ಶುಕ್ರವಾರ, ಮಾರ್ಚ್ 5, 2021
23 °C

ಸಂಪೂರ್ಣ ಸಾವಯವ! ಸಿಕ್ಕಿಂ ನವೋದಯ!

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಸಂಪೂರ್ಣ ಸಾವಯವ! ಸಿಕ್ಕಿಂ ನವೋದಯ!

ಈಶಾನ್ಯ ದಿಕ್ಕಿನಲ್ಲಿ ತಮ್ಮ ಪಾಡಿಗೆ ತಾವಿರುವ ಈ ‘ಸಪ್ತ ಸೋದರಿ’ಯರತ್ತ ಆಡಳಿತಗಾರರ ಗಮನ ಹರಿದಿದ್ದೇ ಕಡಿಮೆ. ಆಗಾಗ ನೆರೆಹೊರೆಯ ಕಿಡಿಗೇಡಿಗಳ ನಡವಳಿಕೆಯಿಂದಾಗಿ ದೇಶದ ಮಾಧ್ಯಮಗಳ ಗಮನ ಸೆಳೆಯುವ ಈ ಸೋದರಿಯರ ಏಳಿಗೆ ಹೇಗಾದೀತು ಎಂದು ಆಡಳಿತಗಾರರು ಯೋಚಿಸಿದ್ದೂ ಹೆಚ್ಚೇನಿಲ್ಲ. ಇವರ ಪೈಕಿ ಬಹುತೇಕ ಸೋದರಿಯರು ತಮ್ಮ ನೆಲಕ್ಕೆ ರಸವಿಷಗಳನ್ನು ಧಾರಾಳವಾಗಿ ಉಣ್ಣಿಸುತ್ತಿದ್ದರೆ, ಒಬ್ಬಾಕೆ ಮಾತ್ರ ತನ್ನ ಅನುಪಮ ಪ್ರಕೃತಿ ಸೌಂದರ್ಯದ ಜತೆಗೆ ತಾನು ಆಯ್ದುಕೊಂಡ ಹಾದಿಯ ಬಗ್ಗೆ ದೇಶದ ಗಮನ ಸೆಳೆದಿದ್ದಾಳೆ. ಗಾಳಿ, ನೆಲ, ಜಲ ವಿಧ್ವಂಸಗೊಳಿಸುತ್ತ ವಿನಾಶದ ದಾರಿಯಲ್ಲಿ ಸಾಗುತ್ತಿರುವ ಉಳಿದವರಿಗೆ ಅದು ಪ್ರಗತಿಯ ನಿಜವಾದ ಹಾದಿಯೂ ಆದೀತು. ಹೌದು, ಈಗ ಪ್ರಸ್ತಾಪಿಸಿರುವುದು ಪುಟ್ಟ ರಾಜ್ಯ ಸಿಕ್ಕಿಂ ಕುರಿತು!ನಕಾಶೆ ಗಮನಿಸಿದರೆ, ಭಾರತಕ್ಕೆ ಅಲ್ಪಮಟ್ಟಿಗೆ ಅಂಟಿಕೊಂಡಂತಿರುವ ರಾಜ್ಯಗಳ ತುಂಡಿನ ಪೈಕಿ ಸಿಕ್ಕಿಂ ಕೂಡ ಒಂದು. ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಮಣಿಪುರದೊಂದಿಗೆ ಈ ರಾಜ್ಯ ಸೇರಿಸಿ ‘ಸೆವೆನ್ ಸಿಸ್ಟರ್ಸ್’ ಎಂದೇ ಕರೆಯಲಾಗುತ್ತದೆ. ನೆರೆ ದೇಶಗಳ ಉಪಟಳದಿಂದಾಗಿ ಆಗಾಗ ಈ ರಾಜ್ಯಗಳ ಸುದ್ದಿ ಜನರಿಗೆ ಗೊತ್ತಾಗುತ್ತದಷ್ಟೇ.ಅರವತ್ತರ ದಶಕದಲ್ಲಿ ಭಾರತದಲ್ಲಿ ಅನುಷ್ಠಾನವಾದ ‘ಹಸಿರು ಕ್ರಾಂತಿ’ಯಿಂದ ಆಹಾರ ಸ್ವಾವಲಂಬನೆ ಸಾಧ್ಯವಾಯಿತು ಎಂಬ ಪ್ರತಿಪಾದನೆಯ ನಡುವೆ ರೈತನ ಸ್ಥಿತಿ ಅಧೋಗತಿ ತಲುಪಿದ್ದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಅತ್ಯುಗ್ರ ರಾಸಾಯನಿಕಗಳ ಬಳಕೆಯಿಂದಾಗಿ ಪರಿಸರ ವಿಷಮಯವಾದ ಬಗ್ಗೆ ಆಧುನಿಕ ಕೃಷಿ ವಿಜ್ಞಾನದ್ದು ‘ಜಾಣಕುರುಡು’!ಆಹಾರ, ಪರಿಸರವನ್ನು ವಿಷಮಯವಾಗಿಸಿ, ರೈತರನ್ನು ಪರಾವಲಂಬಿಯನ್ನಾಗಿ ಮಾಡಿದ ‘ಹಸಿರು ಕ್ರಾಂತಿ’ಗೆ ಇತಿಶ್ರೀ ಹಾಡಿದ ಮೊದಲ ರಾಜ್ಯ ಎಂಬ ಖ್ಯಾತಿಗೆ ಸಿಕ್ಕಿಂ ಪಾತ್ರವಾಗಿದೆ. ದೇಶದ ಮೊದಲ ‘ಸಂಪೂರ್ಣ ಸಾವಯವ ರಾಜ್ಯ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯೊಂದಿಗೆ, ಸಾವಯವ ಚಳವಳಿಗೂ ಈಗ ಬಲ ಬಂದಂತಾಗಿದೆ. ‘ಹಸಿರು ಕ್ರಾಂತಿ’ ಜಾರಿಗೊಂಡ ಐವತ್ತನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳಬೇಕಾದ ಸಮಯದಲ್ಲಿ, ಸಿಕ್ಕಿಂಗೆ ಈ ಪಟ್ಟ ಸಿಕ್ಕಿರುವುದು ಭಾರತದ ರೈತ ಸಮುದಾಯದ ಪಾಲಿಗೆ ಖುಷಿಯೋ, ಅಚ್ಚರಿಯೋ? ಅಥವಾ ಈವರೆಗೆ ಆಗಿದ್ದೆಲ್ಲ ಒಳ್ಳೆಯದು ಎಂಬ ಭ್ರಮೆಯನ್ನು ತೊಡೆದು ಹಾಕುವ ಪ್ರಯತ್ನವೋ?!ಪರಿವರ್ತನೆಯ ಪಥ

ಬರೀ ನಾಲ್ಕು ಜಿಲ್ಲೆಗಳಿರುವ ಈ ಪುಟ್ಟ ರಾಜ್ಯದ ವಿಸ್ತೀರ್ಣ ಏಳು ಲಕ್ಷ ಹೆಕ್ಟೇರ್. ಈ ಪೈಕಿ  ಕೃಷಿಗೆ ಒಳಪಟ್ಟಿರುವುದು 75,000 ಹೆಕ್ಟೇರ್. ಈಗ ಈ ವ್ಯವಸಾಯದ ಭಾಗವೆಲ್ಲ ಸಾವಯವಕ್ಕೆ ಪರಿವರ್ತನೆಗೊಂಡಿದೆ. ಇದೇನೂ ಒಂದೆರಡು ವರ್ಷದಲ್ಲಿ ನಡೆದ ‘ಪವಾಡ’ವೇನಲ್ಲ. ಸುದೀರ್ಘವಾದ ಹನ್ನೆರಡು ವರ್ಷಗಳ ಪಯಣ ಅದು.ಅಧಿಕ ಇಳುವರಿಗೆ ರಾಸಾಯನಿಕ ಕೃಷಿಯೊಂದೇ ಪರಿಹಾರ ಎಂದು ಪ್ರತಿಪಾದಿಸುತ್ತಿದ್ದವರ ಎದುರಿಗೆ ಇಂಥದೊಂದು ಸಾಧ್ಯತೆಯನ್ನು ತೆರೆದಿಟ್ಟಿದ್ದು ಮುಖ್ಯಮಂತ್ರಿ ಪವನ್ ಚಾಮ್ಲಿಂಗ್. ಕೃಷಿ ಜೀವ ವೈವಿಧ್ಯದಿಂದ ತುಂಬಿ ತುಳುಕುವ ತಮ್ಮ ರಾಜ್ಯದಲ್ಲಿ ಸಾವಯವ ಕೃಷಿ ವಿಧಾನವನ್ನು ಜಾರಿ ಮಾಡುವ ಮೂಲಕ ಹೊಸ (ಹಳೆಯ?) ಹಾದಿಯತ್ತ ನಡೆಯಬೇಕು ಎಂಬ ಆಶಯ ಪವನ್ ಅವರದಾಗಿತ್ತು. ಅದಕ್ಕಾಗಿಯೇ ಅವರು ‘ಸಿಕ್ಕಿಂ ಸಂಪೂರ್ಣ ಸಾವಯವ ರಾಜ್ಯವಾಗಲಿದೆ’ ಎಂದು 2003ರಲ್ಲಿ ಘೋಷಿಸಿದರು.ಬರೀ ಘೋಷಣೆ ಮಾಡಿ ಸುಮ್ಮನಿರುವ ಜಾಯಮಾನ ಪವನ್ ಅವರದಾಗಿರಲಿಲ್ಲ. ಸರ್ಕಾರದ ಸೂಚನೆ ಮೇರೆಗೆ ‘ಸಿಕ್ಕಿಂ ರಾಜ್ಯ ಸಾವಯವ ಮಂಡಳಿ’ಯು ಸಾವಯವ ಕೃಷಿಕರು ಹಾಗೂ ಸಾವಯವ ಕೃಷಿಕರ ಸಂಘಟನೆ ಜತೆ ಹಲವು ಸುತ್ತುಗಳ ಸಮಾಲೋಚನೆ ನಡೆಸಿತು. ಸಾವಯವ ಕೃಷಿ ನೀತಿ ಅನುಷ್ಠಾನದಿಂದ ರೈತರು ಹಾಗೂ ಪರಿಸರಕ್ಕೆ ಸಿಗಬಹುದಾದ ಪ್ರಯೋಜನದ ಕುರಿತು ಅಧ್ಯಯನ ನಡೆಸಿತು. ಕೊನೆಗೆ ಆ ಮಂಡಳಿ ನೀಡಿದ ಶಿಫಾರಸಿನಂತೆ, 2004ರಲ್ಲಿ ಸಾವಯವ ಕೃಷಿ ನೀತಿ ಜಾರಿಗೆ ತರಲಾಯಿತು. ಆ ವರ್ಷದಿಂದಲೇ ರಾಸಾಯನಿಕಗಳ ಖರೀದಿಯನ್ನು ರಾಜ್ಯ ಸರ್ಕಾರ ನಿಲ್ಲಿಸಿತು.ರಾಸಾಯನಿಕ ಬಳಸುತ್ತಿದ್ದ ರೈತರನ್ನು ಪರ್ಯಾಯ ವಿಧಾನಗಳತ್ತ ಹೊರಳಿಸುವುದೇ ಸವಾಲು. ಹೀಗಾಗಿ ಸಾವಯವ ವಿಧಾನದ ಬಗ್ಗೆ ಮನವರಿಕೆ ಮಾಡಿಕೊಡಲು ರೈತರಿಗೆ ಸಾಲುಸಾಲಾಗಿ ತರಬೇತಿಗಳನ್ನು ಆಯೋಜಿಸಲಾಯಿತು. ಸುಲಭ ವಿಧಾನಗಳಲ್ಲಿ ಗೊಬ್ಬರ ಉತ್ಪಾದಿಸಿಕೊಳ್ಳಲು ಸರ್ಕಾರ ಧನಸಹಾಯ ನೀಡಿತು. ಆಯಾ ಪ್ರದೇಶದಲ್ಲಿ ಬೆಳೆಯುತ್ತಿದ್ದ ಬೆಳೆ ಆಧರಿಸಿ, ಹಸಿರೆಲೆ ಗೊಬ್ಬರ ಬಳಕೆಗೆ ಪ್ರೇರೇಪಣೆ ನೀಡಲಾಯಿತು. ಕೀಟ–ರೋಗ ಬಾಧೆ ನಿವಾರಣೆ ಮಾಡಿಕೊಂಡ ರೈತಮಟ್ಟದ ಅನುಶೋಧನೆಯನ್ನು ಪುರಸ್ಕರಿಸಿ, ಅವುಗಳನ್ನು ಪ್ರಚುರಪಡಿಸಲಾಯಿತು.2010ರಲ್ಲಿ ಮೊದಲ ಬಾರಿಗೆ ಪ್ರಬಲ ಕಾಯ್ದೆಯನ್ನು ಜಾರಿಗೊಳಿಸಿದ ಸರ್ಕಾರ, ರಾಸಾಯನಿಕ ಗೊಬ್ಬರ ಬಳಕೆ ಮೇಲೆ ನಿಷೇಧ ವಿಧಿಸಿತು. ಪಕ್ಕದ ರಾಜ್ಯಗಳಿಂದ ರಸಗೊಬ್ಬರ ಖರೀದಿಸಿ ತಂದು ಸುರಿಯುತ್ತಿದ್ದ ರೈತರಿಗೆ ಇದರಿಂದ ದೊಡ್ಡ ಅಡಚಣೆ ಎದುರಾದಂತಾಯಿತು. ಅನಿವಾರ್ಯವಾಗಿ ಅವರೂ ಸಾವಯವಕ್ಕೇ ಹೊರಳಬೇಕಾಯಿತು.ಯಾರಿಗೆ ಎಷ್ಟೆಷ್ಟು ಲಾಭ?

ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?


‘ರಾಸಾಯನಿಕ ಗೊಬ್ಬರ ಉತ್ಪಾದನೆ ಕಂಪೆನಿಗಳಿಗೆ ನಷ್ಟವೇ ಹೊರತೂ ರೈತರಿಗೇನೂ ಅಲ್ಲ’ ಎನ್ನುತ್ತಾರೆ ಚಂದ್ರಮುಖಿ ರೈತ ಸಂಘಟನೆಯ ಸದಸ್ಯ ಹಾಗೂ ಸಾವಯವ ಕೃಷಿಕ ಧನಪತಿ ಸಾಬ್. ‘ಸಾವಯವಕ್ಕೆ ಮರಳಿದ ವರ್ಷ ಶೇಕಡ 10ರಷ್ಟು ಉತ್ಪಾದನೆ ಕಡಿಮೆಯಾಗಿತ್ತು. ಆದರೆ ಒಳಸುರಿ ವೆಚ್ಚವೂ ತೀರಾ ಕಡಿಮೆಯಾಗಿತ್ತು. ಹೀಗಾಗಿ ಒಟ್ಟಾರೆ ಲೆಕ್ಕಾಚಾರದ ಪ್ರಕಾರ ನನಗೆ ಹಾನಿ ಅನಿಸಲೇ ಇಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ. ಕಾಯ್ದೆ ಉಲ್ಲಂಘಿಸಿ, ರಸಗೊಬ್ಬರ ಬಳಸಿದರೆ ಆರು ತಿಂಗಳ ಜೈಲುಶಿಕ್ಷೆ ಕಾಯ್ದೆ ಭೀತಿಯಿಂದಾಗಿಯೂ ಹಲವರು ಸಾವಯವಕ್ಕೆ ಹೊರಳಿದ್ದಾರೆ ಎಂದು ಅವರು ನಗುತ್ತ ಹೇಳುತ್ತಾರೆ.ಸಾವಯವಕ್ಕೆ ಪರಿವರ್ತನೆಗೊಂಡಿದ್ದರಿಂದ ಸಿಕ್ಕಿಂ ಸಾಕಷ್ಟು ‘ಲಾಭ’ ಗಳಿಸಿದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಒಳ್ಳೆಯ ದರ ಪಡೆಯುತ್ತಿದೆ. ನಿಖರವಾಗಿ ಇಷ್ಟೇ ಎಂದು ಹೇಳಲು ಅಸಾಧ್ಯವಾದರೂ, ಭಾರತದ ಒಟ್ಟು 12.4 ಲಕ್ಷ ಟನ್‌ನಷ್ಟು ಸಾವಯವ ಉತ್ಪನ್ನದ ಪೈಕಿ ಸಿಕ್ಕಿಂ ಪಾಲು ಶೇಕಡ 65ರಷ್ಟಿದೆ! ಅಂದರೆ 8 ಲಕ್ಷ ಟನ್. ವಿಷಮುಕ್ತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅದು ಸಾವಯವ ಕೃಷಿಕರಿಗೆ ಇನ್ನಷ್ಟು ಅವಕಾಶ ಸೃಷ್ಟಿಸಿದೆ. ಹಲವು ರೈತ ಗುಂಪುಗಳು ತಮ್ಮ ಉತ್ಪನ್ನವನ್ನು ದೇಶದ ಬೇರೆ ಕಡೆ ಕಳಿಸಿ, ಹೆಚ್ಚೆಚ್ಚು ಆದಾಯ ಗಳಿಸಲು ಸಾಧ್ಯವಾಗಿದೆ.ಅವಕಾಶಗಳ ಹೆಬ್ಬಾಗಿಲು

ಸಸ್ಯಜನ್ಯ ಕೀಟನಾಶಕ, ಪೀಡೆನಾಶಕ, ಗೊಬ್ಬರ ತಯಾರಿ ಹಾಗೂ ಮಾರಾಟವೂ ಒಂದಷ್ಟು ರೈತರಿಗೆ ಆದಾಯದ ಹೊಸ ದಾರಿ ತೋರಿಸಿದೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಸಾಂಪ್ರದಾಯಿಕ ತಳಿ ಬಿತ್ತನೆ ಬೀಜಗಳ ವಹಿವಾಟು ಜೋರಾಗಿ ನಡೆದಿದೆ.ಪಶ್ಚಿಮ ಬಂಗಾಳದ ಸಿಲಿಗುರಿಯ ಬಿತ್ತನೆ ಬೀಜ ಮಾರಾಟಗಾರ ಶಿವ ಸಿಂಗ್, ಹಲವು ವರ್ಷಗಳಿಂದ ಸಿಕ್ಕಿಂನಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಈವರೆಗೂ ಕಂಪೆನಿಗಳ ಹೈಬ್ರಿಡ್ ಬೀಜ ಪೂರೈಸುತ್ತಿದ್ದ ಶಿವ ಸಿಂಗ್‌, ಈಗ ಜವಾರಿ ತಳಿ ಬೀಜ ಮಾರಾಟ ಮಾಡಬೇಕಿದೆ! ‘ಸಾವಯವ ಕೃಷಿಗೆ ಹೆಚ್ಚು ಒಗ್ಗಿಕೊಳ್ಳುವ ಸಾಂಪ್ರದಾಯಿಕ ತಳಿಗೆ ಸಿಕ್ಕಿಂನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಮೌಲ್ಯದ ಹೈಬ್ರಿಡ್ ಬೀಜ ಖರೀದಿಸಿ, ಮಾರಾಟ ಮಾಡುತ್ತಿದ್ದೆ. ಆದರೆ ನಾಲ್ಕೈದು ವರ್ಷದಿಂದ ದೇಶದ ವಿವಿಧೆಡೆಯ ರೈತರಿಂದ ಸಾಂಪ್ರದಾಯಿಕ ತಳಿ ಬಿತ್ತನೆ ಬೀಜ ತರಿಸಿ, ವಿತರಿಸುತ್ತಿದ್ದೇನೆ’ ಎನ್ನುತ್ತಾರೆ ಶಿವ ಸಿಂಗ್. ಕರ್ನಾಟಕದ ರೈತ ಕಂಪೆನಿ ‘ಸಹಜ ಸೀಡ್ಸ್‌’ನಿಂದ ಬಣ್ಣದ ಮೆಕ್ಕೆಜೋಳ ಹಾಗೂ ತರಹೇವಾರಿ ತರಕಾರಿ ಬೀಜಗಳು ಈ ಸಲ ಸಿಕ್ಕಿಂಗೆ ಪ್ರಯಾಣ ಬೆಳೆಸಲಿವೆ!ಎಲ್ಲವೂ ಆಗಿಲ್ಲ...

ದೇಶಕ್ಕೆ ಸುಸ್ಥಿರ ಕೃಷಿ ಪಾಠ ಹೇಳುತ್ತಿರುವ ಸಿಕ್ಕಿಂ, ಎಲ್ಲದರಲ್ಲೂ ಸ್ವಾವಲಂಬನೆ ಸಾಧಿಸಿಲ್ಲ. ಕೆಲವು ತರಕಾರಿ ಹಾಗೂ ಬೇಳೆಕಾಳುಗಳು ಪಕ್ಕದ ರಾಜ್ಯದಿಂದ ಬರುತ್ತವೆ. ಅವೆಲ್ಲ ರಾಸಾಯನಿಕದಲ್ಲೇ ಬೆಳೆದಿರುವಂಥವು. ಉಳಿದ ರಾಜ್ಯಗಳೂ ಸಿಕ್ಕಿಂ ಹಾದಿಯಲ್ಲಿ ನಡೆದರೆ, ಎಲ್ಲ ಕಡೆಯೂ ವಿಷಮುಕ್ತ ಆಹಾರ ಸಿಗುವಂತಾದೀತು. ಕಳೆದ ವಾರವಷ್ಟೇ ಸಿಕ್ಕಿಂ ಅನ್ನು ಸಂಪೂರ್ಣ ಸಾವಯವ ರಾಜ್ಯ ಎಂದು ಘೋಷಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ಈ ರಾಜ್ಯ ಹಾಕಿಕೊಟ್ಟ ಮಾದರಿಯನ್ನು ಉಳಿದ ರಾಜ್ಯಗಳೂ ಅನುಸರಿಸಬೇಕು’ ಎಂದು ಕರೆ ನೀಡಿದ್ದನ್ನು ಈ ಅರ್ಥದಲ್ಲಿ ನೋಡಬೇಕು.‘ಹಸಿರು ಕ್ರಾಂತಿ’ ಜಾರಿ ಮಾಡುವ ಸಮಯದಲ್ಲಿ ಕೃಷಿ ಅಧಿಕಾರಿಗಳು ತಲೆ ಮೇಲೆ ರಸಗೊಬ್ಬರದ ಮೂಟೆಗಳನ್ನು ಹೊತ್ತುಕೊಂಡು ಹಳ್ಳಿಗೆ ಹೋಗಿ, ಅವುಗಳನ್ನು ಬಳಸಲು ರೈತರಿಗೆ ಸಲಹೆ ಕೊಡುತ್ತಿದ್ದರಂತೆ! ಅದನ್ನು ಪಾಲಿಸಿದ ರೈತರ ಸ್ಥಿತಿ ಈಗ ಎಲ್ಲಿಗೆ ಬಂದು ನಿಂತಿದೆ ಎಂಬುದು ಗೊತ್ತಿಲ್ಲದ್ದೇನಲ್ಲ. ಅಂದು ಅಂಥ ‘ಕಠಿಣ’ ಕೆಲಸವನ್ನು ಮಾಡಿದ ಅಧಿಕಾರಿಗಳು, ರೈತರನ್ನು ಈಗ ನೇಣಿನ ಕುಣಿಕೆಯಿಂದ ಪಾರು ಮಾಡಲು ಮುಂದೆ ಬರಬೇಕು. ಎಲ್ಲದಕ್ಕೂ ರಾಸಾಯನಿಕಗಳ ಮಂತ್ರ ಜಪಿಸುತ್ತ, ರೈತರನ್ನು ಪಾತಾಳಕ್ಕೆ ತಳ್ಳಿದವರು ಇಷ್ಟು ಮಾತ್ರ ಮಾಡಲಾರರೇ?

ಅಷ್ಟಕ್ಕೂ ಸಿಕ್ಕಿಂ ಎಂಬ ಪುಟ್ಟ ರಾಜ್ಯ ಕಲಿಸಿದ ದೊಡ್ಡ ಪಾಠ ಎದುರಿಗೇ ಇದೆಯಲ್ಲ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.