ಭಾನುವಾರ, ಮೇ 22, 2022
29 °C

ಸಂಬಂಧ ಇಲ್ಲದವರ ಮೇಲೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಹೆಗ್ಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಈಚೆಗೆ ನಡೆದ ಗಲಭೆ ಪ್ರಕರಣ ಕುರಿತಂತೆ ಸ್ಥಳೀಯ ಶಾಸಕ ಹಾಗೂ ಸಂಸದರು ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದು ಪ್ರಕರಣಕ್ಕೆ ಸಂಬಂಧ ಇಲ್ಲದವರ ಮೇಲೆ ದೂರು ದಾಖಲಿಸಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.ಭಾನುವಾರ ಪಟ್ಟಣದಲ್ಲಿ ಈಚೆಗೆ ನಡೆದ ಗ್ರಾ.ಪಂ. ಉಪ ಚುನಾವಣೆ ಹಾಗೂ ಅಧ್ಯಕ್ಷರ ಆಯ್ಕೆಯಲ್ಲಿ ಜಯಗಳಿಸಿದ ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಪಕ್ಷದ 21 ಸದಸ್ಯರ ಮೇಲೆ ಪ್ರಕರಣ ದಾಖಲಿಸಿದ್ದು, ಅವರನ್ನು ರಾತ್ರೋರಾತ್ರಿ ಬಂಧಿಸುವ ಹುನ್ನಾರ ನಡೆಸಲಾಗಿದೆ. ಜಾತಿ ನಿಂದನೆ, ದೊಂಬಿ ಪ್ರಕರಣವನ್ನು ಅನಗತ್ಯವಾಗಿ ದಾಖಲು ಮಾಡಲಾಗಿದೆ.ಸದಸ್ಯರು ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ವಾತಾವರಣ ಸೃಷ್ಟಿಸಿ ಮಾನಸಿಕವಾಗಿಯೂ ತೊಂದರೆ ನೀಡಲಾಗಿದೆ ಎಂದು ಆರೋಪಿಸಿದ ಅವರು, ಈ ಕುರಿತು ಮಾನವ ಹಕ್ಕು ಆಯೋಗ ಹಾಗೂ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.ಪ್ರಕರಣ ಆಡಳಿತ ವ್ಯವಸ್ಥೆಯ ಕೀಳು ಮಟ್ಟವನ್ನು ತಲುಪಿದ್ದು, ಇದನ್ನು ಪಕ್ಷ ಖಂಡಿಸುತ್ತದೆ. ತಾಲ್ಲೂಕಿನ ಯಾವುದೇ ಪಕ್ಷದ ವ್ಯಕ್ತಿ ಕೈಗೆ ಬೇಡಿ ಬೀಳುವುದನ್ನು ಸಹಿಸಲಾಗದು ಎಂದ ಅವರು, ಸಂಬಂಧವೇ ಇಲ್ಲದವರನ್ನು ಅನಗತ್ಯವಾಗಿ ಎಳೆದು ತರಬೇಡಿ, ದಬ್ಬಾಳಿಕೆ ನಡೆಸಬೇಡಿ ಎಂದು ಎಚ್ಚರಿಕೆ ನೀಡಿದರು.ಇಂತಹ ಟೊಳ್ಳು ಬೆದರಿಕೆಗೆ ಜಗ್ಗಬೇಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ ಅವರು, ತಾಲ್ಲೂಕಿನಲ್ಲಿ ಯಾವುದೇ ವ್ಯಕ್ತಿಗೆ ಅನ್ಯಾಯವಾದರೂ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸಹ ಬಿಜೆಪಿಯೊಂದಿಗೆ ಕೈ ಜೋಡಿಸಿರುವುದು ತೀವ್ರ ಆತಂಕ ವಿಚಾರವಾಗಿದೆ.ರಾಜ್ಯದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಗ್ರಾಮ ಪಂಚಾಯ್ತಿ ಸದಸ್ಯರವರೆಗೆ ಆಡಳಿತ ವ್ಯವಸ್ಥೆ ಹಾಳಾಗಿದೆ. ಬಿಜೆಪಿಯಿಂದ ರಾಜ್ಯಕ್ಕೆ, ಕಾಂಗ್ರೆಸ್‌ನಿಂದ ದೇಶಕ್ಕೆ ಅವಮಾನ ಆಗಿದೆ. ಆ ಪಕ್ಷಗಳ ಧುರೀಣರು ಒಬ್ಬೊಬ್ಬರಾಗಿ ಜೈಲು ಸೇರುತ್ತಿದ್ದು, ಶಾಪಮುಕ್ತರಾಗಬೇಕೆಂಬ ಇಂಗಿತ ಹೊಂದಿರುವ ಮತದಾರರು ಜೆಡಿಎಸ್ ಬೆಂಬಲಿಸುತ್ತಾರೆ ಎಂದು ಭವಿಷ್ಯ ನುಡಿದರು.ಬೆಳೆ ಬರುತ್ತಿರುವ ಕಾಲಕ್ಕೆ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಇದನ್ನು ಪಕ್ಷ ವಿರೋಧಿಸುತ್ತದೆ ಎಂದ ಅವರು, ಅನ್ನದಾತನ ನೆರವಿಗೆ ಬರುವಂತೆ ಸರ್ಕಾರವನ್ನು ಆಗ್ರಹಿಸಿದರು.ಬಗರ್‌ಹುಕುಂ ಹಕ್ಕುಪತ್ರ ನೀಡಿಕೆಯಲ್ಲಿ ಪಕ್ಷ ರಾಜಕಾರಣ ಕಂಡು ಬರುತ್ತಿದ್ದು, ಬಡ ರೈತರ ಹೊಟ್ಟೆ ಮೇಲೆ ಕಲ್ಲು ಹಾಕುವ ಪ್ರವೃತ್ತಿ ಬೇಡ ಎಂದು ಮನವಿ ಮಾಡಿದರು.ಪಕ್ಷದ ತಾಲ್ಲೂಕು ಅಧ್ಯಕ್ಷ ದಾನಶೇಖರ್, ತಾ.ಪಂ. ಸದಸ್ಯ ಕೆ. ಅಜ್ಜಪ್ಪ, ಪರಶುರಾಮ್, ಎಚ್. ಗಣಪತಿ, ಎಂ.ಡಿ. ಶೇಖರ್, ಕೆ.ವಿ. ಗೌಡ, ಮಂಚಿ ಸೋಮಪ್ಪ, ಬರಗಿ ನಿಂಗಪ್ಪ ಇದ್ದರು.ಇದಕ್ಕೆ ಮುನ್ನ ಉಪ ಚುನಾವಣೆ, ಅಧ್ಯಕ್ಷರ ಆಯ್ಕೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.