ಸೋಮವಾರ, ಜೂನ್ 14, 2021
22 °C

ಸಮಾವೇಶ: 20ಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕ­ಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದನ್ನು ಮಾರ್ಚ್‌ 20ರಂದು ನಡೆಯುವ ಸಮಾವೇಶದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.­ಕುಮಾರಸ್ವಾಮಿ ಘೋಷಿಸಲಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್‌ ತಿಳಿಸಿದರು.ನಗರ ಹೊರವಲಯದಲ್ಲಿ ಅಂದು ಬೆಳಿಗ್ಗೆ ನಡೆಯುವ ಸಮಾವೇಶದಲ್ಲಿ ಲೋಕ­ಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಿಂದಲೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕ್ಷೇತ್ರದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದು­ಕೊಂಡು ಅಭ್ಯರ್ಥಿ ಹೆಸರು ಘೋಷಿಸ­ಲಾಗುವುದು ಎಂದು ಅವರು ಸೋಮ­ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಹಲವರಿದ್ದು, ಕುಮಾರಸ್ವಾಮಿಯವರ ನಿರ್ಣಯಕ್ಕೆ ನಮ್ಮೆಲ್ಲರ ಒಪ್ಪಿಗೆ ಮತ್ತು ಬೆಂಬಲ ಇರುತ್ತದೆ ಎಂದು ಅವರು ತಿಳಿಸಿದರು.ಸ್ವತಃ ಕುಮಾರಸ್ವಾಮಿ ಇಲ್ಲವೇ ಅನಿತಾ ಕುಮಾರಸ್ವಾಮಿ ಸ್ಪರ್ಧಿಸ­ಬಹುದು. ಉದ್ಯಮಿಗಳಾದ ಮುನೇ­ಗೌಡ, ಶ್ರೀನಿವಾಸಮೂರ್ತಿ ಮತ್ತು ಶಾಶ್ವತ ನೀರಾವರಿ ಹೋರಾಟಗಾರ ಮಧುಸೀತಪ್ಪ ಅವರು ಆಕಾಂಕ್ಷಿ­ಗಳಾ­ಗಿದ್ದು, ಅಭ್ಯರ್ಥಿ ಯಾರು ಎಂಬುದು ಮಾತ್ರ ನಿಗೂಢವಾಗಿದೆ ಎಂದರು.ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿ­ಕೊಂಡು ಪ್ರಚಾರದಲ್ಲಿ ತೊಡಗಿ­ಕೊಂಡಿವೆ. ಆದರೆ ನಾವು ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸದೆಯೇ ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದೇವೆ ಎಂದು ಅವರು ತಿಳಿಸಿದರು.ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಕೇಂದ್ರ ಸಚಿವ ವೀರಪ್ಪ ಮೊಯಿಲಿ ಭ್ರಷ್ಟಾಚಾರದ ಆರೋಪ­ದಿಂದಾಗಿ ಜನರ ಒಲವು ಕಳೆದು­ಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಎನ್‌.­ಬಚ್ಚೇಗೌಡ ಕೂಡ ಮತದಾರರ ವಿಶ್ವಾಸ ಗಳಿಸುವಲ್ಲಿ ಸಫಲರಾಗು­ವುದಿಲ್ಲ. ಜೆಡಿಎಸ್ ವರಿಷ್ಠ ಎಚ್‌.ಡಿ.­ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರ ಆಡಳಿತ ನೋಡಿರುವ ಜನರು ಜೆಡಿಎಸ್‌ ಕೈಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ ಎಂದು ಅವರು ತಿಳಿಸಿದರು.ಕಾಂಗ್ರೆಸ್‌ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಆಗಿ­ರುವ ಭ್ರಷ್ಟಾಚಾರ ಮತ್ತು ಹಗರಣ­ಗಳನ್ನು ಕಂಡು ಜನರು ಬೇಸತ್ತಿದ್ದಾರೆ. ಸಮರ್ಥ ಮತ್ತು ಉತ್ತಮ ಆಡಳಿತ ನೀಡಬಲ್ಲ ಜನಪ್ರತಿನಿಧಿಯನ್ನು ಬಯಸು­ತ್ತಿದ್ದು, ನಿರೀಕ್ಷೆಯನ್ನು ಜೆಡಿಎಸ್‌ ಅಭ್ಯರ್ಥಿ­ಗಳು ಈಡೇರಿಸಲಿದ್ದಾರೆ ಎಂದು ಅವರು ತಿಳಿಸಿದರು.ಜೆಡಿಎಸ್‌ ಮುಖಂಡರಾದ ವೆಂಕಟ­ನಾರಾಯಣಪ್ಪ, ಕೆ.ಟಿ.ನಾರಾ­ಯಣ­ಸ್ವಾಮಿ, ಯಲುವಹಳ್ಳಿ ಸೊಣ್ಣೇಗೌಡ, ಪಿ.ಶ್ರೀನಿವಾಸ್‌, ಕೆ.ಆರ್‌.ರೆಡ್ಡಿ, ಕಿಸಾನ್‌ ಕೃಷ್ಣಪ್ಪ, ಕೃಷ್ಣಮೂರ್ತಿ, ಕೊಳವನಹಳ್ಳಿ ಮುನಿರಾಜು ಮತ್ತಿತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.