ಮಂಗಳವಾರ, ಆಗಸ್ಟ್ 11, 2020
27 °C
ಗರ್ಭಿಣಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಸಮುದಾಯ ಕೇಂದ್ರಕ್ಕೆ ಗ್ರಾಮಸ್ಥರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮುದಾಯ ಕೇಂದ್ರಕ್ಕೆ ಗ್ರಾಮಸ್ಥರ ಮುತ್ತಿಗೆ

ಗುತ್ತಲ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಭಿರ್ಣಿ ಸಾವನ್ನಪ್ಪಿದ್ದು, ಗರ್ಭಿಣಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೇ ಇರುವುದರಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಆರೋಗ್ಯ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಸಮುದಾಯ ಕೇಂದ್ರಕ್ಕೆ ನುಗ್ಗಿ ಪೀಠೋಪಕರಣ ಹಾಗೂ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದರು. ಮೃತ ಗರ್ಭಿಣಿ ಮೆಹ್ತಾಜ್ ಇಬ್ರಾಹಿಂ ಕನವಳ್ಳಿ ಅವರನ್ನು ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಿದ್ದರೂ ವೈದ್ಯರು ಸಮರ್ಪಕ ಚಿಕಿತ್ಸೆ ನೀಡಲಿಲ್ಲ. ಈ ಕಾರಣದಿಂದ ಮೆಹ್ತಾಜ್ ಸಾವನ್ನಪ್ಪಿದ್ದಾರೆ ಎಂಬುದು ಸಂಬಂಧಿಕರ ಹಾಗೂ ಗ್ರಾಮಸ್ಥರ ಆರೋಪ.ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ.ಸದಸ್ಯ ಸಲೀಂ ಅಹಮ್ಮದ್ ಖಾಜಿ, `ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯಾಗಿದ್ದ ಮೆಹ್ತಾಜ್ ಮೃತಪಟ್ಟಿದ್ದು, ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು. `ಮೆಹ್ತಾಜ್ ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರೂ 5ಗಂಟೆಗಳ ಕಾಲ ಚಿಕಿತ್ಸೆ ನೀಡದೇ ಕಾಯಿಸಿದ್ದಾರೆ.

ಅವರಿಗೆ ಬೇಗ ಚಿಕಿತ್ಸೆ ನೀಡಿದ್ದರೆ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಬಹುದಿತ್ತು. ಆದರೆ ವೈದ್ಯರು ಈ ಪ್ರಕರಣದಲ್ಲಿ ನಿರ್ಲಕ್ಷ್ಯತನದಿಂದ ವರ್ತಿಸಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.`ಸಮುದಾಯ ಕೇಂದ್ರದಲ್ಲಿ 24 ಗಂಟೆ ನಿರಂತರ ಚಿಕಿತ್ಸೆ ಎಂದು ನಾಮಫಲಕ ಹಾಕಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇರುವುದಿಲ್ಲ. ರೋಗಿಗಳು ಸಿಬ್ಬಂದಿ ಕೊರತೆಯಿಂದ ನಿತ್ಯ ಪರದಾಡುವಂತಾಗಿದೆ' ಖಾಜಿ ಆಕ್ರೋಶ ವ್ಯಕ್ತಪಡಿಸಿದರು. `ಆರೋಗ್ಯ ಕೇಂದ್ರಕ್ಕೆ ಕೂಡಲೇ ಸಮರ್ಪಕ ಸಿಬ್ಬಂದಿ ನೇಮಕ ಮಾಡಬೇಕು.

ಇಲ್ಲದಿದ್ದರೆ ಉಗ್ರ ಪ್ರತಿಭಟನೆಗೆ ಮುಂದಾಗಲಾಗುವುದು' ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಭಾಕಾರ ಕುಂದೂರ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚವಹಿಸುವುದಾಗಿ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದರು.ಘಟನೆ ವಿವರ: ಭಾನುವಾರ ಬೆಳಿಗ್ಗೆ ಮೆಹ್ತಾಜ್ ಅವರನ್ನು ಹೆರಿಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಿ 5ಗಂಟೆಯಾದರೂ ಚಿಕಿತ್ಸೆ ನೀಡಲಿಲ್ಲ. ನಂತರ ಇಲ್ಲಿ ಹೆರಿಗೆ ಮಾಡಿಸಲು ಆಗುವುದಿಲ್ಲ.

ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದಾರೆ. ನಂತರ ಜಿಲ್ಲಾ ಆಸ್ಪತ್ರೆಗೆ ಮೆಹ್ತಾಜ್ ಅವರನ್ನು ದಾಖಲಿಸಿದರೂ ಅಲ್ಲಿನ ವೈದ್ಯರು ದಾವಣಗೆರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಆಗ ಸಂಬಂಧಿಕರು ಮೆಹ್ತಾಜ್ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.