ಮಂಗಳವಾರ, ಮೇ 24, 2022
30 °C
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ

ಸಮರ್ಪಕ ಅನುಷ್ಠಾನಕ್ಕೆ ಕಾಯ್ದೆ ರೂಪಿಸಲು ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶೀಘ್ರ ದಲ್ಲೇ ಕಾಯ್ದೆ ರೂಪಿಸಲಾಗುವುದು' ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಾರ್ಯತಂತ್ರ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.`ಆಂಧ್ರ ಪ್ರದೇಶದಲ್ಲಿ ಉಪ ಯೋಜ ನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕಾಯ್ದೆ ರೂಪಿಸಲಾಗುತ್ತಿದೆ. ಈ ಕಾಯ್ದೆಯ ಮಾದರಿಯಲ್ಲಿ ರಾಜ್ಯ ದಲ್ಲೂ ಕಾಯ್ದೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ. ಆಂಧ್ರ ಪ್ರದೇಶ ಸರ್ಕಾರ ಜಾರಿಗೆ ತರಲು ಉದ್ದೇಶಿ ಸಿರುವ ಕಾಯ್ದೆಯ ಕರಡಿನಲ್ಲಿ ಉಪ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಅಧಿಕಾರವಿಲ್ಲ. ಈ ಅಂಶದ ಮೇಲೆ ಹೆಚ್ಚು ಗಮನ ನೀಡಿ, ಯೋಜನೆ ಜಾರಿಯಲ್ಲಿ ವಿಫಲರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಅಂಶಗಳನ್ನು ಕರಡಿನಲ್ಲಿ ಸೇರಿಸಲಾಗುವುದು' ಎಂದರು.`ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷಗಳು ಕಳೆದರೂ ಸರ್ಕಾರದ ಸೌಲಭ್ಯಗಳು ದಲಿತರಿಗೆ ಸಿಗುತ್ತಿಲ್ಲ. ದಲಿತರಿಗಾಗಿ ರೂಪಿಸುವ ಅನೇಕ ಯೋಜನೆಗಳು ದಲಿತರನ್ನು ತಲುಪುತ್ತಿಲ್ಲ. ಯೋಜನೆಗಳ ಹಣ ಕೆಲವರಿಗಷ್ಟೇ ಸಿಗುತ್ತಿದೆ. ದಲಿತರಿಗಾಗಿಯೇ ಇರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿವಿಧ ಯೋಜನೆಗಳ ಹಣ ಆರ್ಥಿಕ ವರ್ಷದ ಅಂತ್ಯ ಸಮೀಪಿಸಿದರೂ ಇಲಾಖೆಯಲ್ಲೇ ಉಳಿದಿರುತ್ತದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.`ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಯೋಜನೆ ಜಾರಿಯ ಬಗ್ಗೆ ಜು. 7 ರಂದು ದಲಿತ ಮುಖಂಡರ ಸಭೆ ನಡೆಸಲಾಗುವುದು' ಎಂದು ತಿಳಿಸಿದರು.ರಾಷ್ಟ್ರೀಯ ಯೋಜನಾ ಆಯೋಗದ ಸದಸ್ಯ ಡಾ.ನರೇಂದ್ರ ಜಾದವ್ ಮಾತನಾಡಿ, `ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ ಜಾರಿಗೆ ಬಂದು 30 ವರ್ಷಕಳೆದರೂ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗದ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ತಾನು ರೂಪಿಸಿದ ಯೋಜನೆಯನ್ನು ಕೇಂದ್ರ ಜಾರಿಗೆ ತರಲು ಸಾಧ್ಯವಾಗದೇ ಇರುವುದು ವೈರುಧ್ಯ' ಎಂದು ವಿಷಾದಿಸಿದರು.`ಉಪ ಯೋಜನೆಯು ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಶಕ್ತಿಯುತ ಅಸ್ತ್ರವಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದರೆ ದಲಿತರ ಸ್ಥಿತಿ ಸುಧಾರಿಸಲು ಸಹಾಯವಾಗುತ್ತದೆ. ಕೇಂದ್ರ  6ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತಂದ ವಿಶೇಷ ಉಪ ಯೋಜನೆಯಲ್ಲಿ ಪರಿಶಿಷ್ಟ ಜಾತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡಿತ್ತು. ಆದರೆ, ಆಂಧ್ರ ರೂಪಿಸಿರುವ ಉಪ ಯೋಜನೆ ಜಾರಿ ಕಾಯ್ದೆಯ ಕರಡಿನಲ್ಲಿ ಪರಿಶಿಷ್ಟ ಪಂಗಡಕ್ಕೂ ಆದ್ಯತೆ ನೀಡಲಾಗಿದೆ' ಎಂದು ಅವರು ಹೇಳಿದರು.ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, `ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರಲ್ಲಿ ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳೇ ಹೆಚ್ಚಾಗಿದ್ದಾರೆ. ದಲಿತರಿಗಾಗಿ ಇರುವ ಸೌಲಭ್ಯಗಳು ಸಮುದಾಯದ ತಳಮಟ್ಟದ ವ್ಯಕ್ತಿಗೂ ಸಿಗುವಂತಾಗಬೇಕು. ದಲಿತರ ಆಶೋತ್ತರಗಳ ಈಡೇರಿಕೆಗಾಗಿ ಬಜೆಟ್‌ಗೂ ಮುನ್ನ ದಲಿತ ಮುಖಂಡರ ಸಭೆ ಕರೆಯಬೇಕೆಂದು ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇನೆ' ಎಂದರು.ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಡಿ.ತಂಗರಾಜ್, `ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ವಿಳಂಬ ಮಾಡುವ, ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರದ ಅಧಿಕಾರಿಗಳ ವಿರುದ್ಧ ದಂಡ ಹಾಕುವ ಕಾಯ್ದೆಯನ್ನು ರೂಪಿಸಬೇಕು' ಎಂದರು.

ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಆಂದೋಲನದ ಸಂಘಟಕ ಪಾಲ್ ದಿವಾಕರ್, ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜಾಫೆಟ್, ಬೆಂಗಳೂರು ವಿವಿ  ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.