ಭಾನುವಾರ, ಮೇ 16, 2021
22 °C

`ಸಮುದಾಯದ ಏಳಿಗೆಗೆ ನೆರವಾಗಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಆರ್ಥಿಕವಾಗಿ ಹಿಂದುಳಿದಿರುವ ವೀರಶೈವರನ್ನು ಮೇಲೆತ್ತಲು ವೀರಶೈವ ಪತ್ತಿನ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತಂದಿರುವುದು ಒಳ್ಳೆಯ ಬೆಳವಣಿಗೆ. ಈ ಸಂಘವನ್ನು ಸದೃಢವಾಗಿ ಕಟ್ಟಿ, ಸಮುದಾಯದ ಏಳಿಗೆಗೆ ನೆರವಾಗುವ ನಿಟ್ಟಿನಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.ನಗರದಲ್ಲಿ ಭಾನುವಾರ ವೀರಶೈವ ಪತ್ತಿನ ಸಹಕಾರ ಸಂಘ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಈ ಪತ್ತಿನ ಸಹಕಾರ ಸಂಘ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದಂತಹುದಲ್ಲ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಷೇರು ಹೂಡಿಕೆ ಮಾಡಿ, ಸಂಘವನ್ನು ಪ್ರತಿಯೊಬ್ಬರು ಬೆಳೆಸಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡಿ ಸಂಘ ಸ್ಥಾಪಿಸಿರುವುದು ಮಾದರಿ ಪ್ರಯತ್ನ. ಜತೆಗೆ ವೀರಶೈವ ಸಮಾಜದ ಒಳಪಂಗಡಗಳನ್ನು ಈ ಪತ್ತಿನ ಸಹಕಾರ ಸಂಘದ ಮೂಲಕ ಒಟ್ಟುಗೂಡಿಸಿರುವುದು ಶ್ಲಾಘನೀಯ ಕೆಲಸ ಎಂದು ಪ್ರಶಂಸಿಸಿದರು.ಬಸವ ಮಂದಿರದ ಜಯ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಹಕಾರ ಎಂದರೆ ಒಬ್ಬರಿಗೊಬ್ಬರು ಪರಸ್ಪರ ಸಹಾಯ ಹಸ್ತ ಚಾಚಿ ಬದುಕುವುದಾಗಿದೆ. ಇದೇ ಧ್ಯೇಯ ಸಹಕಾರ ಸಂಘಗಳದು ಆಗಿದೆ. ಕಳೆದ 25 ವರ್ಷಗಳ ಹಿಂದೆಯೇ ಸಹಕಾರ ಸಂಘ ಅಸ್ತಿತ್ವಕ್ಕೆ ಬರಬೇಕಿತ್ತು. ಆದರೆ, ಈಗ ಅದಕ್ಕೆ ಯೋಗ ಕೂಡಿ ಬಂದಿದೆ. ಯಾವುದೇ ಕಪ್ಪು ಚುಕ್ಕೆಗೆ ಅವಕಾಶ ನೀಡದಂತೆ, ಪಾರದರ್ಶಕವಾದ ವ್ಯವಹಾರ ನಡೆಸಿ, ಮಾದರಿ ಸಹಕಾರ ಸಂಘವಾಗಿ ರೂಪಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.ಶಾಸಕ ಸಿ.ಟಿ.ರವಿ ಮಾತನಾಡಿ, ಪ್ರಕೃತಿಯಲ್ಲೇ ಸಹಕಾರ ಮನೋಭಾವ ಬೆಳೆದು ಬಂದಿದೆ. ಮನುಷ್ಯರಲ್ಲಿ ಸಹಕಾರ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಇಂತಹ ಸಹಕಾರ ಸಂಘಗಳು ಇನ್ನಷ್ಟು ಅವಕಾಶ ಕಲ್ಪಿಸಬೇಕು. ವೀರಶೈವರು ಬಹುಸಂಖ್ಯಾತವಾದ ಸಮಾಜವಾದರೂ ಸಹ ಇವರಲ್ಲಿ ಸಾಕಷ್ಟು ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿವೆ. ಈ ಸಮುದಾಯಕ್ಕೆ ಸಹಕಾರ ಪತ್ತಿನ ಸಂಘ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಿಕೊಳ್ಳಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿ, ಸಂಘವನ್ನು ಸದೃಢವಾಗಿ ಬೆಳೆಸಲು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯ ಶೇರು ಖರೀದಿಸಿ, ಹೆಚ್ಚಿನ ಮೊತ್ತದ ನಿಶ್ವಿತ ಠೇವಣಿ ಹೆಚ್ಚು ಇಡಬೇಕು ಎಂದರು.ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಬಸವರಾಜಪ್ಪ, ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ, ಸಂಘದ ಪ್ರವರ್ತಕರಾದ ಎಂ.ಓಂಕಾರಸ್ವಾಮಿ, ಜಿ.ವೀರೇಶ್, ರವಿಕುಮಾರ್, ಚಂದ್ರಶೇಖರ ಆರಾಧ್ಯ, ಕರ್ಕಿಪೇಟೆ ಓಂಕಾರಪ್ಪ ಇನ್ನಿತರರು ಇದ್ದರು..

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.