ಮಂಗಳವಾರ, ಮೇ 24, 2022
31 °C

ಸಮಯ: ಬಳಸುವ ಮುನ್ನ ಉಳಿಸಿ

ಸತ್ಯೇಶ್ ಎನ್. ಬೆಳ್ಳೂರ್ Updated:

ಅಕ್ಷರ ಗಾತ್ರ : | |

ಸಮಯ: ಬಳಸುವ ಮುನ್ನ ಉಳಿಸಿ

ಉಳಿಸಿಬಿಟ್ಟರೆ ಮರವ ಕಡಿಯದೆಯೆ,ಕೆಡವದೆಯೆ /

ಬೆಳೆಸಬೇಕೇಕೆ ನಾವ್ ಮರಗಳನು ಹೊಸತು? //

ಬಳಸಬೇಕೆನ್ನುತ್ತಿರೆ ಸಮಯವನು ಬಹುವಿಧದಿ /

ಉಳಿಸಿನಿತು ಮೂಲದೊಳೆ! //

                       - ನವ್ಯಜೀವಿ

`ದಿನಕ್ಕೊಂದು ಪ್ರೀತಿ ಮಾತು~ ಎಂಬ ನನ್ನ ಒಂದು ಪುಸ್ತಕದಲ್ಲಿ `ಪ್ರೀತಿಸುವುದಕ್ಕೆ ಸಮಯವಿಲ್ಲವೆಂದರೆ - ಸಮಯವಿದೆ. ಪ್ರೀತಿ ಇಲ್ಲವೆಂದೇ ಅರ್ಥ!~ ಎಂದು ಬರೆದ ಸಾಲುಗಳು ಈಗೇಕೋ ನನಗೆ ಮತ್ತೆ ನೆನಪಾಗುತ್ತಿವೆ.

 

ಇದು ಎಲ್ಲರ ಜೀವನದಲ್ಲೂ ಅಕ್ಷರಶಃ ಸತ್ಯವಾದ ಮಾತು. ಮದುವೆಯ ಮುಂಚಿನ ದಿನಗಳಲ್ಲಿ ಹೆಂಡತಿಯನ್ನು ಪ್ರೀತಿಸುವುದಕ್ಕೆ ಅದೆಷ್ಟು ಸಮಯವಿರುತ್ತದೆ. ಹಲವು ವರ್ಷಗಳ ನಂತರ ನಮ್ಮ ದಿನನಿತ್ಯದ ಬದುಕಿನಲ್ಲಿ ಗಮನೀಯ ಬದಲಾವಣೆ ಇಲ್ಲದಿದ್ದರೂ ಹೆಂಡತಿಗೆ ಒಂದೆರಡು ಪ್ರೀತಿಯ ಮಾತುಗಳನ್ನಾಡಲೂ ಪುರುಸೊತ್ತು ಇರುವುದಿಲ್ಲ. ಇದು ಪ್ರೀತಿಯ ಸ್ವಭಾವವೋ ಅಥವಾ ಸಮಯದ ಅಭಾವವೋ ನೀವೇ ಗುರುತಿಸಿಕೊಳ್ಳಿ.ಇತ್ತೀಚಿನ ದಿನಗಳ ಚಲನಚಿತ್ರದ `ಎಲ್ನೋಡಿ ಕಾರ್~ ಎಂಬ ಹಾಡೊಂದು ಪಾಶ್ಚಾತ್ಯ ದೇಶಗಳಲ್ಲಿ ಅವರ ಜೀವನದ ಬಹುತೇಕ ಕೆಲಸಗಳು ಅವರ ಕಾರುಗಳಲ್ಲೇ ಹೇಗೆ ಜರುಗುತ್ತವೆ ಎಂಬ ಅಂಶವನ್ನು ರಸವತ್ತಾಗಿ ಬಿಂಬಿಸಿತ್ತು.

 

`ಪಾರ್ಕಿಂಗ್‌ನಲ್ಲೆ ಪ್ರೀತಿ ಮಾಡ್ತಾರೋ ....~ ಎಂಬ ಸಾಲನ್ನು ಕೇಳುವಾಗ `ಇವರಿಗೆ ಪಾರ್ಕಿಂಗ್‌ನಲ್ಲೂ ಪ್ರೀತಿ ಮಾಡುವಷ್ಟು ಪ್ರೀತಿ ಹೆಚ್ಚಿದೆಯೋ ಅಥವಾ ಕಾರಿನಿಂದ ಹೊರಗಿನ ಪ್ರಪಂಚದಲ್ಲಿ ಪ್ರೀತಿ ಮಾಡುವುದಕ್ಕೆ ಸಮಯವೇ ಕಡಿಮೆ ಇದೆಯೋ~ ಎಂದು ಯೋಚಿಸುತ್ತಿದ್ದೆ. `ಪ್ರೀತಿ ಎಲ್ಲರಲ್ಲೂ ಇದೆ. ಆದರೆ ಅದಕ್ಕೆ ಸಮಯವಿಲ್ಲವಾಗಿದೆ~ ಎಂಬ ಉತ್ತರವೇ ಸ್ಪಷ್ಟವಾಗಿತ್ತು.`ಸಮಯ ಇಲ್ಲವಾಗಿದೆ~ ಎನ್ನುವುದಾದರೆ ದಿನದಲ್ಲಿನ ಇಪ್ಪತ್ನಾಲ್ಕು ತಾಸುಗಳು ಕ್ಷೀಣಿಸಿರಬೇಕು. ಅದಾಗಿಲ್ಲ. ನಮಗೆ ಬುದ್ಧಿ ಬಂದಾಗಿನಿಂದ ದಿನಕ್ಕೆ ಅಷ್ಟೇ ತಾಸುಗಳು. ಹಾಗಾದರೆ `ಕೆಲಸವೇ ಈಗ ಎಲ್ಲವಾಗಿದೆ~ ಎನ್ನಬಹುದು. ಈ ದಿನಗಳ ಪರಾಮರ್ಶೆಗೆ ಅದೇ ಸೂಕ್ತ ಉತ್ತರ ಕೂಡ.ಎಲ್ಲರ ಜೀವನದಲ್ಲೂ ಕೆಲಸಗಳು ಹೆಚ್ಚುತ್ತಿವೆ. ಜೊತೆಗೆ ನಮ್ಮ ಪೂರ್ವಜರು ಮಾಡುತ್ತಿದ್ದ ಅದೇ ಕೆಲಸಗಳೂ ಈಗ ದೀರ್ಘವಾಗುತ್ತಿವೆ. ಸಂಕೀರ್ಣಗೊಳ್ಳುತ್ತಿವೆ. ಮನೆಯಿಂದ ಆಫೀಸಿಗೆ ಹೋಗಿ ಬರುವ ದೂರ ಕಡಿಮೆಯಾಗದಿದ್ದರೂ ರಸ್ತೆಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ನಿಂದಾಗಿ ಅದಕ್ಕೆ ತೆಗೆದುಕೊಳ್ಳುವ ಸಮಯ ದಿನೇ ದಿನೇ ಹೆಚ್ಚುತ್ತಿದೆ.ರೆಸ್ಟೋರೆಂಟ್‌ನಲ್ಲಿ ಕುಳಿತು ಉಣ್ಣುವ ಸಮಯಕ್ಕಿಂತ ಅಲ್ಲಿನ ಟೇಬಲ್ಲಿಗಾಗಿ ಹೊರಗಡೆ ಕಾಯುತ್ತ ಕೂರುವ ಸಮಯವೇ ಅಧಿಕವಾಗುತ್ತಿದೆ. ಒಂದು ಕೆಲಸವನ್ನು ಮುಗಿಸುವ ಹೊತ್ತಿಗೆ ಸರದಿ ಸಾಲಿನಲ್ಲಿ ಕೆಲಸಗಳನೇಕ ಮನಸ್ಸಿನ ಬಾಗಿಲನ್ನು ತಟ್ಟುತ್ತಿರುತ್ತವೆ. `ನಾದ ಮಯ, ಈ ಲೋಕವೆಲ್ಲ~ ಎಂಬ ಹಾಡು ಹಳೆಯದಾಗಿ `ಜೀತಮಯ, ಈ ಲೋಕವೆಲ್ಲ!~ ಎಂಬುದೇ ಪ್ರಸ್ತುತಕ್ಕೆ ಒಪ್ಪುವ ಸಾಹಿತ್ಯವಾಗಿರುವುದು ಈ ಶತಮಾನದ ಒಂದು ದೊಡ್ಡ ವಿಪರ್ಯಾಸವೇ ಸರಿ.ದಿನದ ಎಂಟು ತಾಸುಗಳನ್ನು ನಿದ್ದೆಯಲ್ಲಿ ಕಳೆದು ಇನ್ನೆಂಟು ತಾಸುಗಳನ್ನು ಸ್ವಂತಕ್ಕೆ ಬಳಸಿದರೆ, ಇನ್ನುಳಿದ ಎಂಟನ್ನು ಕಚೇರಿಯ ಕೆಲಸದಲ್ಲಿ ತೊಡಗಿಸಿಕೊಂಡು ಸಂತೃಪ್ತಿಯ ಜೀವನ ನಡೆಸಬಹುದೆಂಬುದು ಬಹಳ ಐಡಿಯಲ್ ಸನ್ನಿವೇಶ.

 

ಆದರೆ ಕಾರಣವೇನೇ ಇರಲಿ, ದಿನದ ಇಪ್ಪತ್ನಾಲ್ಕು ತಾಸುಗಳು ಯಾವುದಕ್ಕೂ ಸಾಲುತ್ತಿಲ್ಲ ಎಂಬುದೇ ಬಹುತೇಕ ಎಲ್ಲರ ಆತಂಕ. ಕೆಲಸದ ಎಂಟು ತಾಸುಗಳು ಉದ್ದವಾಗುತ್ತ. ಸಂಕೀರ್ಣಗೊಳ್ಳುತ್ತ, ಬಡಪಟ್ಟಿಗೆ ಮುಗಿಯದ ಧಾರಾವಾಹಿಗಳಾಗುತ್ತಿರುವುದರಿಂದ ಈ ಎಲ್ಲರಿಗೂ ನಿದ್ದೆ ಕಡಿಮೆಯಾಗಿ ಸ್ವಂತ ಜೀವನದ ಸಿಹಿ ಸನ್ನಿವೇಶಗಳು ಕರಗುತ್ತವೆ. ಎಡವಟ್ಟಾಗಿರುವುದು ಇಲ್ಲಿಯೇ!ಹೀಗಾದರೆ ಕೆಲಸದ ಸಮಯವನ್ನು ಹಿಂದಿನಂತೆಯೇ ಎಂಟು ತಾಸುಗಳಿಗೆ ಸೀಮಿತಗೊಳಿಸಿಕೊಳ್ಳಬಹುದೆ? ಎಲ್ಲರಿಗೂ ಇದರ ಬಗ್ಗೆ ಕಾಳಜಿ ಇದ್ದರೂ ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ವೃತ್ತಿರಂಗದಲ್ಲೂ ಸಾಧ್ಯವಾಗದು ಎಂಬುದೇ ವಾಸ್ತವ. ಆದ್ದರಿಂದ ಮಾಡುವ ಯಾವುದೇ ಕೆಲಸವನ್ನೂ ಕೈಬಿಡದೆ, ಬದಲಾಗಿ ಅದಕ್ಕಾಗುವ ಸಮಯವನ್ನು ಕಡಿಮೆ ಮಾಡಿಕೊಳ್ಳುವುದೇ ನಮಗಿರುವ ಮಾರ್ಗ. ಆ ದಿಸೆಯಲ್ಲಿ ಪ್ರಯತ್ನಿಸುವುದೇ ಸೂಕ್ತವಾದೀತು.ಪ್ರಾಮಾಣಿಕವಾಗಿ ಚಿಂತಿಸಿ. ನಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಕ್ರಿಯೆಗಳನ್ನು ಮುಗಿಸಿದ ನಂತರವೂ ನಮಗೆ ಸಾಕಷ್ಟು ಸಮಯ ಇದ್ದೇ ಇರುತ್ತದೆ. ಕಚೇರಿಯಲ್ಲಿ ನಾವು ಪ್ರತಿ ನಿಮಿಷವೂ ಕೆಲಸದಲ್ಲೇ ಮಗ್ನರಾಗಿರುವುದಿಲ್ಲ.ಯಾವುದೋ ಕೆಲಸವೊಂದು ನಿರೀಕ್ಷೆಗಿಂತಲೂ ಬೇಗ ಮುಗಿದಾಗಲೇ ಅಥವಾ ಆ ಕೆಲಸ ಆ ದಿನಕ್ಕೆ ರದ್ದಾದಾಗಲೋ ನಮಗೊದಗುವ ಸಮಯವನ್ನೇ `ಬಿಡವು~ ಎನ್ನೋಣ. ಈ ಬಿಡುವಿನ ವೇಳೆಯಲ್ಲಿ ಕಾಫಿ ಹೀರುತ್ತಾ ಸಹೋದ್ಯೋಗಿಗಳ ಜೊತೆ ಕೆಲಸಕ್ಕೆ ಬಾರದ ವಿಷಯಗಳ ಕುರಿತು ಹರಟುವ ಬದಲು ಟೇಬಲ್ ಮೇಲೆ ಬೆಳೆಯುತ್ತಿರುವ ಹಿಂದಿನ ದಿನಗಳ ಫೈಲುಗಳನ್ನು ವಿಲೇವಾರಿ ಮಾಡಿಬಿಟ್ಟರೆ ಅಷ್ಟರಮಟ್ಟಿಗೆ ನಾವು ಸಮಯದ ನಿರ್ವಹಣೆಯಲ್ಲಿ ಗೆದ್ದಂತೆಯೇ ಸರಿ.ಮನೆಗೆ ಬರುತ್ತೇವೆ. ನಮ್ಮ ಧ್ಯಾನ, ಮನರಂಜನೆ, ಆಟ - ಊಟಗಳ ನಡುವೆಯೂ ನಮಗೆ ಖಂಡಿತ ಸ್ವಲ್ಪ ಸಮಯ ಸಿಕ್ಕೆ ಸಿಗುತ್ತದೆ. ಆ ಸಮಯವನ್ನೇ `ಪುರಸತ್ತು~ ಎನ್ನೋಣ. ಈ ಪುರಸತ್ತಿನಲ್ಲಿ ಏನು ಮಾಡುವುದೆಂದು ತೋಚದೆ ಸಲ್ಲದ ಟಿ.ವಿ. ಕಾರ್ಯಕ್ರಮವೊಂದರ ಹುಡುಕಾಟದಲ್ಲಿ ರಿಮೋಟಿನಲ್ಲಿ ಬಂದಿಯಾಗಿರುವುದಕ್ಕಿಂತ, ಅನಾರೋಗ್ಯದಿಂದ ಬಳಲುತ್ತಿರುವ ಗೆಳೆಯನಿಗೆ ಕರೆ ಮಾಡಿ ಅವನಲ್ಲಿ ಆತ್ಮ ವಿಶ್ವಾಸವನ್ನು ತುಂಬಿಬಿಟ್ಟರೆ ಅಷ್ಟರ ಮಟ್ಟಿಗೆ ಸಮಯದ ಸದುಪಯೋಗದಲ್ಲಿ ನಾವು ಮುಂದುವರೆಯುವುದೇ ದಿಟ.ಕಚೇರಿಯ ಕೆಲಸಗಳ ನಡುವೆ ದಿನದಲ್ಲಿ ಒಂದಿಷ್ಟು ಬಿಡುವು ಹಾಗೂ ನಮ್ಮ ಸ್ವಂತದ ಕ್ರಿಯೆಗಳ ನಡುವೆ ದಿನದಲ್ಲಿ ಒಂದಿಷ್ಟು ಪುರಸತ್ತು, ಇವೆರಡೂ ನಮಗೆ ಯಾವುದೇ ವಿಶೇಷ ಪ್ರಯತ್ನವಿಲ್ಲದೆ ದಕ್ಕಿರುತ್ತದೆ. ಇದು ನಮ್ಮೆಲ್ಲರಿಗೂ ಅನ್ವಯ. ಹಾಗೂ ನಮ್ಮೆಲ್ಲರಿಗೂ ಗೊತ್ತಿರುವ ಸತ್ಯ. ಆದ್ದರಿಂದ ಇಲ್ಲಿ ನಾವು ಆ ಸಮಯವನ್ನು ಯಾವುದಕ್ಕೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯವಾದ ಅಂಶ.ಬಿಡುವಿದ್ದಾಗ ಯಾವ ಕೆಲಸವನ್ನು ಮಾಡುವುದರಿಂದ ಯಶಸ್ಸು ಸಾಧ್ಯವೊ ಅಥವಾ ಪುರಸತ್ತಿದ್ದಾಗ ಯಾವ ಕಾರ್ಯವನ್ನು ಮಾಡುವುದರಿಂದ ಸುಖ ಲಭ್ಯವೋ ಅವುಗಳನ್ನು ತುರ್ತಾಗಿ ಆ ಸಮಯದಲ್ಲಿ ಮಾಡಿಬಿಟ್ಟರೆ, ಸಮಯದ ಅಭಾವ ನಮ್ಮ ಬೋರ್ಡ್‌ರೂಮಿನ ಸುತ್ತಮುತ್ತಲಿನ ಮಂದಿಗೆ ಅಷ್ಟರಮಟ್ಟಿಗೆ ತೊಂದರೆ ಕೊಡದು.ಇನ್ನು ನಿದ್ದೆಯ ವಿಚಾರ. ಇದರ ಎಂಟು ತಾಸುಗಳಲ್ಲಿ ಯಾವುದೇ ರಾಜಿ ಬೇಡ. ಮೇಲಿನ ಹದಿನಾರು ತಾಸುಗಳನ್ನು ಹಾಗೂ ಅವುಗಳ ನಡುವೆ ದೊರೆಯುವ ಬಿಡುವು - ಪುರಸತ್ತುಗಳನ್ನು ದೇವರು ಮೈ ಮೇಲೆ ಬಂದ ಹಾಗೆ ಏಕಚಿತ್ತದಿಂದ ಸಕಾರಾತ್ಮಕವಾದ ಕೆಲಸ ಕಾರ್ಯಗಳಲ್ಲೇ ತೊಡಗಿಸಿಕೊಂಡರೆ, ನಿದ್ದೆಯ ಎಂಟು ತಾಸುಗಳನ್ನು ಸುಖ ನಿದ್ದೆಯಲ್ಲೇ ಕಳೆಯ ಬಹುದು!ಈ ದಿನಗಳಲ್ಲಿ ನಮ್ಮ ಬದುಕಿನ ಬಹಳ ಸಮಯವನ್ನು ನಾವು ಕಾಯುವುದರಲ್ಲೇ ಕಳೆಯುತ್ತೇವೆ. ಯಾವುದೇ ಕ್ರಿಯೆಯಲ್ಲಿ ಭಾಗವಹಿಸದಿದ್ದರೂ ನಮ್ಮರಿವಿಗೆ ಬರದೆಯೇ ಕಾಲಹರಣವಾಗಿ ಬಿಟ್ಟಿರುತ್ತದೆ. ಬಸ್ಸಿನಲ್ಲಿ ಜಾಗ ಸಿಕ್ಕಿ ಆಸೀನರಾದಾಗ, ಪಾರ್ಕಿನಲ್ಲಿ ಪ್ರೇಯಸಿಯನ್ನು ಕಾದು ಕುಳಿತಾಗ, ಏರ್‌ಪೋರ್ಟಿನಲ್ಲಿ ವಿಮಾನ ತಡವಾದಾಗ, ದೇವಸ್ತಾನದಲ್ಲಿ ನಿರಂತರವಾಗಿ ಪೂಜೆ ಸಾಗಿದ್ದಾಗ ಹೀಗೆ ಅನೇಕ ಸನ್ನಿವೇಶಗಳಲ್ಲಿ ನಮ್ಮನ್ನೇ ನಾವು ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳದೆ ಇದ್ದು ಬಿಡುತ್ತೇವೆ.

 

ಆ ವೇಳೆಯನ್ನು ಓದಬೇಕೆಂದು ಬಹಳ ದಿನಗಳಿಂದ ಎತ್ತಿಟ್ಟುಕೊಂಡಿರುವ ಪುಸ್ತಕವನ್ನು ಓದುವುದರಿಂದ ಅಥವಾ ಉತ್ತರಿಸದೆ ಹಾಗೆಯೇ ಪೇರಿಸಿಟ್ಟುಕೊಂಡಿರುವ ಇ-ಮೇಲ್‌ಗಳಿಗೆ ಉತ್ತರಿಸುವುದರಿಂದ ವ್ಯಯ ಮಾಡುವುದರಿಂದ, ಇವುಗಳಿಗೆಂದೇ, ಮತ್ತೆ ಸಮಯವನ್ನು ಹೊಂಚುಹಾಕುವ ಸಂಚಿನಿಂದ ದೂರ ಉಳಿದಂತಾಗುತ್ತದೆ.ಐದು ವರ್ಷಗಳ ಹಿಂದಿನ ಮಾತು, ಏನಾದರೂ ಬರೆಯಬೇಕೆಂಬ ತುಡಿತ ನನ್ನಲ್ಲುಂಟಾಯಿತು. ಆದರೆ, ಅದಕ್ಕೆ ಕಿಂಚಿತ್ತೂ ಸಮಯವಿಲ್ಲ. ಮನೆಯಿಂದ ಕಚೇರಿಗೆ ಮುಕ್ಕಾಲು ತಾಸಿನ ಪಯಣ. ಹೋಗಿ ಬರುವುದಕ್ಕೆ ಒಂದೂವರೆ ತಾಸಾದರೂ ಬೇಕು. ಕಾರಿಗೆ ಡ್ರೈವರ್ ಇದ್ದಾನೆ. ಹಿಂದಿನ ಸೀಟಿನಲ್ಲಿ ಕುಳಿತು ರೇಡಿಯೋ ಕೇಳುತ್ತಾ ಸಮಯ ಹಾಳು ಮಾಡುವ ಬದಲು ಪುಸ್ತಕ ತೆರೆದು ಬರೆಯಲಾರಂಭಿಸಿದೆ.ನನ್ನ ಮೊದಲ ಮೂರು ಪುಸ್ತಕಗಳನ್ನು ಒಂದೇ ವರ್ಷದಲ್ಲಿ ನಾನು ಬರೆದು ಮುಗಿಸಿದ್ದು ಕಾರಿನಲ್ಲಿ ಕುಳಿತಿದ್ದಾಗಲೇ ಎಂಬುದು ನನಗೆ ಅತ್ಯಂತ ಸಂತಸದ ವಿಷಯ. ನಂತರದ ನನ್ನೆಲ್ಲ ಬರವಣಿಗೆಯನ್ನೂ ನಾನು ಮಾಡುತ್ತ ಬಂದಿರುವುದು ವಿಮಾನ ನಿಲ್ದಾಣಗಳಲ್ಲಿ ಅಥವಾ ವಿಮಾನಗಳ ಪ್ರಯಾಣದಲ್ಲಿ ಸಮಯದ ನಿರ್ವಹಣೆಯಲ್ಲಿ. ಈ ಒಂದು ಸನ್ನಿವೇಶದಲ್ಲಂತೂ ಗೆದ್ದೀದೆನೆಂಬ ಪೂರ್ಣ ತೃಪ್ತಿ ನನಗಿದೆ.ಸಮಯದ ನಿರ್ವಹಣೆಯಲ್ಲಿ ಇನ್ನೆರಡು ಸುಲಭೋಪಾಯಗಳನ್ನು ಬಲ್ಲವರು ಅರುಹಿದ್ದಾರೆ. ಮೊದಲನೆಯದು, ನಮ್ಮ ದಿನದ ಎಲ್ಲ ಕೆಲಸಗಳನ್ನು ಒಂದು ಹಾಳೆಯಲ್ಲಿ ಬರೆದಿಡುವುದು.ಮನಸ್ಸಿನಲ್ಲಿ ಇವುಗಳನ್ನು ನೆನಪಿಟ್ಟುಕೊಳ್ಳುವುದಕ್ಕಿಂತ ಒಂದು ಚೀಟಿಯಲ್ಲಿ ಇವುಗಳನ್ನು ಪಟ್ಟಿ ಮಾಡಿ ಕಣ್ಣಿಗೆ ಕಾಣುವ ಹಾಗೆ ಇಟ್ಟುಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಏಕೆಂದರೆ ಅದರಲ್ಲಿನ ಪ್ರತಿ ಕೆಲಸವನ್ನು ಪೂರೈಸಿದಾಗಲೂ ಅದನ್ನು ಅಳಿಸುವಾಗ ಅಥವಾ ಆಯಿತೆಂದು ಗೀಟುವಾಗ ಉಳಿದ ಕೆಲಸಗಳನ್ನೂ ಮಾಡಿ ಮುಗಿಸಬೇಕೆಂಬ ಛಲ ಸ್ವಪ್ರಯತ್ನವಿಲ್ಲದೆ ಮೂಡಿಬಿಡುತ್ತದೆ. ಆ ಕ್ಷಣಕ್ಕೆ ಏನನ್ನೋ ಸಾಧಿಸಿದ ತೃಪ್ತಿ ಉಂಟಾಗುತ್ತದೆ.ಎರಡನೆಯದು ನಾವು ಎತ್ತಿಕೊಳ್ಳುವ ಪ್ರತಿಯೊಂದು ಕೆಲಸಕ್ಕೂ ಮೊದಲಲ್ಲೇ ನಿರ್ದಿಷ್ಟವಾದ ಸಮಯವನ್ನು ನಿಗದಿ ಪಡಿಸುವುದು. ಆ ಸಮಯಾವಕಾಶದಲ್ಲೇ ಆ ಕೆಲಸವನ್ನು ತೃಪ್ತಿಕರವಾಗಿ ಮುಗಿಸಿದರೆ ನಮಗೆ ಬಿಡುವು ಅಧಿಕವಾಗಿರುತ್ತದೆ ಎಂಬ ತಿಳಿವೇ ಆ ಕೆಲಸದಲ್ಲಿ ಸಕಾರಾತ್ಮಕವಾಗಿ ತೊಡಗುವುದಕ್ಕೆ ಪ್ರೇರಣೆಯೂ ಆಗುತ್ತದೆ. ಇವೆಲ್ಲಕ್ಕೂ ಮೂಲದಲ್ಲಿ ಒಂದು ಮೂಲಮಂತ್ರವಿದೆ! ನಾವು `ಸಮಯ~ ಎಂಬುವುದನ್ನು ಮೊದಲಲ್ಲೇ `ಹಣ~ ಎಂಬುದಾಗಿ ಅರ್ಥೈಸಿ ಒಪ್ಪಿ ಬಿಡಬೇಕು. ಆ ವಿಚಾರವನ್ನು ಸಂಪೂರ್ಣ ನಂಬಬೇಕು.`ಸಮಯ = ಹಣ~ ಎಂಬ ಗಣಿತದ ಸೂತ್ರ ನಮ್ಮದಾಗಬೇಕು. ಆಗ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸಮಯವನ್ನು ಉಳಿಸಿಕೊಳ್ಳಲೂ ಬೇಕೆಂಬ ಪ್ರಜ್ಞೆ ನಮ್ಮದಾಗುತ್ತದೆ. ಉಳಿಸಿಟ್ಟ ಹಣ ಸಕಾಲದಲ್ಲಿ ನೆರವಾಗುವಂತೆ ಉಳಿಸಿಟ್ಟ ಸಮಯ ಇನ್ನೂ ಹೆಚ್ಚು ಹೆಚ್ಚು ಕೆಲಸಗಳನ್ನು ಪೂರೈಸುವಲ್ಲಿ ಸಹಾಯಕವಾಗುತ್ತದೆ.ಸಮಯದ ನಿರ್ವಹಣೆ ಕುರಿತು ಅನೇಕರು ಬರೆದಿದ್ದಾರೆ. ಅವರವರ ಅನುಭವಗಳನ್ನು ತಿಳಿಸಿದ್ದಾರೆ. ನಿಮ್ಮದೇ ಕಾರ್ಯ ಶೈಲಿಗೆ, ನಿಮ್ಮದೇ ವೈಯಕ್ತಿಕ ಜೀವನದ ಬೇಕು - ಬೇಡಗಳ ಚೌಕಟ್ಟಿನಲ್ಲಿ ನಿಮಗೆ ಹಿತವೆನಿಸುವ ವಿಧಾನವೊಂದನ್ನು ನೀವು ರೂಪಿಸಿಕೊಳ್ಳಬೇಕು. ಅದನ್ನು ಶಿಸ್ತಿನಿಂದ ಪಾಲಿಸಿಕೊಂಡು ಬಂದರೆ `ವೇಳೆ ಎಂದಿಗೂ ನಿಮ್ಮಲ್ಲಿ ತನ್ನ ಬೇಳೆ ಬೇಯಿಸಲಾರದು ...

ಲೇಖಕರನ್ನು 

satyesh.bellur@gmail.com

 ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.