ಬುಧವಾರ, ಜನವರಿ 22, 2020
22 °C

ಸಾವು–ಪ್ರೀತಿ ಮತ್ತು ಕನ್ನಡ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವು–ಪ್ರೀತಿ ಮತ್ತು ಕನ್ನಡ ಪ್ರೀತಿ

‘ಆಪ್ತ’ ಚಿತ್ರದ ನಂತರ ಕೆಲಕಾಲ ಗಾಂಧಿನಗರದಲ್ಲಿ ಕಾಣಿಸಿಕೊಳ್ಳದಿದ್ದ ನಿರ್ದೇಶಕ ಸಂಜೀವ್ ಮೆಗೋಟಿ ತಮ್ಮ ಮತ್ತೊಂದು ಚಿತ್ರವನ್ನು ಗಾಂಧಿನಗರದ ಚಿತ್ರಪೆಟ್ಟಿಗೆ ಸೇರಿಸುವ ಖುಷಿಯಲ್ಲಿದ್ದಾರೆ. ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ ‘ಕ್ಯೂ... ಪ್ರೀತಿಗೂ ಸಾವಿಗೂ’ ಚಿತ್ರದ ದನಿ ಸುರುಳಿ ಬಿಡುಗಡೆ ವೇಳೆ ಅವರು ತಮ್ಮ ಕನ್ನಡ ಪ್ರೀತಿಯನ್ನು ಹೇಳಿಕೊಂಡರೂ ವೇದಿಕೆಯಲ್ಲಿ ಹೆಚ್ಚು ಗುನುಗಿದ್ದು ಪರಭಾಷೆಯನ್ನು.

  

ಚಿತ್ರದ ನಿರ್ಮಾಪಕ ಅನಿವಾಸಿ ಭಾರತೀಯ ಲಂಡನ್ ಗಣೇಶ್, ತಮಗೆ ಆರು ತಿಂಗಳಲ್ಲಿ ಚಿತ್ರ ನಿರ್ಮಿಸಿಕೊಡುವಂತೆ ಕೋರಿದ್ದರು. ಆ ಕಾರಣಕ್ಕೆ ನನ್ನ ‘ದಂಡು’ ಚಿತ್ರವನ್ನು ಅರ್ಧದಲ್ಲಿಯೇ ನಿಲ್ಲಿಸಿ ಈ ಚಿತ್ರದಲ್ಲಿ ತೊಡಗಿದೆ. ಅವರ ಅಪೇಕ್ಷೆಗೆ ಅನುಗುಣವಾಗಿಯೇ ಚಿತ್ರ ಮೂಡಿದೆ’ ಎಂದರು ಸಂಜೀವ್.ತೆಲುಗಿನಲ್ಲಿ ನಾಲ್ಕಾರು ಚಿತ್ರಗಳನ್ನು ನಿರ್ದೇಶಿಸಿದ ಅವರು ‘ಆಪ್ತ’ ಚಿತ್ರದ ಮೂಲಕ ಕನ್ನಡ ನಿರ್ದೇಶಕರ ಸಾಲು ಸೇರಿದ್ದನ್ನು ನೆನಪು ಮಾಡಿಕೊಂಡರು. ಇಲ್ಲಿಯವರೆಗೆ ಒಟ್ಟು ಏಳು ಚಿತ್ರಗಳನ್ನು ನಿರ್ದೇಶಿಸಿದ್ದು, 70 ಚಿತ್ರಗಳನ್ನು ನಿರ್ದೇಶಿಸುವ ಆಶಾಭಾವ ವ್ಯಕ್ತಪಡಿಸಿದರು. ಈ ಚಿತ್ರಕ್ಕೆ ಸಂಜೀವ್‌ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.ಚಿತ್ರದಿಂದ ಹೆಚ್ಚು ನಿರೀಕ್ಷೆ ಹೊಂದಿರುವವರು ನಾಯಕ ನೀರಜ್ ಶ್ಯಾಮ್‌. ಸ್ವತಃ ಗಾಯಕರಾಗಿರುವ ಅವರು ಚಿತ್ರದ ಒಂದು ಹಾಡಿಗೆ ದನಿಯಾಗಿದ್ದಾರೆ. ತಮ್ಮ ನಿರೀಕ್ಷೆ ಮೀರಿ ಹಾಡುಗಳು ಮತ್ತು  ಚಿತ್ರ ಗೆಲುವು ಸಾಧಿಸುವ ಆಶಾವಾದ ಹೊಂದಿದ್ದಾರೆ.

ದನಿ ಸುರುಳಿ ಬಿಡುಗಡೆ ಮಾಡಿದ್ದು ವಿಶ್ವ ನೀಡಂ ವೃದ್ಧಾಶ್ರಮದ ವೃದ್ಧರು. ಚಿತ್ರದಿಂದ ಬರುವ ಶೇ 10ರಷ್ಟು ಆದಾಯವನ್ನು ಆಶ್ರಮಕ್ಕೆ ಮೀಸಲಿಡುವುದಾಗಿ ನಿರ್ಮಾಪಕ ಲಂಡನ್ ಗಣೇಶ್ ಪ್ರಕಟಿಸಿದರು. ಡಿಸೆಂಬರ್ 27ಕ್ಕೆ ಚಿತ್ರ ಬಿಡುಗಡೆಯ ಸಾಧ್ಯತೆ ಇದೆಯಂತೆ. ನಾಯಕಿ ನೇಹಾ ಸಕ್ಸೇನಾ, ಛಾಯಾಗ್ರಾಹಕ ಹರೀಶ್ ಸೊಂಡೆಕೊಪ್ಪ, ನಿರ್ಮಾಪಕರಾದ ಸಿದ್ಧರಾಜು, ನಂದಾ, ಚಿತ್ರದ ತಾಂತ್ರಿಕವರ್ಗದ ಪ್ರಮುಖರು ಹಾಜರಿದ್ದರು.

ಪ್ರತಿಕ್ರಿಯಿಸಿ (+)