ಮಂಗಳವಾರ, ಮೇ 24, 2022
25 °C

ಸಂತ ಬಂದೇ ನವಾಜರ ದರ್ಗಾ

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಹದಿಮೂರನೇ ಶತಮಾನದ ಕೊನೆಯಲ್ಲಿ ಬಹಮನಿ ಸುಲ್ತಾನರಾದ ಫಿರೋಜ್ ಷಾ ಆಮಂತ್ರಣದ ಮೇರೆಗೆ ಗುಲ್ಬರ್ಗಕ್ಕೆ ಬಂದು ನೆಲೆಸಿದ ಬಂದೇ ನವಾಜ್‌ರ ಮೂಲ ಹೆಸರು ಸೈಯ್ಯದ್ ಮಹ್ಮದ್ ಹುಸೇನಿ. ಅವರು ಹುಟ್ಟಿದ್ದು ದೆಹಲಿಯಲ್ಲಿ ಕ್ರಿ.ಶ.1321ರಲ್ಲಿ. ದೈವಾಧೀನರಾದುದು 1422ರ ನವೆಂಬರ್ 1ರಂದು. ಮುಸ್ಲಿಂ ದಿನಚರಿಯ ಪ್ರಕಾರ ಜುಲ್ಖಾದಾ ಮಾಸದ 16ನೇ ದಿನ ಉರುಸ್ ಆಚರಿಸಲಾಗುತ್ತದೆ. ಉರುಸ್ ಎಂದರೆ ಇಲ್ಲಿ ದೇವ ಭಕ್ತ ತನ್ನ ಆರಾಧ್ಯದೈವದೊಂದಿಗೆ ಮಿಲನವಾಗುವ ಸಂದರ್ಭ (ದಿನ) ಎಂದು ನಂಬಲಾಗುತ್ತದೆ. ಇದಕ್ಕೆ ‘ಮಿಲನ್’ ಎಂದು ಕರೆದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಶ್ವೇತ ಶುಭ್ರ ಗುಮ್ಮಟಗಳ ದರ್ಗಾ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಅಮೋಘವಾದ ಕಟ್ಟಡ 600 ವರ್ಷಗಳಿಂದ ತನ್ನ ಸೌಂದರ್ಯ ಕಳೆದುಕೊಳ್ಳದೆಯೇ ನಳನಳಿಸುತ್ತಿದೆ. ಬಹಮನಿ ಸಾಮ್ರಾಜ್ಯದ ಹಸನ್‌ಗಂಗು ಈ ಮೂಲ ಕಟ್ಟಡವನ್ನು ನಿರ್ಮಿಸಿದರು. ನಂತರದ ರಾಜರು ಇದನ್ನು ಅಭಿವೃದ್ಧಿ ಪಡಿಸುತ್ತ ಬಂದರು. ಇಂಡೋ ಸಾರ್ಸೆನಿಕ್ ಶೈಲಿಯ ಈ ಬೃಹತ್ ದರ್ಗಾದಲ್ಲಿ ಭಕ್ತರ ವಸತಿ ವ್ಯವಸ್ಥೆಗಾಗಿ 100 ಕೋಣೆಗಳಿವೆ. ಗಾಢ ವರ್ಣಗಳನ್ನು ಒಳಾಂಗಣದ ವಿನ್ಯಾಸಕ್ಕೆ ಬಳಸಲಾಗಿದೆ. ಈ ದರ್ಗಾ ಶಾಂತಿ ಮತ್ತು ಸಹಬಾಳ್ವೆಯ ಸಂಕೇತ.ದರ್ಗಾದಲ್ಲಿ ಯಾವುದೇ ಪೂಜೆ, ಸೇವೆ ಇತ್ಯಾದಿಗಳಿಗೆ ಶುಲ್ಕ ನೀಡಬೇಕಿಲ್ಲ. ಇಲ್ಲಿಗೆ ಬರಲು  ಧರ್ಮ, ಜಾತಿಗಳ ಭೇದವಿಲ್ಲ. ಎಲ್ಲ ಧರ್ಮಗಳ ಜನರು ದರ್ಗಾಕ್ಕೆ ಬಂದು ತಮ್ಮ ಧರ್ಮಕ್ಕೆ ಅನುಸಾರವಾಗಿಯೇ ಹರಕೆ ಒಪ್ಪಿಸುತ್ತಾರೆ. ಹಿಂದೂಗಳು ಸಜ್ಜಕ, ಪೇಡೆ, ಚೊಂಗೆ ಖಾದ್ಯಗಳಿಂದ ನೈವೇದ್ಯ ಮಾಡುತ್ತಾರೆ. ಚದರ್ ಹೊದಿಸುವುದು ದರ್ಗಾದ ಬಹು ಮುಖ್ಯ ಹರಕೆ. ಹಸಿರು, ಕೆಂಪು, ಕೇಸರಿ ಗಾಢವರ್ಣಗಳ ವಿವಿಧ ಬಗೆಯ ವಸ್ತ್ರ ಹಾಗೂ ಹೂ ಹೊದಿಕೆಯ ಚದರ್‌ಗಳು ಅಲ್ಲಿ ದೊರೆಯುತ್ತವೆ. ಚಿರಾಗ್ (ಹಣತೆ) ಹೊತ್ತಿಸುವುದು ಇಲ್ಲಿನ ವಿಶಿಷ್ಟ ಸಂಪ್ರದಾಯ. ಎಣ್ಣೆತುಂಬಿಸಿ, ಬತ್ತಿ ಹಾಕಿದ ಹಣತೆಗಳು ದರ್ಗಾ ಆವರಣದಲ್ಲಿ ಸಿಗುತ್ತವೆ. ಹರಕ್ಕೆ ಕಟ್ಟಿಕೊಂಡವರು ಕ್ರಮವಾಗಿ 5,11, 21, 51 ಹೀಗೆ ಚಿರಾಗ್ ಹೊತ್ತಿಸುತ್ತಾರೆ.ಆಂಧ್ರ ಪ್ರದೇಶ, ಗುಜರಾತ್, ರಾಜಸ್ತಾನ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳು, ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳಿಂದ ವರ್ಷವಿಡೀ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಎಲ್ಲ ದಿನಗಳಲ್ಲೂ ಪೂಜೆಗೆ, ಹರಕೆ ಸಲ್ಲಿಕೆಗೆ ಅವಕಾಶವಿದೆ.

ಉರುಸ್ ಹಿಂದಿನ ದಿನ ‘ಚಂದನ’ ಆಚರಿಸುವುದು ವಾಡಿಕೆ. ಆಗ ವಿಶ್ವದೆಲ್ಲೆಡೆಯಿಂದ ಭಕ್ತರು ಸುಗಂಧ ಪರಿಮಳದೊಂದಿಗೆ ಸೇವೆ ಸಲ್ಲಿಸಲು ಬರುತ್ತಾರೆ.ಅನ್ನದಾನ ಇನ್ನೊಂದು ಬಗೆಯ ಹರಕೆ. ಕಿಚಡಿ, ಸಾಲನ್, ಬಿರಿಯಾನಿ, ಕೇಸರಿಬಾತ್, ಡಬ್ಬಲ್‌ಕಾ ಮೀಠಾ ಮುಂತಾದ ಖಾದ್ಯಗಳನ್ನು ಅಲ್ಲಿಯೇ ಸಿದ್ಧಪಡಿಸಿ ಬಡವರಿಗೆ ಉಣಬಡಿಸುವ ಹರಕೆ ಸಲ್ಲಿಸಲು ಅವಕಾಶವಿದೆ. ಇದಕ್ಕೆ ಅಗತ್ಯವಾದ ಪಾತ್ರೆ, ಸಲಕರಣೆಗಳನ್ನು ದರ್ಗಾ ಕಚೇರಿಯಿಂದ ಪಡೆಯಬಹುದು. ಕನಿಷ್ಠ ಸೌಲಭ್ಯಗಳ ವಸತಿ ವ್ಯವಸ್ಥೆ ದರ್ಗಾದಲ್ಲಿದೆ. ದರ್ಗಾಕ್ಕೆ ಭಕ್ತರು ಸಲ್ಲಿಸಿದ ಕಾಣಿಕೆ ಹಣವನ್ನು ಖಾಜಾ ಬಂದೇ ನವಾಜ್ ಶಿಕ್ಷಣ ಸಂಸ್ಥೆಯ ಉನ್ನತಿಗೆ ಬಳಸಲಾಗುತ್ತದೆ.    ಬಂದೇ ನವಾಜ್ ಸಂತರು ಹಾಗೂ ಭಕ್ತರ ನಡುವೆ ಮಧ್ಯವರ್ತಿಗಳಿಲ್ಲ. ಹರಕೆ, ಭಕ್ತಿ ಸಮರ್ಪಣೆಗೆ  ಯಾವ ವಿಶೇಷ ದಿನಗಳೂ ಇಲ್ಲ. ಸಾಮಾನ್ಯವಾಗಿ ಗುರುವಾರ ಮಹಿಳೆಯರು, ಶುಕ್ರವಾರ ಪುರುಷರು ಪೂಜೆ, ಪ್ರಾರ್ಥನೆಗೆ ದರ್ಗಾಕ್ಕೆ ಬರುತ್ತಾರೆ. ಎಲ್ಲ ದಿನಗಳಲ್ಲೂ ದರ್ಗಾ ದರ್ಶನಕ್ಕೆ ಅವಕಾಶವಿದೆ. ಬೆಳಗಿನ ಜಾವದ 5ರಿಂದ ತಡರಾತ್ರಿ 11ರವರೆಗೆ ದರ್ಗಾ ಬಾಗಿಲು ತೆರೆದಿರುತ್ತದೆ.ದರ್ಗಾಕ್ಕೆ ಬರುವುದು ಹೇಗೆ?

ಗುಲ್ಬರ್ಗಕ್ಕೆ ರೈಲು ಸೌಕರ್ಯವಿದೆ. ವಿಮಾನ ಮೂಲಕ ಬರುವವರು ಹೈದರಾಬಾದ್‌ಗೆ ಬಂದು ಅಲ್ಲಿಂದ ರೈಲು ಅಥವಾ ರಸ್ತೆ ಮೂಲಕ ಬರಬಹುದು. ಗುಲ್ಬರ್ಗ ನಗರದ ವಿವಿಧ ಭಾಗಗಳಿಂದ ಸಿಟಿ ಬಸ್‌ಗಳಲ್ಲಿ, ಕುದುರೆಗಾಡಿಗಳಲ್ಲಿ, ಆಟೋಗಳಲ್ಲಿ ದರ್ಗಾಕ್ಕೆ ಹೋಗಬಹುದು.  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್-08472-220558ಚಿತ್ರಗಳು: ಅನೂಪ್ ತಿಪ್ಪೇಸ್ವಾಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.