ಶುಕ್ರವಾರ, ಏಪ್ರಿಲ್ 16, 2021
22 °C

ಸಚಿವ ಸ್ಥಾನ: ಕೊನೆಯ ಅವಕಾಶ :ಸವದಿ ಬುಲಾವ್- ಸಂಗಣ್ಣ ಬೆಂಗಳೂರಿಗೆ?

ಪ್ರಜಾವಾಣಿ ವಾರ್ತೆ/ಭೀಮಸೇನ ಚಳಗೇರಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ಶಾಸಕ ಸಂಗಣ್ಣ ಕರಡಿ ಅವರಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ಮತ್ತೊಮ್ಮೆ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ, ಮಾಜಿ ಸಚಿವ ಹಾಗೂ ಸಂಗಣ್ಣ ಆಪ್ತ ಲಕ್ಷ್ಮಣ ಸವದಿ ಅವರೇ ಸ್ವತಃ ಶುಕ್ರವಾರ ಮೊಬೈಲ್ ಮೂಲಕ  ಸಂಪರ್ಕಿಸಿ, ಕೂಡಲೇ ಬೆಂಗಳೂರಿಗೆ ಬನ್ನಿ ಎಂಬ ಸಂದೇಶ ರವಾನಿಸಿರುವುದು ಈ ಮಾತಿಗೆ ಪುಷ್ಟಿ ನೀಡುತ್ತಿವೆ.  ಈ ಸಂದೇಶ ಸಹಜವಾಗಿಯೇ ಸಂಗಣ್ಣ ಬೆಂಬಲಿಗರಲ್ಲಿ ಆಸೆ ಚಿಗುರುವಂತೆ ಮಾಡಿದೆ.ಈ ಹಿನ್ನೆಲೆಯಲ್ಲಿ ಶನಿವಾರ ಸಂಗಣ್ಣ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು `ಪ್ರಜಾವಾಣಿ~ಗೆ ಖಚಿತಪಡಿಸಿವೆ. ಸಂಗಣ್ಣಗೆ ಸಚಿವ ಸ್ಥಾನ ನೀಡಬೇಕು ಎಂಬುದಾಗಿ ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿ ಕೊಡಲು, ಒತ್ತಡ ಹೇರಲು ಬಿಜೆಪಿಯ ಜಿಲ್ಲಾ ಮುಖಂಡರ ನಿಯೋಗ ಸಹ ಶನಿವಾರವೇ ಬೆಂಗಳೂರಿಗೆ ತೆರಳಿದೆ ಎಂದು ಇವೇ ಮೂಲಗಳು ಸ್ಪಷ್ಟಪಡಿಸಿವೆ.ಈಗಿರುವ ಬಿಜೆಪಿ ಸರ್ಕಾರದಲ್ಲಿ ಸಂಗಣ್ಣ ಅವರಿಗೆ ಸಚಿವ ಸ್ಥಾನ ಪಡೆಯಲು ಇದು ಕೊನೆಯ ಅವಕಾಶ. ಈ ಹಿಂದೆ ಸಹ ಹಲವಾರು ಬಾರಿ ಇಂತಹ ಸಂದೇಶಗಳ ಹಿನ್ನೆಲೆಯಲ್ಲಿ ಸಂಗಣ್ಣ ಬೆಂಗಳೂರಿಗೆ ತೆರಳಿದ್ದರು. ಆದರೆ, ಕೆಂಪು ದೀಪದ ಕಾರಿನಲ್ಲಿ ನಗರಕ್ಕೆ ಬರಲಿದ್ದಾರೆ ಎಂಬ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಆಸೆ ಮಾತ್ರ ಕೈಗೂಡಿರಲಿಲ್ಲ.ಬಿಜೆಪಿ ಪಾಳೆಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ವರಿಷ್ಠರು ರೂಪಿಸಿರುವ ಸೂತ್ರದ ಪ್ರಕಾರ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ ಎಂಬ ಹಿನ್ನೆಲೆಯಲ್ಲಿ ಶಾಸಕ ಸಂಗಣ್ಣಗೂ ಸಂಪುಟದಲ್ಲಿ ಸ್ಥಾನ ಸಿಗುವುದು ಎಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿ ಮನೆ ಮಾಡಿದೆ. ಈ ನಿರೀಕ್ಷೆಗೆ ಈಗ ಮಾಜಿ ಸಚಿವ ಸವದಿ ಅವರ ಬುಲಾವ್ ಮತ್ತಷ್ಟೂ ಬಲ ತಂದಿದೆ ಎಂದೇ ಹೇಳಲಾಗುತ್ತಿದೆ.ಜಿಲ್ಲೆಯ ಎಲ್ಲ ಮುಖಂಡರು ಈ ಬಾರಿ ಸಂಗಣ್ಣಗೆ ಬೆಂಬಲ ಸೂಚಿಸಿ, ಅವರಿಗೇ ಸಚಿವ ಸ್ಥಾನ ನೀಡಬೇಕು ಎಂಬ ನಿರ್ಧಾರಕ್ಕೆ ಬಂದಿರುವುದು ವಿಶೇಷ. ಜಿಲ್ಲಾ ಬಿಜೆಪಿ ಘಟಕದ ಮೂಲಗಳು ಹೇಳುವಂತೆ, ಈ ಮೊದಲು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಈಗ ಅವರೂ ಸಂಗಣ್ಣಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಂಗಣ್ಣ ಸಚಿವ ಸ್ಥಾನ ಪಡೆಯಲು ಜಿಲ್ಲಾ ಮಟ್ಟದಲ್ಲಿ ಇದ್ದ ಅಡೆತಡೆಗಳು  ನಿವಾರಣೆಯಾದಂತಾಗಿವೆ ಎಂದು ಇವೇ ಮೂಲಗಳು ಹೇಳುತ್ತವೆ.ಪರಣ್ಣ ಅವರ ಈ ನಿಲುವಿನಲ್ಲಿ ಕಾರಣ ಇಲ್ಲದಿಲ್ಲ. ಇರಕಲ್ಲಗಡ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮೇಲೆ ಸಂಗಣ್ಣಗೆ ಬಲವಾದ ಹಿಡಿತವಿದೆ. ಈ ಕ್ಷೇತ್ರ ಕೊಪ್ಪಳ ತಾಲ್ಲೂಕಿನಲ್ಲಿ ಇದ್ದರೂ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರದಲ್ಲಿ 40 ಸಾವಿರಕ್ಕೂ ಅಧಿಕ ಮತಗಳಿವೆ.ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಪರಣ್ಣಮುನವಳ್ಳಿ ಈ ಕ್ಷೇತ್ರವನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆಯೇ, ಸಂಗಣ್ಣ ಅವರನ್ನೂ ಸಹ. ಈ ದೃಷ್ಟಿಯಿಂದ ಸಂಗಣ್ಣ ಅವರೇ ಸಚಿವರಾಗಲಿ ಎಂಬುದಾಗಿ ಪರಣ್ಣ ಬೆಂಬಲ ಸೂಚಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮುಖಂಡರು ಹೇಳುತ್ತಾರೆ.ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ವೇಳೆ ಬ್ಲೂ ಫಿಲಂ ವೀಕ್ಷಣೆ ಮಾಡಿದ ಆರೋಪದಿಂದಾಗಿ ಲಕ್ಷ್ಮಣ ಸವದಿ  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗಿನಿಂದ ಜಿಲ್ಲೆಗೆ ಉಸ್ತುವಾರಿ ಸಚಿವರೇ ಇಲ್ಲ. ಹೀಗಾಗಿ ಈ ಬಾರಿ ಸಂಗಣ್ಣಗೆ ಸಚಿವ ಸ್ಥಾನ ಲಭಿಸಿದಲ್ಲಿ ಅವರೇ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ನಿರೀಕ್ಷೆಯೂ ಅವರ ಬೆಂಬಲಿಗರಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.