ಶನಿವಾರ, ಜೂನ್ 12, 2021
24 °C
ಟೆನಿಸ್‌: ಮೂರನೇ ಸುತ್ತಿಗೆ ನಡಾಲ್‌, ಫೆಡರರ್‌, ಶರ್ಪೋವಾ

ಸಾನಿಯಾ –ಕಾರಾಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯಾನ ವೆಲ್ಸ್‌, ಅಮೆರಿಕ (ಪಿಟಿಐ): ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಅವರು ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಪಾರಿಬಾಸ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.ಸಾನಿಯಾ ಹಾಗೂ ಕಾರಾ 6–3, 6–4ರಲ್ಲಿ ಅಮೆರಿಕದ ರಾಕೆಲ್‌ ಕೋಪ್ಸ್‌ ಜೋನ್ಸ್ ಹಾಗೂ ಅಬಿಗೇಲ್‌ ಸ್ಪಿಯರ್ಸ್‌ ಎದುರು ಜಯ ಗಳಿಸಿದರು. ಐದನೇ ಶ್ರೇಯಾಂಕ ಪಡೆದಿರುವ ಭಾರತ–ಜಿಂಬಾಬ್ವೆ ಜೋಡಿ ಎರಡೂ ಸೆಟ್‌ಗಳಲ್ಲಿ ಪಾರಮ್ಯ ಮೆರೆಯಿತು. ಈ ಗೆಲುವಿಗಾಗಿ ಒಂದು ಗಂಟೆ 12 ನಿಮಿಷ ತೆಗೆದುಕೊಂಡಿತು.ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌, ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮೂರನೇ ಸುತ್ತು ಪ್ರವೇಶಿಸಿದ್ದಾರೆ.ಅಗ್ರ ಶ್ರೇಯಾಂಕ ಪಡೆದಿರುವ ನಡಾಲ್‌ ಎರಡನೇ ಸುತ್ತಿನಲ್ಲಿ 2–6, 6–4, 7–5ರಲ್ಲಿ ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪನೆಕ್‌ ಎದುರು ಗೆದ್ದರು. ಆದರೆ ಅವರು ಹಲವು ಆತಂಕದ ಕ್ಷಣಗಳಿಂದಾಗಿ ಪಾರಾಗಿ ಈ ಸಾಧನೆ ಮಾಡಿದರು. ಹಾಲಿ ಚಾಂಪಿಯನ್‌ ಕೂಡ ಆಗಿರುವ ರಫೆಲ್‌ ಮೊದಲ ಸೆಟ್‌ನಲ್ಲಿ ಸೋಲು  ಕಂಡಿದ್ದರು.ಆ್ಯಂಡಿ ಮರ್ರೆ ಅವರು ಹಾರ್ಡ್‌ ಕೋರ್ಟ್‌ನಲ್ಲಿ 300ನೇ ಗೆಲುವು ಸಾಧಿಸಿದ ಗೌರವಕ್ಕೆ ಪಾತ್ರರಾದರು. ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 4–6, 6–3, 6–2ರಲ್ಲಿ ಜೆಕ್‌ ಗಣರಾಜ್ಯದ ಲುಕಾಸ್‌  ರೊಸೊಲ್‌ ಎದುರು ಗೆದ್ದರು.ಏಳನೇ ಶ್ರೇಯಾಂಕ ಪಡೆದಿರುವ ರೋಜರ್ ಫೆಡರರ್‌ 6–2, 7–6ರಲ್ಲಿ ಫ್ರಾನ್ಸ್‌ನ ಪಾಲ್‌ ಹೆನ್ರಿ ಮಾಥಿಯು ಎದುರು ಜಯ ಗಳಿಸಿದರು. ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಸ್ಟಾನಿಸ್ಲಾಸ್‌ ವಾವ್ರಿಂಕಾ 6–3, 7–5ರಲ್ಲಿ ಕ್ರೊಯೇಷ್ಯಾದ ಇವೊ ಕಾರ್ಲೊವಿಕ್‌ ಎದುರು ಜಯ ಗಳಿಸಿದರು. ಆದರೆ ಆಸ್ಟ್ರೇಲಿಯಾದ ಲೆಟನ್‌ ಹೆವಿಟ್‌ 6–7, 4–6ರಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್‌ ಎದುರು ಸೋಲು ಕಂಡರು.ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಚೀನಾದ ಲೀ ನಾ ಗೆಲುವು ಸಾಧಿಸಿದರು. ಅವರು 6–1, 7–5ರಲ್ಲಿ ತಮ್ಮ ದೇಶದವರೇ ಆದ ಜೆಂಗ್‌ ಜೀ ಎದುರು ಗೆದ್ದರು.  ಹಾಲಿ ಚಾಂಪಿಯನ್‌ ಮರಿಯಾ ಶರ್ಪೋವಾ 6–1, 6–4ರಲ್ಲಿ ಜರ್ಮನಿಯ ಜಾರ್ಜಸ್‌ ಅವರನ್ನು ಪರಾಭವಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.