ನವದೆಹಲಿ (ಪಿಟಿಐ): ದೇಶದ ಔಷಧ ತಯಾರಿಕಾ ರಂಗದ ಪ್ರಮುಖ ಕಂಪೆನಿ ಸನ್ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್, ಬಿಕ್ಕಟ್ಟಿಗೆ ಸಿಲುಕಿರುವ ರ್ಯಾನ್ಬಾಕ್ಸಿ ಲ್ಯಾಬೊರೇಟರೀಸ್ ಅನ್ನು ಸುಮಾರು 320 ಕೋಟಿ ಡಾಲರ್ಗಳಿಗೆ (ರೂ19,200 ಕೋಟಿ) ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿದೆ.
ದೇಶದ ಔಷಧ ಉದ್ಯಮದಲ್ಲಿ ಕೆಳದ ಎರಡು ವರ್ಷಗಳ ನಂತರ ನಡೆಯುತ್ತಿರುವ ದೊಡ್ಡ ಮೊತ್ತದ ಸ್ವಾಧೀನ ಪ್ರಕ್ರಿಯೆ ಇದಾಗಿದೆ. ಈ ಖರೀದಿಯ ಸಂಪೂರ್ಣ ವಹಿವಾಟು ಷೇರುಗಳಲ್ಲೇ ನಡೆಯಲಿದೆ. ಸದ್ಯ ರ್ಯಾನ್ಬಾಕ್ಸಿಯ ಒಂದು ಷೇರಿಗೆ ರೂ457 ಮೌಲ್ಯ ಇದೆ. ಒಪ್ಪಂದದಂತೆ ರ್ಯಾನ್ಬಾಕ್ಸಿ ಷೇರುದಾರರು, ಪ್ರತಿ ಷೇರಿಗೆ ಸನ್ಫಾರ್ಮಾದ ಶೇ 0.8ರಷ್ಟು ಷೇರು ಪಡೆಯಲಿದ್ದಾರೆ ಎಂದು ಉಭಯ ಕಂಪೆನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಎರಡೂ ಕಂಪೆನಿಗಳು ಸೇರಿ 2013ನೇ ಸಾಲಿನಲ್ಲಿ 420 ಕೋಟಿ ಡಾಲರ್ಗಳಷ್ಟು (ರೂ25,200 ಕೋಟಿ) ವರಮಾನ ಅಂದಾಜು ಮಾಡಿವೆ. ರ್ಯಾನ್ಬಾಕ್ಸಿ ವಿಲೀನದ ನಂತರ ಸನ್ಫಾರ್ಮಾ ದೇಶದ ನಂ 1 ಮತ್ತು ಪ್ರಪಂಚದ ಐದನೆಯ ಅತಿ ದೊಡ್ಡ ಔಷಧ ತಯಾರಿಕಾ ಕಂಪೆನಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.
ಎರಡೂ ಕಂಪೆನಿಗಳು ಸೇರಿ 65 ದೇಶಗಳಲ್ಲಿ ಕಾರ್ಯಾಚರಣೆ ಹೊಂದಿದ್ದು, 47 ಔಷಧ ತಯಾರಿಕಾ ಘಟಕಗಳನ್ನು ಹೊಂದಿವೆ. ಈ ಸ್ವಾಧೀನ ಪ್ರಕಟಣೆ ಹೊರಬಿದ್ದ ನಂತರ ರ್ಯಾನ್ಬಾಕ್ಸಿ ಷೇರು ಮೌಲ್ಯ ಸೋಮವಾರ ಮುಂಬೈ ಷೇರುಪೇಟೆಯಲ್ಲಿ ಶೇ 3.12ರಷ್ಟು ಕುಸಿತ ಕಂಡಿದ್ದು ರೂ445ರಲ್ಲಿ ವಹಿವಾಟು ಕೊನೆಗೊಂಡಿದೆ.