ಶನಿವಾರ, ಫೆಬ್ರವರಿ 27, 2021
23 °C

ಸರ್ವತೋಮುಖ ಸುಧಾರಣೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ವತೋಮುಖ ಸುಧಾರಣೆ ಹೇಗೆ?

* ಟ್ರಾನ್ಸ್‌ಜೆಂಡರ್ ಎನ್ನುವುದು ವರ್ಗ, ಲಿಂಗ, ಜಾತಿ ಎಂಬ ಸಂಕೀರ್ಣತೆಯಲ್ಲಿದೆ. ಇದಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ, ಕೌಟುಂಬಿಕ, ಕಾನೂನು ಎಲ್ಲ ಕ್ಷೇತ್ರಗಳ ನಂಟಿದೆ. ಇವರ ಸರ್ವತೋಮುಖ ಸುಧಾರಣೆಗೆ ಅವಕಾಶಗಳು ಸಿಗಬೇಕಿದೆ. ಸರ್ಕಾರ ಇವರ ಅಸ್ಮಿತೆಯನ್ನು, ಐಡೆಂಟಿಟಿಯನ್ನು ಒಪ್ಪಿಕೊಳ್ಳಬೇಕಿದೆ.ಜೊತೆಗೆ ಗಂಡು, ಹೆಣ್ಣು ಎಂಬ ಎರಡೇ ಕಾಲಂಗಳನ್ನು ಅರ್ಜಿ ನಮೂನೆಗಳಲ್ಲಿ ಇಡದೆ, ಗಂಡು, ಹೆಣ್ಣು, ಅಂತರಲಿಂಗಿ (ಮೇಲ್ ಫಿಮೇಲ್ ಇಂಟರ್‌ಸೆಕ್ಸ್) ಪುರುಷ ಮಹಿಳೆ ಅಂತರಲಿಂಗತ್ವ (ವುಮನ್, ಮ್ಯಾನ್ ಇಂಟರ್‌ಜೆಂಡರ್) ಎಂಬ ಕಾಲಂಗಳನ್ನು ಎಲ್ಲ ತರಹದ ಅರ್ಜಿ ನಮೂನೆಗಳಲ್ಲಿ ತರುವ ಮೂಲಕ, ಸೆಕ್ಸ್ ಹಾಗೂ ಜೆಂಡರ್ ಎಂಬುದು ಬೇರೆ ಬೇರೆ ಎನ್ನುವ ಶಿಕ್ಷಣವನ್ನು ಇಡೀ ದೇಶಕ್ಕೆ ಕೊಡಬಹುದಾಗಿದೆ.*  ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಇವರಿಗೆ ಇತರ ಪ್ರಜೆಗಳಿಗೆ ಸಮಾನವಾದ ಮಾನ್ಯತೆ ಮತ್ತು ಅವಕಾಶ ದೊರಕಬೇಕು. ಪಠ್ಯ ಹಾಗೂ ಪಠ್ಯೇತರವಾಗಿ ಕೂಡ ಸಾರ್ವಜನಿಕ ವಲಯದಲ್ಲಿ ಇವರ ಬಗ್ಗೆ ವೈಜ್ಞಾನಿಕ ತಿಳಿವಳಿಕೆ ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕು; ಇವರ ಬಗ್ಗೆ ಈಗ ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆಯನ್ನು ಈ ರೀತಿಯಲ್ಲಿ ದೂರ ಮಾಡಲು ಸಾಧ್ಯವಾಗುತ್ತದೆ.ಸ್ವತಂತ್ರವಾಗಿ, ಗೌರವಯುತವಾಗಿ ಬದುಕಲು ಇವರಿಗೆ ಬದುಕಿನ ಕೌಶಲಗಳನ್ನು ಕಲಿಸುವ ಕಾರ್ಯ ನಡೆಯಬೇಕು. ಇವರ ಕುಟುಂಬದವರಿಗೆ ವಿಶೇಷ ತಿಳಿವಳಿಕೆಯನ್ನು ನೀಡಿ, ಇವರನ್ನು ಒಪ್ಪಿಕೊಳ್ಳಲು ಬೇಕಾದ ವಾತಾವರಣವನ್ನು ಸೃಷ್ಟಿಸಬೇಕು.*  ನಮ್ಮ ಮುಂದೆ ಕೆಲವು ಅಪರೂಪದ ಆಶಾಕಿರಣದ ಉದಾಹರಣೆಗಳಿವೆ. ಅನು ಎಂಬ ಟ್ರಾನ್ಸ್‌ಜೆಂಡರ್ ಒಬ್ಬರು ಕೋರ್ಟಿನಲ್ಲಿ ಕೆಲಸ ಪಡೆದರು; ಇತ್ತೀಚೆಗೆ ರಾಜ್ಯಸಭಾ ಸದಸ್ಯೆಯಾದ ಬಿ. ಜಯಶ್ರಿ ತಮ್ಮ ಕಚೇರಿಯಲ್ಲಿ ಕಾವೇರಿ ಎಂಬ ಟ್ರಾನ್ಸ್‌ಜೆಂಡರ್ ವ್ಯಕ್ತಿಯನ್ನು ನೇಮಕ ಮಾಡಿಕೊಂಡರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದವರಿಗಾಗಿ ಪ್ರವೇಶಾವಕಾಶದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ.

 

ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಟ್ರಾನ್ಸ್‌ಜೆಂಡರ್ಸ್ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಿ, ಇವರಿಗೆ ಮೀಸಲಾತಿ ಸೌಲಭ್ಯವನ್ನು ಒದಗಿಸಬೇಕು ಎಂದು ಶಿಫಾರಸು ಮಾಡಿದ್ದಾರೆ.*  ಇದು ಒಬ್ಬಿಬ್ಬರಿಗೆ ದೊರೆತ ಅವಕಾಶವಾಗದೆ, ಇತರ ಕೋರ್ಟುಗಳಿಗೂ ವಿಸ್ತಾರವಾಗಿ, ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿರುವ ಕೋರ್ಟುಗಳಲ್ಲಿ ನೂರಾರು ಟ್ರಾನ್ಸ್‌ಜೆಂಡರ್‌ಗಳಿಗೆ ಉದ್ಯೋಗ ದೊರೆತಾಗ, ಶಿಫಾರಸುಗಳು ಕೇವಲ ಕಾಗದದಲ್ಲಿ ಉಳಿಯದೆ, ಜಾರಿಗೊಂಡಾಗ ಮತ್ತು ಎಲ್ಲ ಟ್ರಾನ್ಸ್‌ಜೆಂಡರ್‌ಗಳಿಗೂ ಇದನ್ನು ವಿಸ್ತರಿಸಿದಾಗ ಇವರ ಬಗ್ಗೆ ಸಾಮಾನ್ಯವಾಗಿ ಸಮಾಜದಲ್ಲಿ ಇರುವ ತಾರತಮ್ಯ ಭಾವನೆ ಕೊಂಚವಾದರೂ ಕಡಿಮೆ ಆಗಬಹುದು.

 

ಈ ಮೂಲಕ, ಸಮಾಜದಲ್ಲಿ ಇವರ ಬಗ್ಗೆ ಇರುವ ಅಭಿಪ್ರಾಯ ಬದಲಾವಣೆ ಆಗಲು ಸಾಧ್ಯವಾಗುತ್ತದೆ. ಇವರು ಗೌರವದಿಂದ ಬದುಕುವ ಅವಕಾಶಗಳು ಲಭ್ಯವಾಗುವುದು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದಲೂ ಅತ್ಯಗತ್ಯ. ಈ ಬಗ್ಗೆ ಸರ್ಕಾರ ವಿಶೇಷ ಹೊಣೆಗಾರಿಕೆಯನ್ನು ಹೊತ್ತುಕೊಂಡು ಟ್ರಾನ್ಸ್‌ಜೆಂಡರ್ ಸಮುದಾಯದ ಬಗ್ಗೆ ಕಾಳಜಿಪೂರ್ವಕವಾಗಿ ಕ್ರಿಯಾಶೀಲವಾಗಬೇಕು.*  ಶೈಕ್ಷಣಿಕ ವಲಯದಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ ಬಗ್ಗೆ ವಿಶೇಷ ಚಿಂತನೆ ನಡೆದು, ಅಗತ್ಯ ಕ್ರಮಗಳು ಜಾರಿಯಾಗಬೇಕಿದೆ. ವಿವಿಧ ಕೋರ್ಸ್‌ಗಳಲ್ಲಿ ಸೀಟುಗಳನ್ನು ಮೀಸಲು ಇಡುವ ಜೊತೆಗೆ, ಈ ಸಮುದಾಯದ ಬಗ್ಗೆ ಸಮರ್ಪಕ ತಿಳುವಳಿಕೆ ಮೂಡುವಂಥ ವಿಷಯವನ್ನು ಪಠ್ಯದಲ್ಲಿ ಅಳವಡಿಸಬೇಕಾಗಿದೆ. ಈ ವಿಷಯವನ್ನು ಶಿಕ್ಷಣ ಇಲಾಖೆಯು ಆದ್ಯತೆಯ ಮೇಲೆ ಪರಿಗಣಿಸಬೇಕು. ಇದಕ್ಕಾಗಿ ಮೊದಲು ಶಿಕ್ಷಕರಿಗೆ ಸೂಕ್ತ ತರಬೇತಿಯನ್ನು ನೀಡಬೇಕು.ಟ್ರಾನ್ಸ್‌ಜೆಂಡರ್ಸ್ ಸಮುದಾಯದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಕಾರ್ಯ ತುರ್ತಾಗಿ ನಡೆಯಬೇಕು. ತಾವು ಬಯಸುವ ಲಿಂಗ, ಲಿಂಗತ್ವ ಹಾಗೂ ಹೆಸರನ್ನು ನೊಂದಾವಣೆ ಮಾಡಿಕೊಳ್ಳುವ ಅವಕಾಶ ಇವರಿಗೆ ದೊರಕಬೇಕು. ಈ ಕುರಿತು ಸರ್ಕಾರ ಅಗತ್ಯ ವಿಶೇಷ ಆದೇಶ ನೀಡಬೇಕು.*  ಎಸ್.ಆರ್.ಎಸ್. ಮಾಡಿಸಿಕೊಳ್ಳಲು ಬಯಸುವವರಿಗೆ ಸರ್ಕಾರವೇ ಸಹಾಯಧನ, ಒತ್ತಾಸೆ ನೀಡಬೇಕು. ಇದು ವೈಜ್ಞಾನಿಕ ಮತ್ತು ಆರೋಗ್ಯಕರ ಕೇಂದ್ರಗಳಲ್ಲಿ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಇವರಿಗೆ ಮನೆ, ನಿವೇಶನ, ಸಾಲ, ಮೀಸಲಾತಿ, ತರಬೇತಿ ಮುಂತಾದ ಸೌಲಭ್ಯಗಳು ದೊರಕುವುದು ಅತ್ಯವಶ್ಯ.ಟ್ರಾನ್ಸ್‌ಜೆಂಡರ್ ಸಮುದಾಯದಲ್ಲಿ ಕೆಲವರು ತಮ್ಮ ಜೀವನೋಪಾಯಕ್ಕಾಗಿ ಸೆಕ್ಸ್ ವರ್ಕ್ ಮಾಡುವುದರಿಂದ ಅವರು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಲು ಬಂದಾಗ, ಅವರಿಗೆ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ರೀತಿಯಲ್ಲಿ ತಾರತಮ್ಯ ಆಗದಂತೆ ಸರ್ಕಾರ ಆದೇಶ ಹೊರಡಿಸಬೇಕು. ಇವರೂ ಕೂಡ ದೇಶದ ಪ್ರಜೆಗಳಾಗಿರುವುದರಿಂದ, ಇವರ ಹೊಣೆಯನ್ನೂ ಸರ್ಕಾರವೇ ಹೊರಬೇಕಾದುದು ನ್ಯಾಯ.*  ಟ್ರಾನ್ಸ್‌ಜೆಂಡರ್ ಸಮುದಾಯದವರ ಸರ್ವಾಂಗೀಣ ಅಭಿವೃದ್ಧಿಗಾಗಿ, ಇವರೂ ಮರ್ಯಾದೆಯಿಂದ ಜೀವನ ನಡೆಸುವುದು ಸಾಧ್ಯವಾಗುವಂತಾಗಲು ಇವರಿಗಾಗಿ ಕಲ್ಯಾಣ ಮಂಡಳಿಯೊಂದನ್ನು ಸರ್ಕಾರ ರಚಿಸುವುದು ಸೂಕ್ತ. ಇದರಲ್ಲಿ ಕೇವಲ ಈ ಸಮುದಾಯದವರನ್ನಲ್ಲದೆ, ಇವರ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳನ್ನೂ ಸೇರ್ಪಡೆ ಮಾಡಿದಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ನ್ಯಾಯ ದೊರಕುವುದು ಸುಲಭವಾಗುತ್ತದೆ.

 

*  ಟ್ರಾನ್ಸ್‌ಜೆಂಡರ್ ಸಮುದಾಯದವರು ಕಳಂಕ (ಸ್ಟಿಗ್ಮಾ)ಕ್ಕೆ ಒಳಗಾಗಿರುವವರು ಎಂದು ಇತ್ತೀಚಿನ `ರಾಷ್ಟ್ರೀಯ ಯುವ ನೀತಿ~ ಯಲ್ಲಿ ನಮೂದಿಸಲಾಗಿದೆ. ಇದು ದೇಶದ ಇತರ ನೀತಿಗಳಲ್ಲೂ ಅಳವಡಿಸಲ್ಪಟ್ಟರೆ ಮತ್ತು ಈ ಕಳಂಕವನ್ನು ನಿವಾರಣೆ ಮಾಡುವ ರೀತಿಯನ್ನು ಎಲ್ಲ ಹಂತಗಳಿಗೂ ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.