ಶನಿವಾರ, ಏಪ್ರಿಲ್ 17, 2021
32 °C

ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಪ್ರತಿಪಕ್ಷಗಳ ಸಭಾತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಳೆದ ಆಗಸ್ಟ್ 2ರಂದು ಅಪಹರಣಗೊಂಡ ಹಡಗಿನಲ್ಲಿದ್ದ ಆರು ಭಾರತೀಯ ನಾವಿಕರ ಬಿಡುಗಡೆಗೆ ಸೊಮಾಲಿಯಾ ಕಡಲ್ಗಳ್ಳರು ವಿಧಿಸಿರುವ ಗಡುವು ಬುಧವಾರ (ಮಾರ್ಚ್ 9) ಕೊನೆಯಾಗಿದ್ದು, ಅವರು ಬಿಡುಗಡೆಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸದಸ್ಯರು ಲೋಕಸಭೆಯಿಂದ ಹೊರನಡೆದರು.ಶೂನ್ಯವೇಳೆಯಲ್ಲಿ ಈ ಕುರಿತು ಸುಷ್ಮಾ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ನಾವಿಕರನ್ನು ಬಿಡುಗಡೆ ಮಾಡಿಸಲು ಸರ್ಕಾರ ತನ್ನ ಕೈಲಾದ ಪ್ರಯತ್ನವನ್ನೆಲ್ಲಾ ಮಾಡುತ್ತಿದೆ ಎಂದರು.‘ನಾವು ಹಡಗಿನ ಮಾಲೀಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಕಡಲ್ಗಳ್ಳರ ಜತೆ ಸಂಧಾನ  ಏರ್ಪಡುವ ಸಾಧ್ಯತೆ ಹಡಗು ಮಾಲೀಕರನ್ನೇ ಅವಲಂಬಿಸಿರುತ್ತದೆ’ ಎಂದೂ ಅವರು ಹೇಳಿದರು.ಸೊಮಾಲಿಯಾದಲ್ಲಿ ಈಗ ಮಧ್ಯಂತರ ಸರ್ಕಾರ ಆಡಳಿತದಲ್ಲಿದ್ದು, ಅಲ್ಲಿನ ಅಧ್ಯಕ್ಷರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ನಾವಿಕರನ್ನು ಬಿಡುಗಡೆ ಮಾಡಿಸುವಲ್ಲಿ ಎಲ್ಲಾ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಕೃಷ್ಣ ತಿಳಿಸಿದರು.ಆದರೆ ಇದರಿಂದ ಸಮಾಧಾನಗೊಳ್ಳದ ಬಿಜೆಪಿ, ಶಿವಸೇನೆ ಮತ್ತು ಅಕಾಲಿದಳ ಸದಸ್ಯರು ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.ಕಳೆದ ಆ.2ರಂದು ಏಡೆನ್ ಕೊಲ್ಲಿಯಿಂದ ಅಪಹರಣಗೊಂಡ ಈ ಹಡಗಿನಲ್ಲಿ ಆರು ಭಾರತೀಯರ ಜತೆಗೆ ನಾಲ್ವರು ಪಾಕಿಸ್ತಾನೀಯರು, ನಾಲ್ವರು ಶ್ರೀಲಂಕನ್ನರು ಹಾಗೂ 11 ಈಜಿಪ್ಟ್ ಸಿಬ್ಬಂದಿಯೂ ಇದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.