ಶುಕ್ರವಾರ, ಫೆಬ್ರವರಿ 26, 2021
28 °C

ಸಮಸ್ಯೆಯಿಂದ ಪಲಾಯನ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆಯಿಂದ ಪಲಾಯನ ಸಲ್ಲ

ಚಿತ್ರದುರ್ಗ: ಬಸವ ಕೇಂದ್ರ ಮತ್ತು ಮುರುಘಾಮಠದ ವತಿಯಿಂದ ಬಸವ ಜಯಂತಿ ಆಚರಣೆ ಶತಮಾನೋತ್ಸವದ ಅಂಗವಾಗಿ ಧಾರ್ಮಿಕರು ಮತ್ತು ಆಧ್ಯಾತ್ಮಿಕ ಸಾಧಕರಿಗಾಗಿ ಚಿಂತನ ಕಾರ್ಯಾಗಾರದ 2ನೇ ದಿನವಾದ ಭಾನುವಾರ ಧಾರ್ಮಿಕ ಮುಖಂಡರ ಮುಂದಿರುವ ಸವಾಲುಗಳು ಮತ್ತು ಪರಿಹಾರ ಕುರಿತಾದ ಚಿಂತನ ಗೋಷ್ಠಿ ನಡೆಯಿತು. ನಾಡಿನ ವಿವಿಧ ಮಠಾಧೀಶರು ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸಿದರು.ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿ ಅಸಮಾನತೆ, ಶೋಷಣೆ, ಜಾತಿ ವ್ಯವಸ್ಥೆ ಜೀವಂತವಿದೆ. ಆ ಬಗ್ಗೆ ಗಂಭೀರ ಚಿಂತನೆಯಾಗಬೇಕು. ಧರ್ಮಗಳ ಸಾರ ಒಂದೆಯಾಗಿದೆ. ಆದರೂ ನಾವು ಅತ್ತ ಮುಖ ಮಾಡಿಲ್ಲ. ಸಮಸ್ಯೆ ಸೃಷ್ಟಿಸುವ ಬದಲು ಪರಿಹಾರವನ್ನು ಸಾರ್ವಜನಿಕ ವಲಯಕ್ಕೆ ಧಾರ್ಮಿಕ ಮುಖಂಡರು ಮುಟ್ಟಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಮೌಢ್ಯತೆ ಎಲ್ಲ ರಂಗ ಪ್ರವೇಶಿಸಿದೆ. ಧಾರ್ಮಿಕರು ಮೌಢ್ಯ ನಿವಾರಿಸಲು ಮುಂದಾಗಬೇಕು ಎಂದರು.

ಮಠಗಳ, ಸ್ವಾಮೀಜಿಗಳ ಬಗ್ಗೆ ಗೌರವವಿದೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಹಂತದಲ್ಲಿ ಸ್ವಾಮಿಗಳು ಸಾಗಬೇಕಿದೆ. ಪರಸ್ಪರ ವಿಚಾರ ವಿನಿಮಯವೂ ಆಗುವಂತಾಗಬೇಕಿದೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಸ್ವಾಮಿಗಳು ಆಮಿಷಕ್ಕೆ ಬಲಿಯಾಗಬಾರದು. ಸಮಾನತೆಯಿಂದ ಗುರಿ ಮುಟ್ಟಲು ಸಾಧ್ಯವಿದೆ. ಸಮಾಜದ ಮುಂದೆ ಸ್ವಾಮಿಗಳಿಗೆ ದೊಡ್ಡ ಸವಾಲು ಇದೆ. ನಮ್ಮ ಆಚರಣೆ ಆದರ್ಶವಾಗಿರಬೇಕು. ಸಮಸ್ಯೆಗಳನ್ನೇ ಗುಡ್ಡವಾಗಿಸುವುದು ಬೇಡ. ಅವುಗಳ ಬೆನ್ನು ಹತ್ತಬೇಕು ಎಂದು ಇಳಕಲ್ ಡಾ.ಮಹಾಂತ ಸ್ವಾಮೀಜಿ ಪ್ರತಿಪಾದಿಸಿದರು.ಆಚರಣೆ ವಿಧಾನ ಬೇರೆ ಇರಬಹುದು. ಅವುಗಳಲ್ಲಿ ಅವೈಜ್ಞಾನಿಕತೆ ಬರಬಾರದು. ಸ್ವಾಮಿ ವಿವೇಕಾನಂದರಿಗೆ ಅದೆಂತಹ ಕಷ್ಟ ಸಂಭವಿಸಿದವು. ಅವುಗಳನ್ನು ಅವರು ಸೂಕ್ಷ್ಮ ಮತಿಯಿಂದ ಮೆಟ್ಟಿ ನಿಂತು ಪ್ರಪಂಚಕ್ಕೆ ಮಾದರಿಯಾದರು ಎಂದು ಆನಂದಪುರಂ ಬೆಕ್ಕಿನ ಕಲ್ಮಠದ  ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.ಹುಟ್ಟಿದ ಮೇಲೆ ಸ್ತುತಿ ನಿಂದೆಗಳು ಸಾಮಾನ್ಯ. ಅವುಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳುವ ಜಾಣ್ಮೆ ಹೊಂದಿರಬೇಕು. ಲಿಂಗಾಯತ ಮಠಗಳ ಕೊಡುಗೆ ಸಮಾಜಕ್ಕೆ ಅನನ್ಯವಾಗಿದೆ ಎಂದರು.ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು `ಹೀಟರ್~ ಆಗಬಾರದು; `ಕೂಲರ್~ ಆಗಬೇಕು. ಸಮಸ್ಯೆಗಳಿಗೆ ಪಲಾಯನ ಮಾಡುವುದು ಹೇಡಿತನ. ಸಮಸ್ಯೆ ಎಲ್ಲರಿಗೂ ಇದೆ. ಸಮಸ್ಯೆಗಳು ಇಲ್ಲ ಮತ್ತು ಅವುಗಳಿಗೆ ಪರಿಹಾರ ಕಂಡುಕೊಡಲಿಲ್ಲ ಎಂದ ಮೇಲೆ ಸಮಾಜದಲ್ಲಿ ತಮ್ಮದೇನು ಕೆಲಸ ಸಮಾವೇಶದ ಸಂಘಟಕರಾದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಾನು ಮೊದಲು ಮಠಕ್ಕೆ ಬಂದಾಗ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ತತ್ವನಿಷ್ಠರಾಗಿ ಬೆಳೆಯುತ್ತ  ಅನುಷ್ಠಾನಕ್ಕೆ ತರುತ್ತ ಹೋದರೆ ನಾವು ಗಟ್ಟಿಯಾಗುತ್ತೇವೆ ಎಂದರು.ಇಳಕಲ್ ಗುರುಮಹಾಂತ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮಿ, ಬೇಬಿಮಠದ ತ್ರೀನೇತ್ರ ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ, ಬೆಳಿಗ್ಗೆ ಮುರುಘಾಮಠದ ನಿಸರ್ಗಧಾಮದಲ್ಲಿ ಪರಿಸರ ನಡಿಗೆ ಹಾಗೂ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ಶಿವಮೂರ್ತಿ ಮುರುಘಾ ಶರಣರ ನೇತತ್ವದಲ್ಲಿ ನಡೆಯಿತು. ನಂತರ `ಬಲಿ ತೆಗೆದುಕೊಳ್ಳುವ ಸೋಮಾರಿತನ, ಎದ್ದುಬಂದರೆ ಹೊಸಜೀವನ~ ವಿಷಯದ ಕುರಿತು ಚಿಂತನ ನಡೆಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.