ಶನಿವಾರ, ಮೇ 15, 2021
23 °C
ಅಮೃತಾನಂದಮಯಿ ಆಶ್ರಮಕ್ಕೆ ಜಮೀನು ಮಂಜೂರು

ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಕೆಂಗೇರಿ ಹೋಬಳಿಯ ಕಣ್ಮಿಣಿಕೆ ಹಳ್ಳಿಯ ಸರ್ವೆ ಸಂಖ್ಯೆ 41 ರಲ್ಲಿನ ಜಮೀನನ್ನು ಮಾತಾ ಅಮೃತಾನಂದಮಯಿ ಆಶ್ರಮಕ್ಕೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ದೂರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಗೆ ತುರ್ತು ನೋಟಿಸ್ ಜಾರಿಗೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.ಕೆ.ಜಿ. ಗೋವಿಂದರಾಜು ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿತು. ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ.ಸರ್ವೆ ಸಂಖ್ಯೆ 41ರಲ್ಲಿ 152.24 ಎಕರೆ ಗೋಮಾಳ ಜಮೀನು ಇದೆ. ಇದರಲ್ಲಿ 25 ಎಕರೆಯನ್ನು ಕಾನೂನು ಉಲ್ಲಂಘಿಸಿ ಅಮೃತಾನಂದಮಯಿ ಆಶ್ರಮಕ್ಕೆ ಪರಭಾರೆ ಮಾಡಲಾಗಿದೆ ಎಂದು  ದೂರಲಾಗಿದೆ.ನೋಟಿಸ್ ಜಾರಿಗೆ ಆದೇಶ

ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿಯ ಸಲಗಾಂವಕರ್ ಮೈನಿಂಗ್ ಕಂಪೆನಿಗೆ ಸರ್ಕಾರ ಹೊಸದಾಗಿ ನೋಟಿಸ್ ಜಾರಿ ಮಾಡಬೇಕು. ಆ ನೋಟಿಸ್‌ಗೆ ಕಂಪೆನಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಿ, ಕಂಪೆನಿಗೆ ನೀಡಿರುವ ಅನುಮತಿ ರದ್ದು ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೋಮವಾರ ಆದೇಶಿಸಿದೆ.ಗಣಿಗಾರಿಕೆಗೆ ತನಗೆ ನೀಡಿದ್ದ ಅನುಮತಿಯನ್ನು ಸರ್ಕಾರ ನೋಟಿಸ್ ನೀಡದೆಯೇ ರದ್ದು ಮಾಡಿದೆ ಎಂದು ದೂರಿ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಈ ಆದೇಶ ನೀಡಿತು. ಅರ್ಜಿ ಇತ್ಯರ್ಥಪಡಿಸಲಾಗಿದೆ.ಕಂಪೆನಿಯು ಅವ್ಯವಹಾರದಲ್ಲಿ ತೊಡಗಿಕೊಂಡಿರುವ ಕುರಿತು ಸರ್ಕಾರಕ್ಕೆ ಮತ್ತಷ್ಟು ದಾಖಲೆಗಳು ದೊರೆತಿವೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಹೊಸದಾಗಿ ನೀಡಲಿರುವ ನೋಟಿಸ್‌ನಲ್ಲಿ ಆ ವಿಚಾರಗಳನ್ನೂ ಸೇರಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿತು.ಜಾಮೀನು ಅರ್ಜಿ ವಜಾ

ನಟಿ ಹೇಮಶ್ರೀ ಕೊಲೆ ಪ್ರಕರಣದ ಎರಡನೆಯ ಆರೋಪಿ ಸತೀಶ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ, ಈ ಆದೇಶ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.