ಗುರುವಾರ , ಮೇ 26, 2022
31 °C

ಸಾಮಾಜಿಕ ಕಾರ್ಯ ಶ್ಲಾಘನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹನ್ನೆರಡನೇ ಶತಮಾನದ ತತ್ವಾದರ್ಶಗಳು ಮುರುಘಾಮಠ ಮೂಲಕ ನಡೆದುಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.ಮುರುಘಾಮಠದ ಆವರಣದಲ್ಲಿ ಮಂಗಳವಾರ ನಡೆದ 35 ಜೋಡಿಗಳ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ವಚನ ವಸಂತ ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.  ಬಡವರ ಮತ್ತು ಶೋಷಿತರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಮುರುಘಾ ಶರಣರು ತಮ್ಮ ತಂದೆ ಬಂಗಾರಪ್ಪ ಅವರಿಗೂ ಆದರ್ಶರಾಗಿದ್ದರು.ಕಳೆದ 21 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಕಾರ್ಯ ನಡೆಸಿಕೊಂಡು ಬರುತ್ತಿರುವುದು ಸಾಮಾನ್ಯದ ವಿಷಯವಲ್ಲ. ಬಂಗಾರಪ್ಪ ಅವರು ಚಂದ್ರಹಾಸ ಟ್ರಸ್ಟ್ ಸ್ಥಾಪಿಸಿ, ಶಿವಮೊಗ್ಗ ಮತ್ತು ಸಾಗರದಲ್ಲಿ ಸುಮಾರು 18 ಸಾವಿರ ಮದುವೆಗಳನ್ನು ಮಾಡಿಸಲಾಗಿತ್ತು ಎಂದು ವಿವರಿಸಿದರು.ಮಾಜಿ ಶಾಸಕ ಚಿಕ್ಕಜೋಗಿಹಳ್ಳಿಯ ಕೆ.ವಿ. ರವೀಂದ್ರಬಾಬು ಮಾತನಾಡಿ, ಬಸವಣ್ಣನ ತತ್ವಗಳನ್ನು ಜನಪ್ರತಿನಿಧಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬಂಗಾರಪ್ಪ ಸಹ ಶೋಷಿತರ ಪರ ಕೆಲಸ ಮಾಡಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು ಎಂದು ಸ್ಮರಿಸಿದರು.ಸಿದ್ಧಯ್ಯನಕೋಟೆ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮನೆಯಲ್ಲಿನ ಮದುವೆಗೂ ಮಠದಲ್ಲಾಗುವ ಮದುವೆಗೂ ಸಾಕಷ್ಟು ವ್ಯತ್ಯಾಸವಿದೆ. ಮನೆಯಲ್ಲಿ ಸಂಪ್ರದಾಯ ಬದ್ಧವಾದರೆ ಮಠದಲ್ಲಿ ನಡೆಯುವುದು ಪರಿವರ್ತನೆಗೆ ಸಂಬಂಧಿಸಿದ್ದಾಗಿದೆ. ಜನ ಈ ಬಗ್ಗೆ ವಿಚಾರಶೀಲರಾಗುವ ಜತೆಗೆ ಮಕ್ಕಳಿಗೆ ಸನ್ನಡತೆ ಕಲಿಸುವ ಮೂಲಕ ಸುಸಂಸ್ಕೃತರನ್ನಾಗಿ ಮಾಡಬೇಕು ಎಂದು ನುಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾವೈಕ್ಯ ರಾಷ್ಟ್ರವಾಗಿದೆ. ನಮಗೆ ಆ ಜಾತಿ ಈ ಜಾತಿ ಗೊಡವೇ ಬೇಡ. ಹೆಣ್ಣು ಮತ್ತು ಗಂಡು ಮತ್ತೆ ಒಳ್ಳೆಯವರು ಕೆಟ್ಟವರೆಂಬ ಎರಡೇ ಜಾತಿ. ನಾವು ಒಳ್ಳೆಯವರ ಕಡೆ ಸದಾ ಸಾಗೋಣ.ಸದಾ ಒಳ್ಳೆಯದನ್ನು ಆಲೋಚನೆ ಮಾಡಿದರೇ ದೇಶದ, ರಾಜ್ಯದಲ್ಲಿನ ಕುಟುಂಬಗಳ ಆರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯಕರ ಆಲೋಚನೆಗಳು ದೇಶ ಸದೃಢವಾಗಿಸಬಲ್ಲವು ಎಂದರು.ಸಂಗೀತ ಶಿಕ್ಷಕ ತುಮಕೂರ‌್ಲಹಳ್ಳಿಯ ಕೆ.ಓ. ಶಿವಣ್ಣ ಹಾಡಿರುವ ವಚನ ವಸಂತ ಧ್ವನಿಸುರಳಿ ಬಿಡುಗಡೆ ಮಾಡಲಾಯಿತು.ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ. ಪ್ರಭಾಕರ, ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಧುಸೂದನ ಕಲ್ಮಡಿ, ನಾಗರಿಕ ಹಕ್ಕುಗಳ ರಕ್ಷಣಾ ವೇದಿಕೆಯ ಕೆ.ಪಿ. ಪಂಪಾಪತಿ, ಕಾರ್ಯಕ್ರಮದ ದಾಸೋಹಿ ಡಾ.ಎನ್.ಬಿ. ಸಜ್ಜನ್   ಹಾಜರಿದ್ದರು. ಜಮುರಾ~ ಕಲಾವಿದರು ಪ್ರಾರ್ಥಿಸಿದರು. ಡಾ.ಜಯಣ್ಣ ಸ್ವಾಗತಿಸಿದರು. ಜ್ಞಾನಮೂರ್ತಿ ವಂದಿಸಿದರು. ಪ್ರದೀಪ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.