ಭಾನುವಾರ, ಜನವರಿ 26, 2020
30 °C

ಸಹಸ್ರಾರು ಅಭಿಮಾನಿಗಳ ಉಪಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ ಎಂದು ಹೆಸರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಗುರುವಾರ ವಿವಿಧ ಗಣ್ಯರು, ಸಹಸ್ರಾರು ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಿತು.



ಬೆಳಿಗ್ಗೆ ಬಂಗಾರಪ್ಪ ತವರಾದ ಕುಬಟೂರಿನ ಅವರ ಸ್ವಗೃಹ `ಬಂಗಾರ~ದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪತ್ನಿ ಶಕುಂತಲಮ್ಮ ಬಂಗಾರಪ್ಪ, ಪುತ್ರ ಮಧು ಬಂಗಾರಪ್ಪ, ಅನಿತಾ ಮಧು, ಅಳಿಯಂದಿರಾದ `ಡೆಕ್ಕನ್ ಹೆರಾಲ್ಡ್~ ಸಂಪಾದಕ ಕೆ.ಎನ್. ತಿಲಕ್‌ಕುಮಾರ್, ಚಿತ್ರನಟ ಶಿವರಾಜ್‌ಕುಮಾರ್, ಪವನ್‌ಕುಮಾರ್, ಹೆಣ್ಣು ಮಕ್ಕಳಾದ ಸುಜಾತಾ, ಗೀತಾ, ಅನಿತಾ, ಮೊಮ್ಮಕ್ಕಳು, ಭೀಮಣ್ಣನಾಯ್ಕ ಹಾಗೂ ಬಂಧು ವರ್ಗದವರು ಪಾಲ್ಗೊಂಡರು.



ನಂತರ ಪಟ್ಟಣದ ಅಂತ್ಯ ಸಂಸ್ಕಾರ ಸ್ಥಳದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಜತೆಗೂಡಿ ನೆಚ್ಚಿನ ನಾಯಕನಿಗೆ ಅಶ್ರುತರ್ಪಣ ನೀಡಿದರು.



ಶ್ರದ್ಧಾಂಜಲಿ ಕಾರ್ಯಕ್ರಮ ಸಮನವಳ್ಳಿ ವ್ಯಾಪ್ತಿಯ `ಬಂಗಾರ ತೋಟ~ದಲ್ಲಿ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಅಭಿಮಾನಿಗಳು ಆಗಮಿಸಿದ್ದರು. ರಾಜಕೀಯ ಮುಖಂಡರನ್ನು ಒಳಗೊಂಡಂತೆ ನೂರಾರು ಅಭಿಮಾನಿಗಳು ನುಡಿ ನಮನ, ಗೀತ ನಮನ ಸಲ್ಲಿಸಿದರು.



ನಟ ಶಿವರಾಜ್‌ಕುಮಾರ್, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್, ರಾಜ್ಯ ರೈತ ಸಂಘದ ತ್ಯಾವಣಿಗಿ ಅಧ್ಯಕ್ಷ ಟಿ.ಎಸ್. ಜಯದೇವ್, ಬಿದರಗೆರೆಯ ಮೋಟಪ್ಪ, ಸಾಗರದ ಉದಯ್‌ಕುಮಾರ್, ವೆಂಕಟೇಶ್ ಸಾಗರ್, ರಾಮಣ್ಣ ಭಜಂತ್ರಿ, ಬಣ್ಣದಬಾಬು ಮತ್ತಿತರರು ಸಂಗೀತ ವಾದ್ಯ, ಗಾಯನ, ಕವನ ನಿವೇದನೆ ಮೂಲಕ `ಅಂದು, ಇಂದು, ಎಂದೆಂದೂ ಅಮರ ಬಂಗಾರಪ್ಪ~ ಎಂದು ಸ್ಮರಿಸಿದರು.



ಜಿ.ವಿ. ಅತ್ರಿ ಸಂಗೀತ ನಿರ್ದೇಶನದಲ್ಲಿ ಬಂಗಾರಪ್ಪ ಹಾಡಿರುವ ಗೀತ ಸಂಕಲನ `ಕರುನಾಡ ಕಂಪು~ ಧ್ವನಿ ಸುರುಳಿಯ ಗೀತೆಗಳನ್ನು ಹಾಕಲಾಗಿತ್ತು. 



ರಾಜ್ಯ, ಜಿಲ್ಲಾ, ತಾಲ್ಲೂಕು ವ್ಯಾಪ್ತಿಯ ರಾಜಕೀಯ ಮುಖಂಡರು, ಮಠಾಧೀಶರು, ಶ್ರದ್ಧಾಂಜಲಿ ಸಮಿತಿಯ ಸದಸ್ಯರು ಹಾಜರಿದ್ದರು.

ಪ್ರತಿಕ್ರಿಯಿಸಿ (+)