭಾನುವಾರ ನಡೆಯಲಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಸೋಮವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿದರೆ ಲಂಕಾ ನಾಲ್ಕರ ಘಟ್ಟ ತಲುಪಲಿದೆ. ಫಲಿತಾಂಶ ಏರುಪೇರು ಆದಲ್ಲಿ ರನ್‌ರೇಟ್ ಲೆಕ್ಕಾಚಾರಕ್ಕೆ ಬರಲಿದೆ.ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293; ಶ್ರೀಲಂಕಾ; 47.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 297 (ತಿಲಕರತ್ನೆ ದಿಲ್ಶಾನ್ 44, ಕುಮಾರ ಸಂಗಕ್ಕಾರ ಔಟಾಗದೆ 134, ಮಾಹೇಲ ಜಯವರ್ಧನೆ 42, ನುವಾನ್ ಕುಲಶೇಖರ ಔಟಾಗದೆ 58; ಜೇಮ್ಸ ಆ್ಯಂಡರ್ಸನ್ 51ಕ್ಕೆ2, ಗ್ರೇಮ್ ಸ್ವಾನ್ 50ಕ್ಕೆ1); ಫಲಿತಾಂಶ: ಶ್ರೀಲಂಕಾಕ್ಕೆ ಏಳು ವಿಕೆಟ್ ಗೆಲುವು. ಪಂದ್ಯ ಶ್ರೇಷ್ಠ: ಕುಮಾರ ಸಂಗಕ್ಕಾರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.