ಶುಕ್ರವಾರ, ಮೇ 14, 2021
21 °C

ಸಂಯೋಜನೆಗೆ ಕಾದಿರುವ ಬಾಲಕರ ಕಾಲೇಜು

ಪ್ರಜಾವಾಣಿ ವಾರ್ತೆ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: `ಎಲ್ಲ ಅಂದುಕೊಂಡಂತೆ ನಡೆದಿದ್ದರೆ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಎಂಎಸ್ಸಿ (ರಸಾಯನ ಶಾಸ್ತ್ರ), ಎಂಕಾಂ ಮತ್ತು ಎಂಎಫ್‌ಎ (ಮಾಸ್ಟರ್ ಆಫ್ ಫೈನಾನ್ಸ್ ಅಂಡ್ ಅಕೌಂಟಿಂಗ್) ಕೋರ್ಸ್ ಆರಂಭವಾಗಬೇಕಿತ್ತು. ಬಿಎಸ್ಸಿ, ಬಿಕಾಂ ಪದವಿ ಪಡೆದು ಸ್ನಾತಕೋತ್ತರ ತರಗತಿಗಳಿಗೆ ಸೇರಲು ಕಾದಿರುವ ಗ್ರಾಮಾಂತರ ಪ್ರದೇಶದ ಹಲವು ವಿದ್ಯಾರ್ಥಿಗಳಿಗೆ ಅನು ಕೂಲವೂ ಆಗುತ್ತಿತ್ತು. ಖಾಸಗಿ ಕಾಲೇಜುಗಳಿಗೆ ದುಬಾರಿ ವಂತಿಗೆ, ಶುಲ್ಕ ನೀಡಿ ಪ್ರವೇಶ ಪಡೆಯುವ ಅನಿವಾರ್ಯಯೂ ತಪ್ಪುತ್ತಿತ್ತು~.-ಕಾಲೇಜಿನ ಉಪನ್ಯಾಸಕ ವಲಯದಲ್ಲಿ ಇಂಥದೊಂದು ಅಸಮಾಧಾನ ತಲೆ ಎತ್ತಿದೆ. ಕೋರ್ಸ್ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಯು ಮಂಜೂರಾತಿ ನೀಡಿ, ಈ ಕೋರ್ಸ್‌ಗೆ  ಸಂಯೋಜನೆ ನೀಡಬೇಕೆಂದು  ಶಿಫಾರಸು ಮಾಡಿದ್ದರೂ, ಬೆಂಗಳೂರು ವಿಶ್ವವಿದ್ಯಾಲಯದ ತೋರಿರುವ ನಿರಾಸಕ್ತಿಯೇ ಪ್ರಮುಖ ಕಾರಣ ಎಂಬ ಆರೋಪ ಕೇಳಿಬಂದಿದೆ.ರಾಜ್ಯದ 9 ವಿಶ್ವವಿದ್ಯಾಲಯ (ಬೆಂಗಳೂರು, ಮೈಸೂರು, ದಾವಣಗೆರೆ, ಕುವೆಂಪು, ಮಂಗಳೂರು, ಕರ್ನಾಟಕ, ಗುಲ್ಬರ್ಗ, ತುಮ ಕೂರು ಮತ್ತು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ) ವ್ಯಾಪ್ತಿಯ 35 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2011-12ನೇ ಸಾಲಿ ನಲ್ಲಿ ಹೊಸ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಮಂಜೂರಾತಿ ನೀಡಿ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಯು.ಬಿ. ಉಳವಿ ಕಳೆದ ಮೇ 26ರಂದೇ ಆದೇಶ ಹೊರಡಿಸಿದ್ದರು. ವಿಶ್ವವಿದ್ಯಾಲಯಗಳ ಪರಿನಿಯಮಾವಳಿ ಅನ್ವಯ ನಿಗದಿಪಡಿಸುವ ವಿದ್ಯಾರ್ಥಿ ಪ್ರಮಾಣ ದೊಂದಿಗೆ ಕೋರ್ಸ್‌ಗಳನ್ನು ಪ್ರಾರಂಭಿಸಲು ಸಂಯೋಜನೆ ನೀಡಬೇಕು ಎಂದು ಎಲ್ಲ ಕುಲಸಚಿವರಿಗೂ ತಿಳಿಸಲಾಗಿತ್ತು.ಇಲಾಖೆ ಯಿಂದ ಆದೇಶ ಪ್ರತಿ ಬಂದ ಕೂಡಲೇ ಬಾಲಕರ ಕಾಲೇಜಿನ ಪ್ರಾಂಶುಪಾಲರು ಕೋರ್ಸ್‌ಗಳಿಗೆ ವಿದ್ಯಾರ್ಥಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಕೋರಿಕೆ ಸಲ್ಲಿಸಿ ಜೂನ್ 3ರಂದೇ ಬೆಂಗಳೂರು ವಿವಿ ಕುಲಸಚಿವರಿಗೆ ಮನವಿಪತ್ರ ಸಲ್ಲಿಸಿದ್ದರು.ಅದಕ್ಕೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯವು, ಹೊಸ ಕೋರ್ಸ್‌ಗಳನ್ನು ಆರಂಭಿಸಲು ಸಂಯೋಜನೆ ಪಡೆಯಲಾಗಿದೆಯೇ? ಅಥವಾ ಸಂಯೋಜನೆ ಪಡೆಯಲು ಆಸಕ್ತಿ ಇದೆಯೇ ಎಂಬ ಕುರಿತು ಜೂ 15ರ ಒಳಗೆ ಮಾಹಿತಿ ನೀಡಲು ಕಾಲೇಜಿಗೆ ಸೂಚಿಸಿತ್ತು.ಅದರಂತೆ, ಕಾಲೇಜು ಜೂ 13ರಂದೇ ಪತ್ರ ಬರೆದಿತ್ತು. ಕನ್ನಡ, ರಾಜ್ಯಶಾಸ್ತ್ರ ಮ್ತು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಕೋರ್ಸ್‌ಗಳನ್ನು ಸರ್ಕಾರ ಮಂಜೂರು ಮಾಡಿದೆ. ಆದರೆ ಕಳೆದ ಶೈಕ್ಷಣಿಕ (2010-11) ವರ್ಷದಲ್ಲಿ ವಿಶ್ವವಿದ್ಯಾಲಯದಿಂದ ಸಂಯೋಜನೆ ನೀಡಲು ತಡವಾದ್ದರಿಂದ ಇತಿಹಾಸ ಎಂಎ ಕೋರ್ಸ್ ಆರಂಭವಾಗಿಲ್ಲ. 2011-12ನೇ ಸಾಲಿಗೆ ಎಂ.ಎಸ್‌ಸಿ (ರಸಾಯನಶಾಸ್ತ್ರ), ಎಂ ಕಾಂ ಮತ್ತು ಎಂಎಫ್‌ಎ ಕೋರ್ಸ್‌ಗಳನ್ನು ಮಂಜೂರು ಮಾಡಲಾಗಿದೆ. ಆದ್ದರಿಂದ ದಯಮಾಡಿ ಮೂರು ಹೊಸ ಕೋರ್ಸ್ ಸೇರಿದಂತೆ ಮಂಜೂರಾದ ಎಲ್ಲ ಕೋರ್ಸ್‌ಗಳನ್ನು ಆರಂಭಿಸುವಂತೆ ಪತ್ರದಲ್ಲಿ ಕೋರಲಾಗಿತ್ತು.` ವಿಶ್ವವಿದ್ಯಾಲಯ ಆಡಳಿತ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಇದೀಗ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಗೆ ಕೌನ್ಸಿಲಿಂಗ್ ನಡೆ ಯುತ್ತಿದೆ. ನಮ್ಮಲ್ಲೂ ಹೊಸ ಕೋರ್ಸ್‌ಗಳನ್ನು ಆರಂಭಿಸಬಹುದು ಎಂದು ಉತ್ಸಾಹದಲ್ಲಿದ್ದವರಿಗೆ ತಣ್ಣೀರೆರಚಿದಂತಾಗಿದೆ~ ಎಂದು ಕಾಲೇಜಿನ ಉಪನ್ಯಾಸಕರೊಬ್ಬರು  ಅಸಮಾಧಾನ ತೋಡಿಕೊಂಡರು.ಕಾಲೇಜಿನ ಆವರಣದಲ್ಲೆ ಇರುವ ಸ್ನಾತಕೋತ್ತರ ಕೇಂದ್ರದಲ್ಲಿ, ನಗರದ ಎರಡು ಖಾಸಗಿ ಕಾಲೇಜಿನಲ್ಲಿ ಮತ್ತು ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾತ್ರ ಎಂ.ಕಾಂ ಕೋರ್ಸ್ ಅಧ್ಯಯನಕ್ಕೆ ಅವಕಾಶವಿದೆ.  ನಮ್ಮ ಕಾಲೇಜಿನಲ್ಲೂ ಅವಕಾಶ ಕೊಟ್ಟಿದ್ದರೆ ಗ್ರಾಮದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಉಪನ್ಯಾಸಕ ಎ.ವಿ.ರೆಡ್ಡಿಯವರ ನುಡಿ.` ವಿಶ್ವವಿದ್ಯಾಲಯವು ಕೊಂಚ ಮುತುವರ್ಜಿ ವಹಿಸಿ ಪ್ರಸ್ತುತ ವರ್ಷದಲ್ಲೆ ಸಂಯೋಜನೆ ನೀಡಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ~ ಎಂದು ಅವರು ತಿಳಿಸಿದರು.

 

ಸಂಯೋಜನೆ  ಹೇಗೆ ?

ಯಾವುದೇ ಕಾಲೇಜು ಹೊಸ ಕೋರ್ಸ್ ಶುರು ಮಾಡುವ ಮುನ್ನ ವಿಶ್ವವಿದ್ಯಾಲಯದಿಂದ ಸಂಯೋಜನೆ (ಅಫಿಲಿಯೇಶನ್) ಪಡೆಯುವುದು ನಿಯಮ. ಕೋರ್ಸ್ ಆರಂಭಿಸಲು  ಮೂಲ ಸೌಕರ್ಯಗಳಿವೆಯೇ? ಅಧ್ಯಾಪಕ, ಇತರ ಸಿಬ್ಬಂದಿ ಇದ್ದಾರೆಯೇ ಎಂಬುದೂ ಸೇರಿದಂತೆ ಹಲವು ವಿಷಯ ಕುರಿತು ಪರಿಶೀಲನೆಗೆ ವಿ,ವಿ ಸಮಿತಿ ರಚಿಸುತ್ತದೆ. ಸಮಿತಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ಸಂಯೋಜನೆಯ ನಿರ್ಧಾರವನ್ನು ಕೈಗೊಳ್ಳ ಲಾಗುತ್ತದೆ, ಬಾಲಕರ ಕಾಲೇಜಿಗೆ ಸಂಯೋ ಜನೆ ನೀಡುವ ವಿಚಾರದಲ್ಲಿ ಈ ಪ್ರಕ್ರಿಯೆ ನಡೆಸಲು ವಿಶ್ವವಿದ್ಯಾಲಯ ಹೆಚ್ಚು ಆಸಕ್ತಿ ತೋರಿಸಿಲ್ಲ ಎಂಬುದು ಸದ್ಯದ ಆರೋಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.