ಗುರುವಾರ , ಮೇ 28, 2020
27 °C

ಸಾವು ಓಡಿ ಹೋಗಿತ್ತು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟಾಯಂ: ಶಬರಿಮಲೆ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದ ಕಾಲ್ತುಳಿತ ಘಟನೆ ಹಲವರಿಗೆ ಒಂದು ದುಃಸ್ವಪ್ನದಂತೆ ಕಾಡಿದರೆ, ಮತ್ತೆ ಕೆಲವರಿಗೆ ದುರಂತದಲ್ಲಿ ಬದುಕಿ ಉಳಿದುದನ್ನು ನಂಬಲಿಕ್ಕೇ ಆಗುತ್ತಿಲ್ಲ. ಥೇಣಿಯ ಮುರುಗನ್ (26) ಅಂತಹವರಲ್ಲಿ ಒಬ್ಬರು. ಸಾವು ಅವರ ಸನಿಹಕ್ಕೆ ಸುಳಿದಿತ್ತು. ಆದರೆ ಅಷ್ಟೇ ವೇಗವಾಗಿ ಅಲ್ಲಿಂದ ಓಡಿ ಹೋಗಿತ್ತು.



ಮುರುಗನ್ ಅವರು ಇದೀಗ ನಾಲ್ಕನೇ ಬಾರಿಗೆ ಮಕರ ಜ್ಯೋತಿ ನೋಡಲು ಬಂದಿದ್ದರು. ಕಳೆದ ಮೂರು ಬಾರಿ ಪುಲಿಮೇಡು ಕಡೆಯಿಂದ ಜ್ಯೋತಿ ನೋಡಿದ್ದಾರೆ.ಕಾಲ್ತುಳಿತಕ್ಕೆ ಸಿಕ್ಕಿ ಪ್ರಜ್ಞಾಶೂನ್ಯರಾಗಿದ್ದ ಅವರು ಅದೃಷ್ಟವಶಾತ್ ಬದುಕು ಉಳಿದವರು. ಅವರೇ ಘಟನೆಯ ಪ್ರಮುಖ ಪ್ರತ್ಯಕ್ಷದರ್ಶಿಯಾಗಿ ಮಾರ್ಪಟ್ಟಿದ್ದಾರೆ.



‘ಮಕರ ಜ್ಯೋತಿ ನೋಡಿದ ತಕ್ಷಣ ಜನ ತಮ್ಮ ವಾಹನಗಳತ್ತ ಧಾವಿಸತೊಡಗಿದ್ದೇ ಕಾಲ್ತುಳಿತ ಉಂಟಾಗಲು ಕಾರಣ. ಜನ ದಿಕ್ಕಾಪಾಲಾಗಿ ಓಡುತ್ತಿದ್ದಾಗ ಜೀಪೊಂದು ಅವರ ಮೇಲೆ ಹರಿದುಬಿಟ್ಟರೆ ಏನಾಗಬೇಡ, ಅದನ್ನು ನಾನು ಕಣ್ಣಾರೆ ಕಂಡೆ, ಬಳಿಕ ನನ್ನ ಮೇಲೆಯೇ ಜನ ಮುಗಿಬಿದ್ದರು. ನನಗೆ ಮುಂದೇನಾಯಿತು ಎಂದೇ ಗೊತ್ತಿಲ್ಲ’ ಎಂದು ಮುರುಗನ್ ಹೇಳುತ್ತಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ವಂಡಿಪೆರಿಯಾರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಅವರ ಬಲಗೈ ಉಳಿಕಿತ್ತಷ್ಟೇ.



ಘಟನಾ ಸ್ಥಳಕ್ಕೆ ಮೊದಲಾಗಿ ತಲುಪಿದ ಪತ್ರಕರ್ತರಲ್ಲಿ ದಿಲ್ ಪ್ರಕಾಶ್ ಒಬ್ಬರು. ಅವರು ಹೇಳುವ ಮಾಹಿತಿ ನೋಡಿದರೆ ಅದೊಂದು ಹೃದಯ ವಿದ್ರಾವಕ ಘಟನೆ ಎಂಬುದರಲ್ಲಿ ಸಂಶಯವೇ ಇರಲಿಲ್ಲ. ಕೆಲವು ಮಂದಿ ಕೊನೆಯುಸಿರೆಳೆಯುತ್ತಿದ್ದ ದೃಶ್ಯವಂತೂ ಮನ ಕಲಕುವಂತಿತ್ತಂತೆ. ವಾಹನಗಳ ಹೆಡ್‌ಲೈಟ್‌ಗಳಷ್ಟೇ ಪರಿಹಾರ ಕಾರ್ಯಗಳಿಗೆ ಅಲ್ಲಿದ್ದ ಬೆಳಕಾಗಿತ್ತು. ದಟ್ಟ ಕಾಡಿನ ಪ್ರದೇಶವಾದ್ದರಿಂದ ಮೊಬೈಲ್ ಫೋನ್ ಸಂಪರ್ಕವೇ ಇರಲಿಲ್ಲ. ಇರುಮುಡಿ, ಬಟ್ಟೆಗಳು, ಪಾತ್ರೆಗಳು, ಮೊಬೈಲ್ ಫೋನ್‌ಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹೆಣಗಳ ರಾಶಿ ಕಂಡು ಅಳುವವರು ಅಲ್ಲಿ ಬಹಳ ಕಡಿಮೆ ಮಂದಿ ಇದ್ದರು.



ಹಲವರ ದೇಹದ ಒಳಭಾಗಗಳು ಮುರಿದು ಹೋದ ಇಲ್ಲವೇ ಜಜ್ಜಿದ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿಗಳು ಹೇಳುತ್ತಿದ್ದವು. ಇದುವೇ ಕಾಲ್ತುಳಿತದ ಭೀಕರತೆಯನ್ನು ತಿಳಿಸುತ್ತದೆ. ವಂಡಿಪೆರಿಯಾರ್ ಆಸ್ಪತ್ರೆಗೆ ಶನಿವಾರ ಬೆಳಿಗ್ಗೆ ಲಾರಿಗಳಲ್ಲಿ ಮೃತದೇಹಗಳನ್ನು ತಂದು ಇಳಿಸಲಾಯಿತು. ಸತ್ತ ಕೆಲವರ ಬಂಧುಗಳು ಅಲ್ಲಿ ಇರಲಿಲ್ಲ, ಸತ್ತವರಿಗಾಗಿ ದುಃಖಿಸುವವರು ಕಾಣಿಸಲಿಲ್ಲ. ಯಾಕೆಂದರೆ ಅದೆಷ್ಟೋ ಮಂದಿ ಮನೆ ಮಂದಿಯನ್ನು ಬಿಟ್ಟು ಸ್ನೇಹಿತರೋ, ಯಾತ್ರೆ ಕೈಗೊಳ್ಳುವ ಇತರರೊಂದಿಗೆ ಅಲ್ಲಿಗೆ ಆಗಮಿಸಿದ್ದರು.



‘ಯಾರಾದರೂ ನನಗೆ ಸಹಾಯ ಮಾಡಿ, ನನ್ನ ಮೊಮ್ಮಗ ಕಾಣಿಸುತ್ತಿಲ್ಲ. ನಾನು ನನ್ನ ಮಗಳಿಗೆ ಏನೆಂದು ಉತ್ತರ ಹೇಳಲಿ’ ಸಿಕಂದರಾಬಾದ್‌ನ ರಘುರಾಮ್ ಅವರ ಈ ರೋದನ ಇಡೀ ದುರಂತಕ್ಕೆ ಹಿಡಿದ ಕನ್ನಡಿಯಂತಿತ್ತು. ಕೆಲವರು ಕಾಡಿನಲ್ಲಿ ಚದುರಿ ಹೋಗಿದ್ದಾರೆ, ಆ ಗುಂಪಿನಲ್ಲಿ ನಿಮ್ಮ ಮೊಮ್ಮಗನೂ ಇರಬಹುದು ಎಂದು ಕೆಲವರು ಅವರನ್ನು ಸಮಾಧಾನಪಡಿಸುತ್ತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.