ಬುಧವಾರ, ಜೂನ್ 23, 2021
22 °C

ಸಂಭ್ರಮದ ಹುಸ್ಕೂರು ಮದ್ದೂರಮ್ಮ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆ ಶನಿವಾರ ಸಂಭ್ರಮ ಸಡಗರಗಳಿಂದ ನೆರವೇರಿತು.

ಜಾತ್ರೆಯ ಪ್ರಮುಖ ಆಕರ್ಷಣೆಯಾದ ನವ ಗ್ರಾಮಗಳ ಕುರ್ಜುಗಳು(ತೇರುಗಳು) ಹುಸ್ಕೂರಿಗೆ ಸಂಜೆಯ ವೇಳೆಗೆ ಆಗಮನದಿಂದಾಗಿ ಜಾತ್ರೆ ರಂಗೇರಿತು.

 

ಉತ್ಸವದಲ್ಲಿ ಪಾಲ್ಗೊಂಡು ಕುರ್ಜುಗಳನ್ನು ವೀಕ್ಷಿಸಿ ದವನ ಚುಚ್ಚಿದ ಬಾಳೆ ಹಣ್ಣನ್ನು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವ ಮೂಲಕ ಜಾತ್ರೆಗೆ ಸಾಕ್ಷಿಯಾದರು. ಹೀಲಲಿಗೆ, ದೊಡ್ಡನಾಗಮಂಗಲ, ರಾಮಸಾಗರ, ಕಗ್ಗಲೀಪುರ, ರಾಯಸಂದ್ರ, ಸೂಲಕುಂಟೆ, ಕೊಡತಿ, ಹಾರೋಹಳ್ಳಿ, ನಾರಾಯಣಘಟ್ಟ ಸೇರಿದಂತೆ  ಒಂಭತ್ತು ಗ್ರಾಮಗಳಿಂದ ಕುರ್ಜುಗಳನ್ನು  ಎತ್ತುಗಳು ಎಳೆದುಕೊಂಡು ಹುಸ್ಕೂರು ಮದ್ದೂರಮ್ಮ ದೇವಾಲಯದ ಆವರಣಕ್ಕೆ ಬಂದವು.11ಗಂಟೆಗೆ ಹೀಲಲಿಗೆಯಿಂದ ತೆರಳಿದ ಕುರ್ಜು ಮೊದಲಿಗೆ ದೇವಾಲಯದ ಆವರಣಕ್ಕೆ ಆಗಮಿಸಿತು. ಈ ವರ್ಷದ ಕುರ್ಜುಗಳಲ್ಲಿ 120ಅಡಿ ಎತ್ತರವಿದ್ದ ಹೀಲಲಿಗೆಯ ಕುರ್ಜು ಅತ್ಯಂತ ಎತ್ತರವಾಗಿದ್ದುದು ವಿಶೇಷ.ಉಳಿದ ಕುರ್ಜುಗಳು ಸಹ 80-90 ಅಡಿಗಳ ಎತ್ತರವಿದ್ದವು, 7-8ಕಿ.ಮೀ. ದೂರದಿಂದ ಎತ್ತುಗಳ ಮೂಲಕ ಕುರ್ಜುಗಳನ್ನು ಎಳೆದುಕೊಂಡು ಬರಲಾಗುತ್ತದೆ.  ಶುಕ್ರವಾರದಿಂದಲೇ(ಮಾ.16) ಜಾತ್ರೆಯ ಸಂಭ್ರಮ ಪ್ರಾರಂಭವಾಗಿತ್ತು, ನವಗ್ರಾಮಗಳಲ್ಲಿ ಮಹಿಳೆಯರು ದೀಪಾರತಿ ಮಾಡುವ ಮೂಲಕ ತಮ್ಮ ತಮ್ಮ ಗ್ರಾಮಗಳ ತೇರುಗಳಿಗೆ ಪೂಜೆ ಸಲ್ಲಿಸಿದರು. ಶುಕ್ರವಾರ ಎಲ್ಲಾ ಗ್ರಾಮಗಳಲ್ಲಿ ಹಬ್ಬದೂಟ ನಡೆಯಿತು.ಶನಿವಾರ(ಮಾ.17) ತೇರುಗಳನ್ನು ದೇವಾಲಯದ ಆವರಣಕ್ಕೆ ಕೊಂಡೊಯ್ಯುವ ಕಾರ್ಯದಲ್ಲಿ ಗ್ರಾಮದ ಭಕ್ತರು ಪಾಲ್ಗೊಳ್ಳುತ್ತಾರೆ. ಭಾನುವಾರ ಮಕ್ಕಳ ಸಿಡಿ, ಕರಗ ಮಹೋತ್ಸವ, 38ದೇವರುಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.