ಸದನದಲ್ಲಿ ಸೆಕ್ಸ್‌ಫಿಲಂ ನೋಡಿದ ಸಚಿವರು

7

ಸದನದಲ್ಲಿ ಸೆಕ್ಸ್‌ಫಿಲಂ ನೋಡಿದ ಸಚಿವರು

Published:
Updated:

ಬೆಂಗಳೂರು/ನವದೆಹಲಿ: ಸದನ ನಡೆಯುತ್ತಿದ್ದಾಗಲೇ `ಬ್ಲೂ ಫಿಲಂ~ ವೀಕ್ಷಿಸಿದ ಸಚಿವರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ ಅವರ ರಾಜೀನಾಮೆ ಪಡೆಯುವಂತೆ ಪಕ್ಷದ ಹೈಕಮಾಂಡ್ ರಾಜ್ಯದ ಬಿಜೆಪಿ ಮುಖಂಡರಿಗೆ ಸ್ಪಷ್ಟ ಸೂಚನೆ ನೀಡಿದೆ.

 

ಸಚಿವರ ನಡವಳಿಕೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ಬಿಜೆಪಿ ವರಿಷ್ಠರು ಇವರ ತಲೆದಂಡ ಪಡೆಯಲು ನಿರ್ಧರಿಸಿದ್ದಾರೆ.ಘಟನೆ ಸಂಬಂಧ ಮಾಹಿತಿ ಪಡೆದ ಪಕ್ಷದ ವರಿಷ್ಠರು ಮಂಗಳವಾರ ತಡರಾತ್ರಿ ಸಚಿವರ ರಾಜೀನಾಮೆ ಪಡೆಯಲು ಸೂಚನೆ ನೀಡಿದ್ದು, ಬುಧವಾರ ಬೆಳಿಗ್ಗೆ ಎಲ್ಲವೂ ಅಂತಿಮವಾಗಲಿದೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ರಾತ್ರಿ ಶಿವಮೊಗ್ಗದಿಂದ ರೈಲಿನಲ್ಲಿ ಹೊರಟಿದ್ದು, ಬುಧವಾರ ಬೆಳಿಗ್ಗೆ ನಗರಕ್ಕೆ ಬರಲಿದ್ದಾರೆ. ಸದಾನಂದ ಗೌಡ ಚಿಕ್ಕಮಗಳೂರಿನಿಂದ ಹೊರಟಿದ್ದಾರೆ. ಬೀದರ್ ಪ್ರವಾಸದಲ್ಲಿದ್ದ ಯಡಿಯೂರಪ್ಪ ತಡರಾತ್ರಿ ನಗರಕ್ಕೆ ಬಂದಿದ್ದಾರೆ.ಈ ಮೂವರೂ ಬುಧವಾರ ಬೆಳಿಗ್ಗೆ ಸಭೆ ಸೇರಿ ಸಚಿವರ ರಾಜೀನಾಮೆ ಪಡೆಯಲಿದ್ದಾರೆ ಎಂದು ಗೊತ್ತಾಗಿದೆ.ಅಶ್ಲೀಲ ಚಿತ್ರ ಕಳುಹಿಸಿದ ಆರೋಪ ಹೊತ್ತ ಮತ್ತೊಬ್ಬ ಸಚಿವ ಕೃಷ್ಣ ಪಾಲೆಮಾರ್ ಕೂಡ ವಿವಾದದ ಸುಳಿಗೆ ಸಿಲುಕಿದ್ದಾರೆ. ಆದರೆ, ಅವರ ತಲೆದಂಡದ ಬಗ್ಗೆ ಹೈಕಮಾಂಡ್ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.ಘಟನೆ ಹಿನ್ನೆಲೆ: ವಿಧಾನಮಂಡಲ ಅಧಿವೇಶನ ವೇಳೆ ಸಹಕಾರ ಸಚಿವ ಲಕ್ಷ್ಮಣ ಸವದಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ. ಪಾಟೀಲ ಮಂಗಳವಾರ ಸಂಜೆ ವಿಧಾನಸಭೆಯಲ್ಲಿ ಕುಳಿತೇ ಮೊಬೈಲ್‌ನಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡವು.ಸದನದಲ್ಲಿ ಕುಳಿತು ಇವರು ಮೊಬೈಲ್ ಫೋನ್‌ನಲ್ಲಿ ನೋಡುತ್ತಿದ್ದ ಹಸಿಹಸಿ ಲೈಂಗಿಕ ದೃಶ್ಯಗಳು ಟಿ.ವಿ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಪರಿಣಾಮ ಸಾರ್ವಜನಿಕ ವಲಯದಲ್ಲಿ ಕೋಲಾಹಲ ಉಂಟಾಯಿತು.ಸಚಿವರ ನಡತೆಗೆ ವಿರೋಧ ಪಕ್ಷಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪ್ರತಿಪಕ್ಷಗಳ ಮುಖಂಡರು ಈ ಇಬ್ಬರೂ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದರು. ಸುದ್ದಿ ಪ್ರಸಾರವಾದ ಕೂಡಲೇ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಹಕಾರ ಸಚಿವರ ನಿವಾಸದ ಮುಂದೆ ರಾತ್ರಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬುಧವಾರ ಸವದಿ ಅವರ ಮತಕ್ಷೇತ್ರವಾದ ಅಥಣಿ ಬಂದ್‌ಗೆ ಕರೆ ನೀಡಿವೆ.ಅಥಣಿಯಲ್ಲಿ ಸವದಿ ಅವರ ಕಟೌಟ್‌ಗಳನ್ನು ತೆರವುಗೊಳಿಸಲಾಗಿದ್ದು, ಅವರ ಪ್ರತಿಕೃತಿ ದಹನ ಮಾಡಲಾಗಿದೆ.

ಸದನದಲ್ಲಿ ಸವದಿ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿದ್ದರು. ಪಕ್ಕದಲ್ಲೇ ಇದ್ದ ಸಚಿವ ಸಿ.ಸಿ.ಪಾಟೀಲ ಅವರು ಕುತೂಹಲಗೊಂಡಂತೆ ಅತ್ತ ಇಣುಕಿದರು. ಕೂಡಲೇ ಸವದಿ ಕಡೆ ಮತ್ತೂ ವಾಲಿ ತಮಗೆ ಕಾಣುವಂತೆ ಮೊಬೈಲನ್ನು ತಮ್ಮತ್ತ ತಿರುಗಿಸಿಕೊಳ್ಳುವ ದೃಶ್ಯ ಕ್ಯಾಮೆರಾಗೆ ಸೆರೆಸಿಕ್ಕಿದೆ.ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆದಿದ್ದಾಗ ಈ ಇಬ್ಬರೂ ಸಚಿವರು ಆಶ್ಲೀಲ ಚಿತ್ರ ವೀಕ್ಷಣೆಯಲ್ಲಿ ತೊಡಗಿದ್ದರು. ಸವದಿ ಒಂದು ಕ್ಷಣ ಮೊಬೈಲ್ ಕಡೆಗೆ ವಾರೆ ನೋಟ ಬೀರುವುದು, ಮತ್ತೊಂದು ಗಳಿಗೆ ತಲೆ ಎತ್ತಿ ಚರ್ಚೆಯತ್ತ ಗಮನಹರಿಸಿದಂತೆ ಮಾಡುವ `ಕಣ್ಣಾಮುಚ್ಚಾಲೆ ಆಟ~ ನಡೆದೇ ಇತ್ತು. ಕೆಲವು ಸದಸ್ಯರು ಹಿಂದಿನಿಂದ ನಡೆದು ಹೋಗುವಾಗ ಸಚಿವರು ಮೊಬೈಲ್ ಅನ್ನು ಮರೆ ಮಾಡಿಕೊಳ್ಳುತ್ತಿದ್ದರು.ಸಚಿವರು ಸದನದೊಳಗೆ ಕುಳಿತು ಬ್ಲೂ ಫಿಲಂ ನೋಡಿರುವುದು ವಿಧಾನಮಂಡಲದ ಇತಿಹಾಸದಲ್ಲಿ ಇದೇ ಮೊದಲು. ಹೀಗಾಗಿ ಇಬ್ಬರೂ ಸಚಿವರು ರಾಜೀನಾಮೆ ನೀಡಲೇಬೇಕು ಎಂದು ಪ್ರತಿಪಕ್ಷಗಳು ಪಟ್ಟುಹಿಡಿದಿವೆ. ಸದನದ ಗೌರವ ಉಳಿಸಬೇಕಾದರೆ ಇವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿವೆ.

 ನೋಡಿಲ್ಲ

ಬೆಂಗಳೂರು: `ನಾನು ವಿಧಾನಸಭೆಯಲ್ಲಿ  ನೋಡಿದ್ದು `ಬ್ಲೂ ಫಿಲಂ~ ಅಲ್ಲವೇ ಅಲ್ಲ. ಅದು ನಾಲ್ವರು ಯುವಕರು ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ, ನಂತರ ಅವಳನ್ನು ಕೊಲೆ ಮಾಡುವ ದೃಶ್ಯ~ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು.`ಉಡುಪಿ ಬಳಿಯ ಸೇಂಟ್ ಮೇರಿಸ್ ದ್ವೀಪದಲ್ಲಿ ನಡೆದಿದೆ ಎನ್ನಲಾದ ರೇವ್ ಪಾರ್ಟಿ ಕುರಿತು ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಚರ್ಚೆ ನಡೆಯಿತು. ಆ ಚರ್ಚೆಯಲ್ಲಿ ಪಾಲ್ಗೊಂಡ ಬಳಿಕ  ವಿಧಾನಸಭೆಗೆ ಬಂದೆ. ಅಲ್ಲಿ ಗಮನ ಸೆಳೆಯುವ ಸೂಚನೆಗೆ ನಾನು ಪ್ರತಿಕ್ರಿಯೆ ನೀಡಬೇಕಿತ್ತು. ಸಚಿವ ಕೃಷ್ಣ ಪಾಲೆಮಾರ್ ಅವರು ವಿದೇಶವೊಂದರಲ್ಲಿ ನಡೆದ ಘಟನೆಯ ವಿಡಿಯೊವನ್ನು ನನಗೆ ಕಳುಹಿಸಿದರು~ ಎಂದು ಪ್ರತಿಕ್ರಿಯೆ ನೀಡಿದರು.  `ಆ ವಿಡಿಯೊದಲ್ಲಿ ನಾಲ್ವರು ಯುವತಿಯರು ಪಾರ್ಟಿಯೊಂದರಲ್ಲಿ ಅಶ್ಲೀಲವಾಗಿ ನೃತ್ಯ ಮಾಡುತ್ತಾರೆ. ಅದನ್ನು ವೀಕ್ಷಿಸುವ ನಾಲ್ವರು ಯುವಕರು ಉದ್ರೇಕಗೊಂಡು ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಅವಳನ್ನು ಕೊಲೆ ಮಾಡುತ್ತಾರೆ. ಅವಳ ಶಿರಚ್ಛೇದ ಮಾಡುತ್ತಾರೆ. ಕೊಲೆ ಮಾಡಿದವರನ್ನು ಸಾರ್ವಜನಿಕರು ಮತ್ತು ಪೊಲೀಸರು ಬಹಿರಂಗವಾಗಿ ನೇಣಿಗೇರಿಸುತ್ತಾರೆ. ವಿದೇಶಗಳಲ್ಲಿ ಇಂಥ ಘಟನೆಗಳೂ ನಡೆಯುತ್ತವೆ ಎಂದು ನಾನದನ್ನು ನೋಡುತ್ತಿದ್ದೆ~ ಎಂದರು.`ಅಂತಹ ಘಟನೆಯನ್ನು ಒಳಗೊಂಡಿರುವ ವಿಡಿಯೊವನ್ನೇ ನೀಲಿ ಚಿತ್ರ ಎಂದು ಬಿಂಬಿಸಿದ್ದಾರೆ. ಸದನದಲ್ಲಿ ಅಂಥ ದೃಶ್ಯಗಳನ್ನು ವೀಕ್ಷಿಸಬಾರದು ಎಂಬ ಪ್ರಜ್ಞೆ ನನಗಿಲ್ಲವೇ?~ ಎಂದು ಪ್ರಶ್ನಿಸಿದ ಅವರು, `ಹೊರದೇಶಗಳಲ್ಲಿ ಇಂಥದೆಲ್ಲ ಘಟನೆಗಳು ನಡೆಯುತ್ತವೆ ನೋಡಿ ಎಂದು ಪಾಲೆಮಾರ್ ಅವರು ಅದನ್ನು ನನಗೆ ಕಳುಹಿಸಿದ್ದರು. ಹಾಗಾಗಿ ಆ ದೃಶ್ಯಗಳನ್ನು ನೋಡಿದೆ~ ಎಂದರು.`ಆ ದೃಶ್ಯಗಳನ್ನು ವಿಧಾನಸೌಧದಲ್ಲಿ ಪ್ರದರ್ಶಿಸಿ ಅನುಮಾನ ಬಗೆಹರಿಸಬೇಕು ಎಂದು ನಾನು ಈಗಾಗಲೇ ಪಾಲೆಮಾರ್ ಅವರಲ್ಲಿ ಮನವಿ ಮಾಡಿದ್ದೇನೆ. ನಾನು ಯಾವುದೇ ತಪ್ಪು ಎಸಗಿಲ್ಲ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ~ ಎಂದರು. `ಸದನದಲ್ಲಿ ಮೊಬೈಲ್ ಬಳಸಿ ವಿಡಿಯೊ ವೀಕ್ಷಿಸುವುದು ತಪ್ಪಲ್ಲವೇ?~ ಎಂದು ಪ್ರಶ್ನಿಸಿದಾಗ, `ಸದನದಲ್ಲಿ ನಡೆಯುವ ಚರ್ಚೆಗಳಿಗೆ ಪೂರಕವಾಗಿ ಪತ್ರಿಕೆಗಳನ್ನು ನೋಡಲಾಗುತ್ತದೆ. ಹಾಗೆಯೇ ರೇವ್ ಪಾರ್ಟಿ ಕುರಿತು ಪರಿಷತ್‌ನಲ್ಲಿ ಚರ್ಚೆ ನಡೆದಿದ್ದ ಕಾರಣ ಅದಕ್ಕೆ ಪೂರಕವಾಗಿ ವಿದೇಶದಲ್ಲಿ ನಡೆದ ಈ ಘಟನೆ ವೀಕ್ಷಿಸಿದೆ~ ಎಂದು ಸಮರ್ಥಿಸಿಕೊಂಡರು.`ವಿಡಿಯೋ ನೋಡಿದ್ದು ತಪ್ಪು~: ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸಿ.ಸಿ. ಪಾಟೀಲ, `ಸದನದಲ್ಲಿ ವಿಡಿಯೊ ವೀಕ್ಷಿಸಿದ್ದು ತಪ್ಪು~ ಎಂದು ಒಪ್ಪಿಕೊಂಡರು. `ರೇವ್ ಪಾರ್ಟಿ ಕುರಿತ ಚರ್ಚೆಗೆ ಪೂರಕವಾಗಿ ಈ ದೃಶ್ಯಗಳನ್ನು ನೋಡಿದೆವು. ಆದರೆ ಅದನ್ನು ನೋಡಿ ನಾವು ಆನಂದಪಟ್ಟಿಲ್ಲ~ ಎಂದು ಹೇಳಿದರು.`ವಿವರ ಪಡೆದು ಪ್ರತಿಕ್ರಿಯೆ~:
`ಸಚಿವದ್ವಯರು ನೀಲಿ ಚಿತ್ರ ನೋಡಿದ್ದಾರೆ ಎನ್ನುವ ಕುರಿತು ನನಗೆ ಮಾಹಿತಿ ಇಲ್ಲ. ಈ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದು ವಿಧಾನಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ ಹೇಳಿದರು.

 

ನೋಡಿದ್ದೇನು ?

~ಅಬಿಕ್~ ಎಂಬ ಹೆಸರಿನ ಫೈಲ್‌ನಲ್ಲಿ 3ಜಿಪಿ ಫಾರ್ಮ್ಯಾಟ್ ಕ್ಲಿಪ್‌ನಲ್ಲಿ ಶೇಖರಣೆಗೊಂಡಿರುವ ದೃಶ್ಯಗಳ ಒಟ್ಟು ಅವಧಿ 4.12 ನಿಮಿಷಗಳು. ಸುಮಾರು 30ರಿಂದ 35 ವಯಸ್ಸಿನ ಮಹಿಳೆ ಕಪ್ಪು ಸೀರೆ ಹಾಗೂ ಅದೇ ಬಣ್ಣದ ರವಿಕೆಯನ್ನು ತೊಟ್ಟಿದ್ದಾಳೆ. ಕ್ಯಾಮೆರಾ ಎದುರಿಗೆ ನಿಂತಿರುವ ಆ ಮಹಿಳೆ ಕ್ಯಾಮೆರಾ ಓಡಿದಂತೆಲ್ಲ, ಕುಣಿತವನ್ನು ವೇಗಗೊಳಿಸುತ್ತ ಒಂದೊಂದೇ ಬಟ್ಟೆಗಳನ್ನು ಕಳಚುತ್ತಾಳೆ.ಅಂತಿಮವಾಗಿ ಆ ಯುವತಿ ನಗ್ನಳಾಗುತ್ತಾಳೆ. ಅವಳ ಹಾವಭಾವವಾಗಲೀ ಹಾಗೂ ವರ್ತನೆಯಾಗಲೀ ಯಾವುದೇ ಪಾರ್ಟಿ ಮಾಡುವ ಸಂದರ್ಭದಲ್ಲಿ ತೆಗೆದದ್ದಲ್ಲ ಎಂಬುದು ಗೊತ್ತಾಗುತ್ತದೆ. ಈ ವಿಡಿಯೊ ಎರಡು ತಿಂಗಳ ಹಿಂದೆಯೇ ಹುಬ್ಬಳ್ಳಿ-ಧಾರವಾಡದಲ್ಲಿ ಪಡ್ಡೆ ಹುಡುಗರ ಮೊಬೈಲ್‌ಗಳಲ್ಲಿ ಹರದಾಡಿ ಸುದ್ದಿ ಮಾಡಿತ್ತು

ವಿವಿಧ ನಾಯಕರ ಪ್ರತಿಕ್ರಿಯೆ

`ನನಗೆ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಮಾಹಿತಿ ಸಿಕ್ಕ ನಂತರ ಪ್ರತಿಕ್ರಿಯೆ ನೀಡುತ್ತೇನೆ~.

- ಡಿ.ವಿ. ಸದಾನಂದಗೌಡ, ಮುಖ್ಯಮಂತ್ರಿಈ ರೀತಿಯ ಘಟನೆ ನಡೆದಿರುವುದು ನಿಜ ಆಗಿದ್ದರೆ ಖೇದಕರ. ರಾಜ್ಯದ ಆರು ಕೋಟಿ ಜನರ ಭಾವನೆಗಳಿಗೆ ಸ್ಪಂದಿಸುವ ಸದನದಲ್ಲಿ ಈ ರೀತಿ ಆಗಬಾರದು.

-ಎಸ್.ಸುರೇಶ್‌ಕುಮಾರ್, ಕಾನೂನು ಸಚಿವ`ಘಟನೆಯ ಪೂರ್ಣ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಲಾರೆ. ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು~.

- ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ`ಇವರೇನಾದರೂ ಸದನವನ್ನು ಬೆಡ್‌ರೂಂ ಅಂದುಕೊಂಡಿದ್ದಾರೆಯೇ? ಜನ ಪ್ರತಿನಿಧಿಗಳಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸದನದ ಪಾವಿತ್ರ್ಯವನ್ನು ಕಾಪಾಡುವ ಕುರಿತಾಗಿಯೂ ವಚನ ಮಾಡಿರುತ್ತಾರೆ. ಆದರೆ ಇಂತಹ ವರ್ತನೆ ನಿಜಕ್ಕೂ ನಾಚಿಕೆಗೇಡು.

- ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry