ಸೋಮವಾರ, ಮೇ 23, 2022
21 °C

ಸಾಧನೆಯ ಸಂಗಾತಿಗಳು...

ಡಿ.ಎಂ. ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಆ ನೇಕಲ್ ತಾಲ್ಲೂಕಿನ ಹಳ್ಳಿಗಳಿಗೆ ಚಂದಾಪುರದ ಮಹೇಶ್, ಚಿಕ್ಕಹಾಗಡೆಯ ಚಿನ್ನಪ್ಪ ಮತ್ತು ಹೀಲಲಿಗೆಯ ನಾಗವೇಣಿ ಪರಿಚಿತ ಹೆಸರು. ವಿಭಿನ್ನ ಕೌಟುಂಬಿಕ ಹಿನ್ನೆಲೆಯ ಮೂವರನ್ನು ಕೂಡಿಸಿದ್ದು ಸಮಾಜ ಸೇವೆಯ ಬಗೆಗಿನ ತುಡಿತ. ಈ ತುಡಿತಕ್ಕೆ ಪ್ರತಿಫಲ ಎನ್ನುವಂತೆ ನಾಗವೇಣಿ, ಚಿನ್ನಪ್ಪ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು. ಮಹೇಶ್‌ಗೆ ರಾಜ್ಯ ಯುವ ಪುರಸ್ಕಾರದ ಗರಿ. ಮೂರು ಮಂದಿಯ ಗೆಳೆತನಕ್ಕೆ ಮತ್ತು ಸೇವಾ ಚಟುವಟಿಕೆಗೆ ದಶಕಗಳ ಇತಿಹಾಸ.ನಾಗವೇಣಿ ಅವರು `ಮಹಾಲಕ್ಷ್ಮಿ ಯುವತಿ ಮಂಡಳಿ' ಮತ್ತು `ಮಹಾಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ' ಸ್ಥಾಪಿಸಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. `ವಿನಾಯಕ ರೈತ ಸಂಘ' ಮತ್ತು ಚಿನ್ಮಯ ಸೇವಾ ಸಂಘದ ರೂವಾರಿ ಚಿನ್ನಪ್ಪ ಅವರದ್ದು ಗ್ರಾಮೀಣ ಆರೋಗ್ಯ ಸೇವೆ ಮತ್ತು ರೈತ ಜಾಗೃತಿಯೇ ಕಾರ್ಯಕ್ಷೇತ್ರ. ಮಹೇಶ್, `ಕೇರ್ಸ್‌' (ಕಮ್ಯುನಿಟಿ ಅವೇರ್‌ನೆಸ್ ರೂರಲ್ ಡೆವಲಪ್‌ಮೆಂಟ್ ಅಂಡ್ ಎಜುಕೇಶನ್ ಸೊಸೈಟಿ) ಸೇವಾ ಸಂಸ್ಥೆಯ ಮೂಲಕ ತಮ್ಮ ಸಾಮಾಜಿಕ ತುಡಿತಗಳನ್ನು ಕಾರ್ಯರೂಪಕ್ಕಿಳಿಸುತ್ತಿದ್ದಾರೆ. ತಮ್ಮ ಕಾರ್ಯಕ್ಷೇತ್ರ ವಿಸ್ತರಣೆಗಾಗಿ ಪ್ರತ್ಯೇಕವಾಗಿ ಸೇವಾ ಚಟುವಟಿಗಳಲ್ಲಿ ತೊಡಗಿದ್ದರೂ ಅಂತಿಮವಾಗಿ ಈ ಮೂವರು ಗೆಳೆಯರು ಕೂರುವ ಚಕ್ಕಡಿ `ಚಿನ್ಮಯ ಸೇವಾ ಸಂಘ'. 

ಸಿಂಗಪುರದ ಸಿರಿ ಉದ್ಯೋಗ ಒಲ್ಲದ ಮಹೇಶ್

ಮಹೇಶ್ ಡಿಪ್ಲೋಮ ಪದವೀಧರ. ವ್ಯಾಸಂಗದ ನಂತರ ಒದಗಿ ಬಂದಿದ್ದು ಸಿಂಗಪುರದಲ್ಲಿ ಉದ್ಯೋಗದ ಅವಕಾಶ. ಆದರೆ ಪ್ರೌಢಶಾಲಾ ಹಂತದಿಂದಲೇ ಸಾಮಾಜಿಕ ಸೇವಾ ಹಂಬಲ ಹೊಂದಿದ್ದ ಅವರು ಆಯ್ಕೆ ಮಾಡಿಕೊಂಡಿದ್ದು ತಮ್ಮ ತುಮುಲಗಳನ್ನು ಕಾರ್ಯರೂಪಕ್ಕಿಳಿಸುವ ಕಾಯಕವನ್ನು. 1999ರಲ್ಲಿ `ಚಂದಾಪುರ ಯುವಕ ಸಂಘ' ಹುಟ್ಟುಹಾಕಿದರು.ಪ್ರಸ್ತುತ `ಕೇರ್ಸ್‌' (ಕಮ್ಯುನಿಟಿ ಅವೇರ್‌ನೆಸ್ ರೂರಲ್ ಡೆವಲಪ್‌ಮೆಂಟ್ ಅಂಡ್ ಎಜುಕೇಶನ್ ಸೊಸೈಟಿ) ಅವರ ಕರ್ಮಭೂಮಿ. ಮಹೇಶ್‌ರ ನಿಷ್ಕಾಮ ಕರ್ಮಕ್ಕೆ ರಾಜ್ಯ ಯುವ ಪ್ರಶಸ್ತಿಯೂ ಒಲಿದಿದೆ. ನಾಲ್ಕು ವರ್ಷಗಳಿಂದ ವೃದ್ಧಾಶ್ರಮ ಆರಂಭಿಸಿರುವ ಅವರದ್ದು ಆಶ್ರಮದ ಏಳು ಮಂದಿ ಸೇರಿದಂತೆ ಹತ್ತು ಮಂದಿಯ ಕುಟುಂಬ. ಆಶ್ರಮಕ್ಕೂ ಮನೆಗೂ ಎರಡು ಕಿಲೋಮೀಟರ್ ದೂರವಿದ್ದ ಕಾರಣ ಸ್ವಂತ ಮನೆಯನ್ನು ಬಾಡಿಗೆಗೆ ನೀಡಿ ಆಶ್ರಮದ ಪಕ್ಕದಲ್ಲಿಯೇ ಬಾಡಿಗೆ ಮನೆ ಮಾಡಿದ್ದಾರೆ. ಮಾಸಿಕ 12 ಸಾವಿರ ರೂಪಾಯಿ ಬಾಡಿಗೆ ನೀಡಿ ಆಶ್ರಮ ನಡೆಸುತ್ತಿರುವ ಅವರು ದಾನಿಗಳೇ ತಮ್ಮ ಆರ್ಥಿಕ ಮೂಲ ಎನ್ನುತ್ತಾರೆ. ಮಹೇಶ್ ಅವರ ಸೇವಾ ಕಾರ್ಯಕ್ಕೆ ಅವರ ಕುಟುಂಬ ಕೈ ಜೋಡಿಸಿದೆ. ಆಶ್ರಮಕ್ಕೆ ನಿತ್ಯ ಮನೆಯಿಂದಲೇ ಊಟ ಪೂರೈಕೆ. ಅವರು ವಾರಗಳ ಕಾಲ ಊರು ತೊರೆದರೂ ಅವರ ಪತ್ನಿ ಆಶ್ರಮದ ಪೂರ್ಣ ಜವಾಬ್ದಾರಿ ನಿಭಾಯಿಸುತ್ತಾರೆ. ಒಬ್ಬ ಉನ್ನತ ಪೊಲೀಸ್ ಅಧಿಕಾರಿ ತನ್ನ ತಾಯಿಯನ್ನು ಈಕೆ ಅನಾಥೆ, ಯಾರು ಇಲ್ಲ ಎಂದು ಆಶ್ರಮದಲ್ಲಿ ಬಿಟ್ಟು ಹೋಗಿದ್ದನ್ನು ನೆನಪು ಮಾಡಿಕೊಳ್ಳುವ ಮಹೇಶ್, ಮಾನವೀಯ ಸೇವೆ ಪ್ರತಿಪಾದಿಸುತ್ತಾರೆ.ಕೇರ್ಸ್‌ ಸಂಸ್ಥೆಯಿಂದ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೀಡಲಾಗುತ್ತಿದ್ದು, ಸರ್ಕಾರ 25 ರೂಪಾಯಿ ತೆಗೆದುಕೊಳ್ಳವಂತೆ ಸೂಚಿಸಿದೆ. ಕೆಲವರು ಆ ಹಣವನ್ನೂ ಕೊಡಲಾಗದಷ್ಟು ಅಶಕ್ತರಿದ್ದಾರೆ. ಕೊನೆಯ ಪಕ್ಷ ಅಲ್ಲಿನ ಖರ್ಚು ವೆಚ್ಚ ಅಲ್ಲೇ ಸರಿದೂಗುತ್ತಿರುವುದೇ ನೆಮ್ಮದಿ ಎನ್ನುವುದು ಮಹೇಶ್ ಮಾತು. ತಾಲ್ಲೂಕಿನಲ್ಲಿ `ರಕ್ತ ಸಂಜೀವಿನಿ'ಯಂತೆ ಹೆಸರಾಗಿರುವ ಮಹೇಶ್‌ರನ್ನು ನಾರಾಯಣ ಹೃದಯಾಲಯ ಮತ್ತು ಸ್ಪರ್ಶ ಆಸ್ಪತ್ರೆಗೆ ದಾಖಲಾಗುವ ಹಲವು ಮಂದಿ ರಕ್ತಕ್ಕಾಗಿ ಸಂಪರ್ಕಿಸುತ್ತಾರೆ.ನೆಗಟಿವ್ ರಕ್ತದ ಗುಂಪಿನ ಅಗತ್ಯ ಬಲ್ಲ ಅವರ ಬಳಿ ಆನೇಕಲ್ ತಾಲ್ಲೂಕಿ ನೆಗಟಿವ್ ರಕ್ತದ ಗುಂಪಿನವರ ಪೂರ್ಣ ಮಾಹಿತಿಯೇ ಇದೆ. ಆರೋಗ್ಯ ಶಿಬಿರ, ರಕ್ತದ ನೆರವು ಪಡೆದವರು ಕೆಲ ವೇಳೆ ನಾವು ಚಿಕ್ಕವರೂ ಎನ್ನುವುದನ್ನೂ ಮರೆತು ಕಾಲಿಗೆ ಬಿದ್ದ ಪ್ರಸಂಗಗಳನ್ನು ಮಹೇಶ್ ನೆನಪು ಮಾಡಿಕೊಳ್ಳುತ್ತಾರೆ. ಸದ್ಯ `ವಾಲಂಟರಿ ಬ್ರಿಗೇಡ್' ತಂಡದ ರೂಪುರೇಷೆಗಳನ್ನು ಸಿದ್ಧಮಾಡುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವ ಮನಸ್ಸಿನವರ ತಂಡ ಕಟ್ಟಲು ಮುಂದಾಗಿದ್ದಾರೆ.  

ಚಿನ್ನಪ್ಪನವರ ಚಿನ್ನದಂತಹ ಕೆಲಸ

ಚಿಕ್ಕಹಾಗಡೆಯ ಚಿನ್ನಪ್ಪ ಮನೆ, ಕುಟುಂಬಕ್ಕೆ ಸೀಮಿತವಾಗಿದ್ದವರು. ಅವರನ್ನು ಸಾಮಾಜಿಕ ಚಟುವಟಿಕೆಗೆ ಪ್ರೇರೇಪಿಸಿದ್ದು ಕಷ್ಟದ ಗಳಿಗೆ. ಅವರ ಸಾಮಾಜಿಕ ಬದ್ಧತೆಯ ಕಾರ್ಯನಿರ್ವಹಣೆಗೆ ನ್ಯೂಯಾರ್ಕ್‌ನ ನಿನಾ ಕ್ರಿಶ್ಚಿಯಾನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.2010-11ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕಾರ ಸಹ ದೊರೆತಿದೆ. `ವಿನಾಯಕ ರೈತ ಸಂಘ'ದಿಂದ ಸಾಮಾಜಿಕ ಸೇವೆಗೆ ಅಡಿ ಇಟ್ಟವರು ಚಿನ್ನಪ್ಪ. `ನಮ್ಮ  ಬೆಂಗಳೂರು' ಎನ್ನುವ ಮಾಸ ಪ್ರತಿಕೆ ಆರಂಭಿಸಿ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ. ಬೆನ್ನಿನಲ್ಲಿ ಕಾಲು ಬೆಳೆದು ವೈದ್ಯಲೋಕಕ್ಕೆ ಸವಾಲಾಗಿದ್ದ `ಪ್ರಭು ಪ್ರಕರಣ'ವನ್ನು ಆಸ್ಪತ್ರೆಗೆ ಮುಟ್ಟಿಸಿದ್ದು ಇದೇ ಚಿನ್ನಪ್ಪ. ತಮಿಳುನಾಡಿನ ಜಕ್ಕಣಕೋಟೆಗೆ ಭೇಟಿ ನೀಡಿದ್ದಾಗ ಅಲ್ಲಿನ ಶಾಲೆ ಬಳಿ ಆಟವಾಡುತ್ತಿದ್ದ ಪ್ರಭುವನ್ನು ಗಮನಿಸಿ ಆತನ ಕುಟುಂಬಕ್ಕೆ ಎಲ್ಲ ರೀತಿಯ ಭರವಸೆ ನೀಡಿ ಸ್ಪರ್ಶ ಆಸ್ಪತ್ರೆಗೆ ಕರೆತಂದವರು. ಅವರ ಬದುಕಿನ ಹಾದಿ ಕುರಿತು ಅವರು ಹೇಳುವುದು ಹೀಗೆ.

`ನನ್ನ ತಮ್ಮ ಕಾರ್ಖಾನೆಯೊಂದರ ಕೆಲಸ ಮಾಡುತ್ತಿದ್ದ. ಅಲ್ಲಿನ ವಾತಾವರಣದಿಂದ ಆರೋಗ್ಯ ಹದಗೆಟ್ಟಿತ್ತು. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿದೆವು. ಹತ್ತು ಬಾಟಲಿ ರಕ್ತ ಬೇಕಾಗಿತ್ತು. ಹಳ್ಳಿಯಿಂದ ಬಂದ ನಮಗೆ ಇಷ್ಟೊಂದು ಯುನಿಟ್ ರಕ್ತ ಹೊಂದಿಸುವುದಾದರೂ ಹೇಗೆ? ಎನ್ನುವ ಚಿಂತೆ.ಆ ಸಮಯದಲ್ಲಿ ಆಸ್ಪತ್ರೆಯ ಕೆಲಸಗಾರರೊಬ್ಬರು ರಾಮಯ್ಯ ಕಾಲೇಜಿನ ಹಾಸ್ಟೆಲ್‌ನ ವಿದ್ಯಾರ್ಥಿಗಳ ನೆರವು ಪಡೆಯಲು ಹೇಳಿದರು. ರಾತ್ರಿ 20-30 ವಿದ್ಯಾರ್ಥಿಗಳು ರಕ್ತ ಕೊಡಲು ಮುಂದೆ ಬಂದರು. ಆ ಘಟನೆಯೇ ನನ್ನ ಮೇಲೆ ಪರಿಣಾಮ ಬೀರಿದ್ದು. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದ್ದು. ವೈದ್ಯಕೀಯ ಸೌಲಭ್ಯ ದೊರೆಯದಿದ್ದರೆ ಕುಟುಂಬ ಎಷ್ಟರ ಮಟ್ಟಿಗ್ಗೆ ಕುಗ್ಗುತ್ತದೆ ಎನ್ನುವ ಅರಿವಾಗಿದ್ದು. ಮೊದಲು ನೆಹರು ಯುವ ಕೇಂದ್ರದ ಕಾರ್ಯಕರ್ತನಾಗಿ ಸೇರಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಹಾದಿಗಳನ್ನು ಸೂಕ್ಷ್ಮವಾಗಿ ಕಂಡುಕೊಂಡೆ. ಆಗ ಮಾಸಿಕ 500 ರೂಪಾಯಿ ಗೌರವ ಧನದ ಸಂಭಾವನೆ.ನೆಹರು ಯುವ ಕೇಂದ್ರದಿಂದ ಹೊರಬಂದಾಗ ಜತೆಯಾದವರು ನಾಗವೇಣಿ ಮತ್ತು ಮಹೇಶ್. ಮೂವರು ಒಗ್ಗೂಡಿ `ಚಿನ್ಮಯ ಸೇವಾ ಸಂಘ' ಹುಟ್ಟು ಹಾಕಿದೆವು. ಪರಿಸರ ಜಾಗೃತಿ, ನೇತ್ರ ತಪಾಸಣೆ, ಕ್ರೀಡಾಕೂಟಗಳು, ರಕ್ತದಾನ ಶಿಬಿರ, ಅಂತರರಾಜ್ಯ ಸಾಂಸ್ಕೃತಿಕ ಶಿಬಿರ, ರೈತ ಜಾಗೃತಿ ಶಿಬಿರ, ಯುವಜನೋತ್ಸವಗಳ ಮೂಲಕ ನಮ್ಮ ಚಟುವಟಿಕೆ ಸಾಗುತ್ತಿದೆ. ನಿಮ್ಹೋನ್ಸ್‌ನ ಮುಂದುವರೆದ ಅನುಸಂಧಾನ ಕೇಂದ್ರದ ಸದಸ್ಯನಾಗಿದ್ದೇನೆ. ಕೇಂದ್ರದ ಮೂಲಕ ಆಯೋಜಿತವಾಗುವ ಆರೋಗ್ಯ ಶಿಬಿರಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಮತ್ತು ಶಿಬಿರಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ಹೊಣೆ ನನ್ನದು'.   ಒಲಿದ ಪಂಚಾಯಿತಿ ಅಧ್ಯಕ್ಷ ಗಾಧಿ

ಚಂದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಅವರಿಗೆ ಜನಪರ ಚಟುವಟಿಕೆಗಳೇ ರಾಜಕಾರಣಕ್ಕೆ ಬುನಾದಿ. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿರುವ ಅವರದ್ದು ಪತಿ ಮತ್ತು ಒಬ್ಬ ಮಗಳ ಸುಖಿ ಸಂಸಾರ. ಮೂಲತಃ ರೈತ ಕುಟುಂಬದ ನಾಗವೇಣಿ, ಕೃಷಿ ಸಂಕಷ್ಟಗಳ ಜತೆ ಬೆಳೆದವರು. ಹೆಬ್ಬಾಳದ ಕೃಷಿ ವಿಶ್ವ ವಿದ್ಯಾಲಯದಲ್ಲಿ ತರಬೇತಿ ಪಡೆದು ರೈತ ಜಾಗೃತಿಯಲ್ಲಿ ತೊಡಗಿದವರು.ಆ ನಂತರ ಪೂರ್ಣವಾಗಿ ಹೊರಳಿದ್ದು ಮಹಿಳಾ ಸಬಲೀಕರಣದತ್ತ. `ಮಹಾಲಕ್ಷ್ಮಿ ಯುವತಿ ಮಂಡಳಿ' ಸ್ಥಾಪಿಸುವ ಮೂಲಕ ಯವತಿಯರಿಗೆ ಹೊಲಿಗೆ ತರಬೇತಿ, ಗುಡಿ ಕೈಗಾರಿಕೆಗಳ ಮಾಹಿತಿ, ಸ್ತ್ರೀಶಕ್ತಿ ಸಂಘಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಹಣಕಾಸು ನೆರವು ಕೊಡಿಸುತ್ತಿದ್ದಾರೆ. ಉದ್ಯಮಶೀಲತಾ ತರಬೇತಿ ಶಿಬಿರಗಳನ್ನು ಆಯೋಜಿಸಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿದ್ದಾರೆ. ಅವರ ಸೇವಾ ಚಟುವಟಿಕೆಗೆ 2005ರಲ್ಲಿ ರಾಷ್ಟ್ರೀಯ ಯುವ ಪುರಸ್ಕಾರ ಸಂದಿದೆ. `ಧನಲಕ್ಷ್ಮಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ' ಗುಡಿಕೈಗಾಡಿಕೆಗಳನ್ನು ನಡೆಸುವ ಮಹಿಳೆಯರಿಗೆ ಸಾಲ ನೀಡುತ್ತಿದೆ. ಸಂಘದಲ್ಲಿ ಒಟ್ಟು 700 ಷೇರುದಾರರಿದ್ದು, ಒಬ್ಬರು ಒಂದು ಸಾವಿರ ಹಣ ನೀಡಿ ಸದಸ್ಯತ್ವ ಪಡೆಯಬಹುದು. ಷೇರುದಾರರಿಗೆ ಮಾತ್ರ ಸಾಲ. ಮೂಲ ನಿಧಿ 7 ಲಕ್ಷ ರೂಪಾಯಿ ಇದ್ದು, ಶೇ 1ರ ಬಡ್ಡಿದರದಲ್ಲಿ ಗರಿಷ್ಠ 20 ಸಾವಿರದವರೆಗೆ ಸಾಲ ನೀಡಲಾಗುತ್ತದೆ ಎಂದು ಸಂಘದ ಸಾಧನೆಯನ್ನು ವಿವರಿಸುತ್ತಾರೆ ನಾಗವೇಣಿ. 50ರಿಂದ 60 ಸ್ತ್ರೀಶಕ್ತಿ ಸಂಘಗಳಿಗೆ  ಸಾಲ ಕೊಡಿಸಿ ಅಭಿವೃದ್ಧಿಗೆ ನೆರವಾಗಿದ್ದಾರೆ.`ಧನಲಕ್ಷ್ಮಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ರಾಷ್ಟ್ರೀಕೃತ ಬ್ಯಾಂಕುಗಳ ನೆರವನ್ನು ಪಡೆಯದೇ ಬೆಳೆಯುತ್ತಿರುವ ಬಗೆಯನ್ನು ಬಣ್ಣಿಸುತ್ತಾರೆ. ತಾಲ್ಲೂಕಿನಲ್ಲಿ 2 ಸಾವಿರ ಮಂದಿಯನ್ನು ಷೇರುದಾರರನ್ನಾಗಿಸುವ ಗುರಿ ಹೊಂದಿದ್ದಾರೆ. ವಾರ್ಷಿಕ 50ರಿಂದ 60 ಸಾವಿರ ಆದಾಯಗಳಿಸುತ್ತಿರುವ ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉಮೇದು ಅವರದ್ದು.ಮಹೇಶ್ ಅವರ ಸಂಪರ್ಕಕ್ಕೆ: 9945696904.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.