ಮಂಗಳವಾರ, ಮೇ 18, 2021
22 °C

ಸಚಿವರ ಪ್ರತಿಕೃತಿ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಳೆದ 40 ದಿನಗಳಿಂದ ಧರಣಿ ನಡೆಸಿದರೂ ಅಹವಾಲು ಆಲಿಸದೇ ಇರುವ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರ ಪ್ರತಿಕೃತಿಯನ್ನು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಗುತ್ತಿಗೆ ಪೌರ ಕಾರ್ಮಿಕರು ನಗರದಲ್ಲಿ ಬುಧವಾರ ದಹಿಸಿ ಪ್ರತಿಭಟಿಸಿದರು.ಮಹಾನಗರ ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರು ಸಚಿವ ಉಮೇಶ ಕತ್ತಿ ಅವರ ಪ್ರತಿಕೃತಿಯೊಂದಿಗೆ ನಗರದ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. `ದಲಿತ ವಿರೋಧಿ ಸಚಿವರಿಗೆ ಧಿಕ್ಕಾರ, ಸಮಸ್ಯೆಗೆ ಸ್ಪಂದಿಸದ ಜಿಲ್ಲಾಧಿಕಾರಿಗಳಿಗೆ ಧಿಕ್ಕಾರ~ ಎಂದು ಪ್ರತಿಭಟನಾನಿರತರು ಘೋಷಣೆಗಳನ್ನು ಕೂಗಿದರು.ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಪ್ರತಿಕೃತಿ ದಹಿಸಲು ಮುಂದಾದಾಗ, ಪೊಲೀಸರು ಪ್ರತಿಭಟನಾನಿರತರನ್ನು ತಡೆ ಹಿಡಿದರು. ಹೀಗಾಗಿ ಗುತ್ತಿಗೆ ಪೌರ ಕಾರ್ಮಿಕರು ಕೋರ್ಟ್ ರಸ್ತೆಯ ಪಕ್ಕದಲ್ಲೇ ಸಚಿವರ ಪ್ರತಿಕೃತಿಯನ್ನು ಸುಟ್ಟು ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಬೆಳಗಾವಿ ಜಿಲ್ಲಾ ಸಂಚಾಲಕಿ ಮಾಲಾ ಎನ್. ಮಾದರ, “ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರ ಕಾರ್ಮಿಕರು ಮಾರ್ಚ್ 13ರಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಬೇಡಿಕೆ ಈಡೇರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹವನ್ನು ಮಾರ್ಚ್ 17ರಂದು ಮೊಟಕುಗೊಳಿಸಲಾಯಿತು.

 

ಆದರೆ, ಜಿಲ್ಲಾಧಿಕಾರಿಗಳು ಭರವಸೆಯನ್ನು ಈಡೇರಿಸದೇ ಇರುವುದರಿಂದ ಮಾ. 19ರಿಂದ ಪುನಃ ಸತ್ಯಾಗ್ರಹವನ್ನು ಆರಂಭಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಕಾರ್ಮಿರಕ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಕಾರ್ಮಿಕರ ಸಮಸ್ಯೆಗಳನ್ನು ಅರಿತುಕೊಳ್ಳದೇ ಕಾರ್ಮಿಕರ ವಿರುದ್ಧವೇ ಮೇಲಿನ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.“ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಗೆ ಮನವಿ ಸಲ್ಲಿಸಲೆಂದು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾಯುತ್ತಿದ್ದೆವು. ಆದರೆ, ಸಚಿವರು ಸಭೆ ಮುಗಿಸಿದ ಬಳಿಕ ನಮ್ಮಿಂದ ಮನವಿ ಸ್ವೀಕರಿಸದೇ ಹೋಗಿದ್ದಾರೆ. ಸಚಿವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ” ಎಂದು ಅವರು ಆಕ್ರೊಶ ವ್ಯಕ್ತಪಡಿಸಿದರು.`ಗುತ್ತಿಗೆ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ದಲಿತ ಕುಟುಂಬಗಳ ಸಂಸಾರ ಬೀದಿ ಪಾಲಾದರೆ, ಸರ್ಕಾರ ಹಾಗೂ ಅಧಿಕಾರಿಗಳೇ ನೇರವಾಗಿ ಜವಾಬ್ದಾರರಾಗುತ್ತಾರೆ. ಹೀಗಾಗಿ ಕೂಡಲೇ ಗುತ್ತಿಗೆ ಪೌರ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಬೇಕು~ ಎಂದು ಪ್ರಾದೇಶಿಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.