ಗುರುವಾರ , ಜನವರಿ 23, 2020
22 °C
ಜೆಎನ್‌ಎಂಸಿ ಸುವರ್ಣ ಮಹೋತ್ಸವ

ಸಮಾರೋಪ ಸಮಾರಂಭ 19ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜವಾಹರಲಾಲ್‌ ವೈದ್ಯಕೀಯ ಮಹಾವಿದ್ಯಾಲಯದ (ಜೆಎನ್‌ಎಂಸಿ) ಸುವರ್ಣ ಮಹೋತ್ಸವ ವರ್ಷದ ಸಮಾರೋಪ ಸಮಾರಂಭ ಇದೇ 19 ಹಾಗೂ 20 ರಂದು ನಡೆಯಲಿದೆ. ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ 19ರಂದು ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳ­ಲಿದ್ದಾರೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಸಂಸದ ಡಾ. ಪ್ರಭಾಕರ ಕೋರೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಜೆಎನ್‌ಎಂಸಿ ಆವರಣದಲ್ಲಿಯೇ ಕಾರ್ಯಕ್ರಮ ನಡೆಯಲಿದ್ದು, 19ರಂದು ಮಧ್ಯಾಹ್ನ 3.30ಕ್ಕೆ ನರೇಂದ್ರ ಮೋದಿ ಆಗಮಿಸುವರು. ಇದೇ ಸಂದರ್ಭ­ದಲ್ಲಿ ನೂತನವಾಗಿ ಆರಂಭವಾಗಿರುವ ರೋಗಲಕ್ಷಣ ಶಾಸ್ತ್ರ (ಪೆಥಾಲಾಜಿ) ಪ್ರಯೋಗಾಲಯವನ್ನು ಉದ್ಘಾಟಿಸುವರು. ಮೋದಿ ಅವರು ಭಾರತದಲ್ಲಿ ಆರೋಗ್ಯ ಸೇವೆ ಹಾಗೂ ಶಿಕ್ಷಣ ಎಂಬ ವಿಷಯ ಕುರಿತು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವರು ಎಂದು ಹೇಳಿದರು.20ರಂದು ನಡೆಯುವ ಸಮಾರಂಭಕ್ಕೆ ಆಗಮಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರನ್ನು ಆಹ್ವಾನಿಸಲಾಗಿದೆ. ಆದರೆ, ಅವರು ಭಾಗವಹಿಸುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ ಎಂದ ಕೋರೆ, ಸಮಾರಂಭದಲ್ಲಿ 2000 ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.ಜೆಎನ್‌ಎಂಸಿಯಿಂದ ಕಳೆದ 50 ವರ್ಷಗಳಲ್ಲಿ 15,000 ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಜೆಎನ್‌ಎಂಸಿ ಅಂದಿನ ದಿನಗಳಲ್ಲಿ ರಾಷ್ಟ್ರದಲ್ಲಿಯೇ ಆರಂಭವಾಗಿದ್ದ 3ನೇ ಕಾಲೇಜು ಇದಾಗಿದೆ ಎಂದು ಹೇಳಿದರು.ರಾಷ್ಟ್ರೀಯ ಕಾರ್ಯಾಗಾರ: ಸುವರ್ಣ ಮಹೋತ್ಸ­ವದ ಅಂಗವಾಗಿ ಇದೇ 14 ರಂದು ವೈದ್ಯಕೀಯ ಶಿಕ್ಷಣದ ಸಬಲೀಕರಣ ಮತ್ತು ಆರೋಗ್ಯ ಸೇವೆಗಳಲ್ಲಿ ಗುಣಾತ್ಮಕ ಬದಲಾವಣೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಪಾತ್ರ ಎಂಬ ವಿಷಯ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾ­ಗಿದೆ. ಡಾ. ಬಿ.ಎಸ್‌. ಜೀರಗೆ ಸಭಾಭವನದಲ್ಲಿ ಅಂದು ಬೆಳಿಗ್ಗೆ 10.15ಕ್ಕೆ ಬಿಹಾರ ರಾಜ್ಯಪಾಲ ಡಾ. ಡಿ.ವೈ. ಪಾಟೀಲ ಉದ್ಘಾಟಿಸುವರು ಎಂದು ತಿಳಿಸಿದರು.ಗುಣಮಟ್ಟದ ಜೈವಿಕ ವೈದ್ಯ ವಿಜ್ಞಾನ, ಸಂಶೋಧನೆ, ಖಾಸಗಿ ವೈದ್ಯ ಶಿಕ್ಷಣದ ಆರ್ಥಿಕತೆ, ಭವಿಷ್ಯ ಹಾಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಬಲಿಷ್ಠಗೊಳಿಸುವುದು ಹಾಗೂ ಮತ್ತಿತರ ವಿಷಯಗಳ ಬಗ್ಗೆ ವಿಚಾರ ವಿನಿಮಯ, ಸಂವಾದ ಮತ್ತು ಚರ್ಚೆ ನಡೆಯಲಿದೆ. ರಾಷ್ಟ್ರೀಯ ಮಟ್ಟದ 9 ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವರು. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಸಹ ಭಾಗವಹಿಸುವರು ಎಂದು ಹೇಳಿದರು.ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಾಗಾರಕ್ಕೆ ಸಚಿವರಾದ ಶಾಮನೂರ ಶಿವಶಂಕರಪ್ಪ, ಎಂ.ಬಿ. ಪಾಟೀಲ, ಮಹಾರಾಷ್ಟ್ರದ ಸಚಿವರಾದ ಡಾ. ಪತಂಗರಾವ್‌ ಕದಂ, ರಾಧಾಕೃಷ್ಣ ವಿಖೆ ಪಾಟೀಲ, ದತ್ತಾ ಮೆಘೆ, ಮಂಗಳೂರಿನ ಎನ್‌ಐಟಿಟಿಇ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗಡೆ, ಮುಂಬೈಯ ಡಾ. ಡಿ.ವೈ. ಪಾಟೀಲ ವಿಶ್ವವಿದ್ಯಾಲಯದ ಅಧ್ಯಕ್ಷ ವಿಜಯ ಪಾಟೀಲ, ಕಾಮೆಡ್‌ ಕೆ ಅಧ್ಯಕ್ಷ ಡಾ. ಎಂ.ಆರ್‌. ಜಯರಾಂ, ಡಾ. ಪಿ.ಡಿ. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಡಾ. ಕೋರೆ ತಿಳಿಸಿದರು.ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಹಾಗೂ ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಕೆಎಲ್‌ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೊಕಾಟೆ, ಡಾ. ಎಚ್‌.ಬಿ. ರಾಜಶೇಖರ, ಡಾ. ವಿ.ಡಿ. ಪಾಟೀಲ, ಡಾ.ಎ.ಎಸ್‌. ಗೋಧಿ    ಪತ್ರಿಕಾಗೋಷ್ಠಿಯಲ್ಲಿದ್ದರು.

‘ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ’

ಬೆಳಗಾವಿ:
‘ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿಗೆ ಬರಬೇಕು. ಅವರ ನಾಯಕತ್ವದಲ್ಲಿಯೇ ಮುಂಬರುವ ಲೋಕಸಭೆ ಚುನಾವಣೆಯನ್ನು ಎದುರಿಸುವ ಅಗತ್ಯವಿದೆ’ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ. ಅವರ ಮುಖಂಡತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಮುನ್ನಡೆಯಬೇಕು ಎಂಬುದು ನಮ್ಮ ಬಯಕೆ. ಉತ್ತರ ಭಾರತದ ಐದು ರಾಜ್ಯಗಳ ಚುನಾವಣೆ ಮುಗಿದಿದ್ದು, ಯಡಿಯೂರಪ್ಪ ಅವರ ಸೇರ್ಪಡೆ ಕುರಿತು ರಾಷ್ಟ್ರೀಯ ನಾಯಕರು ಸದ್ಯದಲ್ಲಿಯೇ ನಿರ್ಧಾರ ತೆಗೆದುಕೊಳ್ಳುವರು’ ಎಂದರು.ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಅಗತ್ಯವಿದೆ. ಇದಕ್ಕಾಗಿ ಪಕ್ಷದಿಂದ ಹೊರಗೆ ಹೋಗಿರುವವರನ್ನು ಮರಳಿ ಕರೆತರಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ‘ನನ್ನ ಪುತ್ರ ಅಮಿತ ಕೋರೆ ಕಾಂಗ್ರೆಸ್‌ ಪಕ್ಷಕ್ಕೆ ಯಾತಕ್ಕೆ ಸೇರಿದ್ದಾನೆ ಎಂಬುದು ಈವರೆಗೂ ಗೊತ್ತಾಗಿಲ್ಲ. ಅವನಿಗೆ ಕಾಂಗ್ರೆಸ್‌ ಪಕ್ಷದವರು ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಿದರೆ, ನಾನು ಅವನ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿಯುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘ಸಮಗ್ರ ಕರ್ನಾಟಕ ಒಂದಾಗಲು ಉತ್ತರ ಕರ್ನಾಟಕದ ಕೊಡುಗೆ ಅಪಾರವಿದೆ. ಅಖಂಡ ಕರ್ನಾಟಕದ ಕನಸು ಕಂಡವರು ಈ ಭಾಗದ ಜನರು. ಆದರೆ, ಈ ಭಾಗಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ನಂಜುಂಡಪ್ಪ ವರದಿ ಅನುಷ್ಠಾನದಲ್ಲೂ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಮೇಶ ಕತ್ತಿ ಅವರು ಹೇಳಿಕೆ ನೀಡಿರಬಹುದು. ಆದರೆ, ಈ ಭಾಗದ ಅಭಿವೃದ್ಧಿಗೆ ಹಾಗೂ ನ್ಯಾಯಕ್ಕಾಗಿ ಹೋರಾಟ ನಿರಂತರವಾಗಿ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)