ಭಾನುವಾರ, ಜೂನ್ 7, 2020
27 °C
ಬೌಲಿಂಗ್ ವೇಳೆ ಸ್ಥಳೀಯ ಆಟಗಾರ ಭರತ್ ಕೊಂಡಜ್ಜಿಗೆ ಪೆಟ್ಟು

ಸಂತೈಸಿದ ಸಚಿನ್ ತೆಂಡೂಲ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೈಸಿದ ಸಚಿನ್ ತೆಂಡೂಲ್ಕರ್

ಬೆಂಗಳೂರು: ಸಚಿನ್ ತೆಂಡೂಲ್ಕರ್ ಶ್ರೇಷ್ಠ ಬ್ಯಾಟ್ಸ್‌ಮನ್ ಮಾತ್ರವಲ್ಲ; ಹೃಯದ ವೈಶಾಲ್ಯದಲ್ಲೂ ಮಹಾನ್ ವ್ಯಕ್ತಿ. ಇದು ಅನೇಕ ಬಾರಿ ಸಾಬೀತಾಗಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಸೋಮವಾರ ಅದು ಮತ್ತೊಮ್ಮೆ ಸಾಬೀತಾಯಿತು.ಗುರುವಾರ ಇಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಾಲೀಮು ನಡೆಸಿತು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಸ್ಥಳೀಯ ಕ್ಲಬ್‌ಗಳ ಹುಡುಗರು ಬೌಲ್ ಮಾಡಲು ಬಂದಿದ್ದರು.ಬೌಲಿಂಗ್ ವೇಳೆ ಮುಂಬೈ ಇಂಡಿಯನ್ಸ್ ತಂಡದ ಡ್ವೇನ್ ಸ್ಮಿತ್ ಬಾರಿಸಿದ ಚೆಂಡು ಹೆರಾನ್ಸ್ ಕ್ಲಬ್‌ನ ಎಡಗೈ ಸ್ಪಿನ್ನರ್ ಭರತ್ ಕೊಂಡಜ್ಜಿಗೆ ಬಲವಾಗಿ ಅಪ್ಪಳಿಸಿತು. ಮಂಡಿಗೆ ಚೆಂಡು ಬೀಳುತ್ತಿದ್ದಂತೆ ಭರತ್ ಕುಸಿದು ಬಿದ್ದರು.ಈ ಸಂದರ್ಭದಲ್ಲಿ 21 ವರ್ಷ ವಯಸ್ಸಿನ ಹುಡುಗನ ಬಳಿ ಯಾರೂ ಸುಳಿಯಲಿಲ್ಲ. ಆದರೆ ಅನತಿ ದೂರದಲ್ಲಿ ಅಭ್ಯಾಸಕ್ಕೆ ಸಿದ್ಧರಾಗಿ ನಿಂತಿದ್ದ ಸಚಿನ್ ಓಡಿಬಂದು ಈ ಉದಯೋನ್ಮುಖ ಬೌಲರ್‌ನನ್ನು ಸಂತೈಸಿದರು. ತಕ್ಷಣವೇ ಫಿಜಿಯೊ ರಾಬರ್ಟ್ ಅವರನ್ನು ಕರೆದು ಭರತ್‌ಗೆ ಉಪಚರಿಸಲು ಸೂಚಿಸಿದರು. ಭುಜದ ಮೇಲೆ ಕೈಇಟ್ಟು ಸಮಾಧಾನದ ಮಾತು ಹೇಳಿದರು.`ಅಭ್ಯಾಸದ ವೇಳೆ ಈ ರೀತಿಯ ಪೆಟ್ಟು ಸಾಮಾನ್ಯ. ಸ್ವಲ್ಪ ಹೊತ್ತಿನಲ್ಲಿ ಎಲ್ಲವೂ ಸರಿ ಹೋಗಲಿದೆ ಭಯಪಡಬೇಡ. ಮುಂದೆಯೂ ಧೈರ್ಯದಿಂದ ಬೌಲ್ ಮಾಡು' ಎಂದು ಸಚಿನ್ ತಮಗೆ ಕಿವಿಮಾತು ಹೇಳಿದರು ಎಂದು ಭರತ್ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.ವಿಶೇಷವೆಂದರೆ ಭರತ್ ಮುಂದಿನ ಕೆಲ ನಿಮಿಷಗಳಲ್ಲಿ ಸಚಿನ್‌ಗೆ ಬೌಲ್ ಮಾಡಬೇಕಿತ್ತು. `ಸಚಿನ್ ಬ್ಯಾಟ್ ಮಾಡಲು ನೆಟ್ಸ್‌ಗೆ ಬಂದಿರಲಿಲ್ಲ. ಆದರೆ ಬ್ಯಾಟ್ ಮಾಡಲು ಸಿದ್ಧರಾಗಿ ನಿಂತಿದ್ದರು. ನಾನು ಅವರಿಗೆ ಬೌಲ್ ಮಾಡಬೇಕಿತ್ತು. ಅದಕ್ಕಾಗಿ ಕಾತರನಾಗಿದ್ದೆ. ಆಗ ನನಗೆ ಬಲವಾದ ಪೆಟ್ಟು ಬಿತ್ತು. ಆದರೆ ಸಚಿನ್ ನನ್ನ ಬಳಿ ಬಂದು ಸಾಂತ್ವನ ಮಾತು ಹೇಳಿದ್ದು ಖುಷಿ ನೀಡಿತು. ನೋವನ್ನು ಮರೆಯುವಂತೆ ಮಾಡಿತು' ಎಂದು ಅವರು ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.