ಮಂಗಳವಾರ, ಮೇ 18, 2021
28 °C

ಸಾಮಾಜಿಕ ನ್ಯಾಯಕ್ಕೆ ಮೀಸಲಾತಿ ಪರ್ಯಾಯವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಳ ಮೀಸಲಾತಿ ಪ್ರಶ್ನೆ ಉದ್ಭವಿಸಿದ್ದು ಏಕೆ? ಈಗಾಗಲೇ ಉಲ್ಲೇಖಿಸಿರುವಂತೆ, ಮೀಸಲಾತಿ ಅಡಿಯಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ಮಾತ್ರ ಸಾಧಿಸಬಹುದೇ ಹೊರತು ಎಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯುದಯವನ್ನಲ್ಲ.ಮೀಸಲಾತಿಯ ಅಡಿಯಲ್ಲಿ ಸಿಗುವ ಹುದ್ದೆಗಳ ಸಂಖ್ಯೆಯೇ ಆಗಲಿ, ಶಿಕ್ಷಣ ಕ್ಷೇತ್ರದಲ್ಲಿ ದೊರಕುವ ಅವಕಾಶಗಳೇ ಆಗಲಿ, ಸುಮಾರು ಮೂರು ಕೋಟಿ ಜನತೆಯ ನಿರುದ್ಯೋಗ ನಿವಾರಿಸಲು ಸಾಧ್ಯವಿಲ್ಲ. ಇದು ಬಡತನ ನಿವಾರಣಾ ಕಾರ್ಯಕ್ರಮವಂತೂ ಅಲ್ಲವೇ ಅಲ್ಲ.ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 101 ಜಾತಿಗಳು ಇದ್ದರೆ, ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ 50 ಬುಡಕಟ್ಟುಗಳಿವೆ. ಪ್ರಜಾಸಂಖ್ಯೆಯ ದೃಷ್ಟಿಯಿಂದ ಈ ಜಾತಿಗಳು ಸಮಾನ ಶಕ್ತಿಯನ್ನಂತೂ ಪಡೆದಿಲ್ಲ.ಸಾಮಾಜಿಕವಾಗಿಯಾಗಲೀ, ಶೈಕ್ಷಣಿಕವಾಗಿಯೇ ಆಗಲಿ, ಈ ಜಾತಿಗಳು ಶ್ರೇಣಿಕೃತ ವ್ಯವಸ್ಥೆಯಲ್ಲಿ ಮಾತ್ರ ಒಂದರ ಮೇಲೊಂದು ಕುಳಿತು ಒಂದು ಸ್ಥಾನ ಪಡೆಯಬಹುದೇ ಹೊರತು ಒಂದರ ಪಕ್ಕ ಒಂದು ಅವು ಕುಳಿತುಕೊಳ್ಳಲು ಸಾಧ್ಯವಿಲ್ಲ.ಇದನ್ನೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು `ಗ್ರೇಡೆಡ್ ಇನ್ ಇಕ್ವಾಲಿಟಿ- ಅಸೆಂಡಿಂಗ್ ಆರ್ಡರ್ ಆಫ್ ರೆವರೆನ್ಸ್ ಅಂಡ್ ಡಿಸೆಡಿಂಗ್ ಆರ್ಡರ್ ಆಫ್ ಕಂಟೆಂಪ್ಟ್~ ಎಂದು ಬಣ್ಣಿಸಿದ್ದು.

 

ಸಾಮಾಜಿಕವಾಗಿಯಂತೂ ಈ ಜಾತಿಗಳ ನಡುವೆ ಇರುವ ಅಸಮಾನತೆ ಎಷ್ಟು ಕ್ರೂರವಾಗಿದೆ ಎಂದರೆ ಈ ಜಾತಿಗಳ ನಡುವೆಯೇ ಅಸ್ಪೃಶ್ಯತೆಯೂ ಇದೆ, ಅಸಹನೆಯೂ ಇದೆ. ಶೈಕ್ಷಣಿಕವಾಗಿಯಂತೂ ಪರಿಶಿಷ್ಟ ಜಾತಿಯಲ್ಲಿ ಇರುವ 101 ಜಾತಿಗಳು ಸಮಾನ ರೇಖೆಯಲ್ಲಿ ನಿಂತು ಸಿಕ್ಕುವ ಬೆರಳೆಣಿಕೆಯಷ್ಟು ಹುದ್ದೆಗಳಿಗೆ ಸ್ಪರ್ಧಿಸಲು ಸಾಧ್ಯವೇ ಇಲ್ಲ.ಹಾಗಾಗಿ ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ಪದರದಲ್ಲಿ ಬರುವ ಜಾತಿಗಳು ಅದರಲ್ಲೂ ವಿಶೇಷವಾಗಿ ಜನಸಂಖ್ಯಾ ಬೆಂಬಲದಿಂದ ಅಲ್ಪಸ್ವಲ್ಪ ರಾಜಕೀಯ ಅಧಿಕಾರದ ರುಚಿಯನ್ನು ಕಂಡಿರುವ ಜಾತಿಗಳು, ಸಿಕ್ಕುವಷ್ಟು ಕೆಲವೇ ಕೆಲವು ಸೌಲಭ್ಯಗಳನ್ನು ಬೇರೆ ಜಾತಿಗಳ ನಡುವೆ ಹಂಚಿಕೊಳ್ಳದೆ ಸ್ವಜಾತಿಯಲ್ಲಿಯೇ ಕೊಡ ಮಾಡಿಕೊಡುವುದು ಜಾತಿಪದ್ಧತಿಯ ಒಂದು ಬಹುಮುಖ್ಯ ಲಕ್ಷಣ. ಹಾಗಾಗಿ ಈ ಜಾತಿಗಳ ನಡುವೆ ಇರುವಂತಹ ಅಸಮಾನತೆ, ಅಸಹನೆ ಮತ್ತು ಪೈಪೋಟಿ ಒಳಮೀಸಲಾತಿಯ ಒತ್ತಾಯವನ್ನು ಸಹಜವಾಗಿ ಹುಟ್ಟುಹಾಕಿವೆ.

ಒಳ ಮೀಸಲಾತಿ ಅವಶ್ಯಕತೆ ಇದೆಯೇ? ಮೊದಮೊದಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳನ್ನು ಮೂರು ಅವಿಭಾಜ್ಯ ಅಂಗಗಳು ಎಂದು ಗುರುತಿಸಲಾಗಿತ್ತು. ಈ ಬಲವಾದ ನಂಬಿಕೆಗೆ ಪುಷ್ಟಿ ಕೊಡುವ ಪ್ರಕರಣ 1962ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕೂಡ ಒಂದು ಪ್ರಮುಖ ಕಾರಣ.ಡಾ. ನಾಗನಗೌಡ ಸಮಿತಿಯ ವರದಿಯ ಆಧಾರದ ಮೇಲೆ ಆಗಿನ ಮೈಸೂರು ಸರ್ಕಾರ ಹಿಂದುಳಿದ ವರ್ಗಗಳಲ್ಲಿ ಒಳಮೀಸಲಾತಿಯನ್ನು ಕೊಟ್ಟಾಗ ಹಿಂದುಳಿದ ವರ್ಗಗಳ ನಡುವೆಯೇ ಈ ರೀತಿ ಹಿಂದುಳಿದವರು ಮತ್ತು ಅತಿ ಹಿಂದುಳಿದವರು ಎಂದು ಒಳಮೀಸಲಾತಿ ಕೊಡಲು ಬರುವುದಿಲ್ಲ ಎಂದು ಈ ಮೀಸಲಾತಿಯನ್ನು ಅನೂರ್ಜಿತಗೊಳಿಸಿ ಇಡೀ ಹಿಂದುಳಿದ ಜಾತಿಗಳಿಗೆ ರಾಜ್ಯದಲ್ಲಿ ಮೀಸಲಾತಿ ದೊರಕದೇ ಇರುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿತ್ತು.

 

ಆ ಸನ್ನಿವೇಶದಲ್ಲಿ ಈ ವರ್ಗಗಳಲ್ಲಿ ಯಾವುದೇ ವರ್ಗಗಳ ಒಳ ಮೀಸಲಾತಿಯಾಗಲೀ, ಪುನರ್ ವರ್ಗೀಕರಣ ಆಗಲೀ ಅಸಾಧ್ಯವೆಂದೇ ನಂಬಲಾಗಿತ್ತು. ಸುಮಾರು 15 ವರ್ಷಗಳ ನಂತರ ಈ ಒಂದು ಗಂಭೀರ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸಿ ಹಿಂದುಳಿದ ವರ್ಗಗಳನ್ನು, ಹಿಂದುಳಿದ ಸಮುದಾಯಗಳು, ಹಿಂದುಳಿದ ಜಾತಿಗಳು ಮತ್ತು ಹಿಂದುಳಿದ ಬುಡಕಟ್ಟುಗಳು ಎಂದು ವರ್ಗೀಕರಿಸಿತು.ಶೇ 19.2 ರಷ್ಟು ಜನಸಂಖ್ಯೆಯಿದ್ದ ಹಿಂದುಳಿದ ಸಮುದಾಯಗಳಿಗೆ ಶೇ 16,  ಶೇ 14.47ರಷ್ಟು ಇದ್ದ ಜಾತಿಗಳಿಗೆ ಶೇ 10 ಮತ್ತು ಶೇ 8ರಷ್ಟು ಇದ್ದ ಹಿಂದುಳಿದ ಬುಡಕಟ್ಟುಗಳಿಗೆ ಶೇ 6ರಷ್ಟು ಹುದ್ದೆಗಳನ್ನು ಮೀಸಲು ಶಿಫಾರಸು ಮಾಡಲಾಯಿತು. 

 ಈ ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ `ವಸಂತಕುಮಾರ್~ ಮೊಕದ್ದಮೆಯಲ್ಲಿ ಎತ್ತಿಹಿಡಿಯಿತು.ಆ ನಂತರ ಮಂಡಲ್ ಆಯೋಗದ ಶಿಫಾರಸುಗಳನ್ನು ಪರಿಶೀಲಿಸುವಾಗ ಈ ಪ್ರಶ್ನೆ ಆ ಮೊಕದ್ದಮೆಯಲ್ಲಿ ಉದ್ಭವಿಸಿರಲಿಲ್ಲ. ಆದರೂ ಸ್ವಯಂ ಪ್ರೇರಣೆಯಿಂದ ಈ ಪ್ರಶ್ನೆಯನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ 1992ರಲ್ಲಿ `ಇಂದ್ರಸಾಮಿ~ ಮೊಕದ್ದಮೆಯಲ್ಲಿ ಒಳಮೀಸಲಾತಿಯನ್ನು ಎತ್ತಿಹಿಡಿದಿದೆ.ಅಷ್ಟೇ ಅಲ್ಲದೆ, ವರ್ಗೀಕರಣಕ್ಕೆ ಮಾರ್ಗಸೂಚಿ ರೂಪಿಸಿತು. ವರ್ಗೀಕರಣ ಸರಿಯಾಗಿ ಆಗಬೇಕು, ಕೇವಲ ಆರ್ಥಿಕ ಆಧಾರದ ಮೇಲೆ ವರ್ಗೀಕರಣ ಮಾಡಬಾರದು, ಪ್ರತಿಯೊಂದು ಉಪ ವರ್ಗಗಳ ಪ್ರತ್ಯೇಕ ಕೋಟಾ ಮೀಸಲು ಸ್ಪಷ್ಟವಾಗಿರಬೇಕು ಇತ್ಯಾದಿಯಾಗಿ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಯಿತು.ಈ ಹಿನ್ನೆಲೆಯಲ್ಲಿ ಇದೇ ಸೂತ್ರಗಳ ಅನ್ವಯ ಪರಿಶಿಷ್ಟ ಜಾತಿಯಲ್ಲಿಯೂ ಸಹ ಒಳಮೀಸಲಾತಿಯನ್ನು ಕೊಡಬಹುದೇ ಎಂಬ ಪ್ರಶ್ನೆಯನ್ನು ಸೂಕ್ತ ಮಾಹಿತಿ ಆಧಾರದ ಮೇಲೆ ಪಡೆದಿದ್ದೇ ಆದರೆ ಈ ಸೂತ್ರಗಳನ್ನು ಪರಿಶಿಷ್ಟ ಜಾತಿಗಳ ನಡುವೆಯೂ ಸಹ ಒಳಮೀಸಲಾತಿಯನ್ನು ಕೊಡುವುದಕ್ಕೆ ಇಷ್ಟೇ ಸಂದರ್ಭೋಚಿತವಾಗಿ ಬಳಸಿ ಒಳಮೀಸಲಾತಿ ಕೊಡಬಹುದು ಎಂಬ ಉತ್ತರ ಗೋಚರಿಸುತ್ತದೆ.ಪರಿಶಿಷ್ಟ ಜಾತಿ ಮತ್ತಿತರರ ನಡುವೆ ಸೂಕ್ತ ಪ್ರಾತಿನಿಧ್ಯಕ್ಕೆ ಮೀಸಲಾತಿ ಅಗತ್ಯವಿರುವಾಗ ಪರಿಶಿಷ್ಟ ಜಾತಿಗಳ ನಡುವೆಯೇ ಇರುವ ಅಸಮಾನತೆಗೆ ಒಳಮೀಸಲಾತಿ ಒಂದು ಉತ್ತರ.

ಈ ರೀತಿ ಒಳ ಮೀಸಲಾತಿ ಕೊಡುವಾಗ ಪರಿಶಿಷ್ಟ ಜಾತಿಗಳಲ್ಲಿ ಇರುವ 3 ವರ್ಗಗಳಾದ ಸ್ಪೃಶ್ಯರು ಮತ್ತು ಅಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವೆ ಎಡಗೈ ಮತ್ತು ಬಲಗೈ ಸ್ಥೂಲವಾಗಿ ವರ್ಗೀಕರಣಗೊಳ್ಳಲೇ ಬೇಕಾಗುತ್ತದೆ.ಸಮೀಕ್ಷೆ ಮೂಲಕ ಈ 3 ಗುಂಪುಗಳ ನಡುವೆ ಇರುವ ಅಸಮಾನತೆಯನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಔದ್ಯೋಗಿಕವಾಗಿ, ರಾಜಕೀಯವಾಗಿ ಗುರುತಿಸಿ ಅದಕ್ಕೆ ಪೂರಕವಾಗಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಕಲ್ಪಿಸಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ರೋಸ್ಟರ್‌ಅನ್ನೂ ಸಹ ಮಾರ್ಪಾಡು ಮಾಡಬೇಕಾಗುತ್ತದೆ.ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಈ ಮೂರು ಪಂಗಡಗಳ ನಡುವೆಯೂ ಒಳಮೀಸಲಾತಿ ಪ್ರಯೋಗವಾದ ನಂತರ ಯಾವುದೇ ಕಾರಣಕ್ಕಾದರೂ ಹುದ್ದೆಗಳು ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳು ತುಂಬಲಾರದೆ ಉಳಿದರೆ ಅವುಗಳನ್ನು ಪುನರ್‌ವಿಂಗಡನೆ ಮಾಡಿ ಲಭ್ಯ ಇರುವ ಪರಿಶಿಷ್ಟ ಜಾತಿಯವರಲ್ಲಿಯೇ ಹಂಚಬೇಕು.ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಯವರು ಅಲ್ಲದವರಿಗೆ ಈ ಸೌಲಭ್ಯಗಳು ಹಂಚಿಹೋಗುವುದು ತಪ್ಪಬೇಕು. ಇಲ್ಲವಾದಲ್ಲಿ ಪರಿಶಿಷ್ಟ ಜಾತಿ ಇಡೀ ಸಮುದಾಯಕ್ಕೆ ಸಾಮಾಜಿಕವಾಗಿ ಅನ್ಯಾಯ ಆಗುವುದು ಕಟ್ಟಿಟ್ಟ ಬುತ್ತಿ.ಒಳಮೀಸಲಾತಿ ಕೊಡುವ ಅಧಿಕಾರ ಯಾರಿಗೆ ಇದೆ?ಭಾರತದ ಸಂವಿಧಾನದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಮೊದಲು ವರ್ಗೀಕರಣ ಮಾಡುವ ಅಧಿಕಾರ ರಾಷ್ಟ್ರಪತಿಯವರಿಗೆ (ಕೇಂದ್ರ ಸರ್ಕಾರ) 341 ಮತ್ತು 342ರ ಅಡಿಯಲ್ಲಿ ಇದೆ.

 

ನಂತರ ಸಂಖ್ಯಾತ್ಮಕವಾಗಿಯೇ ಆಗಲಿ, ಗುಣಾತ್ಮಕವಾಗಿಯೇ ಆಗಲಿ ಯಾವುದೇ ಮಾರ್ಪಾಡು, ತಿದ್ದುಪಡಿ ಅಥವಾ ಬದಲಾವಣೆ ಈ ಪಟ್ಟಿಯಲ್ಲಿ ತರಬೇಕು ಎಂದಿದ್ದರೆ ಆ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ.ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶ ಎಂದರೆ ರಾಜ್ಯ ಸರ್ಕಾರಕ್ಕೇ ಆಗಲಿ, ರಾಜ್ಯದ ವಿಧಾನಮಂಡಲಕ್ಕೇ ಆಗಲಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಯಲ್ಲಿ ಒಂದು ಅಲ್ಪವಿರಾಮ ಅಥವಾ ಪೂರ್ಣವಿರಾಮ ಸೇರಿಸುವ ಅವಕಾಶ ಕೂಡ ಇರುವುದಿಲ್ಲ. ಸಂವಿಧಾನದಲ್ಲಿ ಸಂಸತ್ತು ಅಲ್ಲದೆ ಕೇಂದ್ರ ಸರ್ಕಾರಕ್ಕೂ ಇಂತಹ ಅವಕಾಶ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕು.ಸಮಸ್ಯೆಯು ಗಂಭೀರ ಸ್ವರೂಪ ಪಡೆದು ಹಿಂದೆಂದಿಗಿಂತಲೂ ಕ್ಲಿಷ್ಟಕರವಾಗಿ ಪರಿಣಮಿಸಿದೆ. ನ್ಯಾ. ಸಂತೋಷ ಹೆಗ್ಡೆ ನೇತೃತ್ವದ ಸಂವಿಧಾನ ಪೀಠದ ಒಟ್ಟಾರೆ ಅಭಿಪ್ರಾಯಗಳನ್ನು ಈ ಕೆಳಕಂಡಂತೆ ಉಲ್ಲೇಖಿಸಬಹುದಾಗಿದೆ.1. ಪರಿಶಿಷ್ಟ ಜಾತಿಯವರನ್ನು ಪುನರ್‌ವರ್ಗೀಕರಣ ಮಾಡಿ ಸೂಕ್ಷ್ಮ ವಿಂಗಡನೆ ಮಾಡಿ ಒಳಮೀಸಲಾತಿ ಕೊಡುವುದರ ಬದಲು ವಿದ್ಯಾರ್ಥಿ ವೇತನ, ಉಚಿತ ವಸತಿಗೃಹ, ವಿಶೇಷ ತರಬೇತಿ ಇತ್ಯಾದಿ ಕ್ರಮಗಳ ಮೂಲಕ ಅತಿ ಹಿಂದುಳಿದ ಪರಿಶಿಷ್ಟ ಜಾತಿಯವರನ್ನು ಮೇಲೆತ್ತಬೇಕು.2. ಸಂವಿಧಾನದ ಎಲ್ಲ ಕ್ಷೇತ್ರಗಳಲ್ಲಿಯೂ ಎಲ್ಲ ಪರಿಶಿಷ್ಟ ಜಾತಿಯವರನ್ನು ಒಂದೇ ಸಮಗ್ರ ಸಮೂಹವಾಗಿ ಪರಿಗಣಿಸಬೇಕೇ ಹೊರತು ಅವುಗಳಲ್ಲಿ ಒಳಮೀಸಲಾತಿ ಕೊಡಲು ಬರುವುದಿಲ್ಲ.3. ಪರಿಶಿಷ್ಟ ಜಾತಿಗಳಲ್ಲಿ ಇರುವ ಜಾತಿ ವ್ಯವಸ್ಥೆಯ ದುಷ್ಪರಿಣಾಮಗಳಿಗೆ ಒಳ ಮೀಸಲಾತಿ ಪರಿಹಾರವಲ್ಲ.4. ಪರಿಶಿಷ್ಟ ಜಾತಿಗಳಲ್ಲಿ ಇರುವ ಎಲ್ಲ ಜಾತಿಗಳನ್ನು ಸಮಾನ ಅವಕಾಶಗಳಿಂದ ಒಂದೇ ವರ್ಗದ ಸಮುದಾಯ ಎಂದು ಪರಿಗಣಿಸಬೇಕು.5. ಸಂಸತ್ತು ಮಾತ್ರ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಮಾರ್ಪಾಡು ಮಾಡಬಹುದು. ರಾಜ್ಯ ಸರ್ಕಾರಕ್ಕಾಗಲೀ, ವಿಧಾನ ಮಂಡಲಕ್ಕಾಗಲೀ ಈ ದಿಸೆಯಲ್ಲಿ ಯಾವುದೇ ಅಧಿಕಾರ ಇರುವುದಿಲ್ಲ.6. ಆಂಧ್ರಪ್ರದೇಶದ ಸುಗ್ರೀವಾಜ್ಞೆ ಮತ್ತು ಕಾಯ್ದೆ ಸಂವಿಧಾನದ 341 ಪರಿಚ್ಛೇದಕ್ಕೆ ವಿರುದ್ಧವಾಗಿದೆ. ಆದುದರಿಂದ ಸಂವಿಧಾನಬಾಹಿರ.7. ಇಂದ್ರಸಾನಿ ಮೊಕದ್ದಮೆಯಲ್ಲಿ ಹಿಂದುಳಿದ ವರ್ಗಗಳ ಪುನರ್‌ವರ್ಗೀಕರಣ ಮತ್ತು ಪುನರ್ ಮೀಸಲಾತಿ ಬಗ್ಗೆ ಕೊಟ್ಟಿರುವ ತೀರ್ಪನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸಲು ಬರುವುದಿಲ್ಲ.ಈ ಹಿನ್ನೆಲೆಯಲ್ಲಿ ಪರಿಶಿಷ್ಟಜಾತಿಗಳ ಪಟ್ಟಿಯಲ್ಲಿ ಇರುವ ಜಾತಿಗಳ ನಡುವೆ ಇರುವ ಅಸಮಾನತೆಗೆ ಸರಳ ಸುಲಭ ಪರಿಹಾರ ಅಸಾಧ್ಯ. ಮೇಲೆ ತಿಳಿಸಿದ ಆಂಧ್ರಪ್ರದೇಶದ ಅನುಭವದ ಹಿನ್ನೆಲೆಯಲ್ಲಿ ಸಂವಿಧಾನದ ತಿದ್ದುಪಡಿ ಮೂಲಕ ಮಾತ್ರ ಒಳಮೀಸಲಾತಿಯನ್ನು ತರಬಹುದಾಗಿದೆ.(ಲೇಖಕರು ಹೈಕೋರ್ಟ್ ಹಿರಿಯ ವಕೀಲರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.