ಸೋಮವಾರ, ಜನವರಿ 20, 2020
18 °C

ಸಡಗರದ ಅಯ್ಯಪ್ಪಸ್ವಾಮಿ ಮಂಡಲೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ 38ನೇ ವರ್ಷದ ಮಂಡಲ ಉತ್ಸವ ಶ್ರದ್ಧಾ–ಭಕ್ತಿಯಿಂದ ಸೋಮವಾರ ನಡೆಯಿತು.ಪ್ರತಿವರ್ಷದಂತೆ ನಡೆಯುವ ಮಂಡಲ ಉತ್ಸವವು ಸೋಮವಾರ ಸಾವಿರಾರು ಭಕ್ತರ ನಡುವೆ ಅದ್ದೂರಿಯಿಂದ ನಡೆಯಿತು. ಶಿರಂಗಾಲ, ಹೆಬ್ಬಾಲೆ, ತೊರೆನೂರು, ಗುಡ್ಡೆಹೊಸೂರು, ಹುಲಗುಂದ ಸೇರಿದಂತೆ ಸುತ್ತಲಿನ ಊರುಗಳಲ್ಲಿ ಮಾಲೆ ಹಾಕಿಸಿರುವ ನೂರಾರು ಅಯ್ಯಪ್ಪ ಮಾಲಾಧಾರಿಗಳು ಮಂಡಲ ಉತ್ಸವದಲ್ಲಿ ಪೂಜೆ ಸಲ್ಲಿಸಿದರು.ಉತ್ಸವದ ಅಂಗವಾಗಿ ಬೆಳಿಗ್ಗೆ ಯಿಂದಲೇ ಅಯ್ಯಪ್ಪ ದೇವಾಸ್ಥಾನದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ಬಳಿಕ ಹನ್ನೆರಡು ಗಂಟೆಗೆ ಸರಿಯಾಗಿ ಮಹಾಮಂಗಳಾರತಿ ನೆರವೇರಿತು. ನಂತರ ನೆರೆದಿದ್ದ ನೂರಾರು ಜನರಿಗೆ ಅನ್ನಸಂತರ್ಪಣೆ ನಡೆಯಿತು.ಬಳಿಕ ಆನೆ ಮೇಲೆ ಅಯ್ಯಪ್ಪಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಬೈಚನಹಳ್ಳಿಯಲ್ಲಿರುವ ಮಾರಿಯಮ್ಮ ದೇವಾಲಯದವರೆಗೆ ಮೆರವಣಿಗೆ ಮಾಡಲಾಯಿತು. ಅಲ್ಲದೆ ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿರುವ ಸ್ವಾಮಿಗಳು ಹಾಲುಮರ ಕೊಂಬೆಯನ್ನು ಹಿಡಿದು ಬಣ್ಣ ಬಣ್ಣದ ಓಕುಳಿಗಳನ್ನು ಎರಚಿ ಸಂಭ್ರಮಿಸುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನರ್ತಿಸುತ್ತಾ ಸಾಗಿದರು.ಬಳಿಕ ಗಣಪತಿ ದೇವಾಲಯದ ಮುಂಭಾಗಕ್ಕೆ ಬಂದ ಮೆರವಣಿಗೆಯು ಅರ್ಧ ಗಂಟೆಗೂ ಅಧಿಕ ಸಮಯ ಅಲ್ಲಿಯೇ ವಿರಮಿಸಿತು. ಆದರೆ, ಅಯ್ಯಪ್ಪ ಮಾಲಾಧಾರಿಗಳು ಸ್ವಾಮಿಯ ಗೀತೆಗಳನ್ನು ಹಾಡುತ್ತ ಹೆಜ್ಜೆಹಾಕಿದರು. ಬಳಿಕ ದೇವಾಲಯಕ್ಕೆ ವಾಪಾಸ್ಸಾಗಿ ಅಯ್ಯಪ್ಪ ಸ್ವಾಮಿಯನ್ನು ಪುನರ್ ಪ್ರತಿಷ್ಠಾಪಿಸಲಾಯಿತು.ವಿದ್ಯುತ್ ದೀಪಗಳಿಂದ ಅಲಂಕೃತ ಮಂಟಪದಲ್ಲಿ ಮೆರವಣಿಗೆ ನಡೆಲಾಯಿತು. ಮಧ್ಯಾಹ್ನ ನಡೆದ ಮಹಾ ಮಂಗಳಾರತಿಯ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಶಿವನ್ ಕುಮಾರ್, ಕಾರ್ಯದರ್ಶಿ ಶಿವು, ನಿರ್ದೇಶಕರಾದ ಟಿ.ಕೆ. ಸುಬ್ಬಯ್ಯ, ಶ್ರೀನಿವಾಸ್‌ರಾವ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ಅವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)