ಗುರುವಾರ , ಜೂನ್ 24, 2021
28 °C
ಅಕಾಲಿಕ ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತ

ಸಂಪರ್ಕ ಕಳೆದುಕೊಂಡ ಕಾಶ್ಮೀರ ಕಣಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ(ಐಎಎನ್‌ಎಸ್‌/ಪಿಟಿಐ): ಅಕಾಲಿಕವಾಗಿ ಸುರಿಯುತ್ತಿರುವ ಭಾರಿ ಹಿಮಪಾತದಿಂದಾಗಿ   ಕಾಶ್ಮೀರ–­ಜಮ್ಮು ರಾಷ್ಟ್ರೀಯ ಹೆದ್ದಾರಿ­ಯನ್ನು ಸೋಮ­ವಾರ­ದಿಂದ ಮುಚ್ಚಲಾಗಿದ್ದು, ಕಾಶ್ಮೀರ ಕಣಿವೆ ದೇಶದ ಇತರ ಭಾಗ­ಗಳಿಂದ ಸಂಪರ್ಕ ಕಡಿದುಕೊಂಡಿದೆ.ಕಣಿವೆಯ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಜನರು ಮನೆಬಿಟ್ಟು ಹೊರಕ್ಕೆ ಬರಲಾಗ­ದಂತಹ ಸ್ಥಿತಿ ಎದುರಾಗಿದೆ. ವಿದ್ಯುತ್‌ ಕಂಬಗಳ ಮೇಲೆ ಮರಗಳು ಬಿದ್ದಿರುವ ಕಾರಣ ವಿದ್ಯುತ್‌ ಸರಬರಾಜನ್ನು ನಿಲ್ಲಿಸ­ಲಾಗಿದೆ. ಇದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.ಅಕಾಲಿಕವಾಗಿ ಸುರಿದ  ಹಿಮಪಾತ­ದಿಂದಾಗಿ ಎಲ್ಲಾ ಶಾಲಾ ಕಾಲೇಜು­ಗಳನ್ನು ಬಂದ್‌ ಮಾಡಲಾಗಿದೆ. ಅಲ್ಲದೇ, ರಾಜ್ಯ ಲೋಕಸೇವಾ ಆಯೋಗ ಮಂಗಳ­ವಾರ ನಡೆಸಲು ಉದ್ದೇಶಿಸಿದ್ದ ಪರೀಕ್ಷೆ­ಯನ್ನು ಮುಂದೂಡಿದೆ. ಬುಧವಾರ­ದಂದು ಹಿಮಪಾತ ನಿಂತರೆ ಶಾಲಾ–ಕಾಲೇ­ಜುಗಳನ್ನು ಪುನಃ ಆರಂಭಿ­ಸಲಾ­ಗುವುದು ಎಂದು ಶಿಕ್ಷಣ ಸಂಸ್ಥೆಗಳು ಹೇಳಿವೆ.ಹಿಮಪಾತದಿಂದಾಗಿ ಅನೇಕ ಮರ­ಗಳು ನೆಲಕ್ಕುರುಳಿವೆ. ಇದರಲ್ಲಿ ಅನೇಕ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದಿ­ರುವುದರಿಂದ ವಿದ್ಯುತ್‌ ಸರಬ­ರಾಜನ್ನು ನಿಲ್ಲಿಸಲಾಗಿದೆ. ಇದರಿಂದ ಕಾಶ್ಮೀರ ಕಣಿವೆಯಲ್ಲಿ ಸೋಮವಾರ ಸಂಜೆಯಿಂದಲೇ ಕತ್ತಲು ಆವರಿಸಿದೆ.‘ಹಿಮಪಾತದಿಂದಾಗಿ 300 ಕಿ.ಮೀ ಉದ್ದ ಇರುವ ಹೆದ್ದಾರಿಯ ಮೇಲೆ ಸುಮಾರು ಒಂದು ಅಡಿಗಿಂತಲೂ ಹೆಚ್ಚು ಹಿಮ ಬಿದ್ದಿದೆ. ಆದ್ದರಿಂದ ಈ ಮಾರ್ಗ­ದಲ್ಲಿ ಯಾವುದೇ ವಾಹನಗಳನ್ನು ಬಿಡ­ಲಾಗುತ್ತಿಲ್ಲ. ಹಿಮಪಾತ ನಿಂತ ನಂತರ ರಸ್ತೆಯ ಮೇಲೆ ಬಿದ್ದ ಹಿಮವನ್ನು ತೆರವು­ಗೊಳಿಸಿದ ನಂತರವೇ ಹೆದ್ದಾರಿಯನ್ನು ಪುನಃ ಆರಂಭಿಸ­ಲಾಗುವುದು’ ಎಂದು ಸಂಚಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.‘ಪ್ರತಿಕೂಲ ಹವಾಮಾನದಿಂದಾಗಿ ಯಾವುದೇ ವಿಮಾನಗಳು ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿಲ್ಲ. ಈವ­ರೆಗೆ ಯಾವುದೇ ವಿಮಾನಯಾನವನ್ನು ರದ್ದುಪಡಿಸಿಲ್ಲ. ಒಂದು ವೇಳೆ ಹಿಮಪಾತ ಹೀಗೆಯೇ ಮುಂದು­ವರಿದರೆ ವಿಮಾನ­ಯಾನ­ಗಳನ್ನು ರದ್ದು ಪಡಿಸುವ ಸಾಧ್ಯತೆ ಇದೆ’ ಎಂದು ವಿಮಾನಯಾನ ಇಲಾಖೆಯ ಅಧಿಕಾರಿ­ಯೊಬ್ಬರು ತಿಳಿಸಿದ್ದಾರೆ.ಅಕಾಲಿಕ ಹಿಮಪಾತದಿಂದಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ ಎಂದು ರೈತರು ಚಿಂತೆಗೀಡಾಗಿದ್ದಾರೆ.‘ಅಕಾಲಿಕವಾಗಿ ಸುರಿಯುತ್ತಿರುವ ಹಿಮ­ದಿಂದಾಗಿ ಕೃಷಿ ಮತ್ತು ಹಣ್ಣುಗಳ ಬೆಳೆಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹಿಮಪಾತ­ವಾಗು­ವುದು ಯಾವುದೇ ಬೆಳೆಗೂ ಸರಿ­ಯಾದುದಲ್ಲ’ ಎಂದು ಉತ್ತರ ಕಾಶ್ಮೀ­ರದ ಬಾರಾಮುಲ್ಲಾ ಜಿಲ್ಲೆಯ ರೈತರೊಬ್ಬರು ಅಲವತ್ತುಕೊಂಡಿದ್ದಾರೆ.ಕಾಶ್ಮೀರ ಕಣಿವೆಯಲ್ಲಿ ಮುಂದಿನ 24 ಗಂಟೆಯವರೆಗೆ ಇದೇ ರೀತಿ ಹಿಮಪಾತ­ವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.