ಶನಿವಾರ, ಜನವರಿ 25, 2020
28 °C

ಸರ್ಕಾರವೇ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿರುವ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರ ಜನ್ಮ ದಿನಾಂಕ ವಿವಾದ ಕೇಂದ್ರ ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವಂತಹ ಪ್ರಸಂಗ.ಮೆಟ್ರಿಕ್ಯುಲೇಷನ್ ಪರೀಕ್ಷೆಯ ಅಂಕಪಟ್ಟಿ ಪ್ರಕಾರ ಜ. ಸಿಂಗ್ ಹುಟ್ಟಿದ ವರ್ಷ 1951. ಆದರೆ ಅವರು ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಪ್ಪಾಗಿ 1950 ಎಂದು ನಮೂದಿಸಿದ್ದರು.

 

ಈ ತಪ್ಪನ್ನು ತಿದ್ದಿ ಜನ್ಮ ದಿನಾಂಕದ ದಾಖಲೆಯನ್ನು ಪರಿಷ್ಕರಿಸಬೇಕೆಂದು ಸರಿಯಾಗಿ ಹತ್ತುವರ್ಷಗಳ ಹಿಂದೆ ಜ.ಸಿಂಗ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ತನಗೆ ಆಗಿರುವ ಅನ್ಯಾಯದ ವಿರುದ್ಧ ಇಲಾಖೆಯ ಮಿತಿಯಲ್ಲಿಯೇ ಹೋರಾಟ ನಡೆಸುತ್ತಾ ಬಂದಿದ್ದಾರೆ.

 

ಅವರ ಬೇಡಿಕೆಯನ್ನು ತಿರಸ್ಕರಿಸುತ್ತಲೇ ಬಂದ ಸರ್ಕಾರಗಳು 1951ರ ಜನ್ಮದಿನಾಂಕದ ಆಧಾರದಲ್ಲಿಯೇ ಬಡ್ತಿ ನೀಡುತ್ತಾ ಬಂದಿವೆ. ಅನಿವಾರ್ಯವಾಗಿ ಅದನ್ನು ಜ.ಸಿಂಗ್ ಒಪ್ಪಿಕೊಂಡು ಸೇವೆಯಲ್ಲಿ ಮುಂದುವರಿದಿದ್ದಾರೆ.

 

ಆದರೆ  ತಪ್ಪು  ಜನ್ಮ ದಿನಾಂಕದಿಂದಾಗಿ ಈಗ ಹತ್ತು ತಿಂಗಳ ಮೊದಲೇ ನಿವೃತ್ತಿಯಾಗಬೇಕಾದ ಪರಿಸ್ಥಿತಿಯಲ್ಲಿರುವ ಜ.ಸಿಂಗ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಜನ್ಮದಿನಾಂಕಕ್ಕೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥರು ನ್ಯಾಯಾಲಯದ ಮೆಟ್ಟಿಲೇರುವುದು ಇದೇ ಮೊದಲು.

 

ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಹೊರತು ಬೇರೆ ಯಾರೂ ಅಲ್ಲ. ಸೇನಾ ಮುಖ್ಯಸ್ಥರ ವಿಚಾರದಲ್ಲಿಯೇ ಈ ರೀತಿಯ ನಿರ್ಲಕ್ಷ್ಯ ಸಂಭವಿಸುವುದಾದರೆ ಸಾಮಾನ್ಯ ಸಿಬ್ಬಂದಿಯ ಪಾಡನ್ನು ಊಹಿಸುವುದು ಕಷ್ಟ ಅಲ್ಲ.ಇಲಾಖೆಯ ಮಟ್ಟದಲ್ಲಿ ಸುಲಭದಲ್ಲಿ ಇತ್ಯರ್ಥಗೊಳಿಸಲು ಸಾಧ್ಯ ಇದ್ದ ಈ ವಿವಾದವನ್ನು ಸರ್ಕಾರ ಲಂಬಿಸುತ್ತಾ ಬಂದದ್ದೇ ಮೊದಲ ತಪ್ಪು. ಸಾಮಾನ್ಯವಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಯ ಅಂಕಪಟ್ಟಿಯಲ್ಲಿರುವ ಜನ್ಮದಿನಾಂಕವೇ ಅಧಿಕೃತ ಎಂದು ಸರ್ಕಾರ ಮಾತ್ರವಲ್ಲ, ಖಾಸಗಿ ಸಂಸ್ಥೆಗಳೂ ಒಪ್ಪಿಕೊಳ್ಳುತ್ತಾ ಬಂದಿವೆ.

 

ಸುಪ್ರೀಂ ಕೋರ್ಟ್ ಕೂಡಾ ತನ್ನ ಹಲವಾರು ತೀರ್ಪುಗಳಲ್ಲಿ ಇದನ್ನು ಒಪ್ಪಿಕೊಂಡಿವೆ. ಇದರ ಆಧಾರದಲ್ಲಿಯೇ ಜ.ಸಿಂಗ್ ಅವರ ಜನ್ಮದಿನಾಂಕದ ವಿವಾದವನ್ನು ಸರ್ಕಾರ ಇತ್ಯರ್ಥಗೊಳಿಸಬಹುದಿತ್ತು.

ಇದು ರಕ್ಷಣೆಯಂತಹ ಪ್ರಮುಖ ಇಲಾಖೆಯೊಳಗೆ ಉನ್ನತ ಹುದ್ದೆಗಳ ಸೇವಾ ವಿವರದ ದಾಖಲೆಯನ್ನು ಇಡುವಂತಹ ವ್ಯವಸ್ಥೆ ದೋಷಪೂರ್ಣವಾಗಿರುವುದನ್ನು ಕೂಡಾ ಸೂಚಿಸುತ್ತದೆ.ಸೇನೆಯಲ್ಲಿ ಈಗ ಇರುವ ವ್ಯವಸ್ಥೆಯ ಪ್ರಕಾರ ಅದರ ಕೇಂದ್ರ ಕಚೇರಿಯಲ್ಲಿ ಎರಡು ಕಡೆ ಸಿಬ್ಬಂದಿ ಸೇವಾವಿವರದ ದಾಖಲೆಗಳಿರುತ್ತವೆ. ಜ.ಸಿಂಗ್ ಅವರ ಜನ್ಮ ದಿನಾಂಕದ ವಿವಾದಕ್ಕೆ ಈ ಅವ್ಯವಸ್ಥೆಯೇ ಕಾರಣ.

 

ತಮಗೆ ಅನ್ಯಾಯವಾಗಿದೆ ಎಂದು ತಿಳಿದುಕೊಂಡ ಜ.ಸಿಂಗ್ ಅವರು ನ್ಯಾಯಾಲಯಕ್ಕೆ ಮೊರೆಹೋದುದರಲ್ಲಿ ಏನೂ ತಪ್ಪಿಲ್ಲ. ಸೇನಾ ಮುಖ್ಯಸ್ಥನಿರಲಿ, ಸಾಮಾನ್ಯ ಜವಾನನಿರಲಿ, ಎಲ್ಲರಿಗೂ ನ್ಯಾಯ ಕೇಳುವ ಹಕ್ಕಿದೆ. ದೋಷಪೂರ್ಣ ವ್ಯವಸ್ಥೆಯನ್ನು ಸರ್ಕಾರ ಮೊದಲೇ ಸರಿಪಡಿಸಿಕೊಂಡಿದ್ದರೆ ಇಂತಹ ಪರಿಸ್ಥಿತಿಗೆ ಹೋಗುವ ಪ್ರಸಂಗವೇ ಬರುತ್ತಿರಲಿಲ್ಲ.ಇದಕ್ಕಾಗಿ ಸೇನಾ ಮುಖ್ಯಸ್ಥರನ್ನು ದೂರಿ ಫಲ ಇಲ್ಲ. ಈಗಲೂ ಕಾಲ ಮಿಂಚಿಲ್ಲ, ಪರಸ್ಪರ ಮಾತುಕತೆಯ ಮೂಲಕ ಸೌಹಾರ್ದಯುತವಾಗಿಯೇ ಈ ವಿವಾದವನ್ನು ಬಗೆಹರಿಸಲು ಸಾಧ್ಯ. ಆ ಪ್ರಯತ್ನವನ್ನು ಸರ್ಕಾರವೇ ಪ್ರಾರಂಭಿಸಲಿ.

 

ಪ್ರತಿಕ್ರಿಯಿಸಿ (+)