ಶನಿವಾರ, ಮೇ 8, 2021
19 °C

`ಸಾರಿಗೆ ವ್ಯವಸ್ಥೆ ಜನರ ಜೀವಾಳ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸಾರಿಗೆ ವ್ಯವಸ್ಥೆ ಜನರ ಜೀವಾಳ'

ಬೆಂಗಳೂರು: `ಸಾರಿಗೆ ವ್ಯವಸ್ಥೆಯು ಜನರ ಜೀವಾಳವಾಗಿದೆ. ಒಂದು ದಿನ ಸಾರಿಗೆ ಇಲ್ಲದಿದ್ದರೆ, ಜನಜೀವನ ಅಸ್ತವ್ಯಸ್ತವಾಗುತ್ತದೆ' ಎಂದು ಹಿರಿಯ ನಟ ಎಸ್.ಶಿವರಾಂ ಅಭಿಪ್ರಾಯಪಟ್ಟರು.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ, ಕೇಂದ್ರೀಯ ವಿಭಾಗವು ಕನ್ನಡಭವನದಲ್ಲಿ ಶುಕ್ರವಾರ ಆಯೋಜಿಸಿದ್ದ `ವರನಟ ಡಾ.ರಾಜ್‌ಕುಮಾರ್ ಅವರ ಸಂಸ್ಮರಣೆ ಹಾಗೂ ಡಾ. ರಾಜ್‌ರಂಗ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜನರನ್ನು ಕರೆದುಕೊಂಡು ಹೋಗುವುದು ಬಹಳ ಜವಾಬ್ದಾರಿಯ ಕೆಲಸ. ಈ ಕೆಲಸವನ್ನು ಚಾಲಕರು ಮತ್ತು ನಿರ್ವಾಹಕರು ಜವಾಬ್ದಾರಿಯಿಂದ ನಿರ್ವಹಿಸಬೇಕು' ಎಂದರು.ಚಿತ್ರರಂಗ ಅನಾಥವಾಗಿದೆ: ಡಾ.ರಾಜ್‌ಕುಮಾರ್ ಕುರಿತು ಮಾತನಾಡಿದ ಅವರು, `ಡಾ.ರಾಜ್‌ಕುಮಾರ್ ಅವರ ಮುಂದಾಳತ್ವವಿಲ್ಲದೆ ಚಲನಚಿತ್ರರಂಗ ಅನಾಥವಾಗಿದೆ. ಡಾ.ರಾಜ್‌ಕುಮಾರ್ ಅವರ ಅಭಿನಯ, ಹಾಡುಗಾರಿಕೆ, ಭಾಷೆಗೆ ಸರಿಸಾಟಿಯಾಗುವವರು ಇದುವರೆಗೂ ಯಾರೂ ಇಲ್ಲ. ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು' ಎಂದರು.`ರಾಜ್‌ಕುಮಾರ್ ಅವರು ಎಂದಿಗೂ ವ್ಯವಹಾರಕ್ಕೆ ಅಂಟಿಕೊಂಡವರಲ್ಲ. ರಾಜಕೀಯಕ್ಕೆ ಬರಬೇಕೆಂದು ಒತ್ತಾಯ ಹೆಚ್ಚಾದಾಗ, ನನಗೆ ಗೊತ್ತಿಲ್ಲದ ಕ್ಷೇತ್ರ ನನಗ್ಯಾಕೆ ಎಂದು ಗೌಪ್ಯವಾದ ಸ್ಥಳಕ್ಕೆ ಹೋಗಿಬಿಟ್ಟರು. ಅವರು ವೇಳೆಗೆ ಬಹಳ ಮಹತ್ವವನ್ನು ನೀಡುತ್ತಿದ್ದರು. ಅವರು ಶೂಟಿಂಗ್ ವೇಳೆಯಲ್ಲಿ ಎಲ್ಲರ ಜತೆ ಬೆರೆತು ಸಹಭೋಜನ ಮಾಡುತ್ತಿದ್ದರು. ಅವರು ಕೊನೆಯವರೆಗೂ ಬಿಳಿ ಲುಂಗಿ ಮತ್ತು ಬಿಳಿ ಶರ್ಟ್  ತೊಡುತ್ತಿದ್ದರು, ಅವರು ಸರಳ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು' ಎಂದು ಕೊಂಡಾಡಿದರು.ಕಲೆಗೆ ಬೆಲೆಯೇ ಇಲ್ಲ: `ಸಮಾಜದ ಕೈಗನ್ನಡಿ ಕಲೆ ಎಂದು ಹಿಂದೆ ಹೇಳುತ್ತಿದ್ದರು. ಆದರೆ, ಇಂದು ಕಲೆ ಕನ್ನಡಿಯಾಗಿ ಉಳಿಯದೆ ಬರೀ ಗಾಜಾಗಿದೆ. ಇಂದು ಕಲಾವಿದರಿಗೆ ಲಕ್ಷ ಮತ್ತು ಕೋಟಿಗಟ್ಟಲೆ ಸಂಭಾವನೆಯಿದೆ. ಆದರೆ, ಚಿತ್ರವನ್ನು ನಿರ್ಮಿಸಿದ ನಿರ್ಮಾಪಕ ಮತ್ತು ನಿರ್ದೇಶಕ ಮಾತ್ರ ಮೂಲೆಗುಂಪಾಗುತ್ತಾರೆ' ಎಂದರು.ಕೆಎಸ್‌ಆರ್‌ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಮಾತನಾಡಿ, `ಡಾ.ರಾಜ್‌ಕುಮಾರ್ ಅವರ ಜಯಂತಿಯನ್ನು ಸರ್ಕಾರವೇ ಆಚರಿಸುವಂತಾಗಬೇಕು. ಆ ದಿನ ರಜೆ ಘೋಷಿಸಬೇಕಿಲ್ಲ. ಆದರೆ, ಆ ದಿನವನ್ನು ಗೌರವಯುತವಾಗಿ ಆಚರಿಸಬೇಕು' ಎಂದು ಒತ್ತಾಯಿಸಿದರು. `ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಯಾವುದೇ ಸ್ಥಾನಮಾನಗಳಿಲ್ಲ. ಆದ್ದರಿಂದ, ಈ ಎಲ್ಲ ಕಂಪೆನಿಗಳಲ್ಲಿ ಶೇ 50 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ನೀಡಬೇಕು' ಎಂದು ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.