ಶನಿವಾರ, ಫೆಬ್ರವರಿ 27, 2021
31 °C
ನಗರ ಪೊಲೀಸರಿಗೆ ಸವಾಲಾಗಿರುವ ‘ಸ್ಲೀಪರ್‌ ಸೆಲ್‌’ಗಳು

ಸದ್ದು ಮಾಡುತ್ತಿವೆ ಗೋಪ್ಯ ಚಟುವಟಿಕೆಗಳು

ಎಂ.ಸಿ. ಮಂಜುನಾಥ Updated:

ಅಕ್ಷರ ಗಾತ್ರ : | |

ಸದ್ದು ಮಾಡುತ್ತಿವೆ ಗೋಪ್ಯ ಚಟುವಟಿಕೆಗಳು

ಬೆಂಗಳೂರು: ಉದ್ಯಾನ ನಗರಿ, ನಿವೃತ್ತರ ಸ್ವರ್ಗ ಎಂಬ ಹೆಸರುಗಳು ಮೂಲಕ ವಿಶ್ವ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರಿನಲ್ಲಿ ಈಗ ಭಯೋತ್ಪಾದನಾ ಸಂಘಟನೆಗಳ ಗೋಪ್ಯ ಚಟುವಟಿಕೆಗಳು ಸದ್ದು ಮಾಡುತ್ತಿವೆ. ರಾಜಧಾನಿ ಪೊಲೀಸರ ಕಣ್ತಪ್ಪಿಸಿ ಇಲ್ಲಿ ಅಡಗಿರುವ ಶಂಕಿತರನ್ನು ಹೊರ ರಾಜ್ಯಗಳ ಪೊಲೀಸರು ಬಂಧಿಸಿ ಕರೆದೊಯ್ಯುವ ವಿದ್ಯಮಾನ ಮತ್ತೆ ಮುಂದುವರಿದಿದೆ.ಅಲ್ ಕೈದಾ, ಐ.ಎಸ್, ಲಷ್ಕರ್–ಇ–ತಯಬಾ ಹಾಗೂ ಇಂಡಿಯನ್ ಮುಜಾಹಿದ್ದಿನ್‌ನಂಥ ಭಯೋತ್ಪಾದನಾ ಸಂಘಟನೆಗಳ ‘ದಾಳಿ’ಗಳ ಪಟ್ಟಿಯಲ್ಲಿ ಬೆಂಗಳೂರಿನ ಹೆಸರಿರುವುದು ಈ ಹಿಂದಿನ ಕೃತ್ಯಗಳಿಂದ ಬಹಿರಂಗವಾಗಿದೆ.ನೆರೆಹೊರೆಯಲ್ಲಿ ಸಾಮಾನ್ಯ ನಾಗರಿಕರಂತೆ ನೆಲೆಸಿರುವ ಈ ದುಷ್ಕರ್ಮಿಗಳು, ಹೊರ ಜಗತ್ತಿಗೆ ಗೊತ್ತಾಗದಂತೆ ಉಗ್ರ ಸಂಘಟನೆಗಳಿಗೆ ಕೈ ಜೋಡಿಸುತ್ತಿವೆ. ಆದರೆ, ‘ನಗರದಲ್ಲಿ ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಅಲರ್ಟ್ ಬಂದಿರಲಿಲ್ಲ’ ಎಂಬ ಸಿದ್ಧ ಉತ್ತರ ರಾಜಧಾನಿ ಪೊಲೀಸರದು.‘ವಿದ್ಯಾವಂತರು, ಧರ್ಮ ಪ್ರಚಾರಕರು ಹಾಗೂ ಪ್ರತಿಷ್ಠಿತ ಕಂಪೆನಿಗಳ ಉದ್ಯೋಗಿಗಳು ಉಗ್ರ ಸಂಘಟನೆಗಳ ಪ್ರಚಾರಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲ ತಾಣಗಳು ಸಂಘಟನೆಗಳನ್ನು ವಿಸ್ತರಿಸಲು ಅವರಿಗೆ ಪ್ರಬಲ ಅಸ್ತ್ರಗಳಾಗಿವೆ.  ಈ ವಿದ್ಯಾವಂತ ‘ಸ್ಲೀಪರ್ ಸೆಲ್‌’ಗಳೇ ರಾಜಧಾನಿ ಪೊಲೀಸರ ಪ್ರಮುಖ ಸವಾಲುಗಳು ಎನ್ನುತ್ತಾರೆ’ ನಿವೃತ್ತ ಪೊಲೀಸ್ ಅಧಿಕಾರಿಗಳು.ತುಮಕೂರು ಆಶ್ರಯ ಸ್ಥಾನ: ಬೆಂಗಳೂರು ಮಾತ್ರವಲ್ಲದೆ ನೆರೆಹೊರೆ ನಗರಗಳಲ್ಲೂ ಶಂಕಿತರ ‘ಸ್ಲೀಪರ್ ಸೆಲ್‌’ಗಳು ಹುಟ್ಟಿಕೊಳ್ಳುತ್ತಿವೆ. ತುಮಕೂರು ಭಯೋತ್ಪಾದಕರ ಚಟುವಟಿಕೆಗಳಿಗೆ ತುತ್ತಾಗುತ್ತಿದೆ ಎಂಬ ಆಘಾತಕಾರಿ ವಿಷಯವು 2008ರ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಪ್ರಕರಣದ ತನಿಖೆ ವೇಳೆಯೇ ಬಹಿರಂಗವಾಗಿತ್ತು.ಕ್ರೀಡಾಂಗಣದ ಬಳಿ ಸ್ಫೋಟಿಸುವ ಮೊದಲು ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಮುಖಂಡ ಯಾಸಿನ್ ಭಟ್ಕಳ್ ಹಾಗೂ ಆತನ ಸಹಚರರು ತುಮಕೂರಿನಲ್ಲಿ ಆಶ್ರಯ ಪಡೆದಿದ್ದರು. ಅಷ್ಟೇ ಅಲ್ಲದೆ, ಅಲ್ಲೇ ಬಾಂಬ್ ತಯಾರಿಕೆಗೆ ಸಿದ್ಧತೆ ಕೂಡ  ನಡೆಸಿದ್ದರು ಎನ್ನುವ ಅಂಶವೂ ಬೆಳಕಿಗೆ ಬಂದಿತ್ತು.2008ರಲ್ಲಿ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಿಸುವ ಮದನಿ ಹಾಗೂ ಸಹಚರರು, ಚನ್ನಪಟ್ಟಣದಲ್ಲಿ ಸ್ಫೋಟಕ ವಸ್ತುಗಳ ಪೂರ್ವ ಪರೀಕ್ಷೆ ನಡೆಸಿದ್ದರು. ಈಗ ಮತ್ತೆ ಐ.ಎಸ್ ನಂಟು ತುಮಕೂರಿಗೆ ವ್ಯಾಪಿಸಿದೆ.ಪತ್ತೆ ಹಚ್ಚುವುದು ಕಷ್ಟ: ‘ಅಮಾಯಕ ಯುವಕರನ್ನು ಸಂಘಟನೆಯತ್ತ ಸೆಳೆಯುವ ಈ ಸ್ಲೀಪರ್‌ ಸೆಲ್‌ಗಳು, ನೇರವಾಗಿ ವಿಧ್ವಂಸಕ ಕೃತ್ಯಗಳಿಗೆ ಇಳಿಯುವುದಿಲ್ಲ. ಕೇವಲ ಸಾಮಾಜಿಕ ಜಾಲ ತಾಣಗಳ ಮೂಲಕ ಸಂಘಟನೆ ಸದಸ್ಯರ ಜತೆ ಮಾತುಕತೆ ನಡೆಸಿ, ಅಗತ್ಯ ಸಂದರ್ಭಗಳಲ್ಲಿ ಮಾತ್ರ ವಿಧ್ವಂಸಕ ಕೃತ್ಯಗಳಿಗೆ ಸಂಘಟನೆಗಳಿಗೆ ನೆರವಾಗುತ್ತಾರೆ. ಹೀಗಾಗಿ ಇವರನ್ನು ಬಂಧಿಸುವುದು ಕಷ್ಟ ಸಾಧ್ಯ’ ಎಂದು ಪೊಲೀಸರು ಹೇಳುತ್ತಾರೆ.‘ನಿರ್ದಿಷ್ಟ ಅಲರ್ಟ್ ಇರಲಿಲ್ಲ’

‘ಶುಕ್ರವಾರದ ಕಾರ್ಯಾಚರಣೆಗೆ ಸಹಕಾರ ನೀಡುವಂತೆ ಎನ್‌ಐಎ ಅಧಿಕಾರಿಗಳು ಕೋರಿದ್ದರು. ಅವರು ಕೇಳಿದಷ್ಟು ಸಿಬ್ಬಂದಿಯನ್ನು ಕೊಟ್ಟು ದಾಳಿಗೆ ನೆರವು ನೀಡಿದ್ದೇವೆ. ಗುಪ್ತಚರ ಇಲಾಖೆಯಿಂದ ಉಗ್ರರ ಬೆದರಿಕೆ ಬಗ್ಗೆ ನಿರ್ದಿಷ್ಟ ‘ಅಲರ್ಟ್’ ಇರಲಿಲ್ಲ. ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ ಗಣರಾಜ್ಯೋತ್ಸವಕ್ಕೆ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್ ತಿಳಿಸಿದರು.

*

ನಗರದಲ್ಲಿ ಸೆರೆಯಾದ ಶಂಕಿತ ಉಗ್ರರ ವಿವರ

* 2014 ಆ.6: ವಿವೇಕನಗರದಲ್ಲಿ ಅಡಗಿದ್ದ ಅಲ್ ಉಮಾ ಸಂಘಟನೆಯ ಶಮೀಮ್, ಸಮೀವುಲ್ಲಾ, ಸಾಧಿಕ್ ಮತ್ತು ನವಾಜ್ ಬಂಧನ. ತಮಿಳುನಾಡು ಪೊಲೀಸರ ಕಾರ್ಯಾಚರಣೆ.

* 2014 ಡಿ.13: ಐಎಸ್‌ನ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಮೆಹದಿ ಮಸ್ರೂರ್ ಬಿಸ್ವಾಸ್ ಸೆರೆ.

* 2015 ಜ.8: ಪುಲಕೇಶಿನಗರ ಸಮೀಪದ ಕಾಕ್ಸ್‌ಟೌನ್‌ನಲ್ಲಿ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಶಂಕಿತ ಉಗ್ರರಾದ ಆರ್ಯುವೇದಿಕ್ ವೈದ್ಯ ಸೈಯದ್ ಇಸ್ಮಾಯಿಲ್, ಅಫಕ್ ಹಾಗೂ ಸದ್ದಾಂ ಹುಸೇನ್ ಬಂಧನ.

* 2015 ಜ.24:  ಅಸ್ಸಾಂನಲ್ಲಿ 6 ಜನರ ಹತ್ಯೆಗೈದು ಕಾಟನ್‌ಪೇಟೆಯ ವಸತಿ ಗೃಹದಲ್ಲಿ ಉಳಿದುಕೊಂಡಿದ್ದ ಬೋಡೋ ಉಗ್ರ ಬಿರ್ಕಾಂಗ್ ನರ್ಜಾರಿ ಸೆರೆ.

* 2015 ಜ.26: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೋಡೋ ಉಗ್ರ ಸಂಜು ಬೋರ್ಡ್‌ ಲಾಯ್ ಅಲಿಯಾಸ್ ಶಿಬಿಗಿರಿ ಬಂಧನ

* 2015 ಜೂನ್ 6: ಬೋಡೋ ಉಗ್ರರಾದ ಟೊನೂನ್ ಬಸುಮತರಿ, ನರ್ಸನ್ ಬಸುಮತರಿ, ಸಡ್ವಾನ್ ಬಸುಮತರಿ ಮತ್ತು ಜಿಬ್ನಾಲ್ ನರ್ಜಾರಿ ಪೀಣ್ಯ 2ನೇ ಹಂತ ಜಿಕೆಡಬ್ಲು ಲೇಔಟ್‌ನಲ್ಲಿ ಬಂಧನ. ಅಸ್ಸಾಂನಲ್ಲಿ 83 ಆದಿವಾಸಿಗಳ ಕೊಂದ ಆರೋಪ.

* 2015 ಡಿ.25: ಎಂ.ಜಿ.ರಸ್ತೆಯ ಹೋಟೆಲ್‌ವೊಂದರಲ್ಲಿ ತಂಗಿದ್ದ ನಾಗಾಲ್ಯಾಂಡ್ ಉಗ್ರ ಅಟೋಶಿ ಚೋಪೆಯನ್ನು ಬಂಧಿಸಿದ ಎನ್‌ಐಎ

* 2015 ಜ.7: ಅಲ್‌ಕೈದಾ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ಇಲಿಯಾಸ್‌ನಗರದ ಮೌಲ್ವಿ ಮೌಲಾನಾ ಸೈಯದ್ ಅನ್ಸರ್ ಶಾ ಬಂಧನ. ದೆಹಲಿ ಎಟಿಎಸ್ ಕಾರ್ಯಾಚರಣೆ

* 2015 ಜ.22: ಹೆಗಡೆನಗರದಲ್ಲಿ ಮಹಮದ್ ಅಫ್ಜಲ್ ಬಂಧನ, ಮೂವರು ವಶಕ್ಕೆ. ಎನ್‌ಐಎ ಕಾರ್ಯಾಚರಣೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.