ಬುಧವಾರ, ಏಪ್ರಿಲ್ 14, 2021
23 °C

ಸಭೆ ವಿಳಂಬ: ಅನಿಶ್ಚಿತತೆಯಲ್ಲಿ ಅನ್ನದಾತ

ಪ್ರಜಾವಾಣಿ ವಾರ್ತೆ/ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ಬಹುತೇಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿರುವ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ನೀರು ಹರಿಯುವ ಬಗ್ಗೆ ಉಂಟಾಗಿರುವ ಅನಿಶ್ಚಿತತೆಗೆ ಶುಕ್ರವಾರ (ನ.30) ತೆರೆ ಬೀಳಲಿದೆ. ನೀರಾವರಿ ಸಲಹಾ ಸಮಿತಿ ಸಭೆ ಶುಕ್ರವಾರ ಆಲಮಟ್ಟಿಯಲ್ಲಿ ನಡೆಯಲಿದ್ದು, ಬೇಸಿಗೆ ಬೆಳೆಗೆ ನೀರು ಹರಿಸುವ ತೀರ್ಮಾನ ತೆಗೆದುಕೊಳ್ಳಲಿದೆ.ಇದರಿಂದಾಗಿ ಬಹುತೇಕ ರೈತರು ಸಭೆಯತ್ತಲೇ ಗಮನವನ್ನು ಕೇಂದ್ರೀಕರಿಸಿದ್ದು, ಬತ್ತದ ಸಸಿಗಳನ್ನು ನಾಟಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಬಿತ್ತನೆಗೆ ಸಾಕಷ್ಟು ವಿಳಂಬವಾಗಿದ್ದು, ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಈ ಮೊದಲೇ ಕರೆಯಬಾರದಿತ್ತೇ ಎಂಬ ಪ್ರಶ್ನೆ ರೈತರದ್ದಾಗಿದೆ.ಕಳೆದ ವರ್ಷವೂ ಕಾಲುವೆ ನವೀಕರಣಕ್ಕಾಗಿ ಬೇಸಿಗೆ ಬೆಳೆ ಕಳೆದುಕೊಳ್ಳಬೇಕಾಯಿತು. ಈ ವರ್ಷವೂ ಇದುವೆರೆಗೆ ಅನಿಶ್ಚಿತತೆಯಲ್ಲಿಯೇ ಕಾಲ ದೂಡಬೇಕಾಗಿದೆ. ಬೇಸಿಗೆ ಬೆಳೆಗೆ ಸಮರ್ಪಕ ನೀರು ಸಿಗುವ ನಿರೀಕ್ಷೆಯಿಂದ ಸಾಲ-ಸೋಲ ಮಾಡಿ, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲಾಗಿದೆ. ಇನ್ನು ಕೆಲವು ರೈತರು ಈಗಾಗಲೇ ಬತ್ತದ ಸಸಿಯ ಮಡಿಗಳನ್ನು ಸಿದ್ಧ ಪಡಿಸಿದ್ದು, ಬೇಸಿಗೆ ಸಮಯದಲ್ಲಿ ಸಮರ್ಪಕ ನೀರು ದೊರೆಯದೇ ಇದ್ದರೇ, ಇಷ್ಟೆಲ್ಲ ಸಿದ್ಧತೆಗಳು ವ್ಯರ್ಥವಾಗಲಿವೆ ಎಂದು ರೈತರು ಹೇಳುತ್ತಿದ್ದಾರೆ.ಪ್ರತಿ ಬಾರಿಯೂ ರೈತರು ಬಿತ್ತನೆಗೂ ಕಾಯಬೇಕು. ಬೆಳೆ ಬೆಳೆಯುವವರೆಗೆ ನೀರು ಹರಿಯತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಆತಂಕದಲ್ಲಿಯೇ ಕಾಲ ಕಳೆಯಬೇಕು. ಬೆಳೆ ಕೈಗೆ ಬಂದಾಗಲೂ ಸೂಕ್ತ ಬೆಲೆ ಸಿಗುತ್ತದೆಯೋ ಇಲ್ಲವೋ ಎಂಬ ಚಿಂತೆಯಲ್ಲಿ ಮುಳುಗುವ ಸ್ಥಿತಿ ರೈತರದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಬೆನ್ನೆಲೆಬು ಎನ್ನುವ ಹೇಳಿಕೆಗಳು ಕೇವಲ ಬಾಯಿಮಾತಿನಲ್ಲಿ ಮಾತ್ರ ಉಳಿಯುತ್ತಿದ್ದು, ನಿಜವಾಗಿಯೂ ರೈತರ ಬವಣೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಅವರ ಆಕ್ರೋಶ.ರೈತರು ಈಗಾಗಲೇ ಬಹುತೇಕ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅವರ ಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ. ಶುಕ್ರವಾರ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಏನು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಆತಂಕ ರೈತರನ್ನು ಆವರಿಸಿದೆ. ಇಂತಹ ವಾತಾವರಣದಲ್ಲಿ ರೈತರು ಜೀವನ ಸಾಗಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ.ಶಾಸಕರಿಗಿಲ್ಲ ಸದಸ್ಯತ್ವ:

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನೀರಾವರಿ ಸಲಹಾ ಸಮಿತಿಯಲ್ಲಿ ಶಾಸಕರಿಗೆ ಸದಸ್ಯತ್ವ ರದ್ದುಪಡಿಸಲಾಗಿದೆ. ಕೇವಲ ರೈತ ಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ ನೀರಾವರಿ ಸಲಹಾ ಸಮಿತಿಯಿಂದ ರೈತರ ಬವಣೆಯನ್ನು ನಿವಾರಿಸಲು ಸಾಧ್ಯವೇ ಇಲ್ಲ ಎನ್ನುವುದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಶಂಕ್ರಣ್ಣ ವಣಿಕ್ಯಾಳ ಅಭಿಪ್ರಾಯ.ಮೊದಲಿನಿಂದಲೂ ನೀರಾವರಿಗೆ ಒಳಪಡುವ ಕ್ಷೇತ್ರ ವ್ಯಾಪ್ತಿಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಿಗೆ ಸಲಹಾ ಸಮಿತಿ ಸಭೆಯ ಸದಸ್ಯತ್ವ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕರಿಗೆ ಸದಸ್ಯತ್ವ ನೀಡಲಾಗಿಲ್ಲ. ಆಯಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರು, ಸಂಸದರು ಅಲ್ಲಿನ ಜನರ ನೋವುಗಳನ್ನು ಬಲ್ಲವರಾಗಿದ್ದು, ಅವರಿಗೇ ಸದಸ್ಯತ್ವ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸುತ್ತಾರೆ.ರೈತರ ಬಗ್ಗೆ ಜನಪ್ರತಿನಿಧಿಗಳಿಗೂ ನಿಜವಾದ ಕಳಕಳಿ ಇದ್ದಲ್ಲಿ, ಸಲಹಾ ಸಮಿತಿ ಸದಸ್ಯತ್ವ ನೀಡುವಂತೆ ಒತ್ತಾಯಿಸುತ್ತಿದ್ದರು. ಅಂತಹ ಯಾವುದೇ ಪ್ರಯತ್ನವನ್ನು ಇದುವರೆಗೆ ಮಾಡದೇ ಇರುವುದು ದುರದೃಷ್ಟಕರ. ನಾರಾಯಣಪುರ ಜಲಾಶಯ ಇರುವ ಯಾದಗಿರಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಲಹಾ ಸಮಿತಿ ಸದಸ್ಯತ್ವ ಇಲ್ಲದೇ ಇರುವುದು ಸರಿಯಲ್ಲ ಎಂದು ಹೇಳುತ್ತಾರೆ.ಕಣ್ಣೀರು ಗತಿ:

ಇದು ಕಾಲುವೆಯ ಮೇಲ್ಭಾಗದ ರೈತರ ಸ್ಥಿತಿಯಾದರೆ, ಕಾಲುವೆಯ ಕೊನೆಯ ಭಾಗದ ರೈತರ ಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಮೇಲ್ಭಾಗದ ರೈತರಿಗೆ ನೀರು ದೊರೆತರೂ, ಕೊನೆಯ ಭಾಗದ ರೈತರಿಗೆ ಮಾತ್ರ ಕಣ್ಣೀರೇ ಗತಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.ಕಾಲುವೆಯ ಕೊನೆಯ ಭಾಗದಲ್ಲಿರುವ ಶಹಾಪುರ ತಾಲ್ಲೂಕಿನ ವಡಗೇರಾ ಭಾಗದ ರೈತರು, ಇದುವರೆಗೆ ಸಮರ್ಪಕವಾಗಿ ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಕಾಲುವೆಯಲ್ಲಿ ಹರಿಯುವ ನೀರೂ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಪ್ರತಿ ವರ್ಷ ಬೆಳೆಗೆ ನೀರು ಕೊಡುವಂತೆ ಕೊನೆಯ ಭಾಗದ ರೈತರು ಪ್ರತಿಭಟನೆಗೆ ಇಳಿಯುವುದು ಅನಿವಾರ್ಯವಾಗುತ್ತಿದೆ ಎನ್ನುತ್ತಾರೆ ನೇತಾಜಿ ಯುವ ಸೇನೆ ಅಧ್ಯಕ್ಷ ನಿಂಗು ಜಡಿ.ಈ ಭಾಗದ ಕಾಲುವೆಗಳು ಹದಗೆಟ್ಟು ವರ್ಷಗಳೇ ಕಳೆದರೂ ಯಾರೊಬ್ಬರೂ ಕೇಳುತ್ತಿಲ್ಲ. ಇಲ್ಲಿನ ರೈತರು ಬಿತ್ತನೆ ಮಾಡಿದ ಬೆಳೆಗಳನ್ನು ಉಳಿಸಿಕೊಳ್ಳುವುದು ದುಸ್ತರವಾಗಿದೆ.

ಜಿಲ್ಲೆಯ ಜೀವನಾಡಿಯಾಗಿರುವ ನಾರಾಯಣಪುರ ಜಲಾಶಯದಿಂದ ಜೀವನ ಮಟ್ಟ ಸುಧಾರಣೆ ಆಗಲಿದೆ ಎಂಬ ನಿರೀಕ್ಷೆ ಸುಳ್ಳಾಗುತ್ತಿದೆ. ಜಲಾಶಯ ಇದ್ದೂ ಇಲ್ಲದಂತಾಗಿದೆ ಎಂದು ರೈತರು ಅಲವತ್ತುಕೊಳ್ಳುವಂತಾಗಿದೆ. ಈ ಬಗ್ಗೆ ನೀರಾವರಿ ಸಚಿವರಿಗೂ ಕಾಳಜಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಜನಪ್ರತಿನಿಧಿಗಳ ಕಡೆಗಣನೆ: ದರ್ಶನಾಪುರ

ಕೆಂಭಾವಿ: ಬಿಜೆಪಿ ಸರ್ಕಾರ ಬಂದ ನಂತರ ನೀರಾವರಿ ಸಲಹಾ ಸಮಿತಿಯಯಲ್ಲಿದ್ದ ಎಲ್ಲ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಸಮಿತಿಯಿಂದ ಕೈಬಿಡಲಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.ಈ ಹಿಂದೆ ಯಾವ ಸರ್ಕಾರಗಳಿದ್ದಾಗಲೂ ಈ ರೀತಿ ಮಾಡಿರಲಿಲ್ಲ. ನೀರಾವರಿ ಪ್ರದೇಶದ ಎಲ್ಲ ಶಾಸಕರು, ಸಂಸದರನ್ನು ನೀರಾವರಿ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದವು. ಸಲಹಾ ಸಮಿತಿಯಿಂದ ತೆಗೆದ ಬಗ್ಗೆ ಕಾರಣ ಕೊಡುವಂತೆ ಸರ್ಕಾರವನ್ನು ಹಲವಾರು ಬಾರಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಸಮರ್ಥ ಉತ್ತರ ಕೊಡಲು ಸರ್ಕಾರದಲ್ಲಿ ಯಾರೂ ಇಲ್ಲ. ಜನಪ್ರತಿನಿಧಿಗಳನ್ನು ಕಡೆಗಣಿಸಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.