ಗುರುವಾರ , ಜನವರಿ 23, 2020
27 °C

ಸರ್ಕಾರಕ್ಕೆ ಮಾದರಿ ಹಿರೇಖೇಡ ಗ್ರಾಮದ ಶಾಲೆ!

ಪ್ರಜಾವಾಣಿ ವಾರ್ತೆ / – ಮೆಹಬೂಬ ಹುಸೇನ ಕನಕಗಿರಿ Updated:

ಅಕ್ಷರ ಗಾತ್ರ : | |

ಕನಕಗಿರಿ: ಸಮೀಪದ ಹಿರೇಖೇಡ ಗ್ರಾಮದ ಶಾಲೆಯ ಶಿಕ್ಷಕರ ಸಾಂಘಿಕ ಪ್ರಯತ್ನದಿಂದ ಗ್ರಾಮೀಣ ಭಾಗದ ಸರ್ಕಾರಿ ಪ್ರೌಢ ಶಾಲೆಯೊಂದು ರಾಜ್ಯ ಮಟ್ಟದಲ್ಲಿಯೆ ಮಾದರಿ ಎನ್ನಿಸಿಕೊಂಡಿದೆ. ಮಾಜಿ ಶಾಸಕ ವೀರಪ್ಪ ಕೇಸರಹಟ್ಟಿ ಅವರ ಅವಧಿಯಲ್ಲಿ ಶಾಲೆ ಮಂಜೂರಿಯಾಗಿದ್ದು ಏಳು ವರ್ಷಗಳಿಂದಲೂ ವಿವಿಧ ಯೋಜನೆಗಳನ್ನು ರೂಪಿಸುತ್ತಾ ಖ್ಯಾತಿ ಗಳಿಸುತ್ತಿದೆ.ಶಾಲೆಯ ಆವರಣದಲ್ಲಿ ರೂಪಿಸಿರುವ ಉದ್ಯಾನ ಬಹು ಆಕರ್ಷಣೆಗೊಂಡಿದೆ, ಗುಲಾಬಿ, ದಾಸನಾಳ, ದುಂಡು ಮಲ್ಲಿಗೆ, ಸಪೋಟ, ಬೇವು, ಪಪ್ಪಾಯಿ ಇತರೆ ಹಣ್ಣಿನ ಗಿಡಗಳನ್ನು ಸಮೃದ್ಧವಾಗಿ ಬೆಳಸಲಾಗಿದೆ. ಜತೆಗೆ ಬಿಸಿಯೂಟ ಯೋಜನೆಗೆ ಪೂರಕವಾಗಿ ಟೊಮೊಟೊ, ಬದನೆಕಾಯಿ,  ಪಾಲಕ ಪಲ್ಲೆ, ಮೆಣಸಿನಕಾಯಿ ಇತರೆ ತರಕಾರಿಗಳನ್ನು ಬೆಳಸಲಾಗಿದೆ, 

ತಂಪಾಗಿಸಿದ ಮಜ್ಜಿಗೆ:  ಕ್ಷೀರಭಾಗ್ಯ ಯೋಜನೆ ಆರಂಭವಾಗುವುದಕ್ಕಿಂತ ಮುಂಚೆ ಈ ಶಾಲೆಯಲ್ಲಿ  ಹಾಲು, ಮಜ್ಜಿಗೆ ನೀಡಲಾಗಿದೆ.  ಸಿದ್ದಪ್ಪ ನೀರ್ಲೂಟಿ ಅವರಿಂದ ಎಮ್ಮೆಯೊಂದು ದಾನ ಪಡೆದು ದಿನಲೂ ವಿದ್ಯಾರ್ಥಿಗಳಿಗೆ ವಿದ್ಯೆಯ ಜತೆಗೆ ಹೈನು ಪದಾರ್ಥ ನೀಡಲಾಗಿದೆ. ಈಚೆಗೆ ಸರ್ಕಾರ ಹಾಲು ನೀಡಲು ಆರಂಭಿಸಿದಾಗ ಎಮ್ಮೆ ಮಾರಾಟ ಮಾಡಿ ಹಣವನ್ನು  ‘ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ’ಗೆ ಜಮಾ ಮಾಡಲಾಗಿದೆ ಎಂದು ಶಿಕ್ಷಕರು ತಿಳಿಸುತ್ತಾರೆ.ಕಲಿಕೆಯ ಪ್ರಗತಿಗೆ ಮಾಸಿಕ ಅಧ್ಯಯನ ಎಂಬ ಯೋಜನೆ ಜಾರಿಗೆ ತಂದಿದ್ದು ಪ್ರತಿ ತಿಂಗಳು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಮೌಲ್ಯಮಾಪನ ಮಾಡಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗಾಗಿ ಜನವರಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವ ತನಕ ಶಾಲೆಯಲ್ಲಿಯೆ ತಾತ್ಕಾಲಿಕ ವಸತಿ ನಿಲಯ ತೆಗೆದು ಅನುಕೂಲ ಮಾಡಲಾಗಿದೆ, ವಿದ್ಯುತ್‌ ಕಡಿತಗೊಂಡರೆ ಸೋಲಾರ್ ದೀಪ ನೀಡಲಾಗಿದ್ದು ರಾಜ್ಯದಲ್ಲಿಯೆ ಇದು ಮಾದರಿ ಎನ್ನಿಸಿಕೊಂಡಿದೆ.ಊರಿಗೊಬ್ಬ ಶಿಕ್ಷಕ: ಶಿಕ್ಷಕ ಸರಿಯಾದ ಸಮಯಕ್ಕೆ ಬಂದು ಪಾಠ ಪ್ರವಚನ ನಡೆಸಿದರೆ ಸಾಲದು. ಮುಖ್ಯ ಶಿಕ್ಷಕ ಸೇರಿದಂತೆ ಇತರೆ  ಎಲ್ಲ ಶಿಕ್ಷಕರು ಶಾಲೆ ವ್ಯಾಪ್ತಿಗೊಳ ಪಡುವ  ಎಂಟು ಗ್ರಾಮಗಳಿಗೂ ವಾರದಲ್ಲಿ ಒಂದು ದಿನ ಭೇಟಿ ನೀಡಬೇಕು, ಮಕ್ಕಳು ಶಾಲೆಗೆ ಗೈರಾಗಿ ಚಕ್ಕರ್ ಹೊಡೆಯುವ ಉದ್ದೇಶ­ವನ್ನು ಇಲ್ಲಿ ವಿಫಲಗೊಳಿಸಲಾಗುತ್ತಿದೆ. ಅಲ್ಲದೆ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಮಕ್ಕಳ ಪೋಷಕರ ಸಭೆ ಸಹ ನಡೆಸಿ ನ್ಯೂನತೆಗಳಿಗೆ ಪರಿಹಾರ ನೀಡಲಾಗುತ್ತಿದೆ,  ಈ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡ ಪರಿಣಾಮವೆ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆ­ಯಲ್ಲಿ ಶೇ 100 ರಷ್ಟು ಹ್ಯಾಟ್ರಿಕ್‌ ಸಾಧನೆ ಮಾಡಿದೆ.ಜಾಗೃತಿ: ಗ್ರಾಮದಲ್ಲಿ ಏಡ್ಸ್‌, ಶೌಚಾಲಯ, ಪರಿಸರ ಇತರೆ ವಿಷಯಗಳ ಕುರಿತು ಜಾಗೃತಿ ಮೂಡಿಸಿ ಗಮನ ಸೆಳೆಯಲಾಗಿದೆ.

ಅಮರೇಶ ನುಗಡೋಣಿ, ಪೀರಬಾಷರಂತ ಕವಿ, ಸಾಹಿತಿಗಳನ್ನು ಕರೆಸಿ ವಿದ್ಯಾರ್ಥಿಗಳೊಂದಿಗೆ ನೇರ ಮಾತುಕತೆ ನಡೆಸಲಾಗಿದೆ. ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ, ಜಿಪಂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಕೃಷ್ಣ ಉದುಪುಡಿ ಸಹ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆವರಣದಲ್ಲಿ ಸುಂದರವಾದ ಜ್ಞಾನ ಕುಟೀರ ನಿರ್ಮಿಸಲಾಗಿದೆ, ವಿಶ್ರಾಂತಿ ಪಡೆಯುವದರೊಂದಿಗೆ ಜ್ಞಾನಾರ್ಜನೆ ಪೂರಕವಾಗಿದೆ.

 ನಾನು ಓದುತ್ತಿದ್ದೇನೆ:  ’ನಾನು ಓದುತ್ತಿದ್ದೇನೆ’ ಎಂಬ ಹೊಸ ಯೋಜನೆ ಆಕರ್ಷಣೆಗೊಂಡಿದೆ,  ವಿದ್ಯಾರ್ಥಿ ‘ನಾನು ಓದುತ್ತಿದ್ದೇನೆ’,  ಪೋಷಕ ‘ನಮ್ಮ ಮಗು ಓದಬೇಕು,  ಶಿಕ್ಷಕ ‘ನಿಮ್ಮ ಮಗು ಓದಬೇಕು’ ಎಂಬ ಘೋಷಣೆ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ತ್ರಿಭುಜವಾಗಿ ಕೆಲಸ ಮಾಡಲಾಗುತ್ತಿದೆ.

– ಮೆಹಬೂಬ ಹುಸೇನ ಕನಕಗಿರಿ

ಪ್ರತಿಕ್ರಿಯಿಸಿ (+)