ಶುಕ್ರವಾರ, ಜೂಲೈ 10, 2020
28 °C

ಸದನದಲ್ಲಿ ಗೋವಿಂದಾ..ಗೋವಿಂದಾ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್ ಸದಸ್ಯರು ಬುಧವಾರ ಉಭಯ ಸದನಗಳಿಗೆ ತಂದ ಬೃಹತ್ ಗಾತ್ರದ ಸೂಟ್‌ಕೇಸ್ ಎಲ್ಲರ ಗಮನ ಸೆಳೆಯಿತು. ಸೂಟ್‌ಕೇಸ್‌ನಲ್ಲಿ ಏನಿದೆ, ಏನಿದೆ ಎಂದು ಕೇಳಿದರೆ ಸರ್ಕಾರದ ವಿರುದ್ಧದ ದಾಖಲೆಗಳು ಎನ್ನುವ ಉತ್ತರ ಜೆಡಿಎಸ್ ಸದಸ್ಯರಿಂದ ಬಂತು.ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡುವಾಗ ‘ಅಪ್ಪ-ಮಕ್ಕಳ ಜಾತಕ ಬಯಲು ಮಾಡುವುದಾಗಿ ರಭಸದಿಂದ ತಮ್ಮ ಬಳಿ ಇದ್ದ ಬ್ರೀಫ್‌ಕೇಸ್ ತೆಗೆದು ಪ್ರದರ್ಶಿಸುವ ಪ್ರಯತ್ನ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಲು ಜೆಡಿಎಸ್ ಸದಸ್ಯರು ಬುಧವಾರ ದೊಡ್ಡ ಗಾತ್ರದ ಸೂಟ್‌ಕೇಸ್ ಸಮೇತ ವಿಧಾನಸಭೆಗೆ ಬಂದರು.ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರು ತಮ್ಮ ಕಚೇರಿಯಲ್ಲಿ ಎರಡು ಸೂಟ್‌ಕೇಸ್‌ಗಳಿಗೆ ಬಿಜೆಪಿ ಸರ್ಕಾರದ ಹಗರಣಗಳಿಗೆ ಸಂಬಂಧಿಸಿದ ಕಡತಗಳನ್ನು ತುಂಬಿ ಸೀಲ್ ಮಾಡಿದ್ದರು. ಅದರ ಮೇಲೆ ‘ನಮ್ಮ ಬಳಿ ಸರ್ಕಾರದ ವಿರುದ್ಧದ ಅನೇಕ ದಾಖಲೆಗಳಿದ್ದು, ಇನ್ನಾದರೂ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಿ. ಇದು ನಮ್ಮ ಭಕ್ತಿಪೂರ್ವಕವಾದ ಮನವಿ’ ಎಂದು ಬರೆದ ಚೀಟಿಯನ್ನು ಅಂಟಿಸಲಾಗಿತ್ತು. ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲೇ ಈ ಸೂಟ್‌ಕೇಸ್‌ಗಳನ್ನು ಇಟ್ಟು ಶಂಖ ಊದಿ, ಜಾಗಟೆ ಬಾರಿಸುತ್ತಾ ಗೋವಿಂದಾ...ಗೋವಿಂದಾ ಎಂದು ಕೂಗುತ್ತಾ ವಿಧಾನಸಭೆ ಪ್ರವೇಶಿಸಲು ಯತ್ನಿಸಿದರು. ಇದಕ್ಕೆ ಮಾರ್ಷಲ್‌ಗಳು ಅವಕಾಶ ಕೊಡಲಿಲ್ಲ, ಸೂಟ್‌ಕೇಸ್ ಒಯ್ಯಲು ಬಿಡಲಿಲ್ಲ. ನಂತರ ಹಿಂಬಾಗಿಲ ಮೂಲಕ ಅವುಗಳನ್ನು ತೆಗೆದುಕೊಂಡು ಹೋಗುವ ಪ್ರಯತ್ನವೂ ನಡೆಯಿತು..ಈ ಹಗ್ಗಾಜಗ್ಗಾಟ ನಡೆಯುತ್ತಿದ್ದಾಗಲೇ ಸದನವೂ ಆರಂಭವಾಯಿತು. ಸಭಾಧ್ಯಕ್ಷರು ಕುರ್ಚಿ ಮೇಲೆ ಆಸೀನರಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ನ ಶಿವಲಿಂಗೇಗೌಡ ಅವರು ವಿಷಯ ಪ್ರಸ್ತಾಪಿಸಿ ‘ಪ್ರತಿಪಕ್ಷದ ಸದಸ್ಯರನ್ನು ಸದನಕ್ಕೆ ಬರಲು ಬಿಡುತ್ತಿಲ್ಲ’ ಎನ್ನುವ ಆರೋಪ ಮಾಡಿದರು. ಸಭಾಧ್ಯಕ್ಷರು ಯಾಕೆ ಸದಸ್ಯರನ್ನು ಬಿಡುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ತಕ್ಷಣ ಬಿಡುವಂತೆಯೂ ಸೂಚಿಸಿದರು. ಶಾಸಕರು ಬ್ರೀಫ್‌ಕೇಸ್ ತೆಗೆದುಕೊಂಡು ಒಳಗೆ ಬರಬಹುದು.ಅವರನ್ನು ತಪಾಸಣೆ ಮಾಡಬಾರದು ಎಂದು ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದರು. ಇಷ್ಟಾದ ನಂತರ ಜೆಡಿಎಸ್ ಶಾಸಕರು ದಾಖಲೆ ಇರುವ ಸೂಟ್‌ಕೇಸ್ ಸಮೇತ ಒಳಪ್ರವೇಶಿಸಿದರು.ಸಭಾಧ್ಯಕ್ಷರಿಗೇ ಅಚ್ಚರಿ!: ಜೆಡಿಎಸ್ ಶಾಸಕರು ಹೊತ್ತು ತಂದ ಸೂಟ್‌ಕೇಸ್‌ನ ಗಾತ್ರ ನೋಡಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರೇ ಅವಕ್ಕಾದರು. ಇದೇನಿದು? ನಾನೇನೊ ಬ್ರೀಫ್‌ಕೇಸ್ ಅಂದ್ರೆ ನೀವು ಸೂಟ್‌ಕೇಸ್ ಅನ್ನೇ ತರುವುದೇ? ಇದು ಸರಿಯಲ್ಲ. ಒಳ್ಳೆಯ ನಡತೆ ಅಲ್ಲ. ತಕ್ಷಣ ಅದನ್ನು ಹೊರಹಾಕಿ’ ಎಂದು ಮಾರ್ಷಲ್‌ಗಳಿಗೆ ಸೂಚನೆ ನೀಡಿದರು.ಆ ವೇಳೆಗೆ ಜೆಡಿಎಸ್ ಸದಸ್ಯರು ಸೂಟ್‌ಕೇಸ್ ಒಳಗಿದ್ದ ದಾಖಲೆ ಪತ್ರಗಳು ಮತ್ತು ಸರ್ಕಾರದ ವಿರುದ್ಧದ ಘೋಷಣಾ ಫಲಕಗಳನ್ನು ಹೊರತೆಗೆದು, ಸದನದಲ್ಲಿ ಪ್ರದರ್ಶಿಸುತ್ತಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ರಾಜ್ಯ’ ಎಂದು ಬರೆದಿದ್ದ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಬಿಜೆಪಿ ಸದಸ್ಯರ ಕಡೆಯಿಂದಲೂ ಜೆಡಿಎಸ್ ವಿರುದ್ಧ ಘೋಷಣೆಗಳು ಮೊಳಗಿದವು. ಈ ಸೂಟ್‌ಕೇಸ್ ಕೊಟ್ಟಿದ್ದು ಯಾರು? ನಿಮ್ಮ ಹಗರಣಗಳ ದಾಖಲೆಗಳೂ ಟನ್‌ಗಟ್ಟಲೆ ಇವೆ ಎನ್ನುವ ಹೇಳಿಕೆಗಳು ತೂರಿಬಂದವು.ಸಿದ್ದರಾಮಯ್ಯ ಮಾತನಾಡಿ, ಬ್ರೀಫ್‌ಕೇಸ್ ತರಲು ಅವಕಾಶ ನೀಡುತ್ತೀರಿ. ಸೂಟ್‌ಕೇಸ್ ತರಲು ಏಕೆ ಬಿಡುವುದಿಲ್ಲ. ಹೆಚ್ಚು ದಾಖಲೆಗಳು ಇರುವ ಕಾರಣ ದೊಡ್ಡ ಗಾತ್ರದ ಸೂಟ್‌ಕೇಸ್ ತಂದಿದ್ದಾರೆ. ಇದೇನು ಅಪರಾಧವಲ್ಲ ಎಂದು ಜೆಡಿಎಸ್ ಪರ ವಕಾಲತ್ತು ಹಾಕಿದರು.ಇಷ್ಟಕ್ಕೂ ಇದೆಲ್ಲದಕ್ಕೂ ಮುಖ್ಯಮಂತ್ರಿಯೇ ಕಾರಣ. ಅವರು ಮಂಗಳವಾರ ಸದನದಲ್ಲಿ ಜೆಡಿಎಸ್ ವಿರುದ್ಧ ಬ್ರೀಫ್‌ಕೇಸ್‌ನಿಂದ ದಾಖಲೆ ತೆಗೆಯುವ ಮತ್ತು ಅವುಗಳನ್ನು ಬಹಿರಂಗಪಡಿಸುವ ಬೆದರಿಕೆ ಹಾಕಿದರು. ಈಗ ಜೆಡಿಎಸ್‌ನವರೂ ಬಿಜೆಪಿ ಹಗರಣಗಳ ಬಗ್ಗೆ ದಾಖಲೆ ಸಮೇತ ಸದನಕ್ಕೆ ಬಂದಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.ಹಿಂದೆ ಭಾರತ್ ಬಂದ್ ಸಂದರ್ಭದಲ್ಲಿ ಬಿಜೆಪಿಯವರೂ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ್ದರು. ಆ ಸಂದರ್ಭದಲ್ಲಿ ನೀವು ವಿರೋಧಿಸಿರಲಿಲ್ಲ. ಈಗೇಕೆ ವಿರೋಧಿಸುತ್ತೀರಿ ಎಂದೂ ಅವರು ಸಭಾಧ್ಯಕ್ಷರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಭಾಧ್ಯಕ್ಷರು, ಆ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾಗಿ ಹೇಳಿದರು.ಜೆಡಿಎಸ್‌ನ ರೇವಣ್ಣ ಮಾತನಾಡಿ, ‘ಮುಖ್ಯಮಂತ್ರಿಯೇ ನಿನ್ನೆ ಸೂಟ್‌ಕೇಸ್ ತೆಗೆದು ಅಪ್ಪ-ಮಕ್ಕಳ ಹಗರಣಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಈಗಲೇ ಹೇಳುತ್ತಿದ್ದೇನೆ ಅದೇನಿದೆಯೊ ಎಲ್ಲವನ್ನೂ ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.ನಂತರ ಮಾರ್ಷಲ್‌ಗಳು ಸರ್ಕಾರದ ವಿರುದ್ಧ ಇದ್ದ ಘೋಷಣಾ ಫಲಕಗಳನ್ನು ಜೆಡಿಎಸ್ ಸದಸ್ಯರಿಂದ ಕಿತ್ತುಕೊಂಡರು. ಕೆಲವರು ಫಲಕ ಕೊಡಲು ಹಿಂದೇಟು ಹಾಕಿದ್ದಕ್ಕೆ ಸಭಾಧ್ಯಕ್ಷರು ಎಚ್ಚರಿಕೆ ಕೂಡ ನೀಡಿದರು. ಸದನದಿಂದ ಹೊರ ಹಾಕುವ ಎಚ್ಚರಿಕೆಯನ್ನೂ ನೀಡಿದರು.ವಿಧಾನ ಪರಿಷತ್ತಿಗೆ ಇದೇ ರೀತಿಯ ಇನ್ನೊಂದು ಸೂಟ್‌ಕೇಸ್ ಬಂತು. ಆದರೆ ಅಲ್ಲಿ ಅದಕ್ಕೆ ಸದನದ ಒಳಗೆ ಹೋಗುವ ಅವಕಾಶ ಸಿಗಲಿಲ್ಲ. ಸದನದ ಬಾಗಿಲ ಬಳಿಯೇ ಇದು ಎಲ್ಲರ ಗಮನ ಸೆಳೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.