ಶುಕ್ರವಾರ, ಆಗಸ್ಟ್ 7, 2020
23 °C
ಶತಕ ಗಳಿಸುವುದಕ್ಕಿಂತ ಪಂದ್ಯ ಗೆಲ್ಲಿಸುವುದು ಮುಖ್ಯ: ರಿಕಿ ಪಾಂಟಿಂಗ್

`ಸಚಿನ್‌ಗಿಂತ ಲಾರಾ ಶ್ರೇಷ್ಠ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಚಿನ್‌ಗಿಂತ ಲಾರಾ ಶ್ರೇಷ್ಠ'

ಲಂಡನ್ (ಪಿಟಿಐ): ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು ಎಂಬ ಚರ್ಚೆ ತುಂಬಾ ದಿನಗಳಿಂದ ನಡೆಯುತ್ತಲೇ ಇದೆ. ಸಚಿನ್ ತೆಂಡೂಲ್ಕರ್ ಶ್ರೇಷ್ಠ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಬ್ರಯಾನ್ ಲಾರಾ ಶ್ರೇಷ್ಠ ಆಟಗಾರ ಎಂಬ ನಿಲುವು ಮುಂದಿಡುತ್ತಿದ್ದಾರೆ.ಆ ಚರ್ಚೆಗೆ ಈಗ ಹೊಸ ಸೇರ್ಪಡೆಯಾಗಿರುವುದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್. `ಹೆಚ್ಚು ಪಂದ್ಯಗಳನ್ನು ಗೆದ್ದುಕೊಡಲು ಕಾರಣವಾಗಿರುವ ವೆಸ್ಟ್‌ಇಂಡೀಸ್‌ನ ಲಾರಾ, ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಅವರಿಗಿಂತ ಶ್ರೇಷ್ಠ' ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.`ನನ್ನ ಪ್ರಕಾರ ಲಾರಾ ಹಾಗೂ ಸಚಿನ್ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳು. ಅದರಲ್ಲಿ ಅನುಮಾನವಿಲ್ಲ. ಆದರೆ ಸಚಿನ್‌ಗಿಂತ ಲಾರಾ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಒಬ್ಬ ನಾಯಕನಾಗಿ ಹೇಳಬೇಕೆಂದರೆ, ಮುಂದಿನ ಪಂದ್ಯದಲ್ಲಿ ಲಾರಾ ಬ್ಯಾಟ್ ಮಾಡಲು ಆಗಮಿಸುತ್ತಾರೆ ಎಂದು ಚಿಂತಿಸುತ್ತಾ ಹೆಚ್ಚು ನಿದ್ರೆ ಕಳೆದುಕೊಳ್ಳುತ್ತೇನೆ. ಆದರೆ ಸಚಿನ್ ವಿಷಯದಲ್ಲಿ ಆ ರೀತಿ ಆಗುವುದಿಲ್ಲ' ಎಂದು ಆಸ್ಟ್ರೇಲಿಯಾಕ್ಕೆ ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ರಿಕಿ ವಿವರಿಸಿದ್ದಾರೆ.`ತುಂಬಾ ಅಗತ್ಯವೆನಿಸಿದಾಗ ಸಚಿನ್ ಅವರನ್ನು ನಿಯಂತ್ರಿಸಲು ದಾರಿ ಕಂಡುಕೊಳ್ಳಬಹುದು. ಆದರೆ ಲಾರಾ ಆ ರೀತಿ ಅಲ್ಲ. ಅವರು ಕೇವಲ ಅರ್ಧ ಗಂಟೆಯಲ್ಲಿ ಪಂದ್ಯದ ಹಣೆಬರಹವನ್ನು ಬದಲಾಯಿಸಬಲ್ಲರು. ನನ್ನ ಪ್ರಕಾರ ಶತಕ ಬಾರಿಸುವುದು ಮುಖ್ಯವಲ್ಲ, ಬದಲಾಗಿ ಪಂದ್ಯ ಗೆದ್ದುಕೊಡುವುದು ಮುಖ್ಯ' ಎಂದು `ಈವನಿಂಗ್ ಸ್ಟ್ಯಾಂಡರ್ಡ್'ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.40 ವರ್ಷ ವಯಸ್ಸಿನ ಸಚಿನ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಟೆಸ್ಟ್‌ನತ್ತ ಮಾತ್ರ ಗಮನ ಹರಿಸುತ್ತಿದ್ದಾರೆ. 44 ವರ್ಷ ವಯಸ್ಸಿನ ಲಾರಾ ಎಲ್ಲಾ ಪ್ರಕಾರದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.ಈಗ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿ ಬಗ್ಗೆ ಪ್ರತಿಕ್ರಿಯಿಸಿರುವ ಪಂಟರ್, `ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ 2-1ರಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಲಿದೆ ಎಂದು ನಾನು ಮೊದಲ ಪಂದ್ಯ ಆರಂಭವಾಗುವ ಮುನ್ನವೇ ನುಡಿದಿದ್ದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.