ಭಾನುವಾರ, ಮೇ 16, 2021
26 °C

`ಸಮಾಜ ಸೇವೆಗೆ ಬೀರೇಶ್ವರ ಬ್ಯಾಂಕ್ ಲಾಭಾಂಶ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: `ಜನಸಾಮಾನ್ಯರ ಆರ್ಥಿಕ ಮಟ್ಟ ಸುಧಾರಣೆಯೊಂದಿಗೆ ಸ್ವಾವಲಂಬಿ ಬದುಕು ನಡೆಸಲು ಪೂರಕ ನೆರವು ನೀಡಲು  ಹುಟ್ಟಿಕೊಂಡಿರುವ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿಯು ಗಳಿಸಿದ ಲಾಭವನ್ನು ವಿವಿಧ ವಿಧಾಯಕ ಯೋಜನೆಗಳ ಮೂಲಕ ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತ ಬಂದಿದೆ' ಎಂದು ಸಹಕಾರಿಯ ಸಂಸ್ಥಾಪಕ ಅಣ್ಣಾ ಸಾಹೇಬ ಶಂಕರ ಜೊಲ್ಲೆ ಹೇಳಿದರು.ಭಾನುವಾರ ತಾಲ್ಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿ ಸೇರಿದಂತೆ ವಿವಿಧ ಅಂಗಸಂಸ್ಥೆಗಳ ಜಂಟಿ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.`ಸಹಕಾರಿಯು ಕೇವಲ ಜನರಿಂದ ಠೇವು ಸಂಗ್ರಹಿಸಿ, ಸಾಲ ವಿತರಿಸುವ ಕಾರ್ಯಕ್ಕೆ ಮಾತ್ರ ಸೀಮಿತವಾಗದೇ ಕ್ರಿಯಾತ್ಮಕ ಮತ್ತು ಪ್ರಗತಿಶೀಲ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡು ಇಂದಿನ ಜಾಗತೀಕರಣ ಮತ್ತು ಉದಾರೀಕರಣದ ದಿನಗಳಲ್ಲಿ ಜನರಿಗೆ ಅಗತ್ಯವಿರುವ ಅತ್ಯಾಧುನಿಕ ಬ್ಯಾಂಕಿಂಗ್ ಹಾಗೂ ಇತರ ಸೇವೆಗಳನ್ನು ನೀಡುವ ಮೂಲಕ ಆರ್ಥಿಕ ಮಾರುಕಟ್ಟೆಯಲ್ಲಿ ಸೂಪರ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ' ಎಂದು ಹೇಳಿದರು.`ಸಹಕಾರಿಯು 51 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು,  ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ 75 ಶಾಖೆಗಳನ್ನು ತೆರೆದಿದೆ. ರೂ377 ಕೋಟಿ ಅಧಿಕ ಠೇವು ಸಂಗ್ರಹಿಸಿ, ರೂ298 ಕೋಟಿಗೂ ಹೆಚ್ಚು ಸಾಲ ವಿತರಿಸಿದೆ. ರೂ408 ಕೋಟಿಗೂ ಮೀರಿ ದುಡಿಯುವ ಬಂಡವಾಳ ಹೊಂದಿದೆ ಎಂದು ಹೇಳಿದರು. ಸಹಕಾರಿಯು ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕೂ ಅಗತ್ಯ ನೆರವು ನೀಡಲು ಬದ್ಧವಿದೆ ಎಂದು ಅಣ್ಣಾಸಾಹೇಬ ಹೇಳಿದರು.ಕಳೆದ ಆರ್ಥಿಕ ವರ್ಷದಲ್ಲಿ ನಗರ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಹಕಾರಿಯ ವಿಜಾಪುರ ಶಾಖೆಗೆ ಪ್ರಥಮ ಮತ್ತು ಬೆಳಗಾವಿ ಶಾಖೆಗೆ ದ್ವಿತೀಯ ಬಹುಮಾನ ನೀಡಲಾಯಿತು. ಗ್ರಾಮೀಣ ವಿಭಾಗದಲ್ಲಿ ಇಂಗಳಿ ಶಾಖೆಗೆ ಪ್ರಥಮ ಹಾಗೂ ಯಡೂರ ಶಾಖೆಗೆ ದ್ವಿತೀಯ ಬಹುಮಾನ ನೀಡಲಾಯಿತು. ಸಹಕಾರಿಯಿಂದ ವಿವಿಧ ವಿಮೆ ಯೋಜನೆಗಳಡಿ ಮಂಜೂರಾದ ಒಟ್ಟು ರೂ1.20 ಕೋಟಿಗೂ ಹೆಚ್ಚು ಪರಿಹಾರ ಧನವನ್ನು ವಿತರಿಸಲಾಯಿತು.ಬೆಂಗಳೂರಿನ  ರಾಜ್ಯ ಸೌಹಾರ್ದ ಫೆಡರೇಶನ್ ನಿರ್ದೇಶಕ ಕೃಷ್ಣ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬೀದರ್‌ನ ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಬಿಕೆ ಸಾನಿಧ್ಯ ವಹಿಸಿದ್ದರು. ಸಹಕಾರಿಯು ಜೊಲ್ಲೆ ಉದ್ಯೋಗ ಸಮೂಹದ ಅಂಗಸಂಸ್ಥೆ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಬೆಂಗಳೂರು ಕೆಓಎಫ್ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ರಾಯಚೂರು ಕೆಓಎಫ್ ಅಧ್ಯಕ್ಷ ಮಹಾಂತೇಶ ಪಾಟೀಲ, ಬೆಂಗಳೂರು ಕೆಓಎಫ್ ನಿರ್ದೇಶಕ ಶಂಕರಪ್ಪಗೌಡ, ಹುಬ್ಬಳ್ಳಿ ಕೆಓಎಫ್ ನಿರ್ದೇಶಕ ಬಿ.ಟಿ. ಬನಕಟ್ಟಿ, ಬೆಂಗಳೂರು ಕೆಓಎಫ್ ಮಾಜಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ, ಹುಬ್ಬಳ್ಳಿ ಕೆಓಎಫ್ ಒಕ್ಕೂಟ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿದರು.

ಸಹಕಾರಿಯ ಅಧ್ಯಕ್ಷ ಜಯಾನಂದ ಜಾಧವ, ಜ್ಯೋತಿಪ್ರಸಾದ ಜೊಲ್ಲೆ ಸೇರಿದಂತೆ ವಿವಿಧ ಅಂಗಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ರವೀಂದ್ರ ಚೌಗಲಾ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.