ಶುಕ್ರವಾರ, ಏಪ್ರಿಲ್ 16, 2021
20 °C

ಸಹಕಾರ ಸಂಘ: ಪುನಶ್ಚೇತನಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಹಕಾರಿ ಕ್ಷೇತ್ರದಲ್ಲಿಯೂ ಸಹ ಇಂದು ರಾಜಕೀಯ ಸೇರಿ ರಾಜಕೀಯ ಸಹಕಾರ ಸಂಘಗಳಾಗಿ ಬದಲಾಗಿದ್ದು, ಇದರಿಂದ ಕೆಲ ಸಂಘಗಳ ಸ್ಥಿತಿ ಚಿಂತಾಜನಕವಾಗಿದೆ. ಅವುಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರು ಕಾರ್ಯಪ್ರವೃತ್ತರಾಗಬೇಕು ಎಂದು ದಾವಣಗೆರೆ ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆವರಣದಲ್ಲಿ ಬುಧವಾರ ಸಹಕಾರ ಇಲಾಖೆ ವತಿಯಿಂದ ಆಯೋಜಿಸಿದ್ದ 59ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿ ಸಂಘಗಳ ಅಧ್ಯಕ್ಷರನ್ನು ಮತ್ತು ಕಾರ್ಯದರ್ಶಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.ಕೆಲವೆಡೆ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸೇರಿಕೊಂಡು ಸಾಲ ಪಡೆದು ಸಾಲಮನ್ನಾ ಪ್ರಯೋಜನ ಪಡೆಯುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಸಹಕಾರಿ ಸಂಘಗಳೆಂದರೆ ಸ್ವಂತ ಆಸ್ತಿಯನ್ನಾಗಿ ಮಾಡಿಕೊಳ್ಳಲಾಗಿದೆ. ಬಡವರಿಗೆ ಮತ್ತು ರೈತರಿಗೆ ಸಾಲ ಮನ್ನಾ ಪ್ರಯೋಜನವಾಗದೇ ಹಿಂಬಾಲಕರಿಗೆ ಸಾಲ ಕೊಡಿಸುವ ಕೆಲಸವಾಗುತ್ತಿದೆ. ಇದರಿಂದ ಸಂಘಗಳು ಅಧೋಗತಿಗೆ ತಲುಪಿದೆ. ಇಂತಹ ಸಂಘಗಳನ್ನು ಸೂಪರ್‌ಸೀಡ್ ಮಾಡಿಸಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.ಸಹಕಾರಿ ಕ್ಷೇತ್ರ ರಾಜಕೀಯದಿಂದ ದೂರ ಉಳಿದಾಗ ಮಾತ್ರ ಏಳಿಗೆ ಸಾಧ್ಯ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ರೈತರ, ಬಡವರ ಹಾಗೂ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಘಗಳು ಈ ದೇಶದಲ್ಲಿ ಬಹುಮುಖ್ಯವಾಗಿದ್ದು, ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಕಾರ್ಯ ನಿರ್ವಹಿಸಬೇಕು. ದಾವಣಗೆರೆಯ ಸಹಕಾರ ಸಂಘಗಳಲ್ಲಿ ಅಲ್ಲಿನ ಸ್ತ್ರೀ ಮಹಿಳಾ ಸಂಘದವರು ಹೂಡಿಕೆಯಾಗಿ ರೂ.93 ಕೋಟಿ ಇಟ್ಟಿದ್ದಾರೆ. ಅದರಂತೆ, ಪುರುಷರು ಕೂಡ ಹೂಡಿಕೆಗೆ ಮುಂದಾಗುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದರು.ಶಾಸಕ ಎಸ್.ಕೆ. ಬಸವರಾಜನ್‌ಮಾತನಾಡಿ, ನಮ್ಮ ದೇಶದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮುಂದಿನ ನೂರಾರು ವರ್ಷಗಳ ಕಾಲ ಸಹಕಾರ ಸಂಘಗಳ ಅಗತ್ಯವಿದೆ. ಬಡವರು ಆರ್ಥಿಕ ಸ್ವಾವಲಂಬಿಯಾಗಲು ಅನೇಕ ಮಹಾತ್ಮರು ಈ ಸಂಘ ಸ್ಥಾಪಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.ಸಹಕಾರ ಸಂಘ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಕೊಂಡು ಯಾರಿಗೆ ಆರ್ಥಿಕ ತೊಂದರೆಯಿದೆಯೋ ಅಂತವರ ಬೆನ್ನೆಲುಬಾಗಿ ನಿಲ್ಲಬೇಕು. ಇಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರು ಪ್ರಾಮಾಣಿಕವಾಗಿ ಇದ್ದರೆ ಮಾತ್ರ ಸಂಘದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.ಜತೆಗೆ ಸದಸ್ಯರು ಕೂಡ ಆರ್ಥಿಕವಾಗಿ ಪ್ರಗತಿ ಹೊಂದುತ್ತಾರೆ. ಲಕ್ಷಾಂತರ ಮಂದಿ ಸಂಘಗಳನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ತೊಂದರೆಯಾಗದಂತೆ ಸರ್ಕಾರ ಸೂಕ್ತ ಕಾನೂನು ಜಾರಿ ಮಾಡುವ ಮೂಲಕ ಸಂಘ ಸಂಸ್ಥೆಗಳ ಉಳಿವಿಗೆ ಸಹಕರಿಸಬೇಕು ಎಂದು ಹೇಳಿದರು.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ದಿ. ಮರ್ಚೆಂಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಎಸ್.ಆರ್. ಗಿರೀಶ್, ಕೆಎಂಎಫ್ ನಿರ್ದೇಶಕ ಜಿ.ಪಿ. ರೇವಣಸಿದ್ದಪ್ಪ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿಂಕಲ್ ಬಸವರಾಜ್ ಹಾಜರಿದ್ದರು. ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಿ. ಕುಬೇರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.