ಸೋಮವಾರ, ಮೇ 23, 2022
26 °C

ಸಂಚಾರ ದಟ್ಟಣೆ: ಸಾರ್ವಜನಿಕರ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡುವುದೇ ಪ್ರಯಾಸಕರವಾಗಿದೆ.

ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳು, ಸರಕು ಸಾಗಾಣಿಕಾ ವಾಹನಗಳು, ವಿವಿಧ ವಾಣಿಜ್ಯ ಚಟುವಟಿಕಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ವೃತ್ತದ ಮೂಲಕ ಸಂಚರಿಸುವ ಕಾರಣ ಇತ್ತೀಚೆಗೆ ಇಲ್ಲಿ ಓಡಾಡುವುದೇ ಕಷ್ಟಕರವಾಗಿದೆ.

ಪ್ರತಿದಿನ ಪಟ್ಟಣದ ಮೂಲಕ 280-300 ಕೆಎಸ್ಸಾರ್ಟಿಸಿ, 200 ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಪಟ್ಟಣದ ಹೃದಯ ಭಾಗವಾದ ಈ ಪ್ರದೇಶದ ಸುತ್ತ-ಮುತ್ತ ಮೆಡಿಕಲ್ ಶಾಪ್‌ಗಳು, ತರಕಾರಿ ಅಂಗಡಿಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಇತ್ಯಾದಿ ಇವೆ. ಸಾರ್ವಜನಿಕರು ಈ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಆಗಮಿಸುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ ಎನ್ನುತ್ತಾರೆ ಹೊಳೆಅರಳಹಳ್ಳಿಯ ನಾಗರಿಕ ಎಚ್.ವಿ. ಬಸವರಾಜ್.

ಈ ವೃತ್ತದ ರಸ್ತೆ ಬದಿ ಮೊಬೈಲ್ ಕಂಪೆನಿಗಳ ಸಿಮ್, ನಂದಿನಿ ಹಾಲು ಉತ್ಪನ್ನಗಳ ಮಾರಾಟ ವಾಹನಗಳು ನಿಂತಿರುತ್ತವೆ. ರಸ್ತೆ ಬದಿ ತರಕಾರಿ ಅಂಗಡಿಗಳೂ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ ಎಂಬುದು ಸಾರ್ವಜನಿಕರ ದೂರು.

ಆಸ್ಪತ್ರೆಗೆ ಆಗಮಿಸುವ ರೋಗಿಗಳು, ಮೆಡಿಕಲ್ ಶಾಪ್‌ಗೆ ತೆರಳಬೇಕಾದ ಸಂದರ್ಭದಲ್ಲಿ ವಾಹನ ದಟ್ಟಣೆಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ. ಎಷ್ಟೋ ವೇಳೆ ಕೆಲ ವೃದ್ಧ ರೋಗಿಗಳು ಬಿದ್ದು ಕೈ-ಕಾಲು ಮುರಿದುಕೊಂಡ ಉದಾಹರಣೆಗಳಿವೆ. ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗುವಂತೆ ಫುಟ್‌ಪಾತ್ ನಿರ್ಮಿಸಬೇಕು ಎಂಬುದು ಇದೇ ವೃತ್ತದಲ್ಲಿರುವ ಮೆಡಿಕಲ್‌ಶಾಪ್‌ನ ಮಾಲೀಕ ರಾಘವೇಂದ್ರ ಅವರ ಸಲಹೆ.

ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಮಾಡಬೇಕಿದೆ. ಹೀಗೆ ಮಾಡಿದರೆ, ಸಮಸ್ಯೆ ಕೊಂಚ ಕಡಿಮೆ ಆಗಬಹುದು. ಶೀಘ್ರ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎಂಬುದು ನಾಗರಿಕರ ಮನವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.