ಸೋಮವಾರ, ಮೇ 10, 2021
25 °C
ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ

ಸಚಿವರಿಂದ ಅಧಿಕಾರಿಗಳ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ ಎಷ್ಟು ಬಾರಿ ಭೇಟಿ ನೀಡಿದ್ದೀರಾ? ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ದೊರೆಯುತ್ತಿರುವುದರ ಬಗ್ಗೆ ಖಾತರಿ ಇದೆಯೇ? ಹಿರಿಯ ನಾಗರಿಕರು, ಅಂಗವಿಕಲರು. ವಿಧವೆಯರಿಗೆ ನೀಡುವ ಭತ್ಯೆ ಸಮರ್ಪಕವಾಗಿ ತಲುಪುತ್ತಿದೆಯೇ? ಹೀಗೆ ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಶ್ನೆಗಳ ಸುರಿಮಳೆ ಹರಿಸುತ್ತಿದ್ದಂತೆ ಅಧಿಕಾರಿಗಳು ಕೆಲಕಾಲ ತಬ್ಬಿಬ್ಬಾದರು.`ಕಳೆದ ಒಂದೂವರೆ ವರ್ಷದಿಂದ ಸಭೆಗಳು ನಡೆಯದೇ ಇರುವ ಕಾರಣ ಎಲ್ಲರೂ ಸುಮ್ಮನೆ ಯೋಜನೆಗಳನ್ನು ಅಂಕಿ ಅಂಶದಲ್ಲಿ ತೋರಿಸುತ್ತಿದ್ದೀರಾ. ನನಗೆ ಅದು ಬೇಡ. ಖುದ್ದು ಕ್ಷೇತ್ರಕ್ಕೆ ಇಳಿದು ಕಾರ್ಯನಿರ್ವಹಿಸಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ಇಲ್ಲವಾದರೆ ಆರಾಮಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯಿರಿ' ಎಂದು ಶನಿವಾರ ನಡೆದ ಇಲಾಖಾವಾರು ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಲೋಕ ಶಿಕ್ಷಣ ಇಲಾಖೆಯಡಿ ಸುಮಾರು 300 ಮಂದಿಗೆ ಎಂಬ್ರಾಯಡರಿ, ಹೊಲಿಗೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗಿದೆ. ಅದಕ್ಕೆ ಇಲಾಖೆಯಿಂದ 4 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಈ ತರಬೇತಿಯ ಹೊಣೆಯನ್ನು ಜೆಎಸ್‌ಎಸ್ ಸಂಸ್ಥೆಗೆ ವಹಿಸಿಕೊಡಲಾಗಿದೆ. ತರಬೇತಿ ನಿರ್ವಹಣೆ ಮಾಡುವ ಸಿಬ್ಬಂದಿಯ ಸಂಬಳಕ್ಕೆ16 ಲಕ್ಷರೂಪಾಯಿ ಖರ್ಚಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಿದ್ದಂತೆ  `ಏನ್ರಿ ತರಬೇತಿಗೆ  ಬರೀ 4 ಲಕ್ಷ ರೂಪಾಯಿ. ಅದರ ಉಸ್ತುವಾರಿ ವಹಿಸಿಕೊಂಡವರ ಸಂಬಳಕ್ಕೆ 16 ಲಕ್ಷರೂಪಾಯಿ? ಏನು ಮಾತನಾಡುತ್ತೀರಾ? ಇದ್ಯಾವ ಸೀಮೆಯ ಲೆಕ್ಕ' ಎಂದು ಹರಿಹಾಯ್ದರು.`ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಕಡಿಮೆ ಇರುವ ಈ ವಸತಿ ನಿಲಯಗಳಲ್ಲಿ ಹಿಂದುಳಿದ ವರ್ಗಗಳ ಮಕ್ಕಳು ಸೇರ್ಪಡೆಗೊಳ್ಳುವಂತೆ ಆಗಬೇಕು. ಆಗ ಮಾತ್ರ ಒದಗಿಸಿದ ಮೂಲಸೌಕರ್ಯ ಉಪಯೋಗವಾಗುತ್ತದೆ. ಈ ಕೂಡಲೇ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ವಸತಿನಿಲಯಗಳ ಸಮೀಕ್ಷೆ ನಡೆಸಬೇಕು.

ಅದರ ಸ್ಥಿತಿಗತಿ ಕುರಿತು ವರದಿಯನ್ನು ತಯಾರಿಸಿ. ಕಡಿಮೆಯಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯ ಬಗ್ಗೆ ಬೆಳಕು ಚೆಲ್ಲಿ' ಎಂದು ಆದೇಶಿಸಿದ ಅವರು, `ಅಕ್ಷರ ದಾಸೋಹ, ಬಿಸಿಯೂಟ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಬಗ್ಗೆ ಶಂಕೆಯಿದೆ. ಶಾಲೆಗಲ್ಲಿ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು' ಎಂದು ತಿಳಿಸಿದರು.`ವಿವಿಧೆಡೆ ಫಿಲ್ಟರ್ ಮರಳು ದಂಧೆ ಅವ್ಯಾಹತವಾಗಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಇಂತಹವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಬೇಕು. ಅದು ಬಿಟ್ಟು ಸುಮ್ಮನೆ ದಂಡ ವಿಧಿಸಿದರೆ, ದಂಧೆ ನಡೆಸುವವರು ದಂಡ ಪಾವತಿಸಿ, ಮರಳಿನಿಂದಲೇ ಹಣ ದೋಚುತ್ತಾರೆ. ಹಾಗಾಗಿ ಕಟ್ಟುನಿಟ್ಟಾಗಿ ದಂಡ ವಿಧಿಸುವುದರ ಜತೆಗೆ ಪೊಲೀಸ್ ಕೇಸ್ ದಾಖಲು ಮಾಡುವಂತೆ ಎಲ್ಲ ಅಧಿಕಾರಿಗಳಿಗೂ ಆದೇಶ ನೀಡಿ. ಪಾಲನೆ ಮಾಡದವರಿಗೆ ನೋಟಿಸ್ ಜಾರಿ ಮಾಡಿ' ಎಂದು ಎಚ್ಚರಿಕೆ ನೀಡಿದರು.ರಾಸುಗಳ ಸಂಖ್ಯೆ, ಮೇವು ಹಾಗೂ  ಔಷಧಿ ಪೂರೈಕೆ ಸೇರಿದಂತೆ ಇತರೆ ಯೋಜನೆಗಳ ಮಾಹಿತಿ ಒದಗಿಸಲು ವಿಫಲರಾದ ಪಶುಸಂಗೋಪನಾ ಅಧಿಕಾರಿಯ ವಿರುದ್ಧ ಗುಡುಗಿದ ಸಚಿವರು `ಅಲ್ಲಾರೀ, ಒಂದು ವರ್ಷದಲ್ಲಿ ಎಷ್ಟು ರಾಸುಗಳಿಗೆ ಮೇವು, ಆಹಾರ ಒದಗಿಸಿದ್ದೀರಾ ಎಂಬುದೇ ನಿಮಗೆ ಗೊತ್ತಿಲ್ಲ ಅಂದರೆ ನೀವು ನಿಯಮಿತವಾಗಿ ಕಚೇರಿಗೆ ಹೋಗುತ್ತಿಲ್ಲ ಎಂಬುದು ತಿಳಿಯುತ್ತದೆ. ಇಂತಹ ಬೇಜವಾಬ್ದಾರಿತನವನ್ನು ಕ್ಷಮಿಸಲು ಸಾಧ್ಯವಿಲ್ಲ. ಕೂಡಲೇ ನೋಟಿಸ್ ಜಾರಿ ಮಾಡಿ' ಎಂದು ತಿಳಿಸಿದರು.`ಆನೇಕಲ್ ವ್ಯಾಪ್ತಿಯಲ್ಲಿ ಸುಮಾರು 34 ಸಾವಿರಕ್ಕೂ ಅಧಿಕ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಕಳೆದ 2 ವರ್ಷಗಳಲ್ಲಿ  ಈವರೆಗೆ 10, 732 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಉಳಿದ 23,367 ಎಕರೆ ಜಮೀನನ್ನು ಇನ್ನೂ ಆರು ತಿಂಗಳಿನಲ್ಲಿ ವಶಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಪಿಂಚಣಿ, ವಿಧವಾ ಮಾಸಾಶನ, ಅಂಗವಿಕಲರ ಭತ್ಯೆ ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.`ಜನವರಿಯಿಂದ ಈವರೆಗೆ 55 ಡೆಂಗೆ ಪ್ರಕರಣಗಳು ಪತ್ತೆಯಾಗಿದೆ. 2,48,257 ಮನೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದು, ಅದರಲ್ಲಿ 1,477 ಮನೆಗಳಲ್ಲಿ ಲಾರ್ವಾ ಇರುವುದು ಪತ್ತೆಯಾಗಿದೆ. ಡೆಂಗೆ ಲಕ್ಷಣಗಳು ಕಾಣಿಸಿಕೊಂಡ ಪ್ರದೇಶಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಚಿಕಿತ್ಸಾಕೇಂದ್ರಗಳನ್ನು ತೆರೆಯಲಾಗಿದ್ದು, ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ' ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

 

ಸಭೆಗಳಿಗೆ ಬಾರದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಿ. ಎಪಿಲ್ ಮತ್ತು ಬಿಪಿಎಲ್ ಕಾರ್ಡ್‌ಗಳಲ್ಲಿರುವ ಹೆಸರುಗಳನ್ನು ಪರಿಶೀಲನೆ ನಡೆಸಿ, ಆದಷ್ಟು ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಆಗ ಮಾತ್ರ ಅಗ್ಗದ ಅಕ್ಕಿ ಯೋಜನೆಯು ಯಶಸ್ವಿಯಾಗುತ್ತದೆ ಎಂದರು. ಉಸ್ತುವಾರಿ ಕಾರ್ಯದರ್ಶಿ ಅಜುಂ ಪರ್ವಿಜ್, ಜಿಲ್ಲಾಧಿಕಾರಿ ಪ್ರಕಾಶ್, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಬೆಟ್ಟಸ್ವಾಮಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.